
ಬೆಂಗಳೂರು, ಅಕ್ಟೋಬರ್ 31: ರಾಜ್ಯದಲ್ಲಿ ಹಾಲು ಮತ್ತು ಮೊಸರಿನ ದರ ಏರಿಕೆ ವಿಚಾರವಾಗಿ ವಿಪಕ್ಷಗಳಿಂದ ಆಕ್ರೋಶದ ನಡುವೆ ಸರ್ಕಾರದ ನಿರ್ಧಾರವನ್ನು ಸಿಎಂ ಡಿ.ಕೆ. ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ. ನಮ್ಮ ಹೈನುಗಾರರ ಜೀವನೋಪಾಯವನ್ನು ರಕ್ಷಿಸುವ ಹಾಗೂ ಗ್ರಾಹಕರಿಗೆ ‘ನಂದಿನಿ’ ಉತ್ಪನ್ನಗಳನ್ನು ಕೈಗೆಟುಕುವ ದರದಲ್ಲಿ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಸದಾ ಬದ್ಧವಾಗಿದೆ ಎಂದವರು ತಿಳಿಸಿದ್ದಾರೆ. ದರ ಏರಿಕೆಗೆ ಕಾರಣಗಳು ಏನೆಲ್ಲ ಎಂಬ ಬಗ್ಗೆಯೂ ಅವರು ವಿವರವಾಗಿ ಮಾಹಿತಿ ನೀಡಿದ್ದಾರೆ.
ನವೆಂಬರ್ 1ರಿಂದ ಅನ್ವಯವಾಗುವಂತೆ ಪ್ರತಿ ಲೀಟರ್ ಹಾಲಿನ ದರವನ್ನು ₹8ರಷ್ಟು ಹೆಚ್ಚಿಸಲಾಗಿದೆ. ಜಾನುವಾರುಗಳ ಮೇವು ಮತ್ತು ಹಿಂಡಿ ದರದಲ್ಲಿನ ಹೆಚ್ಚಳ, ಇಂಧನ ಹಾಗೂ ಪ್ಯಾಕೇಜಿಂಗ್ ವೆಚ್ಚದ ಏರಿಕೆ ಮತ್ತು ಬರಗಾಲದ ಪರಿಣಾಮವಾಗಿ ದೈನಂದಿನ ಹಾಲಿನ ಸಂಗ್ರಹಣೆಯಲ್ಲಿ ಉಂಟಾಗಿರುವ ಕುಸಿತ ಈ ಅನಿವಾರ್ಯ ಪರಿಷ್ಕರಣೆಗೆ ಪ್ರಮುಖ ಕಾರಣಗಳಾಗಿವೆ. ಈ ₹8ರ ಹೆಚ್ಚಳದಲ್ಲಿ ₹7 ನೇರವಾಗಿ ರೈತರಿಗೆ ತಲುಪಲಿದ್ದು, ಪ್ರತಿ ಲೀಟರ್‌ಗೆ ₹35ರಿಂದ ₹42ಕ್ಕೆ ಏರಿಕೆಯಾಗಲಿದೆ. ಸರ್ಕಾರ ನೀಡುವ ₹5 ಪ್ರೋತ್ಸಾಹಧನ ಸೇರಿ ರೈತರಿಗೆ ಪ್ರತಿ ಲೀಟರ್ ಹಾಲಿಗೆ ₹47 ಕೈಸೇರಲಿದೆ. ಇದರಿಂದ ದಿನಕ್ಕೆ 10 ಲೀಟರ್ ಹಾಲು ಪೂರೈಸುವ ರೈತನಿಗೆ ತಿಂಗಳಿಗೆ ಸುಮಾರು ₹2,100 ಹೆಚ್ಚುವರಿ ಆದಾಯ ದೊರೆಯಲಿದೆ. ಅಲ್ಲದೆ, ಈ ದರ ಪರಿಷ್ಕರಣೆಯಿಂದ ರಾಜ್ಯದ ಗ್ರಾಮೀಣ ಹೈನುಗಾರರ ಕುಟುಂಬಗಳಿಗೆ ವಾರ್ಷಿಕ ಅಂದಾಜು ₹1,850 ಕೋಟಿಯಿಂದ ₹2,100 ಕೋಟಿವರೆಗೆ ಹೆಚ್ಚುವರಿ ಆದಾಯ ದೊರೆಯುವ ನಿರೀಕ್ಷೆಯಿದೆ ಎಂದವರು ತಿಳಿಸಿದ್ದಾರೆ.
ಇದನ್ನೂ ಓದಿ: ‘ರಾಜ್ಯದ ಇತಿಹಾಸದಲ್ಲೇ ಕಾಣದ ಭಾರಿ ಬೆಲೆ ಏರಿಕೆ’: ಮೊಸರಿನ ದರ ಹೆಚ್ಚಳಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ
ಕರ್ನಾಟಕದಲ್ಲಿ ಒಟ್ಟು 28.84 ಲಕ್ಷ ಹೈನುಗಾರರಿದ್ದು, ಕೆಎಂಎಫ್ ಸದಸ್ಯರಲ್ಲಿ ಶೇ.67ರಷ್ಟು ಸಣ್ಣ ಮತ್ತು ಅತಿಸಣ್ಣ ರೈತರಾಗಿದ್ದಾರೆ. ಅವರ ಪರಿಶ್ರಮಕ್ಕೆ ನ್ಯಾಯಯುತ ಪ್ರತಿಫಲ ಒದಗಿಸುವ ನಿಟ್ಟಿನಲ್ಲಿ ಈ ನಿರ್ಧಾರ ಮಹತ್ವದ ಹೆಜ್ಜೆಯಾಗಿದೆ. ದರ ಪರಿಷ್ಕರಣೆಯ ನಂತರವೂ ನಂದಿನಿ ಟೋನ್ಡ್ ಹಾಲಿನ ದರ ಪ್ರತಿ ಲೀಟರ್‌ಗೆ ₹54 ಇದ್ದು, ದೇಶದ ಹಲವು ಪ್ರಮುಖ ಡೈರಿ ಬ್ರ್ಯಾಂಡ್‌ಗಳಿಗಿಂತ ಕಡಿಮೆಯಿದೆ. ಅದೇ ರೀತಿ ನಂದಿನಿ ಶುಭಂ ಹಾಲಿನ ದರ ₹60 ಇದ್ದು, ಇತರೆ ಹತ್ತು ರಾಜ್ಯಗಳ ಸರಾಸರಿ ದರವಾದ ₹62.80ಕ್ಕಿಂತ ಕಡಿಮೆಯೇ ಇದೆ. ರೈತರ ಹಿತದ ರಕ್ಷಣೆ ಮತ್ತು ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಹಾಲಿನ ಪೂರೈಕೆ, ಇವೆರಡಕ್ಕೂ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಹೇಳಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.