ದೀಪಾವಳಿಗೆ ಪಟಾಕಿ ಖರೀದಿಸುತ್ತೀರಾ? ಬೆಂಗಳೂರು ಪೊಲಿಸ್ ಆಯುಕ್ತರು ಕೊಟ್ಟ ಈ ಸೂಚನೆ ತಪ್ಪದೇ ಗಮನಿಸಿ
ಬೆಂಗಳೂರಿನಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸುರಕ್ಷತೆ ಕುರಿತು ಪೊಲೀಸ್ ಆಯುಕ್ತರು ಮಹತ್ವದ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಹಸಿರು ಪಟಾಕಿಗಳನ್ನು ಖರೀದಿಸಲು, ಅವುಗಳ QR ಕೋಡ್ ಅನ್ನು ಪರಿಶೀಲಿಸಲು ಮತ್ತು ಅಧಿಕೃತ ಅಂಗಡಿಗಳಿಂದ ಮಾತ್ರ ಖರೀದಿಸಲು ಸೂಚಿಸಲಾಗಿದೆ. ಮಕ್ಕಳು ಪಟಾಕಿ ಹಚ್ಚುವಾಗ ಎಚ್ಚರಿಕೆಯಿಂದಿರಬೇಕು ಮತ್ತು ಅಪಾಯಕಾರಿ ಪ್ರದೇಶಗಳಲ್ಲಿ ಪಟಾಕಿ ಹಚ್ಚಬಾರದು ಎಂದು ತಿಳಿಸಲಾಗಿದೆ. ಪೊಲೀಸ್ ಆಯುಕ್ತರು ನೀಡಿರುವ ಸಲಹೆ ಸೂಚನೆಗಳ ವಿವರ ಇಲ್ಲಿದೆ.
ಬೆಂಗಳೂರು, ಅಕ್ಟೋಬರ್ 29: ದೀಪಾವಳಿ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಬೆಂಗಳೂರು ನಗರದಾದ್ಯಂತ ಪಟಾಕಿ ಖರೀದಿಯೂ ಜೋರಾಗಿದೆ. ಇದೇ ಸಂದರ್ಭದಲ್ಲಿ ಪಟಾಕಿ ವಿಚಾರವಾಗಿ ಸಾರ್ವಜನಿಕರಿಗೆ ಪೊಲೀಸ್ ಆಯುಕ್ತರು ಕೆಲವು ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ಪಟಾಕಿ ವಿಚಾರದಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಹಸಿರು ಪಟಾಕಿಗೆ ಮಾತ್ರವೇ ಅವಕಾಶ ಎಂದು ಸಿಎಂ ಸಿದ್ದರಾಮಯ್ಯ ಕೂಡ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ಪೊಲೀಸ್ ಆಯುಕ್ತರು ನೀಡಿರುವ ಸಲಹೆ ಸೂಚನೆಗಳನ್ನು ಇಲ್ಲಿ ನೀಡಲಾಗಿದೆ;
- ಹಸಿರು ಪಟಾಕಿಗಳನ್ನು ಖರೀದಿಸಿ, ಪರಿಸರ ಸ್ನೇಹಿ ದೀಪಾವಳಿಯನ್ನು ಆಚರಿಸಿ.
- ಹಸಿರು ಪಟಾಕಿಗಳನ್ನು ಖರೀದಿಸುವಾಗ ಅದರ ಮೇಲಿರುವ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಖಚಿತಪಡಿಸಿಕೊಂಡು ಖರೀದಿ ಮಾಡುವುದು.
- ಉತ್ತಮ ಗುಣಮಟ್ಟದ ಪಟಾಕಿಗಳನ್ನು ಅಧಿಕೃತವಾಗಿ ಪರವಾನಿಗೆ ಪಡೆದ ಅಂಗಡಿ/ಮಳಿಗೆಗಳಿಂದ ಖರೀದಿಸಿ ಹಾಗೂ ಲೈಸೆನ್ಸ್‌ಗಳನ್ನು ಅಂಗಡಿಗಳಲ್ಲಿ ಪ್ರದರ್ಶಿಸಿರುವುದನ್ನು ಖಚಿತ ಪಡಿಸಿಕೊಂಡು ಪಟಾಕಿಗಳನ್ನು ಖರೀದಿಸುವುದು.
- ದೀಪಾವಳಿ ಸಮಯದಲ್ಲಿ ಅನಧಿಕೃತವಾಗಿ ಕೆಲವೊಂದು ಅಂಗಡಿಗಳು ಪಟಾಕಿಗಳನ್ನು ಮಾರುತ್ತಿರುತ್ತವೆ. ಇಂತಹ ಅಂಗಡಿಗಳಿಂದ ಪಟಾಕಿಗಳನ್ನು ಖರೀದಿಸಬೇಡಿ
- ಅತಿ ಹೆಚ್ಚು ಶಬ್ದ ಹಾಗೂ ವಾಯುಮಾಲಿನ್ಯ ಉಂಟುಮಾಡುವ ಪಟಾಕಿಗಳನ್ನು ಖರೀದಿ ಮಾಡಬೇಡಿ.
- ಹಳೆಯ ಹಾಗೂ ಹಾಳಾದ ಪಟಾಕಿಗಳನ್ನು ಕೊಂಡುಕೊಳ್ಳಬಾರದು ಮತ್ತು ಅವುಗಳನ್ನು ಬಳಸದಂತೆ ಅಂಗಡಿಗಳೂ ಸಹ ಸೂಕ್ತ ತಿಳುವಳಿಕೆ ನೀಡಬೇಕು.
- ಪಟಾಕಿಗಳನ್ನು ಚಿಕ್ಕ ಮಕ್ಕಳು ಹಚ್ಚಲು ಅವಕಾಶ ಮಾಡಿಕೊಡಬೇಡಿ. ಚಿಕ್ಕ ಮಕ್ಕಳೊಂದಿಗೆ ಅವರ ಪೋಷಕರೂ ಸಹ ಜೊತೆಯಲ್ಲಿದ್ದು, ಸುರಕ್ಷಿತವಾಗಿ ಪಟಾಕಿ ಹಚ್ಚುವಂತೆ ಗಮನ ಹರಿಸಬೇಕು.
- ಚಿಕ್ಕ ಮಕ್ಕಳು ಹೆಚ್ಚು ಅಪಾಯಕಾರಿಯಾದ ಪಟಾಕಿಗಳನ್ನು ಹಚ್ಚಿದಂತೆ ನೋಡಿಕೊಳ್ಳುವುದು. ಪಟಾಕಿಗಳನ್ನು ಹಚ್ಚುವಾಗ ದೂರದಲ್ಲಿ ನಿಂತು ನೋಡುವಂತೆ ವ್ಯವಸ್ಥೆ ಮಾಡುವುದು. ಚಿಕ್ಕ ಮಕ್ಕಳು ಪಟಾಕಿ ಹಚ್ಚುವಾಗ ಉದ್ದನೆಯ ಊದುಬತ್ತಿಗಳನ್ನು ಬಳಸುವಂತೆ ಮಕ್ಕಳಿಗೆ ಸೂಚನೆಗಳನ್ನು ನೀಡುವುದು ಮತ್ತು ಮಕ್ಕಳ ಮೇಲೆ ನಿಗಾ ವಹಿಸುವುದು.
- ಜನನಿಬಿಡ ಪದೇಶ/ ಪ್ರದೇಶಗಳಲ್ಲಿ, ಮುಖ್ಯ ರಸ್ತೆಗಳಲ್ಲಿ ಹಾಗೂ ವಾಹನಗಳನ್ನು ಪಾರ್ಕಿಂಗ್ ಮಾಡಿರುವ ಸ್ಥಳಗಳಲ್ಲಿ ಪಟಾಕಿಗಳನ್ನು ಸಿಡಿಸಬಾರದು.
- ಪಟಾಕಿಗಳನ್ನು ತೆರೆದ ಮೈದಾನಗಳಲ್ಲಿ, ಜನಜಂಗುಳಿ ಕಡಿಮೆ ಇರುವ ಪ್ರದೇಶಗಳಲ್ಲಿ ಸುರಕ್ಷಿತ ಕ್ರಮಗಳನ್ನು ಅನುಸರಿಸಿಕೊಂಡು ಪಟಾಕಿಗಳನ್ನು ಹಚ್ಚುವುದು ಒಳ್ಳೆಯ ಬೆಳವಣಿಗೆಯಾಗಿರುತ್ತದೆ.
- ಸೂಕ್ಷ್ಮ ಪ್ರದೇಶಗಳಾದ ಆಸ್ಪತ್ರೆ, ಪೆಟ್ರೋಲ್ ಬಂಕ್, ಅನಿಲ ಕೇಂದ್ರಗಳು, ಧಾರ್ಮಿಕ ಸ್ಥಳಗಳು, ವೃದ್ಧಾಶ್ರಮ, ಶಿಶುಪಾಲನಾ ಕೇಂದ್ರಗಳ ಸುತ್ತ-ಮುತ್ತ ಪಟಾಕಿಗಳನ್ನು ಸಿಡಿಸದಂತೆ ನೋಡಿಕೊಳ್ಳುವುದು.
- ಪಟಾಕಿಗಳನ್ನು ಸುಡುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು.
- ಪಟಾಕಿಗಳನ್ನು ಸಿಡಿಸುವಾಗ ಮೂಕ ಪ್ರಾಣಿಗಳಿಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸುವುದು.
- ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ನಿಗದಿತ ಸಮಯದಲ್ಲಿ, ಅಂದರೆ ರಾತ್ರಿ 8 ರಿಂದ 10 ಗಂಟೆಯ ವರೆಗೆ ಮಾತ್ರ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಪಟಾಕಿಗಳನ್ನು ಸಿಡಿಸುವುದು.
- ಪಟಾಕಿ ಸಿಡಿಸುವ ಸಂದರ್ಭದಲ್ಲಿ ಕೈಗಳಿಗೆ ಗೌಸ್ ಧರಿಸುವುದು, ಕಣ್ಣುಗಳಿಗೆ ಸುರಕ್ಷತಾ ಕನ್ನಡಕಗಳನ್ನು ಧರಿಸುವುದು ಹಾಗೂ ಅಗ್ನಿ ನಂದಿಸುವ ನೀರು, ಮರಳು, ಬೆಂಕಿನಂದಿಸುವ ಸಿಲಿಂಡರ್‌ಗಳನ್ನು ಹತ್ತಿರದಲ್ಲಿ ಇಟ್ಟುಕೊಳ್ಳುವುದು.
- ಪಟಾಕಿಗಳನ್ನು ಸಿಡಿಸುವಾಗ ಹೆಚ್ಚು ಜಾಗರೂಕರಾಗಿರಬೇಕು. ಪಟಾಕಿಗಳನ್ನು ನಂದಿಸುವ ಕೆಲಸವನ್ನು ಹೆಚ್ಚು ಎಚ್ಚರಿಕೆಯಿಂದ ಮಾಡಬೇಕು. ಬಳಸಿದ ಪಟಾಕಿಗಳನ್ನು ಬಕೇಟ್‌ನಲ್ಲಿಟ್ಟು ಅದಕ್ಕೆ ಮರಳು ಅಥವಾ ನೀರನ್ನು ಹಾಕಿ ನಂದಿಸಬೇಕು.
- ಮೊದಲ ಪ್ರಯತ್ನದಲ್ಲಿ ಸಿಡಿಯದ ಪಟಾಕಿಗಳನ್ನು ಹತ್ತಿರಕ್ಕೆ ಹೋಗಿ ಮತ್ತೊಮ್ಮೆ ಪರೀಕ್ಷಿಸಬೇಡಿ.
- ಪಟಾಕಿ ಹಚ್ಚುವ ವೇಳೆಯಲ್ಲಿ ಬಟ್ಟೆಗಳ ಮೇಲೆ ಹೆಚ್ಚು ಜಾಗರೂಕತೆಯಿಂದಿರಬೇಕು. ಈ ಸಮಯದಲ್ಲಿ ಹತ್ತಿಯ ಬಟ್ಟೆಯನ್ನು ಧರಿಸುವುದು ಉತ್ತಮ. ಆದಷ್ಟು ಸಿಂಥಟೆಕ್, ನೈಲಾನ್, ಪಾಲಿಸ್ಟರ್ ಬಟ್ಟೆಗಳನ್ನು ಧರಿಸಬೇಡಿ.
- ಕೈಯಲ್ಲಿ ಪಟಾಕಿಗಳನ್ನು ಹಿಡಿದು ಹಚ್ಚುವುದು ಅಪಾಯಕಾರಿ. ದೇಹದ ಸೂಕ್ಷ್ಮ ಅಂಗಾಂಗಗಳಾದ ಕಿವಿ, ಕಣ್ಣು, ಬಾಯಿ, ಅಂಗಗಳ ಮೇಲೆ ಹೆಚ್ಚು ಗಮನವಿರಲಿ. ಪಟಾಕಿ ಸಿಡಿಸುವ ಸಂದರ್ಭದಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ಹತ್ತಿರದಲ್ಲಿ ಇಟ್ಟುಕೊಳ್ಳುವುದು.
- ಪಟಾಕಿ ಸಿಡಿಸುವ ಸಂದರ್ಭದಲ್ಲಿ ಯಾವುದಾದರೂ ಅವಘಡಗಳು ಸಂಭವಿಸಿದಲ್ಲಿ ತಕ್ಷಣವೇ 112 ಹಾಗೂ 108 ಕ್ಕೆ ಸಂಪರ್ಕಿಸುವುದು ಹಾಗೂ ವೈದ್ಯರ ಸಲಹೆಯನ್ನು ಪಡೆದುಕೊಳ್ಳುವುದು.
- ಸಿಡಿಯದ, ರುಸ್ ಆಗಿರುವ ಪಟಾಕಿಗಳನ್ನು ಗುಡ್ಡೆ ಹಾಕಿ ಬೆಂಕಿ ಹಚ್ಚುವುದು ಹೆಚ್ಚು ಅಪಾಯಕಾರಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ