ಬೆಂಗಳೂರಿನಲ್ಲಿ 18 ವರ್ಷಕ್ಕಿಂತ ಕೆಳ ವಯಸ್ಸಿನವರಲ್ಲಿಯೇ ಡೆಂಘೀ ಜ್ವರ ಪತ್ತೆ! ಮುಂಜಾಗ್ರತಾ ಕ್ರಮಗಳು ಇಲ್ಲಿವೆ
ರೋಗ ನಿರೋಧಕ ಶಕ್ತಿ ಕಡಿಮೆವುಳ್ಳ ಮಕ್ಕಳಲ್ಲಿ ಡೆಂಘೀ ಜ್ವರ ಕಾಣಿಸುತ್ತಿದೆ. ಡೆಂಘೀ ಜೊತೆ ನ್ಯೂಮೊನೀಯಾ, ಅಸ್ತಮಾ, ಬ್ರಾಂಕೈಟಿಸ್ ಸಮಸ್ಯೆ ಎದುರಾಗಿದ್ದು, ಮಕ್ಕಳ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ.
ಬೆಂಗಳೂರು: ಕೊರೊನಾ (Coronavirus) ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ನಗರದಲ್ಲಿ ಡೆಂಘೀ (Dengue) ಜ್ವರ ಪತ್ತೆಯಾಗಿದೆ. 18 ವರ್ಷಕ್ಕಿಂತ ಕೆಳ ವಯಸ್ಸಿನವರಲ್ಲಿಯೇ ಡೆಂಘೀ ಜ್ವರ ಪತ್ತೆಯಾಗಿದ್ದು, ಒಪಿಡಿ ವಾರ್ಡ್ಗಳಲ್ಲಿ ಚಿಕಿತ್ಸೆಗೆ ಬರುವ ಮಕ್ಕಳ ಸಂಖ್ಯೆ ಏರಿಕೆಯಾಗುತ್ತಿದೆ. ಒಂದೇ ವಾರದಲ್ಲಿ 15-20ರಷ್ಟು ಮಕ್ಕಳಲ್ಲಿ ಡೆಂಘೀ ಜ್ವರ ಕಾಣಿಸಿಕೊಂಡಿದೆ. ಮಲ್ಲೇಶ್ವರಂ ಕೆಸಿ ಜನರಲ್ ಆಸ್ಪತ್ರೆಗೆ ಪ್ರತಿದಿನ 100ಕ್ಕೂ ಹೆಚ್ಚು ಮಕ್ಕಳು ದಾಖಲಾಗುತ್ತಿದ್ದಾರೆ. ರೋಗ ನಿರೋಧಕ ಶಕ್ತಿ ಕಡಿಮೆವುಳ್ಳ ಮಕ್ಕಳಲ್ಲಿ ಡೆಂಘೀ ಜ್ವರ ಕಾಣಿಸುತ್ತಿದೆ. ಡೆಂಘೀ ಜೊತೆ ನ್ಯೂಮೊನೀಯಾ, ಅಸ್ತಮಾ, ಬ್ರಾಂಕೈಟಿಸ್ ಸಮಸ್ಯೆ ಎದುರಾಗಿದ್ದು, ಮಕ್ಕಳ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ.
ಡೆಂಘೀ ಜ್ವರ ಲಕ್ಷಣ: ಸೊಳ್ಳೆಗಳು ಉತ್ಪತ್ತಿಯಾದಂತೆ ನೋಡಿಕೊಳ್ಳುವುದು, ಸೊಳ್ಳೆಗಳ ಕಡಿತವನ್ನು ತಡೆಗಟ್ಟಲು ನಿಮ್ಮ ದೇಹವನ್ನು ಸಂಪೂರ್ಣವಾಗಿ ಮುಚ್ಚುವ ಬಟ್ಟೆಗಳನ್ನು ಧರಿಸುವುದು ಇತ್ಯಾದಿ ಕ್ರಮಗಳನ್ನು ಕೈಗೊಳ್ಳುವ ಮೂಲಕ ರೋಗದಿಂದ ತಮ್ಮನ್ನು ತಾವು ರಕ್ಷಿಸಬೇಕು. ಜ್ವರ, ತಲೆನೋವು, ಕಣ್ಣು ನೋವು, ಸ್ನಾಯು, ಕೀಲು ಅಥವಾ ಮೂಳೆ ನೋವು, ವಾಕರಿಕೆ ಅಥವಾ ವಾಂತಿ ಮುಂತಾದ ಡೆಂಗ್ಯೂ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರ ಸಲಹೆಯನ್ನು ಪಡೆಯಿರಿ.
ಡೆಂಘೀ ಸೋಂಕನ್ನು ತಪ್ಪಿಸಲು ಕೆಲ ಸಲಹೆಗಳು:
- ಡೆಂಗ್ಯೂ ತಡೆಗಟ್ಟಲು ಪೂರ್ಣ ತೋಳಿನ ಬಟ್ಟೆಗಳನ್ನು ಧರಿಸಿ. ಹೀಗೆ ಮಾಡುವುದರಿಂದ ಸೊಳ್ಳೆ ಕಡಿತವನ್ನು ತಡೆಗಟ್ಟಬಹುದು.
- ಮನೆಯಿಂದ ಹೊರಬರುವ ಮೊದಲು ಸೊಳ್ಳೆ ನಿವಾರಕಗಳನ್ನು ಬಳಸಿ.
- ಸಂಜೆಯ ಸಮಯದಲ್ಲಿ ಸೊಳ್ಳೆಗಳು ಸಕ್ರಿಯವಾಗಿರುತ್ತದೆ. ಹೀಗಾಗಿ ಸೂರ್ಯಾಸ್ತದ ಮೊದಲು ಮನೆಯ ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿ ಸೊಳ್ಳೆಗಳು ಮನೆಯ ಒಳಗೆ ಬರದಂತೆ ನೋಡಿಕೊಳ್ಳಿ.
- ನಿಂತ ನೀರಿನಲ್ಲಿ, ಕೊಳಚೆ ಪ್ರದೇಶಗಳಲ್ಲಿ ಸೊಳ್ಳೆಗಳು ಬಹಳ ಬೇಗನೇ ಹುಟ್ಟಿಕೊಳ್ಳುತ್ತವೆ. ಹೀಗಾಗಿ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಿ, ಮನೆಯ ಸಮೀಪದಲ್ಲಿ ಟೈರ್, ಮಡಕೆ, ಹೂದಾನಿ, ಡ್ರಮ್‌ಗಳಲ್ಲಿ, ಅಂಗಳದಲ್ಲಿ ಅಥವಾ ಹೊಂಡಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ. ಮನೆಯ ಸಮೀಪ ತ್ಯಾಜ್ಯ ಸಂಗ್ರಹಿಸಬೇಡಿ. ಕಾಲಕಾಲಕ್ಕೆ ಫಾಗಿಂಗ್ ಮಾಡಲು ಪ್ರಯತ್ನಿಸಿ.
- ಸೊಳ್ಳೆಗಳು ಸಾಮಾನ್ಯವಾಗಿ ಡಾರ್ಕ್ ಸ್ಥಳಗಳಲ್ಲಿ ಕಂಡುಬರುತ್ತವೆ. ನಿಮ್ಮ ಮನೆಯಲ್ಲಿ ಸರಿಯಾದ ಬೆಳಕನ್ನು ಖಚಿತಪಡಿಸಿಕೊಳ್ಳಿ.
ಇದನ್ನೂ ಓದಿ: Rahul Gandhi: ಮೋದಿ ಸರ್ನೇಮ್ ಕುರಿತು ಟೀಕೆ; ಮಾನನಷ್ಟ ಮೊಕದ್ದಮೆ ರದ್ದುಗೊಳಿಸಲು ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿ ವಜಾ
Published On - 9:04 am, Wed, 6 July 22