ಎಂಟು ವರ್ಷದಿಂದ ಜೊತೆಯಲ್ಲಿದ್ದ ಅಂಧ ಮಹಿಳೆಯನ್ನೇ ದೋಚಿದ ದಂಪತಿ!

ಬೆಂಗಳೂರಿನಲ್ಲಿ 8 ವರ್ಷಗಳಿಂದ ಜೊತೆಯಲ್ಲೇ ವಾಸವಿದ್ದ ಅಂಧ ಮಹಿಳೆಯ ಕಪಾಟಿನಿಂದ ನಗದು ಹಾಗೂ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ್ದ ಸುಶಿಕ್ಷಿತ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಸದ್ಯ 232 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, ಬಾಕಿ ಹಣದ ರಿಕವರಿಗಾಗಿ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ತನಿಖೆ ಚುರುಕುಗೊಳಿಸಲು ಸೂಚಿಸಿದ್ದಾರೆ.

ಎಂಟು ವರ್ಷದಿಂದ ಜೊತೆಯಲ್ಲಿದ್ದ ಅಂಧ ಮಹಿಳೆಯನ್ನೇ ದೋಚಿದ ದಂಪತಿ!
ವಶಪಡಿಸಿಕೊಂಡ ಚಿನ್ನಾಭರಣ
Image Credit source: Indian Express

Updated on: May 27, 2026 | 9:53 AM

ಬೆಂಗಳೂರು, ಮೇ 27: ಜೊತೆಯಲ್ಲೇ ಇದ್ದು ನಂಬಿಸಿ ದ್ರೋಹ ಬಗೆಯುವ ಕಲಿಗಾಲ ಇದು ಎನ್ನುವುದಕ್ಕೆ ಬೆಂಗಳೂರಿನಲ್ಲೊ ನಡೆದ ಈ ಘಟನೆಯೇ ಸಾಕ್ಷಿ. ಕಳೆದ 8 ವರ್ಷಗಳಿಂದ ಜೊತೆಯಲ್ಲಿ, ಒಂದೇ ಸೂರಿನಡಿ ವಾಸವಿದ್ದ ಅಂಧ ಮಹಿಳೆಯ ಮನೆಯಲ್ಲೇ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ (Gold Jewels) ಹಾಗೂ ನಗದನ್ನು ದೋಚಿದ್ದ ದಂಪತಿಯನ್ನು ಬೆಂಗಳೂರು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಎಂಬಿಎ ಪದವೀಧರೆ ಶರ್ಮಿಳಾ ಶೇಷಾದ್ರಿ (50) ಮತ್ತು ಆಕೆಯ ಪತಿ ಡಿಪ್ಲೊಮಾ ಪದವೀಧರ ಗಣೇಶ್ ಕುಮಾರ್ (52) ಬಂಧಿತ ಆರೋಪಿಗಳು.

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಅಂಧ ಗೆಳತಿಯ ಒಡವೆ, ನಗದು ದೋಚಿದ ದಂಪತಿಯನ್ನು ಬಂಧಿಸಲಾಗಿದೆ.
  • ಕಪಾಟಿನ ಬೀಗ ಮುರಿದು ನಲವತ್ತೊಂಬತ್ತು ಲಕ್ಷ ರೂಪಾಯಿ ಲೂಟಿ ಮಾಡಿದ್ದರು.
  • ಪೊಲೀಸರು ಆರೋಪಿಗಳಿಂದ ಮೂವತ್ತೈದು ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಬ್ಯಾಂಕ್ ಲಾಕರ್‌ನಿಂದ ಹಣ ತಂದಿದ್ದೇ ಮುಳುವಾಯ್ತು!

ದೃಷ್ಟಿ ದೋಷವಿರುವ ಸಂತ್ರಸ್ತೆ ಕಳೆದ ಎಂಟು ವರ್ಷಗಳಿಂದ ಬಿಇಎಂಎಲ್ ಲೇಔಟ್ನ ಈ ದಂಪತಿಯ ಮನೆಯಲ್ಲೇ ವಾಸವಿದ್ದರು. ಜೂನ್ 2024 ರಲ್ಲಿ ಸಂತ್ರಸ್ತೆ ತನ್ನ ಚಿನ್ನಾಭರಣಗಳನ್ನು ಒಂದು ಬ್ಯಾಂಕ್ ಲಾಕರ್‌ನಿಂದ ಮತ್ತೊಂದು ಲಾಕರ್‌ಗೆ ವರ್ಗಾಯಿಸುವ ಸಲುವಾಗಿ ಮನೆಗೆ ತಂದಿದ್ದರು. ಒಟ್ಟು ಚಿನ್ನಾಭರಣಗಳ ಜೊತೆಗೆ ಭಾರಿ ಮೊತ್ತದ 49.50 ಲಕ್ಷ ರೂಪಾಯಿ ನಗದನ್ನು ಮನೆಯ ಕಪಾಟಿನಲ್ಲಿ ಸುರಕ್ಷಿತವಾಗಿ ಇಟ್ಟಿದ್ದರು.

ಕೆಲ ದಿನಗಳ ನಂತರ ಸಂತ್ರಸ್ತೆ ತನ್ನ ಒಡವೆಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಮುಂದಾದಾಗ ಕಪಾಟಿನ ಕೀ ಕಾಣೆಯಾಗಿತ್ತು. ಗಾಬರಿಗೊಂಡ ಆಕೆ ಕೀ ತಯಾರಿಸುವವರನ್ನು ಕರೆಯಿಸಲು ದಂಪತಿಗೆ ಕೇಳಿಕೊಂಡಿದ್ದಾರೆ. ಆದರೆ, ದಂಪತಿ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಅನುಮಾನಗೊಂಡ ಸಂತ್ರಸ್ತೆ ತಾವೇ ಸ್ವತಃ ಕೀ ತಯಾರಕನನ್ನು ಕರೆಯಿಸಿ ಕಪಾಟು ಓಪನ್ ಮಾಡಿಸಿದಾಗ ಒಳಗಿದ್ದ ನಗದು ಮತ್ತು ಚಿನ್ನಾಭರಣಗಳೆಲ್ಲವೂ ಮಾಯವಾಗಿದ್ದವು.

‘ಹಣ ಕೊಡಲ್ಲ, ಏನ್ ಮಾಡ್ಕೊಳ್ತಿಯೋ ಮಾಡ್ಕೋ’ ಎಂದ ಖದೀಮರು!

ಹಣದ ಬಗ್ಗೆ ಸಂತ್ರಸ್ತೆ ದಂಪತಿಯನ್ನು ಪ್ರಶ್ನಿಸಿದಾಗ, ನಾವು ಆರ್ಥಿಕ ಸಂಕಷ್ಟದಲ್ಲಿದ್ದೆವು, ಹಾಗಾಗಿ ನಿನ್ನ ಹಣವನ್ನು ನಮ್ಮ ಬಿಸಿನೆಸ್‌ಗೆ ಬಳಸಿಕೊಂಡಿದ್ದೇವೆ. ನಿನಗೆ ನಗದು ಅಥವಾ ಚಿನ್ನ ಯಾವುದನ್ನೂ ವಾಪಸ್ ಕೊಡುವುದಿಲ್ಲ ಎಂದು ಉದ್ಧಟತನದ ಉತ್ತರ ನೀಡಿದ್ದಾರೆ. ಇದರಿಂದ ನೊಂದ ಅಂಧ ಮಹಿಳೆ ತಕ್ಷಣ ಪೊಲೀಸರ ಮೊರೆ ಹೋಗಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ ಮಂಡ್ಯ: ಪತ್ನಿಗೆ ಶ್ರೀಮಂತಿಕೆ ತೋರಿಸಲು ಕಳ್ಳತನಕ್ಕಿಳಿದ ಪತಿ! ಕೃತ್ಯ ನಿಲ್ಲಿಸಿದ ವರ್ಷದ ಬಳಿಕ ಮೂವರು ಸಹಚರರೊಂದಿಗೆ ಅಂದರ್

35 ಲಕ್ಷ ರೂ. ಮೌಲ್ಯದ ಚಿನ್ನ ವಶ

ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ, ಕಳವು ಮಾಡಿದ ಚಿನ್ನದ ಒಂದು ಭಾಗವನ್ನು ಹಲಸೂರಿನ ಪರಿಚಯಸ್ಥನಿಗೆ ನೀಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಸದ್ಯ ಪೊಲೀಸರು ಸುಮಾರು 35 ಲಕ್ಷ ರೂಪಾಯಿ ಮೌಲ್ಯದ 232 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನುಳಿದ ನಗದು ಪತ್ತೆಗಾಗಿ ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ತನಿಖೆಯನ್ನು ಚುರುಕುಗೊಳಿಸಲು ಸೂಚಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Bhavana Hegde

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
Follow Us