ಟಿಕೆಟ್ ಅಂತಿಮ ಮಾಡೋದು ಹೈಕಮಾಂಡ್, ಯಾರೋ ಒಬ್ಬರು ಕೊಡಲು ಬರಲ್ಲ: ಡಿಕೆ ಶಿವಕುಮಾರ್ ವಿರುದ್ಧ ಕಾಂಗ್ರೆಸ್ ನಾಯಕರ ಅಸಮಾಧಾನ
ನಮಗೆ ಟಿಕೆಟ್ ಅಂತಿಮ ಮಾಡೋದು ಪಕ್ಷದ ಹೈಕಮಾಂಡ್. ಯಾರೋ ಒಬ್ಬರು ಟಿಕೆಟ್ ಕೊಡಲು ಬರಲ್ಲ ಎಂದು ಡಿಕೆ ಶಿವಕುಮಾರ್ ವಿರುದ್ಧ ಆರ್.ವಿ.ದೇಶಪಾಂಡೆ ಮತ್ತು ದಿನೇಶ್ ಗುಂಡೂರಾವ್ ಬೇಸರ ಹೊರಹಾಕಿದ್ದಾರೆ.
ಬೆಂಗಳೂರು: ಕೆಲಸ ಮಾಡದಿದ್ರೆ ಟಿಕೆಟ್ ಇಲ್ಲ ಎಂಬ ಡಿಕೆ ಶಿವಕುಮಾರ್(DK Shivakumar) ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಆರ್.ವಿ.ದೇಶಪಾಂಡೆ(RV Deshpande) ಮತ್ತು ದಿನೇಶ್ ಗುಂಡೂರಾವ್(Dinesh Gundu Rao) ಬೇಸರ ಹೊರಹಾಕಿದ್ದಾರೆ. ನಮಗೆ ಟಿಕೆಟ್ ಅಂತಿಮ ಮಾಡೋದು ಪಕ್ಷದ ಹೈಕಮಾಂಡ್. ಯಾರೋ ಒಬ್ಬರು ಟಿಕೆಟ್ ಕೊಡಲು ಬರಲ್ಲ ಎಂದು ಡಿಕೆ ಶಿವಕುಮಾರ್ ವಿರುದ್ಧ ದೇಶಪಾಂಡೆ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಟಿಕೆಟ್ ಅಂತಿಮ ಮಾಡೋದು ಪಕ್ಷದ ಹೈಕಮಾಂಡ್. ಯಾರೋ ಒಬ್ಬರು ಟಿಕೆಟ್ ಕೊಡಲ್ಲ. ಅಧ್ಯಕ್ಷರು, ಸಿಎಲ್‌ಪಿ ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಅವರು ಹೈಕಮಾಂಡ್ ಜೊತೆ ಚರ್ಚೆ ಮಾಡ್ತಾರೆ. ಟಿಕೆಟ್ ವಿಚಾರ ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ರು. ಇದನ್ನೂ ಓದಿ: ನೀಲಕುರಂಜಿ ಹೂಗಳ ಸೌಂದರ್ಯಕ್ಕೆ ಮಾರು ಹೋದ ಬಿಗ್ ಬಾಸ್ ಬೆಡಗಿ ದಿವ್ಯಾ ಉರುಡುಗ
ನಾಮ್ಮ ಅಧ್ಯಕ್ಷರು ಬಹಳ, ಪ್ರೀತಿ ವಿಶ್ವಾಸದಲ್ಲಿದ್ದಾರೆ. ಎಲ್ಲರ ಸಹಕಾರದಿಂದ ಅವರು ಕೆಲಸ ಮಾಡ್ತಿದ್ದಾರೆ. ಯಾವುದೇ ಊಹಾಪೋಹಗಳು ಇಲ್ಲ. ಅವರ ಉದ್ದೇಶ ಭಾರತ್ ಜೋಡೋ ಯಶಸ್ವಿಯಾಗಬೇಕು ಅಂತ. ಎಲ್ಲ ಕಡೆಯಿಂದ ನಮ್ಮ ಮುಖಂಡರು, ಕಾರ್ಯಕರ್ತರು ಬರಬೇಕು. ಇದು ಯಶಸ್ವಿಯಾಗಬೇಕು ಎಂದು ಅವರು ಹೇಳಿದ್ದಾರೆ. ಅವರ ಹೇಳಿಕೆಗಳಿಗೆ ಬೇರೆ ಅರ್ಥ ಕಲ್ಪಿಸೋದು ಬೇಡ. ಒಳ್ಳೇ ಉದ್ದೇಶದಿಂದ ಅವರು ಹೇಳಿಕೆ ಕೊಟ್ಟಿರಬಹುದು. ಎಲ್ಲರೂ ಒಗ್ಗಟ್ಟುನಿಂದ ಹೋಗಬೇಕು. ರಾಜ್ಯದಲ್ಲಿ ನಮ್ಮ ಸರ್ಕಾರ ಬರಬೇಕು. ಆ ನಿಟ್ಟಿನಲ್ಲಿ ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಹೆಚ್ ಕೆ ಪಾಟೀಲ್ ಸೇರಿ ಎಲ್ಲರೂ ಒಟ್ಟಾಗಿ ಸೇರಿ ಚುನಾವಣೆಗೆ ಹೋಗಬೇಕು. ಯಾವುದೇ ಭಿನ್ನಾಭಿಪ್ರಾಯ ಇದ್ದರೂ ಮರೆತು ಒಗ್ಗಟ್ಟಾಗಿ ಚುನಾವಣೆಗೆ ಹೋಗಬೇಕು ಎಂದರು.
ಇನ್ನು ಮತ್ತೊಂದೆಡೆ ಕೆಲಸ ಮಾಡದಿದ್ರೆ ಟಿಕೆಟ್ ಇಲ್ಲ ಎಂಬ ಡಿಕೆಶಿ ಹೇಳಿಕೆಗೆ ದಿನೇಶ್ ಗುಂಡೂರಾವ್ ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್ನಲ್ಲಿ ಯಾರೋ ಒಬ್ಬರು ಟಿಕೆಟ್ ಬಗ್ಗೆ ತೀರ್ಮಾನಿಸಲ್ಲ. ಎಲ್ಲರ ಅಭಿಪ್ರಾಯ ಪಡೆದು ವರಿಷ್ಠರು ಟಿಕೆಟ್ ಘೋಷಿಸುತ್ತಾರೆ. ಯಾರೋ ಒಬ್ಬರು ನನ್ನಿಂದ ಟಿಕೆಟ್ ಘೋಷಣೆ ಅಂದ್ರೆ ಸಾಧ್ಯವಿಲ್ಲ. ಒಬ್ಬರ ಕೈಯಲ್ಲಿ ಇದೆಲ್ಲವೂ ಇಲ್ಲ ಎಂದು ಡಿಕೆಶಿಗೆ ತಿರುಗೇಟು ಕೊಟ್ಟಿದ್ದಾರೆ. ಇದನ್ನೂ ಓದಿ: ಮೊದಲು ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ, ಇಲ್ಲದಿದ್ರೆ ಟಿ20 ವಿಶ್ವಕಪ್ ಮರೆತುಬಿಡಿ: ಗೌತಮ್ ಗಂಭೀರ್
ನಮ್ಮಲ್ಲಿ ಯಾವುದೇ ಗಲಾಟೆ ಗೊಂದಲ ಇಲ್ಲ. ಎಲ್ಲಾ ಒಟ್ಟಾಗಿ ಕೆಲಸ ಮಾಡ್ತಿದ್ದೇವೆ. ಎಲ್ಲರು ಒಟ್ಟಾಗಿ ಕೆಲಸ ಮಾಡ್ತಿರೋದಕ್ಕೆ ಉಪ ಚುನಾವಣೆಯಲ್ಲಿ ಗೆಲುವು ಆಯ್ತು. ಪಾದಯಾತ್ರೆ, ಸಿದ್ದರಾಮೋತ್ಸವ ಎಲ್ಲವೂ ಯಶಸ್ವಿಯಾಗಿದೆ. ಎಲ್ಲರು ಸೇರಿ ಕೆಲಸ ಮಾಡ್ತಿದ್ದೇವೆ. ರಾಜಕೀಯದಲ್ಲಿ ಸಣ್ಣ ಪುಟ್ಟ ಗೊಂದಲ ಇರುತ್ತೆ. ಅದನ್ನ ಸರಿ ಮಾಡಿಕೊಂಡು ಹೋಗ್ತೀವಿ ಎಂದರು. ಇನ್ನು ನನ್ನ ಸ್ಪೀಡ್ ಗೆ ಯಾರು ಕೆಲಸ ಮಾಡ್ತಿಲ್ಲ ಎಂಬ ಡಿಕೆ ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ನನ್ನ ಸ್ವೀಡ್ ಗೆ ಇಲ್ಲ ಅಂದ್ರೆ ಎಲ್ಲರಿಗೂ ಹುರಿದುಂಬಿಸಲು ಹಾಗೆ ಹೇಳಿದ್ದಾರೆ. ಭಾರತ್ ಜೋಡೋ ಕಾರ್ಯಕ್ರಮ ಯಶಸ್ವಿಯಾಗಲಿ ಅಂತ ಹೇಳಿದ್ದಾರೆ. ಎಲ್ಲರೂ ಚುರುಕಾಗಿ ಕೆಲಸ ಮಾಡಲಿ ಅಂತ ಹೇಳಿದ್ದಾರೆ. ಅದಕ್ಕೆ ಬೇರೆ ಅರ್ಥ ಬೇಡ. ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗಲಿ ಅಂತ ಹೇಳಿದ್ದಾರೆ. ಬೇರೆ ಅರ್ಥದಲ್ಲಿ ಅಲ್ಲ ಎಂದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:34 pm, Sun, 18 September 22