
ಬೆಂಗಳೂರು, (ಏಪ್ರಿಲ್ 17): 50 ಕೋಟಿ ರೂಪಾಯಿ ಕೊಟ್ಟು ವಿಶ್ವದಲ್ಲೇ ದುಬಾರಿಯಾಗಿರುವ ಶ್ವಾನ(Dog) ನಾಯಿಯೊಂದನ್ನು ಖರೀದಿ ಮಾಡಿದ್ದೇನೆ ಎಂದು ಹೇಳುತ್ತಿದ್ದ ಬೆಂಗಳೂರಿನ (Bengaluru) ಶ್ವಾನಪ್ರೇಮಿ ಸತೀಶ್ (Bengaluru Dog Breeder Satish) ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಂದು (ಏಪ್ರಿಲ್ 17) ಜೆಪಿ ನಗರ ಮೂರನೇ ಹಂತದಲ್ಲಿರುವ ಸತೀಶ್ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ನಾಯಿಯ ಬೆಲೆ 50 ಕೋಟಿ ಎನ್ನುವುದು ಸುಳ್ಳು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. ಸದ್ಯ ಇಡಿ ಅಧಿಕಾರಿಗಳು ಸತೀಶ್ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಬೆಂಗಳೂರು ಮೂಲದ ನಾಯಿ ತಳಿಗಾರ ಎಸ್. ಸತೀಶ್ 49 ಕೋಟಿ (4.4 ಮಿಲಿಯನ್ ಪೌಂಡ್‌ಗಳು) ರೂ.ಗೆ ಅತ್ಯಂತ ಅಪರೂಪದ ತೋಳ ನಾಯಿಯನ್ನು (ವುಲ್ಫ್ ಡಾಗ್) ಖರೀದಿಸಿದ್ದೇನೆ ಎಂದು ಹೇಳಿಕೊಂಡಿದ್ದರು. ಕಾಡು ತೋಳ ಮತ್ತು ಕಾಕೇಶಿಯನ್ ಶೆಫರ್ಡ್ ತಳಿಗಳ ಮಿಶ್ರಣವಾಗಿದ್ದ ಕಡಬಾಮ್ ಒಕಾಮಿ ಎಂದು ಕರೆಯಲ್ಪಡುವ ಈ ಅಪರೂಪದ ನಾಯಿಯನ್ನು ಖರೀದಿಸಲು ಸುಮಾರು ರೂ.50 ಕೋಟಿ ಖರ್ಚು ಮಾಡಿದ್ದಾಗಿ ಹೇಳಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೇ 50 ಕೋಟಿ ರೂ,ಗೆ ಒಂದು ನಾಯಿ ಖರೀದಿ ಮಾಡಿದ್ದೇನೆ ಎಂದು ಸತೀಶ್ ಹೇಳಿಕೊಂಡಿರುವುದು ಸುಳ್ಳು ಅಂತೆಲ್ಲಾ ಮಾತುಗಳು ಕೇಳಿಬಂದಿದ್ದವು. ಇದೇ ವಿಚಾರವಾಗಿ ಸತೀಶ್ ವಿರುದ್ಧ ಇಡಿ ಪ್ರಕರಣವನ್ನೂ ದಾಖಲಿಸಿಕೊಂಡಿತ್ತು. ಆದ್ರೆ, ಇದೀಗ ಇಡಿ ದಾಳಿ ಮಾಡಿ ಸತೀಶನ ಬಂಡವಾಳ ಬಟಾಬಯಲು ಮಾಡಿದೆ.
ಸತೀಶ್ ಬೆಂಗಳೂರಿನ ಶ್ವಾನಪ್ರಿಯರಲ್ಲಿ ಒಬ್ಬರು. ಇವರು ಹಲವು ಶ್ವಾನ ತಳಿ ಸಂಘಗಳನ್ನು ಮುನ್ನಡೆಸುತ್ತಿದ್ದಾರೆ. ಹಲವು ವರ್ಷಗಳ ಹಿಂದೆಯೇ ನಾಯಿ ಸಾಕುವುದನ್ನು ಬಿಟ್ಟಿದ್ದರೂ ಆಗಾಗ್ಗೆ ಅಪರೂಪದ ನಾಯಿಗಳೊಂದಿಗೆ ಪ್ರದರ್ಶನದಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಅಲ್ಲದೇ ಸತೀಶ್ ಯಾವುದೇ ಕಾರ್ಯಕ್ರಮಕ್ಕೆ ತಮ್ಮ ಅಪರೂಪದ ಶ್ವಾನದೊಂದಿಗೆ ಹೋದ್ರೆ ಅದಕ್ಕೆ ನಿರ್ದಿಷ್ಟ ಮೊತ್ತವನ್ನು ಪಡೆಯುವುದಾಗಿ ಎಂದು ಈ ಹಿಂದೆ ಹೇಳಿಕೊಂಡಿದ್ದರು.
ವಿಚಾರ ಏನೆಂದರೆ, ಈತ ಹೇಳಿದ್ದು ಬರೀ ಸುಳ್ಳು.’ಬೇರೆಯವರಿಂದ ನಾಯಿಗಳನ್ನ ಬಾಡಿಗೆ ಪಡೆದು ಸತೀಶ್ ವಿಡಿಯೋ ಮಾಡಿಕೊಳ್ಳುತ್ತಿದ್ದ. ಕೋಟ್ಯಾಂತರ ರೂಪಾಯಿ ಗೆ ವಿದೇಶಿ ನಾಯಿ ಖರೀದಿ ಎಂದು ಹೇಳಿಕೊಳ್ಳುತ್ತಿದ್ದ. ಆತನ ವ್ಯವಹಾರ, ಆದಾಯ ತೆರಿಗೆ ಮತ್ತು ಜಿಎಸ್‌ಟಿ ಬಗ್ಗೆ ಮಾಹಿತಿ ಪಡೆಯಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮುಂದಾಗಿದ್ದಾಗ ಇಡೀ ವ್ಯವಹಾರ ಬಯಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:17 pm, Thu, 17 April 25