ಡಿಕೆ ಶಿವಕುಮಾರ್ ಖಡಕ್ ಮಾತು: ನಟ ದರ್ಶನ್​ಗೆ ಮತ್ತೊಂದು ಸಂಕಷ್ಟ!

| Updated By: ರಮೇಶ್ ಬಿ. ಜವಳಗೇರಾ

Updated on: Jun 18, 2024 | 4:08 PM

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆಗಿರುವ ನಟ ದರ್ಶನ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಕೊಲೆ ಆರೋಪ ಎದುರಿಸುತ್ತಿರುವ ದರ್ಶನ್ ಗ್ಯಾಂಗ್ ಅನ್ನ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ತನಿಖೆಯ ಮಧ್ಯೆ ರಾಜರಾಜೇಶ್ವರಿ ನಗರದಲ್ಲಿರುವ ನಟ ದರ್ಶನ್ ಅವರ ಮನೆಗೆ ಸಂಚಕಾರ ಎದುರಾಗಿದೆ.

ಡಿಕೆ ಶಿವಕುಮಾರ್ ಖಡಕ್ ಮಾತು: ನಟ ದರ್ಶನ್​ಗೆ ಮತ್ತೊಂದು ಸಂಕಷ್ಟ!
ಡಿಕೆಶಿ-ದರ್ಶನ್
Follow us on

ಬೆಂಗಳೂರು, (ಜೂನ್ 18): ಆರ್‌.ಆರ್‌ ನಗರದಲ್ಲಿರುವ ಸ್ಯಾಂಡಲ್​ವುಡ್ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ (Actor Darshan) ಅವರ ಮನೆ ರಾಜಕಾಲುವೆ ‌ಮೇಲೆ ಇದೆ. ರಾಜಕಾಲುವೆ ಒತ್ತುವರಿ ಆದರೂ ದರ್ಶನ್ ಮನೆಯನ್ನ ತೆರವುಗೊಳಿಸಲು ಬಿಬಿಎಂಪಿ (BBMP) ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಇದೀಗ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ಉಸ್ತುವಾರಿ ಸಚಿವ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಅವರು ಪ್ರತಿಕ್ರಿಯೆ ನೀಡಿದ್ದು, ಯಾರೇ ಒತ್ತುವರಿ ಮಾಡಿ ಸ್ಟೇ ತಂದಿದ್ದರೂ ಸಹ ಕಾನೂನಿನ ಪ್ರಕಾರ ಮನೆ ತೆರವು ಮಾಡಲು ಸೂಚನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ರಾಜಕಾಲುವೆ ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ. ಯಾರೇ ಒತ್ತುವರಿ ಮಾಡಿ ತಡೆಯಾಜ್ಞೆ ತಂದಿರಬಹುದು. ನಾವು ಕಾನೂನಿನ ಪ್ರಕಾರ ಒತ್ತುವರಿ ಜಾಗವನ್ನು ತೆರವು ಮಾಡುತ್ತೇವೆ. ಯಾರೇ ಆದರೂ ಕಾನೂನು ಪ್ರಕಾರ ಏನು ಮಾಡಬೇಕೋ ಅದನ್ನೇ ಮಾಡುತ್ತೇವೆ. ನೀನು, ನಾನು ಯಾರೇ ಸ್ಟೇ ತಂದಿದ್ರು ತೆರವು ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ದರ್ಶನ್ ಪತ್ನಿಗೆ ಸಂಕಷ್ಟ, ವಿಜಯಲಕ್ಷ್ಮಿ ಎ1, ದರ್ಶನ್ ಎ3

ನಟ ದರ್ಶನ್ ಮನೆ ರಾಜಕಾಲುವೆ ‌ಮೇಲೆ ಇದ್ದರೂ ಸಹ ತೆರವುಗೊಳಿಸಲು ಬಿಬಿಎಂಪಿ ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಅಲ್ಲದೇ ಇದು ಕೋರ್ಟ್​ನಲ್ಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಸೈಲೆಂಟ್ ಆಗಿದ್ದರು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಅಪಸ್ವರ ಹೇಳಿಬಂದಿದ್ದವು. ದೊಡ್ಡವರಿಗೆ ಒಂದು ರೂಲ್ಸ್ ಸಾಮಾನ್ಯ ಜನರಿಗೆ ಮತ್ತೊಂದು ರೂಲ್ಸ್​ ಎನ್ನುವ ಆರೋಪ ಕೇಳಿಬಂದಿದ್ದವು. ಇದೀಗ ಈ ಬಗ್ಗೆ ಡಿಕೆಶಿ ಪ್ರತಿಕ್ರಿಯಿಸಿದ್ದು, ಕಾನೂನಿನ ಪ್ರಕಾರ ದರ್ಶನ್ ಮನೆ ತೆರವಿಗೆ ಪಾಲಿಕೆ ಅಧಿಕಾರಿಗಳಿಗೆ ಸರ್ಕಾರದಿಂದ ಮೌಖಿಕ ಸೂಚನೆ ನೀಡಿದ್ದು, ಇದೀಗ ನಟ ದರ್ಶನ್​ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ರಾಜರಾಜೇಶ್ವರಿ ನಗರದ ಐಡಿಯಲ್‌ ಹೋಮ್ಸ್‌ ನಲ್ಲಿ ರಾಜ ಕಾಲುವೆ ಮೇಲೆ ಕಟ್ಟಲಾಗಿರುವ ದರ್ಶನ್‌ ಅವರ ತೂಗುದೀಪ ನಿವಾಸ, ಶಾಸಕ, ಉದ್ಯಮಿ ಶಾಮನೂರು ಶಿವಶಂಕರಪ್ಪ ಅವರ ಒಡೆತನದ ಎಸ್‌ ಎಸ್‌ ಆಸ್ಪತ್ರೆ ಸೇರಿಂದತೆ 67 ಕಟ್ಟಡಗಳನ್ನು ಪಟ್ಟಿ ಮಾಡಲಾಗಿತ್ತು. ಆದರೆ ಹಣ ಮತ್ತು ಅಧಿಕಾರದ ಪ್ರಭಾವದಿಂದಾಗಿ ಇವರೆಲ್ಲರೂ ತಮ್ಮ ತಮ್ಮ ಮನೆಗಳನ್ನು ಉಳಿಸಿಕೊಂಡಿದ್ದರು. ಕಟ್ಟಡಗಳನ್ನು ಕೆಡವದಂತೆ ತಡೆಯಾಜ್ಞೆ ತರಲು ಇವರಿಗೆ ಸರಕಾರವೇ ಪರೋಕ್ಷವಾಗಿ ನೆರವಾಗಿತ್ತು. ಇವರು ತಡೆಯಾಜ್ಞೆ ತಂದು 8 ವರ್ಷಗಳಾಗಿದ್ದು ಇದುವರೆಗೂ ಸರಕಾರ ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ.

ಇದೀಗ ಬಿಬಿಎಂಪಿ ದರ್ಶನ್‌ ಸೇರಿದಂತೆ ಅನೇಕ ಮಂದಿ ಹೈಕೋರ್ಟ್‌ ನಿಂದ ತಂದಿರುವ ತಡೆಯಾಜ್ಞೆಗಳನ್ನು ತೆರವುಗೊಳಿಸಲು ಸರಕಾರ ಮುಂದಾಗಿದೆ. ಇದುವರೆಗೂ ತಡೆಯಾಜ್ಞೆ ನೀಡಿದ್ದ ಅವಧಿ ಎಷ್ಟು ಎಂದು ಯಾರಿಗೂ ತಿಳಿದಿರಲಿಲ್ಲ. ಈಗ ಮತ್ತೆ ಪರಿಶೀಲಿಸಿ ತಡೆಯಾಜ್ಞೆಯನ್ನು ತೆರವುಗೊಳಿಸಿ ಈ ಕಟ್ಟಡಗಳನ್ನು ತೆರವುಗೊಳಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ