ಸಿಬಿಐ ಅಧಿಕಾರಿ ಸೋಗಿನಲ್ಲಿ ಉದ್ಯಮಿಗೆ ಗಾಳ: 30 ದಿನಗಳ ಕಾಲ ಡಿಜಿಟಲ್ ಅರೆಸ್ಟ್ ಮಾಡಿ 15 ಕೋಟಿ ಲೂಟಿ!

ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಡಿಜಿಟಲ್ ಅರೆಸ್ಟ್ ಬೆದರಿಕೆ ಹಾಕಿ, ಬೆಳಗಾವಿ ಉದ್ಯಮಿಯೊಬ್ಬರಿಂದ 15.45 ಕೋಟಿ ರೂ. ದೋಚಿದ್ದ ಇಬ್ಬರು ಆರೋಪಿಗಳನ್ನು ಸೈಬರ್ ಕಮಾಂಡ್ ಪೊಲೀಸರು ಬಂಧಿಸಿದ್ದಾರೆ. ಹೈದರಾಬಾದ್‌ನಲ್ಲಿ ಅಡಗಿದ್ದ ವಂಚಕರನ್ನು ಪತ್ತೆಹಚ್ಚಿ, 2 ಕೋಟಿ ರೂ. ಹಣವನ್ನು ಫ್ರೀಜ್ ಮಾಡಲಾಗಿದೆ. ಈ ಪ್ರಕರಣವು ರಾಜ್ಯದಲ್ಲಿ ಸೈಬರ್ ವಂಚನೆಗಳ ಹೆಚ್ಚಳವನ್ನು ಎತ್ತಿ ತೋರಿಸುತ್ತದೆ, ಸಾರ್ವಜನಿಕರು ಎಚ್ಚರದಿಂದಿರಲು ಸೂಚಿಸಲಾಗಿದೆ.

ಸಿಬಿಐ ಅಧಿಕಾರಿ ಸೋಗಿನಲ್ಲಿ ಉದ್ಯಮಿಗೆ ಗಾಳ: 30 ದಿನಗಳ ಕಾಲ ಡಿಜಿಟಲ್ ಅರೆಸ್ಟ್ ಮಾಡಿ 15 ಕೋಟಿ ಲೂಟಿ!
ಡಿಜಿಟಲ್ ಅರೆಸ್ಟ್
Edited By:

Updated on: Apr 11, 2026 | 7:49 PM

ಬೆಂಗಳೂರು,ಏ. 11 : ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ವಂಚನೆ ಜಾಲಗಳು ಹೆಚ್ಚಾಗಿದೆ. ಸಾಮಾನ್ಯರಿಂದ ಹಿಡಿದು, ದೊಡ್ಡ ವ್ಯಕ್ತಿಗಳನ್ನು ಈ ಜಾಲದಲ್ಲಿ ಸಿಲುಕಿಸಲಾಗುತ್ತಿದೆ. ಇದೀಗ ಸಿಬಿಐ (CBI) ಅಧಿಕಾರಿಗಳೆಂದು ನಂಬಿಸಿ ಉದ್ಯಮಿಯೊಬ್ಬರನ್ನು ಡಿಜಿಟಲ್ ಅರೆಸ್ಟ್ ಭೀತಿಯಲ್ಲಿಟ್ಟು ಬರೋಬ್ಬರಿ 15 ಕೋಟಿ 45 ಲಕ್ಷ ರೂಪಾಯಿ ದೋಚಿದ್ದ ಇಬ್ಬರು ಆರೋಪಿಗಳನ್ನು ಸೈಬರ್ ಕಮಾಂಡ್ ಪೊಲೀಸರು ಬಂಧಿಸಿದ್ದಾರೆ. ಹೈದರಾಬಾದ್ ಮೂಲದ ವೆಂಕಟೇಶ್ ಶರತ್ ನಾಯಕ್ ಮತ್ತು ಡೆವಗತ್ ಶ್ರೀಪಾದ್ ನಾಯಕ್ ಬಂಧಿತ ಆರೋಪಿಗಳು.

ಬೆಳಗಾವಿ ಮೂಲದ ಉದ್ಯಮಿ ಅಜಿತ್ ಗೋಪಾಲಕೃಷ್ಣ ಅವರಿಗೆ ಕಳೆದ ಫೆಬ್ರವರಿ 7 ರಂದು ಅಪರಿಚಿತ ಕರೆ ಬಂದಿತ್ತು. ಕರೆ ಮಾಡಿದ ವ್ಯಕ್ತಿ ತನ್ನನ್ನು ಸಿಬಿಐ ನಿರ್ದೇಶಕ ಕೆ. ಸುಬ್ರಹ್ಮಣ್ಯಂ ಎಂದು ಪರಿಚಯಿಸಿಕೊಂಡಿದ್ದ. “ನಿಮ್ಮ ಹೆಸರಿನಲ್ಲಿರುವ ಸಿಮ್ ಕಾರ್ಡ್‌ಗಳು ಮನಿ ಲಾಂಡರಿಂಗ್ ಪ್ರಕರಣದಲ್ಲಿ ಸಿಲುಕಿಕೊಂಡಿರುವ ನರೇಶ್ ಗೋಯಲ್ ಅವರಿಗೆ ಸಂಬಂಧಿಸಿವೆ. ನಿಮ್ಮ ಖಾತೆಯಿಂದ 25 ಲಕ್ಷ ರೂ. ವರ್ಗಾವಣೆ ಆಗಿದ್ದು, ನಿಮಗೆ 5 ಲಕ್ಷ ರೂ. ಕಮಿಷನ್ ಸಂದಾಯವಾಗಿದೆ” ಎಂದು ಹೆದರಿಸಿದ್ದ.

ಬಂಧನದ ಭೀತಿ ಹುಟ್ಟಿಸಿದ ವಂಚಕರು, ಉದ್ಯಮಿಯನ್ನು ವಿಡಿಯೋ ಕಾಲ್ ಮೂಲಕ ಸುಮಾರು ಒಂದು ತಿಂಗಳ ಕಾಲ (30 ದಿನಗಳು) ನಿರಂತರವಾಗಿ ಕಣ್ಗಾವಲಿನಲ್ಲಿಟ್ಟಿದ್ದರು (Digital Arrest). ತನಿಖೆಗೆ ಸಹಕರಿಸದಿದ್ದರೆ ಜೈಲಿಗೆ ಹಾಕುವುದಾಗಿ ಬೆದರಿಸಿ, ಫೆಬ್ರವರಿ 9 ರಂದು ಅಜಿತ್ ಗೋಪಾಲಕೃಷ್ಣ ಅವರಿಂದ ವಿವಿಧ ಬ್ಯಾಂಕ್ ಖಾತೆಗಳಿಗೆ 15,45,00,000 ರೂಪಾಯಿಗಳನ್ನು RTGS ಮೂಲಕ ವರ್ಗಾಯಿಸಿಕೊಂಡಿದ್ದರು.

ಇದನ್ನೂ ಓದಿ: ಈ ತಕ್ಷಣವೇ ರಾಜೀನಾಮೆ ನೀಡಿ: ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್‌ಗೆ ಸೂಚನೆ! ಮುಂದಿನ ತಲೆದಂಡ ಸಚಿವ ಜಮೀರ್?

ವಂಚನೆಗೊಳಗಾದ ಉದ್ಯಮಿ ಬೆಳಗಾವಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ಸೈಬರ್ ಕಮಾಂಡ್ ಡಿಜಿಪಿ ಪ್ರಣವ್ ಮೋಹಂತಿ ಅವರ ಮಾರ್ಗದರ್ಶನದಲ್ಲಿ ತನಿಖೆ ನಡೆಸಿದ ಸಿಸಿಬಿಯ ಸೈಬರ್ ವಿಭಾಗದ (CCU) ತಂಡ, ಆರೋಪಿಗಳು ಬಳಸಿದ್ದ 10ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಪತ್ತೆಹಚ್ಚಿದೆ. ಹೈದರಾಬಾದ್‌ನ ಗಚ್ಚಿಬೌಲಿ ಹಾಸ್ಟೆಲ್‌ನಲ್ಲಿ ಅಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, 2 ಕೋಟಿ ರೂಪಾಯಿ ಹಣವನ್ನು ಫ್ರೀಜ್ ಮಾಡಲಾಗಿದೆ. ಈ ಪ್ರಕರಣದ ಮುಖ್ಯ ಆರೋಪಿ ಸದ್ಯ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಮುಂದುವರಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us