
ಬೆಂಗಳೂರು, ಮಾರ್ಚ್ 16: ಬೆಂಗಳೂರು ನಗರದ ಪ್ರಸಿದ್ಧ ರಿಯಲ್ ಎಸ್ಟೇಟ್ ಸಂಸ್ಥೆಯಾದ ಮಂತ್ರಿ ಡೆವೆಲಪರ್ಸ್ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ (ED Raid) ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನೆಲೆ ED ಅಧಿಕಾರಿಗಳು ಸಂಸ್ಥೆಯ ಕಚೇರಿ ಹಾಗೂ ಸಂಸ್ಥಾಪಕ ಸುನಿಲ್ ಮಂತ್ರಿ ನಿವಾಸಗಳಲ್ಲಿ ಶೋಧ ನಡೆಸಿದ್ದಾರೆ.
1999ರಲ್ಲಿ ಸ್ಥಾಪನೆಯಾದ ಮಂತ್ರಿ ಡೆವಲಪರ್ಸ್ ಸಂಸ್ಥೆ ಬೆಂಗಳೂರು ಕೇಂದ್ರ ಕಚೇರಿಯೊಂದಿಗೆ ಚೆನ್ನೈ, ಹೈದರಾಬಾದ್ ಮತ್ತು ಪುಣೆ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ವಸತಿ, ವಾಣಿಜ್ಯ, ರಿಟೇಲ್ ಹಾಗೂ ಇತರೆ ಕ್ಷೇತ್ರಗಳಲ್ಲಿ ಹಲವು ಯೋಜನೆಗಳನ್ನು ಸಂಸ್ಥೆ ಕೈಗೊಂಡಿದೆ. ಇದೀಗ ಬೆಂಗಳೂರಿನ ವಿಠ್ಠಲ ಮಲ್ಯ ರಸ್ತೆಯಲ್ಲಿರುವ ಕಚೇರಿ ಹಾಗೂ ಸಂಸ್ಥಾಪಕರ ಮನೆ ಮೇಲೂ ದಾಳಿ ನಡೆಸಿದೆ.
ಬೆಳಗ್ಗೆ ದೆಹಲಿ ಕಚೇರಿಯಿಂದ ಬಂದ ಸುಮಾರು 10ಕ್ಕೂ ಹೆಚ್ಚು ಅಧಿಕಾರಿಗಳು ಆರು ವಾಹನಗಳಲ್ಲಿ ಆಗಮಿಸಿ ಕಚೇರಿ ಹಾಗೂ ಸಂಬಂಧಿತ ಸ್ಥಳಗಳಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಇಡಿ ತಂಡ, ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದೆ.
ಇದನ್ನೂ ಓದಿ ಮಂತ್ರಿ ಡೆವಲಪರ್ಸ್ ನಿರ್ದೇಶಕ ಸುಶೀಲ್ ಮಂತ್ರಿ ಅರೆಸ್ಟ್
ಇದೇ ರೀತಿ ಹಣಕಾಸಿನ ಪ್ರಕರಣದಲ್ಲಿ ಇಡಿಯು ಈಗಾಗಲೇ 2022ರಲ್ಲಿ ದಾಳಿ ನಡೆಸಿದ್ದು, 2023ರಲ್ಲಿ ಸುಮಾರು 300 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿತ್ತು. ಅಲ್ಲದೇ ಗ್ರಾಹಕರಿಂದ ಅಪಾರ್ಟ್ಮೆಂಟ್‌ಗಾಗಿ ಹಣ ಪಡೆದು ಅದನ್ನು ವಿದೇಶಗಳಲ್ಲಿ ಹೂಡಿಕೆ ಮಾಡಿರುವ ಆರೋಪವೂ ಕೇಳಿಬಂದಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೆ ದಾಳಿ ನಡೆಸಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.