ದೀಪಾವಳಿ: ಪಟಾಕಿ ಸಿಡಿಸುವ ವೇಳೆ ಎಚ್ಚರವಹಿಸಲು ಸಲಹೆ, ಚಿಕಿತ್ಸೆಗೆ ಮಿಂಟೋ ಆಸ್ಪತ್ರೆ ಸಜ್ಜು
ಬೆಂಗಳೂರಿನಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿಗಳಿಂದಾಗಿ ಕಣ್ಣು ಗಾಯಗೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ, ಮಿಂಟೋ ಆಸ್ಪತ್ರೆ ತುರ್ತು ಚಿಕಿತ್ಸೆಗೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಪ್ರತ್ಯೇಕ ಮಕ್ಕಳ ವಾರ್ಡ್, ಹೆಚ್ಚುವರಿ ಹಾಸಿಗೆಗಳು ಮತ್ತು 24/7 ತುರ್ತು ಸೇವೆ ಲಭ್ಯವಿದೆ. ತುರ್ತು ಸಹಾಯವಾಣಿಯನ್ನೂ ತೆರೆಯಲಾಗಿದ್ದು, ವಿವರ ಇಲ್ಲಿದೆ.

ಬೆಂಗಳೂರು, ಅಕ್ಟೋಬರ್ 29: ದೀಪಾವಳಿ ಹಬ್ಬಕ್ಕೆ ಇನ್ನೆರಡನೇ ದಿನ ಬಾಕಿ ಇದ್ದು, ಬೆಂಗಳೂರಿನಲ್ಲಿ ಪಟಾಕಿಗಳ ಖರೀದಿ ಭರಾಟೆ ಜೋರಾಗಿದೆ. ಬೆಂಗಳೂರಿನ 456 ಮೈದಾನಗಳಲ್ಲಿ ಪಟಾಕಿ ಸ್ಟಾಲ್ ತೆರೆಯಲಾಗಿದ್ದು, ಜನ ಮುಗಿಬಿದ್ದು ಪಟಾಕಿ ಖರೀದಿ ಮಾಡುತ್ತಿದ್ದಾರೆ. ಈ ಮಧ್ಯೆ, ಪಟಾಕಿ ಸಿಡಿಸುವಾಗ ಬಹಳ ಮುಂಜಾಗರೂಕತೆ ಮುಖ್ಯ ಎಂದು ಬೆಂಗಳೂರಿನ ಮಿಂಟೋ ಆಸ್ಪತ್ರೆಯ ನೇತ್ರ ತಜ್ಞರು ಕಿವಿಮಾತು ಹೇಳಿದ್ದಾರೆ.
ಬೆಂಗಳೂರಿನಲ್ಲಿ ದೀಪಾವಳಿ ಸಂದರ್ಭ ಪ್ರತಿ ವರ್ಷ ಪಟಾಕಿ ಸಿಡಿಸುವ ವೇಳೆ ಕಣ್ಣಿಗೆ ಗಾಯ ಮಾಡಿಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ವರ್ಷ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪಟಾಕಿ ಗಾಯಕ್ಕೆ ಚಿಕಿತ್ಸೆ ನೀಡಲು ಮಿಂಟೋ ಆಸ್ಪತ್ರೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಹಬ್ಬದ ಸಮಯದಲ್ಲಿ 24/7 ಸೇವೆ ಒದಗಿಸಲು ಆಸ್ಪತ್ರೆ ಸಜ್ಜಾಗಿದೆ. ಸಂಭ್ರಮದಲ್ಲಿ ಪಟಾಕಿ ಸುಡುವಾಗ ಅವಘಡ ಸಂಭವಿಸಿ ಕಣ್ಣಿಗೆ ಆಗುವ ಗಾಯಕ್ಕೆ ಚಿಕಿತ್ಸೆ ನೀಡಲು ಆಸ್ಪತ್ರೆ ಸನ್ನದ್ಧವಾಗಿದೆ.
ಮಕ್ಕಳಿಗೆ ಪ್ರತ್ಯೇಕ ವಾರ್ಡ್
ಪಟಾಕಿ ಸಿಡಿತದಿಂದ ಗಾಯಗೊಂಡು ಚಿಕಿತ್ಸೆಗೆ ಬರುವ ಮಕ್ಕಳಿಗಾಗಿ ಮಿಂಟೋ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ತೆರೆಯಗಾಲಿದೆ. ತುರ್ತು ಚಿಕಿತ್ಸೆಗೆ ಬೇಕಾದ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ಸಾಕಷ್ಟು ಔಷಧಗ, ಐ ಡ್ರಾಪ್ಸ್ಗಳನ್ನು ಎಲ್ಲ ವಾರ್ಡ್ಗಳಲ್ಲಿ ಶೇಖರಣೆ ಮಾಡಲಾಗಿದೆ.
ಸಿಬ್ಬಂದಿಯಿಂದ ರಜೆ ಇಲ್ಲದೇ ಕೆಲಸ
ವರ್ಷದಿಂದ ವರ್ಷಕ್ಕೆ ಪಟಾಕಿ ಪ್ರಕರಣದ ಸಂತ್ರಸ್ತರು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಹೆಚ್ಚಾಗುತ್ತಿರುವುದು ಅಂಕಿಅಂಶಗಳಿಂದ ತಿಳಿದುಬಂದಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಮಿಂಟೋ ಆಸ್ಪತ್ರೆಯ ಸಿಬ್ಬಂದಿ ದೀಪಾವಳಿಯಲ್ಲಿ ರಜೆ ತೆಗೆದು ಕೊಳ್ಳದೇ ಕಾರ್ಯನಿರ್ವಹಿಸಲಿದ್ದಾರೆ.
ಪಟಾಕಿ ಗಾಯಾಳುಗಳಿಗೆ ಪ್ರತ್ಯೇಕ ಬೆಡ್
ಪಟಾಕಿಯಿಂದ ಗಾಯಗೊಂಡವರಿಗೆ ಚಿಕಿತ್ಸೆ ನೀಡಲು 07 ಪುರುಷ 07 ಮಹಿಳಾ ಬೆಡ್ ಹಾಗೂ ಮಕ್ಕಳಿಗೆ ಪ್ರತ್ಯೇಕವಾದ ಬೆಡ್ ಮೀಸಲಿರಿಸಲಾಗಿದೆ. 08 ಎಮರ್ಜೆನ್ಸಿ ವಾರ್ಡ್ಗಳನ್ನೂ ಮೀಸಲಿರಿಸಲಾಗಿದೆ. ತುರ್ತು ಸರ್ಜರಿಗೂ ವ್ಯವಸ್ಥೆ ಮಾಡಲಾಗಿದೆ.
ತುರ್ತು ಸಹಾಯವಾಣಿ
ಪಟಾಕಿ ಸಂಬಂಧಿತ ಅವಘಡ, ಗಾಯಾಳುಗಳಿಗಾಗಿ ಮಿಂಟೋ ಆಸ್ಪತ್ರೆ ತುರ್ತು ಸಹಾಯವಾಣಿ ಸಂಖ್ಯೆಯನ್ನೂ ತೆರೆದಿದೆ. ತುರ್ತು ಸಂದರ್ಭಗಳಲ್ಲಿ 9481740137 ಹಾಗೂ 08026707176 ಈ ಸಂಖ್ಯೆಗಳಿಗೆ ಕರೆ ಮಾಡಬಹುದಾಗಿದೆ.
ಇದನ್ನೂ ಓದಿ: ದೀಪಾವಳಿ: ಬೆಂಗಳೂರಿನಲ್ಲಿ ಪಟಾಕಿ ಖರೀದಿಗೆ ಮುಗಿಬಿದ್ದ ಜನ, ದರ ಎಷ್ಟಿದೆ? ಇಲ್ಲಿದೆ ವಿವರ
ಪಟಾಕಿ ಸಂಬಂಧಿತ ಅವಘಡಗಳ ತಡೆಗೆ ಈ ಬಾರಿ ರಾಜ್ಯ ಸರ್ಕಾರವೂ ಹಲವು ಕ್ರಮಗಳನ್ನು ಕೈಗೊಂಡಿದೆ. ಅಗ್ನಿ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲು ಕಟ್ಟುನಿಟ್ಟಿನ ಕ್ರಮವಹಿಸುವಂತೆ ಸೂಚಿಸಲಾಗಿದೆ. ನಿಯಮಗಳಿಗೆ ಅನುಗುಣವಾಗಿ ಪಟಾಕಿ ಸ್ಟಾಲ್ ತೆರೆಯಲಾಗಿದ್ದು, ಹಸಿರು ಪಟಾಕಿಗಳ ಮಾರಾಟಕ್ಕಷ್ಟೇ ಅನುಮತಿ ನೀಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:37 am, Tue, 29 October 24