ಫುಟ್‌ಪಾತ್ ಮೇಲೆ ಕಸ ಹಾಕಿದರೇ ಠಾಣಾ ವ್ಯಾಪ್ತಿಯಲ್ಲಿ ಕ್ರಮ, ಟ್ಯಾಕ್ಸ್ ಕದಿಯುತ್ತಿರುವವರಿಗೆ ಕಡಿವಾಣ: ಡಿಕೆ ಶಿವಕುಮಾರ್
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು ಬೆಳ್ಳಂ ಬೆಳಿಗ್ಗೆ ಬೆಂಗಳೂರು ಸಿಟಿ ರೌಂಡ್ಸ್ ಹಾಕಿದ್ದು, ಇಂದಿರಾ ಕ್ಯಾಂಟಿನ್ ಮತ್ತು ತ್ಯಾಜ್ಯ ಘಟಗಳಿಗೆ ದಿಢೀರ್ ಭೇಟಿ ನೀಡಿದ್ದಾರೆ.
ಬೆಂಗಳೂರು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ಇಂದು (ಜು.09) ಬೆಳ್ಳಂ ಬೆಳಿಗ್ಗೆ ಸಿಟಿ ರೌಂಡ್ಸ್ ಹಾಕಿದ್ದು, ಇಂದಿರಾ ಕ್ಯಾಂಟಿನ್ (Indira Canteen) ಮತ್ತು ತ್ಯಾಜ್ಯ ಘಟಗಳಿಗೆ ದಿಢೀರ್ ಭೇಟಿ ನೀಡಿದ್ದಾರೆ. ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಅಧಿಕಾರಿಗಳಿಗೆ ತಿಳಿಸದೇ ತ್ಯಾಜ್ಯ ಘಟಕಗಳಿಗೆ ಭೇಟಿ ನೀಡಿದ್ದೇನೆ. ಯಾವುದೇ ಅಧಿಕಾರಿಗಳಿಗೆ ಮಾಹಿತಿ ನೀಡದೇ ಭೇಟಿ ನೀಡಿದ್ದೇನೆ. ತ್ಯಾಜ್ಯ ಘಟಕಗಳಲ್ಲಿ ಅಧಿಕಾರಿಗಳು ಯಾರೂ ತಪಾಸಣೆ ಮಾಡುತ್ತಿಲ್ಲ. ಬೆಂಗಳೂರು ಮಹಾನಗರ ಸ್ವಚ್ಛಗೊಳಿಸಬೇಕಾಗಿದೆ ಎಂದರು.
ಫುಟ್ಪಾತ್ಗಳಲ್ಲಿ ಕಸ ಹಾಕಿದ್ದಾರೆ. ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇದಕ್ಕೆ ಪರಿಹಾರ ಏನು? ಯಾರು ಜವಾಬ್ದಾರರೆಂದು ಕೇಳಿದ್ದೇನೆ. ವಿಲೇವಾರಿ ಟೆಂಡರ್ ಪಡೆದವರು ಎಲ್ಲೆಂದ್ರಲ್ಲಿ ಡಂಪ್ ಮಾಡುತ್ತಿದ್ದಾರೆ. ಲಾರಿ, ಟ್ರ್ಯಾಕ್ಟರ್‌ಗಳ ಚಾಲಕರು ಕಸ ತಂದು ಸುರಿಯುತ್ತಿದ್ದಾರೆ. ಈ ಬಗ್ಗೆ ಸಭೆ ನಡೆಸಿ ಸೂಚನೆ ನೀಡಿದ್ದೇನೆ. ಲಾರಿ ಚಾಲಕರು ರೋಡ್, ಫುಟ್‌ಪಾತ್ ಮೇಲೆ ಕಸ ಹಾಕಿದರೇ ಚಾಲಕರ ವಿರುದ್ಧ ಠಾಣಾ ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: ಡಿಸಿಎಂ ಡಿಕೆ ಶಿವಕುಮಾರ್ ಸಿಟಿ ರೌಂಡ್ಸ್ ವೇಳೆ ಪಾಲಿಕೆ ವಾಹನಗಳ ನಡುವೆ ಅಪಘಾತ
ಇಂದಿರಾ ಕ್ಯಾಂಟೀನ್ಗೆ ಹೋಗಿದ್ದೆ ಅಲ್ಲಿ ಊಟ ಖಾಲಿ ಆಗಿತ್ತು. ಚೊಕ್ಕಸಂದ್ರದಲ್ಲಿ 5 ರೂ. ಬದಲು 10 ರೂ. ಸಂಗ್ರಹವಾಗಿದೆ. ಬಹಳ ವರ್ಷದಿಂದ ನಡೆಯುತ್ತಿದೆ, ಎಲ್ಲವನ್ನೂ ರಿಪೇರಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಬಜೆಟ್ನಲ್ಲಿ ಬೆಂಗಳೂರಿಗೆ ಸರಿಯಾದ ಅನುದಾನ ಸಿಗದ ವಿಚಾರವಾಗಿ ಮಾತನಾಡಿದ ಅವರು ಬಜೆಟ್ನಲ್ಲಿ ಬೆಂಗಳೂರು ನಗರಕ್ಕೆ ಎಷ್ಟೇ ಅನುದಾನ ನೀಡಲಿ. ನಾವು ರೆವಿನ್ಯೂ ಜನರೇಟ್ ಮಾಡುತ್ತೇವೆ. ಟ್ಯಾಕ್ಸ್ ಕದಿಯುತ್ತಿರುವವರಿಗೆ ಕಡಿವಾಣ ಹಾಕುತ್ತೇವೆ. ಬೆಂಗಳೂರು ನಗರ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿದರು.
ಜೈನಮುನಿ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಪ್ರಕರಣ ಬಗ್ಗೆ ಗೃಹ ಸಚಿವರು ಗಮನಿಸುತ್ತಾರೆ. ನ್ಯಾಯಕ್ಕೆ ಆಗ್ರಹಿಸಿ ಜೈನಮುನಿಗಳೊಬ್ಬರು ಉಪವಾಸಕ್ಕೆ ಕುಳಿತಿದ್ದಾರೆ. ಅವರ ಮನವೊಲಿಕೆ ಮಾಡಲು ನಾನು ಹೇಳಿದ್ದೇನೆ. ಎಲ್ಲರಿಗೂ ರಕ್ಷಣೆ ಕೊಡುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಪೆನ್ಡ್ರೈವ್ನಲ್ಲಿನ ದಾಖಲೆ ಬಿಡುಗಡೆ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ನಮಗೆ ಯಾವುದೇ ಟೆನ್ಷನ್ ಇಲ್ಲ. ಹೆಚ್.ಡಿ.ಕುಮಾರಸ್ವಾಮಿ ಯಾವ ಪೆನ್ಡ್ರೈವ್ನಾದರೂ ಇಟ್ಟುಕೊಳ್ಳಲಿ. ಹೆಚ್.ಡಿ.ಕುಮಾರಸ್ವಾಮಿ ಏನು ಬೇಕಾದರೂ ಮಾಡಿಕೊಳ್ಳಲಿ. ಇದಕ್ಕೆ ನಮಗೆ ಯಾವುದೇ ಅಭ್ಯಂತರವಿಲ್ಲ, ನಮ್ಮ ಸರ್ಕಾರಕ್ಕೆ ಯಾವುದೇ ಟೆನ್ಷನ್ ಇಲ್ಲ. ಮೊದಲು ಕಸ ಗುಡಿಸೋಣ ಬನ್ನಿ ಎಂದು ವ್ಯಂಗ್ಯವಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ