ದೋಸ್ತಿ ನಾಯಕರ ನಡುವೆ ದಂಗಲ್​: ಜಿಬಿಎ ಎಲೆಕ್ಷನ್​​ಗೆ ಜೆಡಿಎಸ್ ಪ್ರತ್ಯೇಕ ಸ್ಪರ್ಧೆ?; ಕುತೂಹಲ ಮೂಡಿಸಿದ ಹೆಚ್​​ಡಿಕೆ ನಡೆ

ಸ್ಥಳೀಯ ಸಂಸ್ಥೆ ಚುನಾವಣೆ ಹೊತ್ತಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಬಿರುಕು ಮೂಡಿದೆ. ಜಿಬಿಎ ಚುನಾವಣೆಯಲ್ಲಿ ಸೀಟು ಹಂಚಿಕೆ ಬಗ್ಗೆ ಸಮನ್ವಯದ ಕೊರತೆಯಿಂದ 85-100 ವಾರ್ಡ್‌ಗಳಲ್ಲಿ JDS ಪ್ರತ್ಯೇಕವಾಗಿ ಸ್ಪರ್ಧಿಸಲು ಹೆಚ್​.ಡಿ. ಕುಮಾರಸ್ವಾಮಿ ಚಿಂತನೆ ನಡೆಸಿದ್ದಾರೆ. ಮತ್ತೊಂದೆಡೆ, 2028ರ ಸಿಎಂ ಸ್ಥಾನಕ್ಕೆ ಮೈತ್ರಿ ನಾಯಕರ ನಡುವೆ ಈಗಲೇ ಆಂತರಿಕ ಪೈಪೋಟಿ ತೀವ್ರಗೊಂಡಿದ್ದು, ಮೈತ್ರಿ ಭವಿಷ್ಯ ಕುರಿತು ಕುತೂಹಲ ಹೆಚ್ಚಿಸಿದೆ.

ದೋಸ್ತಿ ನಾಯಕರ ನಡುವೆ ದಂಗಲ್​: ಜಿಬಿಎ ಎಲೆಕ್ಷನ್​​ಗೆ ಜೆಡಿಎಸ್ ಪ್ರತ್ಯೇಕ ಸ್ಪರ್ಧೆ?; ಕುತೂಹಲ ಮೂಡಿಸಿದ ಹೆಚ್​​ಡಿಕೆ ನಡೆ
ಮೈತ್ರಿಯಲ್ಲಿ ಮುಂದುವರಿದ ಗೊಂದಲ
Image Credit source: Tv9 Kannada
Edited By:

Updated on: Feb 15, 2026 | 9:27 AM

ಬೆಂಗಳೂರು, ಫೆಬ್ರವರಿ 15: ಸ್ಥಳೀಯ ಸಂಸ್ಥೆ ಚುನಾವಣೆಗೂ ಮುನ್ನ ಮೈತ್ರಿ ನಾಯಕರಲ್ಲಿ ಗೊಂದಲದ ನಡುವೆ ಜಿಬಿಎ ಎಲೆಕ್ಷನ್​​ಗೆ ಜೆಡಿಎಸ್ ತಯಾರಿ ನಡೆಸಿದೆ. ಸೀಟು ಹಂಚಿಕೆಯಲ್ಲಿ ಸಮನ್ವಯತೆ ಮೂಡದಿದ್ರೂ ಏನು ಮಾಡಬೇಕೆಂಬ ಬಗ್ಗೆ ಪ್ಲ್ಯಾನ್ ಎ ಮತ್ತು ಪ್ಲ್ಯಾನ್ ಬಿ ಸಿದ್ಧವಾಗಿದ್ದು, 85ರಿಂದ 100 ವಾರ್ಡ್​ಗಳಲ್ಲಿ ಅಭ್ಯರ್ಥಿ ಕಣಕ್ಕಿಳಿಸಲು ಹೆಚ್​​.ಡಿ. ಕುಮಾರಸ್ವಾಮಿ ತಯಾರಿ ನಡೆಸಿದ್ದಾರೆ. ಅದಕ್ಕೆ ಪೂರಕವಾಗಿ ಎರಡು ಸಭೆ ಮಾಡಿರುವ ಕೇಂದ್ರ ಸಚಿವ, ಸೀಟು ಹಂಚಿಕೆ ವೇಳೆ ಬಿಜೆಪಿ ಬಳಿ ಕನಿಷ್ಠ 70ರಿಂದ 80 ಸೀಟ್​ ಕೇಳಲು ನಿರ್ಧರಿಸಿದ್ದಾರೆ. ಅಷ್ಟು ಕ್ಷೇತ್ರ ಬಿಟ್ಟುಕೊಟ್ಟರೆ ಮೈತ್ರಿಯಾಗಿ ಚುನಾವಣಾ ಹೋರಾಟ, ಇಲ್ಲದಿದ್ದರೆ ಪ್ರತ್ಯೇಕವಾಗಿ ಸ್ಪರ್ಧೆಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. 5 ಪಾಲಿಕೆಗಳ 369 ವಾರ್ಡ್​ಗಳಲ್ಲಿ ಸಿದ್ಧತೆ ನಡೆಸಲು ಬೆಂಗಳೂರಿನ ಜೆಡಿಎಸ್​ ಮುಖಂಡರು ಮತ್ತು ಕಾರ್ಯಕರ್ತರಿಗೆ ಹೆಚ್​ಡಿಕೆ ಕರೆ ನೀಡಿದ್ದು, ಮೈತ್ರಿ ನಾಯಕರ ಮುಂದಿನ ನಡೆ ಕುತೂಹಲ ಮೂಡಿಸಿದೆ.

ಮತ್ತೊಂದೆಡೆ ಕರ್ನಾಟಕದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನೂ ಎರಡುವರೆ ವರ್ಷಗಳು ಬಾಕಿ ಇರುವಾಗಲೇ, 2028ರ ಮುಖ್ಯಮಂತ್ರಿ ಹುದ್ದೆಗಾಗಿ ಮೈತ್ರಿ ಪಡೆಯಲ್ಲಿ ಪೈಪೋಟಿ ಶುರುವಾಗಿದೆ. ವಿಧಾನಸಭೆ ಚುನಾವಣಾ ಮೈತ್ರಿ ಬಗ್ಗೆಯೂ ಇನ್ನೂ ಯಾವುದೇ ನಿರ್ಧಾರವಾಗಿಲ್ಲದಿದ್ದರೂ, ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿಕೂಟದಲ್ಲಿ 2028ರ ಸಿಎಂ ಪಟ್ಟಕ್ಕಾಗಿ ಹೋರಾಟ ಆರಂಭವಾಗಿದೆ. ಇತ್ತೀಚೆಗೆ ಹಾಸನದಲ್ಲಿ ಮಾತನಾಡಿದ್ದ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ, ಯಾರಿಗೂ ಯಾರೂ ಅನಿವಾರ್ಯ ಅಲ್ಲ. 113 ಸೀಟು ಯಾರಿಗೆ ಬರುತ್ತೋ ಅವರ ಪಕ್ಷದವರೇ ಮುಖ್ಯಮಂತ್ರಿ. ಜೆಡಿಎಸ್‌ಗೆ ಬಂದರೆ ಹೆಚ್​​ಡಿಕೆ ಸಿಎಂ ಆಗಲು ಅಭ್ಯಂತರವಿಲ್ಲ ಎಂದಿದ್ದರು. ಆದರೆ ಅವರ ಈ ಹೇಳಿಕೆ ಕೇಂದ್ರ ಸಚಿವ ಮತ್ತು ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಅಸಮಾಧಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ರಾಜ್ಯ ರಾಜಕಾರಣಕ್ಕೆ ಮಾಜಿ ಕೇಂದ್ರ ಸಚಿವ ಅನಂತ್​​ ಕುಮಾರ್​​ ಹೆಗಡೆ? ಯತ್ನಾಳ್​​ ಸ್ಫೋಟಕ ಹೇಳಿಕೆ

ಮತ್ತೊಂದೆಡೆ ಬಾಗಲಕೋಟೆ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ, 2028ಕ್ಕೆ ಬಿ.ವೈ. ವಿಜಯೇಂದ್ರ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ, ವಿಜಯೇಂದ್ರರವರು ಮುಖ್ಯಮಂತ್ರಿ ಆಗುವುದು ಕೂಡ ಅಷ್ಟೇ ಸತ್ಯ ಎಂದು ಶಾಂತಗೌಡ ಹೇಳಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಮೈತ್ರಿ ಪಡೆಯಲ್ಲಿನ ತಿಕ್ಕಾಟವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಹಿಂದೆ ಕೆಲ ಬಿಜೆಪಿ ನಾಯಕರು ಸ್ಥಳೀಯ ಸಂಸ್ಥೆ ಚುನಾವಣೆಗೆ ಜೆಡಿಎಸ್​​ ಜೊತೆ ಮೈತ್ರಿ ಬೇಡ ಎಂದು ಆಗ್ರಹಿಸಿದ್ದು ಕೂಡ ಪಕ್ಷಗಳ ನಡುವಿನ ಸಮನ್ವಯತೆಯ ಕೊರತೆಯನ್ನು ಬಹಿರಂಗಪಡಿಸಿತ್ತು. ದೋಸ್ತಿಗಳ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬುದನ್ನು ಸಾಭೀತು ಮಾಡಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us