ಕಾಂಗ್ರೆಸ್ ಒಗ್ಗಟ್ಟಿಗೆ ವೇದಿಕೆಯಾದ ಸಿದ್ದರಾಮೋತ್ಸವಕ್ಕೆ ಕೋಟ್ಯಂತರ ರೂಪಾಯಿ ಖರ್ಚು: ಇಲ್ಲಿದೆ ಲೆಕ್ಕಾಚಾರ
ಅಪ್ಪಟ ಸಿದ್ದರಾಮಯ್ಯ ಅಭಿಮಾನಿಗಳು ನಡೆಸಿದ ಸಿದ್ದರಾಮೋತ್ಸವದ ಖರ್ಚು ವೆಚ್ಚಗಳ ಬಗ್ಗೆ ಒಂದಿಷ್ಟು ರಾಜಕೀಯ ಟೀಕೆಗಳು ಶುರುವಾಗಿವೆ. ಇದರ ಬೆನ್ನಲ್ಲೇ ಸಿದ್ದರಾಮೋತ್ಸವಕ್ಕೆ ಖರ್ಚಾದ ವೆಚ್ಚವೆಷ್ಟು ಅನ್ನುವ ಮಾಹಿತಿ ಇಲ್ಲಿದೆ.
ಬೆಂಗಳೂರು: ಸಿದ್ದರಾಮಯ್ಯ ವರ್ಚಸ್ಸಿಗೆ ಮತ್ತಷ್ಟು ಕಳೆ ತಂದು ಕೊಟ್ಟಿದ್ದು ಸಿದ್ದರಾಮೋತ್ಸವ ಎಂಬ ಅಪ್ಪಟ ಅಭಿಮಾನಿಗಳ ರಾಜಕೀಯ ಲೆಕ್ಕದ ನಿಖರ ಆಟ. ಈ ಆಟಕ್ಕೆ ಕೋಟ್ಯಾಂತರ ದುಡ್ಡು ಸುರಿಯಲಾಗಿದೆ ಎನ್ನೋ ಟೀಕೆ ಟಿಪ್ಪಣಿ ವ್ಯಕ್ತವಾಗುತ್ತಿದೆ. ಹಾಗಾದರೆ ನಿಜಕ್ಕೂ ಸಿದ್ದರಾಮೋತ್ಸವದ ತಯಾರಿ ಹೇಗಿತ್ತು, ಖರ್ಚು ವೆಚ್ಚಗಳ ಬಾಬ್ತು ಎಷ್ಟಾಯ್ತು ಎನ್ನುವುದಕ್ಕೆ ಇಲ್ಲಿದೆ ನೋಡಿ ಉತ್ತರ. ಸಿದ್ದರಾಮೋತ್ಸವ ಇದು ಮಾಜಿ ಸಿಎಂ ಹಾಗೂ ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರ ಇಮೇಜ್ ಹೆಚ್ಚಿಸಿದ ಕಾರ್ಯಕ್ರಮ. ಸಿದ್ದರಾಮಯ್ಯ ಒಬ್ಬ ಜನ ಮೆಚ್ಚಿದ ಜನ ನಾಯಕ ಎಂಬುದನ್ನು ಮತ್ತೆ ಸಾಬೀತು ಮಾಡಿದ ಜನರ ಕಾರ್ಯಕ್ರಮ. ಅಪ್ಪಟ ಸಿದ್ದರಾಮಯ್ಯ ಅಭಿಮಾನಿಗಳು ನಡೆಸಿದ ಸಿದ್ದರಾಮೋತ್ಸವದ ಖರ್ಚು ವೆಚ್ಚಗಳ ಬಗ್ಗೆ ಒಂದಿಷ್ಟು ರಾಜಕೀಯ ಟೀಕೆಗಳು ಶುರುವಾಗಿವೆ. ಇದರ ಬೆನ್ನಲ್ಲೇ ಸಿದ್ದರಾಮೋತ್ಸವಕ್ಕೆ ಖರ್ಚಾದ ವೆಚ್ಚವೆಷ್ಟು ಅನ್ನುವ ಮಾಹಿತಿ ಇಲ್ಲಿದೆ.
ಸಿದ್ದರಾಮೋತ್ಸವ ತಯಾರಿ ಶುರುವಾಗಿದ್ದು ಬರೋಬ್ಬರಿ ಎರಡು ತಿಂಗಳ ಹಿಂದೆ. ಸಿದ್ದರಾಮಯ್ಯನವರ ನಾಲ್ಕು ದಶಕಗಳ ಜೊತೆಗಿನ ಸ್ನೇಹಿತರು, ಆಪ್ತರು ಸಿದ್ದರಾಮೋತ್ಸವ ನಡೆಸಲು ಸ್ವಾಗತ ಸಮಿತಿ ರಚನೆ ಮಾಡಿದರು. ಬೇಕಾದ ಖರ್ಚು ವೆಚ್ಚಗಳನ್ನು ಸಿದ್ದರಾಮಯ್ಯ ಆಪ್ತರೇ ಹೊಂದಿಸಿಕೊಂಡು ಮಾಡಿದ ಖಾಸಗಿ ಕಾರ್ಯಕ್ರಮ ಇದಾಗಿದ್ದು ಪಕ್ಷದ ಹೆಸರು ಕೇವಲ ನೆಪ ಮಾತ್ರ. ಇಷ್ಟು ದೊಡ್ಡ ಕಾರ್ಯಕ್ರಮ ಆಯೋಜನೆ ಮಾಡಲು ಒಂದೊಂದು ತಂಡ ಒಂದೊಂದು ಜವಾಬ್ದಾರಿ ವಹಿಸಿಕೊಂಡಿತ್ತು. ಮಧ್ಯ ಕರ್ನಾಟಕ ಭಾಗವೇ ಸೂಕ್ತ ಅಂತ ಅಂದುಕೊಂಡಾಗ ಹಿಂದೆ ಅಹಿಂದ ಸಮಾವೇಶ ನಡೆಸಿದ್ದ ದಾವಣಗೆರೆಯನ್ನೇ ಆಯ್ಕೆ ಮಾಡಿಕೊಳ್ಳಲಾಯ್ತು. ಇದಕ್ಕೆ ಬೇಕಾದ ಜಾಗ ಒದಗಿಸದ್ದು ಶಾಮನೂರು ಶಿವಶಂಕರಪ್ಪ ಹಾಗೂ ಅವರ ಪುತ್ರ ಎಸ್.ಎಸ್ ಮಲ್ಲಿಕಾರ್ಜುನ್. ಬರೋಬ್ಬರಿ 50 ಎಕರೆ ಜಾಗದಲ್ಲಿ ಸಮಾವೇಶಕ್ಕೆ ಭರ್ಜರಿ ತಯಾರಿ ನಡೆಸಿ ಸರಿ ಸುಮಾರು 20 ಕೋಟಿಯಷ್ಟು ವೆಚ್ಚ ಮಾಡಲಾಗಿದೆ.
ಇದನ್ನೂ ಓದಿ: Siddaramotsava: ಬಸವ ತತ್ವಗಳಿಗೆ ವಿರುದ್ಧವಾಗಿ ಬಿಜೆಪಿ ಆಡಳಿತ ನಡೆಸುತ್ತಿದೆ; ರಾಹುಲ್ ಗಾಂಧಿ ವಾಗ್ದಾಳಿ
ಪ್ರಮುಖ ಸ್ಟೇಜ್ 25 ಲಕ್ಷ ವೆಚ್ಚ. ಸ್ಟೇಜ್ ಮುಂಭಾಗದಲ್ಲಿ ಮೂರು ಜರ್ಮನ್ ಟೆಕ್ನಾಲಜಿ ಟೆಂಟ್ಗಳು. ಸ್ಟೇಜ್ನ ಮುಂಭಾಗದಲ್ಲಿ ಹಾಗೂ ಎಡಕ್ಕೆ ಬಲಕ್ಕೆ ಜರ್ಮನ್ ಮಾಡೆಲ್ ಟೆಂಟ್ 2 ಕೋಟಿ. ಕುರ್ಚಿಗಳು ಒಟ್ಟೂ 5.5 ಲಕ್ಷ ತಗುಲಿದ ವೆಚ್ಚ 52 ಲಕ್ಷ, ಸೌಂಡ್ ಬಾಕ್ಸ್ ಹಾಗೂ ಪರಿಕರಗಳಿಗೆ ಇಟಾಲಿಯನ್ ಎಕೊಸ್ಟಿಕ್ ಸೌಂಡ್ ಒಟ್ಟೂ 35ಲಕ್ಷ ರೂ. ಲಕ್ಷಾಂತರ ಅಭಿಮಾನಿಗಳ ಬರುವಿಕೆಗೆ ಸುಮಾರು 7000 ಬಸ್ಗಳ ವ್ಯವಸ್ಥೆಗೆ ಒಟ್ಟೂ 5 ಕೋಟಿ ರೂ. ಜನರನ್ನ ಸೇರಿಸುವಂತ, ಬಿಡುವಂತ ಹೊಣೆ ಹೊತ್ತಿದು ಆಯಾಯ ಕ್ಷೇತ್ರದ ಕಾಂಗ್ರೆಸ್ ಶಾಸಕರು ಹಾಗೂ ಸಿದ್ದರಾಮಯ್ಯ ಅಭಿಮಾನಿಗಳು. ಬಂದ ಅಭಿಮಾನಿಗಳಿಗೆ ಊಟದ ವ್ಯವಸ್ಥೆಗೆ ಸುಮಾರು 6 ಕೋಟಿ ರೂ. 6 ಲಕ್ಷಕ್ಕೂ ಹೆಚ್ಚು ಮಂದಿ ಊಟ ಸೇವಿಸಲಾಗಿದೆ ಎನ್ನಲಾಗುತ್ತಿದೆ. ಹೊರಗಡೆಯ ಫ್ಲೆಕ್ಸ್, 75 ಅಡಿಯ 7 ಕಟೌಟ್ ಗಳು ಸೇರಿ ಪ್ರಚಾರಕ್ಕೆ 2.5 ಕೋಟಿ, ಎಲ್ಇಡಿ ಸ್ಕ್ರೀನ್ಗಳ ವ್ಯವಸ್ಥೆಗೆ ಸುಮಾರು 50 ಲಕ್ಷ ರೂ. ಖರ್ಚು ಮಾಡಲಾಗಿದೆ. ಇದಿಷ್ಟೂ ಖರ್ಚು ವೆಚ್ಚಗಳನ್ನು ಅಮೃತ ಮಹೋತ್ಸವ ಸಮಿತಿಯೇ ಭರಸಿದೆ. ದೇಣಿಗೆಯ ರೂಪದಲ್ಲಿ ಆಪ್ತರಿಂದ ಹಣ ಸಂಗ್ರಹಿಸಿ ಕಾರ್ಯಕ್ರಮ ರೂಪುರೇಷೆ ಸಿದ್ದಪಡಿಸಿ ಮುಗಿಸಲಾಗಿದೆ.
ವರದಿ: ಪ್ರಸನ್ನ ಗಾಂವ್ಕರ್ ಟಿರ್ವಿ ಬೆಂಗಳೂರು