ಕ್ರಿಪ್ಟೋಕರೆನ್ಸಿ ಹಗರಣ: ಹ್ಯಾಕರ್ ಶ್ರೀಕಿ, ಅಕೌಂಟೆಂಟ್ ರಾಬಿನ್ ಖಂಡೇಲ್‌ವಾಲ್‌ಗೆ ಹೈಕೋರ್ಟ್​​ನಿಂದ ಜಾಮೀನು

ಕ್ರಿಪ್ಟೋಕರೆನ್ಸಿ ಹಗರಣದ ಪಿಎಂಎಲ್‌ಎ ಪ್ರಕರಣದಲ್ಲಿ ಕುಖ್ಯಾತ ಹ್ಯಾಕರ್ ಶ್ರೀಕಿ ಹಾಗೂ ಆತನ ಅಕೌಂಟೆಂಟ್ ರಾಬಿನ್ ಖಂಡೇಲ್‌ವಾಲ್‌ಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಪ್ರಕರಣ ಇನ್ನೂ ವಿಚಾರಣಾ ನ್ಯಾಯಾಲಯದಲ್ಲಿ ಸಂಜ್ಞೆ ಸ್ವೀಕರಿಸುವ ಪೂರ್ವದ ಹಂತದಲ್ಲಿದ್ದು, ವಿಚಾರಣೆ ಶೀಘ್ರದಲ್ಲೇ ಪೂರ್ಣಗೊಂಡು ಪ್ರಕರಣ ಇತ್ಯರ್ಥವಾಗುವ ಸಾಧ್ಯತೆ ತೀರಾ ಕಡಿಮೆ ಎಂದು ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ಕ್ರಿಪ್ಟೋಕರೆನ್ಸಿ ಹಗರಣ: ಹ್ಯಾಕರ್ ಶ್ರೀಕಿ, ಅಕೌಂಟೆಂಟ್ ರಾಬಿನ್ ಖಂಡೇಲ್‌ವಾಲ್‌ಗೆ ಹೈಕೋರ್ಟ್​​ನಿಂದ ಜಾಮೀನು
ಹ್ಯಾಕರ್ ಶ್ರೀಕಿಗೆ ಹೈಕೋರ್ಟ್​​ನಿಂದ ಜಾಮೀನು
Image Credit source: Getty Images and Tv9 Kannada

Updated on: Oct 12, 2026 | 4:29 PM

ಬೆಂಗಳೂರು, ಅಕ್ಟೋಬರ್​​ 12: ಕ್ರಿಪ್ಟೋಕರೆನ್ಸಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಪ್ರಕರಣದಲ್ಲಿ ಹ್ಯಾಕರ್ ಶ್ರೀಕೃಷ್ಣ ರಮೇಶ್ ಅಲಿಯಾಸ್ ಶ್ರೀಕಿ ಮತ್ತು ಆತನ ಅಕೌಂಟೆಂಟ್ ರಾಬಿನ್ ಖಂಡೇಲ್‌ವಾಲ್‌ಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಸಾವಿರಾರು ಪುಟಗಳ ದಾಖಲೆಗಳಿರುವ ಈ ಪ್ರಕರಣದ ವಿಚಾರಣೆ ಶೀಘ್ರದಲ್ಲೇ ಪೂರ್ಣಗೊಳ್ಳುವ ಸಾಧ್ಯತೆ ಕಡಿಮೆ ಇದೆ. ಅಲ್ಲದೆ, ಪ್ರಕರಣ ಇನ್ನೂ ವಿಚಾರಣಾ ನ್ಯಾಯಾಲಯದಲ್ಲಿ ಸಂಜ್ಞೆ ಸ್ವೀಕರಿಸುವ ಪೂರ್ವದ ಹಂತದಲ್ಲಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಈ ಪ್ರಕರಣದ ದಾಖಲೆಗಳು 8,103 ಪುಟಗಳಷ್ಟಿದ್ದು, 10 ಸಾಕ್ಷಿಗಳನ್ನು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಹೀಗಾಗಿ, ವಿಚಾರಣೆ ಶೀಘ್ರದಲ್ಲೇ ಪೂರ್ಣಗೊಂಡು ಪ್ರಕರಣ ಇತ್ಯರ್ಥವಾಗುವ ಸಾಧ್ಯತೆ ತೀರಾ ಕಡಿಮೆ ಎಂದು ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಹೇಳಿದ್ದಾರೆ. ಪಿಎಂಎಲ್‌ಎ ಕಾಯ್ದೆಯ ಸೆಕ್ಷನ್ 3 ಮತ್ತು 4ರ ಅಡಿಯಲ್ಲಿ ಆರೋಪ ಎದುರಿಸುತ್ತಿರುವ ಇಬ್ಬರು ಆರೋಪಿಗಳು ನಿಯಮಿತ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಪುರಸ್ಕರಿಸಿ ನ್ಯಾಯಾಲಯ ಈ ಆದೇಶ ನೀಡಿದೆ.

ಇದನ್ನೂ ಓದಿ:  ಬಿಟ್‌ಕಾಯಿನ್ ಹಗರಣ ಹಿನ್ನೆಲೆ ಶ್ರೀಕಿ ಅರೆಸ್ಟ್! ಮಹಮ್ಮದ್ ನಲಪಾಡ್​ಗೂ ಎದುರಾಗುತ್ತಾ ಸಂಕಷ್ಟ?

ಇ.ಡಿ ವಾದ ಒಪ್ಪದ ಕೋರ್ಟ್​​

ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ಆರೋಪಿಗಳು ಪತ್ತೆಯಾಗದ ಅಪರಾಧದ ಹಣವನ್ನು ಬೇರೆಡೆಗೆ ವರ್ಗಾಯಿಸಬಹುದು ಅಥವಾ ದುರುಪಯೋಗಪಡಿಸಿಕೊಳ್ಳಬಹುದು ಎಂಬ ಇ.ಡಿ. ಪರ ವಾದವನ್ನು ಹೈಕೋರ್ಟ್ ಒಪ್ಪಲಿಲ್ಲ. ಪ್ರಸ್ತುತ ಪ್ರಕರಣ 2021ರಲ್ಲಿ ದಾಖಲಾಗಿದ್ದು, ಅರ್ಜಿದಾರರನ್ನು 2026ರ ಮೇ 8ರಂದು ಬಂಧಿಸಲಾಗಿದೆ. ಅರ್ಜಿದಾರರು ಅಥವಾ ಇತರ ಆರೋಪಿಗಳು ಅಪರಾಧದಿಂದ ಬಂದ ಹಣವನ್ನು ಸುರಕ್ಷಿತವಾಗಿ ಇರಿಸಿದ್ದರೆ ಮತ್ತು ಅದನ್ನು ದುರುಪಯೋಗಪಡಿಸಿಕೊಳ್ಳುವ ಅಥವಾ ಬೇರೆಡೆಗೆ ವರ್ಗಾಯಿಸುವ ಉದ್ದೇಶ ಹೊಂದಿದ್ದರೆ, ಬಂಧನಕ್ಕೂ ಮುನ್ನವೇ ಅದನ್ನು ಮಾಡಬಹುದಿತ್ತು ಎಂದು ನ್ಯಾಯಾಲಯ ಹೇಳಿದೆ. ಇದಲ್ಲದೆ, ಮೂಲ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾಗ ಅರ್ಜಿದಾರರು ಜಾಮೀನಿನ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪವೂ ಇಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿದೆ.

ಪ್ರಕರಣದ ಹಿನ್ನಲೆ

2021ರಲ್ಲಿ ಪಿಎಂಎಲ್‌ಎ ಅಡಿಯಲ್ಲಿ ಜಾರಿ ನಿರ್ದೇಶನಾಲಯವು ಅರ್ಜಿದಾರರ ವಿರುದ್ಧ ದಾಖಲಿಸಿದ್ದ ಜಾರಿ ಪ್ರಕರಣದ ಮಾಹಿತಿ ವರದಿ (ಇಸಿಐಆರ್) ಈ ಪ್ರಕರಣಕ್ಕೆ ಸಂಬಂಧಿಸಿದೆ. 2017ರಿಂದ 2020ರ ಅವಧಿಯಲ್ಲಿ ಅರ್ಜಿದಾರರ ವಿರುದ್ಧ ಮೂಲ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿದ್ದವು. ಆ ಎಲ್ಲ ಪ್ರಕರಣಗಳಲ್ಲೂ ಅವರು ಜಾಮೀನು ಪಡೆದಿದ್ದರು. 2020ರಲ್ಲಿ ಮತ್ತೊಂದು ಇಸಿಐಆರ್ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಅರ್ಜಿದಾರರಿಗೆ ಸಮನ್ಸ್ ಜಾರಿ ಮಾಡಲಾಗಿತ್ತು ಮತ್ತು ನಂತರ ಅವರಿಗೆ ನಿಯಮಿತ ಜಾಮೀನು ದೊರೆತಿತ್ತು. ಆದರೆ, 2021ರಲ್ಲಿ ದಾಖಲಾದ ಪ್ರಸ್ತುತ ಇಸಿಐಆರ್ ಪ್ರಕರಣದಲ್ಲಿ 2026ರ ಮೇ 8ರಂದು ಅವರನ್ನು ಬಂಧಿಸಲಾಗಿತ್ತು. ವಿಶೇಷ ನ್ಯಾಯಾಧೀಶರು ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಇಬ್ಬರೂ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದರು ಎಂದು ಲೈವ್​​ ಲಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 4:26 pm, Mon, 12 October 26

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us