ತೋಳದ ರೂಪದ ನಾಯಿ! 49 ಕೋಟಿ ಕೊಟ್ಟು ಜಗತ್ತಿನ ದುಬಾರಿ ನಾಯಿ ಖರೀದಿಸಿದ ಬೆಂಗಳೂರಿನ ಶ್ವಾನ ಪ್ರೇಮಿ
Cadabom Okami: ಬೆಂಗಳೂರಿನ ಶ್ವಾನ ಪ್ರೇಮಿಯಾದ ಎಸ್. ಸತೀಶ್ ಎಂಬ ವ್ಯಕ್ತಿ ಅಪರೂಪದ ವುಲ್ಫ್-ಕಕೇಶಿಯನ್ ಶೆಫರ್ಡ್ ಹೈಬ್ರಿಡ್ ನಾಯಿಗಾಗಿ ಸುಮಾರು 50 ಕೋಟಿ ರೂ. ಖರ್ಚು ಮಾಡಿದ್ದಾರೆ. ಬೆಂಗಳೂರು ಮೂಲದ ನಾಯಿ ಬ್ರೀಡರ್ ಸತೀಶ್ ವಿಶ್ವದ ಅತ್ಯಂತ ದುಬಾರಿ ನಾಯಿ 'ವುಲ್ಫ್‌ಡಾಗ್' ಅನ್ನು 49.23 ಕೋಟಿ ರೂ (4.4 ಮಿಲಿಯನ್ ಪೌಂಡ್) ಖರ್ಚು ಮಾಡಿ ಬ್ರೀಡ್ ಮಾಡಿಸಿದ್ದಾರೆ. ಕ್ಯಾಡಬಾಮ್ ಒಕಾಮಿ ಎಂಬ ಜಾತಿಯ ಈ ನಾಯಿ ಅರ್ಧ ತೋಳ ಮತ್ತು ಅರ್ಧ ನಾಯಿಯ ರೂಪದಲ್ಲಿರುತ್ತದೆ. ಇದು ಜಗತ್ತಿನ ಅತ್ಯಂತ ದುಬಾರಿ ನಾಯಿಯಾಗಿದೆ.

ಬೆಂಗಳೂರು, ಮಾರ್ಚ್ 18: ಬೆಂಗಳೂರು ಮೂಲದ ನಾಯಿ ತಳಿಗಾರ ಎಸ್. ಸತೀಶ್ 49 ಕೋಟಿ (4.4 ಮಿಲಿಯನ್ ಪೌಂಡ್‌ಗಳು) ರೂ.ಗೆ ಅತ್ಯಂತ ಅಪರೂಪದ ತೋಳ ನಾಯಿಯನ್ನು (ವುಲ್ಫ್ ಡಾಗ್) ಖರೀದಿಸುವ ಮೂಲಕ ಸುದ್ದಿಯಾಗಿದ್ದಾರೆ. ಕ್ಯಾಡಬಾಮ್ ಒಕಾಮಿ ಎಂದು ಕರೆಯಲ್ಪಡುವ ಈ ವಿಶಿಷ್ಟ ನಾಯಿ, ತೋಳ ಮತ್ತು ಕಕೇಶಿಯನ್ ಶೆಫರ್ಡ್ ನಡುವಿನ ಮಿಶ್ರತಳಿಯಾಗಿದೆ. ಈ ಬ್ರೀಡ್ ನ ಮೊದಲನೆ ನಾಯಿಯಿದು ಎನ್ನಲಾಗಿದೆ. ಈ ಮೂಲಕ ಬೆಂಗಳೂರಿನ ವ್ಯಕ್ತಿ ಎಸ್. ಸತೀಶ್ ಜಗತ್ತಿನ ಅತಿ ದುಬಾರಿ ನಾಯಿಯ ಒಡೆಯರಾಗಿದ್ದಾರೆ.
ಯುನೈಟೆಡ್ ಸ್ಟೇಟ್ಸ್‌ನಲ್ಲಿ ಜನಿಸಿದ ಕ್ಯಾಡಬಾಮ್ ಒಕಾಮಿ ಈಗಾಗಲೇ ಭಾರತದಲ್ಲಿ ಬಹಳ ಫೇಮಸ್ ಆಗಿದೆ. ಕೇವಲ 8 ತಿಂಗಳ ವಯಸ್ಸಿನಲ್ಲಿ, ಈ ನಾಯಿ 75 ಕಿಲೋಗ್ರಾಂಗಳಿಗಿಂತ ಹೆಚ್ಚು ತೂಕವನ್ನು ಹೊಂದುತ್ತದೆ. ಇದಕ್ಕೆ ಹಸಿವು ಜಾಸ್ತಿ. ಪ್ರತಿದಿನ ಸುಮಾರು 3 ಕೆಜಿ ಹಸಿ ಮಾಂಸವನ್ನು ತಿನ್ನುತ್ತದೆ. ಕಾಡು ತೋಳದ ಹೋಲಿಕೆ ಹೆಚ್ಚಾಗಿರುವ ಈ ನಾಯಿ ನೋಡಲು ದೈತ್ಯವಾಗಿರುತ್ತದೆ. ಈ ತಳಿಯ ಖರೀದಿಯು ನಾಯಿ ಪ್ರಿಯರು ಮತ್ತು ಬ್ರೀಡರ್ ಗಳಲ್ಲಿ ಕುತೂಹಲವನ್ನು ಕೆರಳಿಸಿದೆ.
ಇದನ್ನೂ ಓದಿ: ಕಾಳಿಂಗ ಸರ್ಪದೊಂದಿಗೆ ಭೀಕರ ಕಾಳಗ: ಮಾಲೀಕನ ಮಕ್ಕಳ ಜೀವ ಉಳಿಸಿ ಪ್ರಾಣ ಬಿಟ್ಟ ಶ್ವಾನ
ಎಸ್ ಸತೀಶ್ ಬೆಂಗಳೂರಿನ ಪ್ರಸಿದ್ಧ ಶ್ವಾನ ತಳಿಗಾರ. ಅವರು 150ಕ್ಕೂ ಹೆಚ್ಚು ವಿವಿಧ ತಳಿಗಳ ನಾಯಿಗಳನ್ನು ಹೊಂದಿದ್ದಾರೆ. ಇವರೀಗ ಕ್ಯಾಡಬಾಮ್ ಒಕಾಮಿ ಎಂಬ ಅಪರೂಪದ “ವುಲ್ಫ್ ಡಾಗ್”ಗಾಗಿ ಸುಮಾರು 50 ಕೋಟಿ ರೂ.ಗಳನ್ನು ಖರ್ಚು ಮಾಡುವ ಮೂಲಕ ಸುದ್ದಿ ಮಾಡಿದ್ದಾರೆ. ಎಸ್ ಸತೀಶ್ ಅವರು 10 ವರ್ಷಗಳ ಹಿಂದೆ ನಾಯಿಗಳ ಸಾಕಣೆಯನ್ನು ನಿಲ್ಲಿಸಿದರು. ಆದರೆ ಈಗ ತಮ್ಮ ಅಪರೂಪದ ಸಾಕುಪ್ರಾಣಿಗಳನ್ನು ಕಾರ್ಯಕ್ರಮಗಳಲ್ಲಿ ಪ್ರದರ್ಶಿಸುವ ಮೂಲಕ ಉತ್ತಮ ಹಣವನ್ನು ಗಳಿಸುತ್ತಿದ್ದಾರೆ.
View this post on Instagram
ಅವರ ಸಂಗ್ರಹಕ್ಕೆ ಇತ್ತೀಚಿನ ಸೇರ್ಪಡೆಯಾದ ಒಕಾಮಿಯನ್ನು ಯುಎಸ್‌ನಲ್ಲಿ ಬೆಳೆಸಲಾಯಿತು. ಫೆಬ್ರವರಿಯಲ್ಲಿ ಭಾರತದಲ್ಲಿ ಬ್ರೋಕರ್ ಮೂಲಕ ಈ ನಾಯಿಯನ್ನು ಸತೀಶ್ ಅವರಿಗೆ ಮಾರಾಟ ಮಾಡಲಾಯಿತು. ಕೇವಲ 8 ತಿಂಗಳ ವಯಸ್ಸಿನ ನಾಯಿಮರಿಯಾದರೂ, ಈ ನಾಯಿ ಈಗಾಗಲೇ 75 ಕೆಜಿ ತೂಕವಿದ್ದು, 30 ಇಂಚು ಎತ್ತರವಿದೆ. ಸತೀಶ್ ಅವರು ಒಕಾಮಿಯನ್ನು “ತೋಳದಂತೆ ಕಾಣುವ” “ಅತ್ಯಂತ ಅಪರೂಪದ ನಾಯಿ ತಳಿ” ಎಂದು ಬಣ್ಣಿಸಿದ್ದಾರೆ. “ಈ ತಳಿಯನ್ನು ಈ ಹಿಂದೆ ಜಗತ್ತಿನಲ್ಲಿ ಮಾರಾಟ ಮಾಡಲಾಗಿಲ್ಲ” ಎಂದು ಅವರು ದಿ ಸನ್‌ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಕಾನ್ಪುರದ 90 ವರ್ಷದ ಮಹಿಳೆಯನ್ನು ಕಚ್ಚಿ ಕೊಂದ ಸಾಕುನಾಯಿ
ಒಕಾಮಿಯ ಮೂಲ ತಳಿಗಳಲ್ಲಿ ಒಂದಾದ ಕಕೇಶಿಯನ್ ಶೆಫರ್ಡ್ಸ್ ತಮ್ಮ ಶಕ್ತಿ ಮತ್ತು ರಕ್ಷಣಾತ್ಮಕ ಪ್ರವೃತ್ತಿಗೆ ಹೆಸರುವಾಸಿಯಾಗಿದೆ. ಈ ನಾಯಿಗಳು ಜಾರ್ಜಿಯಾ, ಅರ್ಮೇನಿಯಾ, ಅಜೆರ್ಬೈಜಾನ್ ಮತ್ತು ರಷ್ಯಾದ ಕೆಲವು ಭಾಗಗಳಂತಹ ಶೀತ ಪ್ರದೇಶಗಳಲ್ಲಿ ಹೆಚ್ಚು ಕಂಡುಬರುತ್ತವೆ. ತೋಳಗಳಂತಹ ಪರಭಕ್ಷಕಗಳಿಂದ ಜಾನುವಾರುಗಳನ್ನು ರಕ್ಷಿಸಲು ಇವುಗಳನ್ನು ಹೆಚ್ಚಾಗಿ ಕಾವಲು ನಾಯಿಗಳಾಗಿ ಬಳಸಲಾಗುತ್ತದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ