ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಿಂದ ವಿದ್ಯುತ್ ಬಿಲ್ ಬಾಕಿ: ಅನುದಾನ ಕೋರಿ ಆರೋಗ್ಯ ಇಲಾಖೆ ಮುಖ್ಯ ಲೆಕ್ಕಾಧಿಕಾರಿಗೆ ಪತ್ರ
ನಗರದ ಸರ್ಕಾರಿ ಆಸ್ಪತ್ರೆಗಳಿಂದ ವಿದ್ಯುತ್ ಬಿಲ್ ಬಾಕಿ ಹಿನ್ನೆಲೆ ಅನುದಾನ ಕೋರಿ ಆರೋಗ್ಯ ಇಲಾಖೆ ಮುಖ್ಯ ಲೆಕ್ಕಾಧಿಕಾರಿಗೆ ಜಯನಗರದ ಸಾರ್ವಜನಿಕ ಆಸ್ಪತ್ರೆಯಿಂದ ಪತ್ರ ಬರೆಯಲಾಗಿದೆ.
ಬೆಂಗಳೂರು: ನಗರದ ಸರ್ಕಾರಿ ಆಸ್ಪತ್ರೆಗಳಿಂದ ವಿದ್ಯುತ್ ಬಿಲ್ (Electricity bill) ಬಾಕಿ ಹಿನ್ನೆಲೆ ಅನುದಾನ ಕೋರಿ ಆರೋಗ್ಯ ಇಲಾಖೆ ಮುಖ್ಯ ಲೆಕ್ಕಾಧಿಕಾರಿಗೆ ಜಯನಗರದ ಸಾರ್ವಜನಿಕ ಆಸ್ಪತ್ರೆಯಿಂದ ಪತ್ರ ಬರೆಯಲಾಗಿದೆ. ಬಳಿಕ ಟಿವಿ9ಗೆ ಜಯನಗರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ರಾಮಕೃಷ್ಣ ಪ್ರತಿಕ್ರಿಯೆ ನೀಡಿದ್ದು, ಇಲಾಖೆ ಹಣ ಬಿಡುಗಡೆ ಮಾಡಿದ ಕೂಡಲೇ ಬಿಲ್ ಪಾವತಿಸುತ್ತೇವೆ. ದೂರವಾಣಿ ಮೂಲಕವೂ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅನುದಾನದ ಕೊರತೆಯಿಂದ ವಿದ್ಯುತ್ ಬಿಲ್ ಬಾಕಿ ಉಳಿದುಕೊಂಡಿದೆ. ಈ ತಿಂಗಳ ಅಂತ್ಯದೊಳಗೆ ಸಂಪೂರ್ಣ ಬಿಲ್ ಪಾವತಿಸಲಾಗುತ್ತದೆ. 40 ಲಕ್ಷ ಅನುದಾನ ಕೋರಿ ಆರೋಗ್ಯ ಇಲಾಖೆಗೆ ಮನವಿ ಮಾಡಿದ್ದೇವೆ ಎಂದು ಹೇಳಿದರು.
ಬೆಂಗಳೂರಿನ ಖ್ಯಾತ ಸರ್ಕಾರಿ ಆಸ್ಪತ್ರೆಗಳಿಗೆ ಬೆಸ್ಕಾಂ ನೋಟಿಸ್
ಇನ್ನು ನಗರದ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಗಳಿಗೆ ಬಾಕಿ ವಿದ್ಯತ್ ಬಿಲ್ ಪಾವತಿಸುವಂತೆ ಬೆಸ್ಕಾಂ ನೋಟಿಸ್ ನೀಡಿದೆ. ಮಲ್ಲೇಶ್ವರಂನ ಕೆ.ಸಿ.ಜನರಲ್ ಆಸ್ಪತ್ರೆ ಜಯನಗರದ ಸಾರ್ವಜನಿಕ ಆಸ್ಪತ್ರೆ ಸೇರಿ ಹಲವು ಸರ್ಕಾರಿ ಆಸ್ಪತ್ರೆಗಳು ಹಾಗೂ ಪೊಲೀಸ್ ಠಾಣೆಗಳಿಗೆ ಬೆಸ್ಕಾಂ ನೋಟಿಸ್ ಜಾರಿ ಮಾಡಿದೆ. ಕೆಸಿ ಜನರಲ್ ಸರ್ಕಾರಿ ಆಸ್ಪತ್ರೆ ಬರೋಬ್ಬರಿ 48 ಲಕ್ಷ ರೂ ಮೊತ್ತದ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ. ಈ ಹಿನ್ನೆಲೆ ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತ (ಬೆಸ್ಕಾಂ) ಬಾಕಿ ಉಳಿಸಿಕೊಂಡ ಬಿಲ್ ಪಾವತಿಸುವಂತೆ ನೋಟಿಸ್ ಜಾರಿ ಮಾಡಿದೆ.
ಇದನ್ನೂ ಓದಿ: ಕೊನೆಗೂ ಸಂಚಾರ ಮುಕ್ತವಾದ ಸಿಎಂ ಬೊಮ್ಮಾಯಿ ಉದ್ಘಾಟಿಸಿದ್ದ ಕಾರ್ಡ್ ರಸ್ತೆ ಫ್ಲೈ ಓವರ್
ಅಲ್ಲದೇ ಕಾಲಮಿತಿಯಲ್ಲಿ ವಿದ್ಯುತ್ ಬಿಲ್ ಪಾವತಿ ಮಾಡದೆ ಇದ್ದರೆ, ವಿದ್ಯುತ್ ಕಡಿತ ಮಾಡುವುದಾಗಿಯೂ ಎಚ್ಚರಿಕೆ ನೀಡಿದೆ. ಹಾಗೂ ಜಯನಗರದ ಆಸ್ಪತ್ರೆ 24,49,453 ರೂ. ಬಾಕಿ ಉಳಿಸಿಕೊಂಡಿದ್ದು ವಿದ್ಯುತ್ ಬಿಲ್ ಪಾವತಿಸದಿದ್ದರೆ ಸ್ಥಗಿತಗೊಳಿಸುಂತೆ ಬೆಸ್ಕಾಂ ಎಚ್ಚರಿಕೆ ನೀಡಿದೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸರ್ಕಾರಿ ಕೆಸಿ ಜನರಲ್ ಆಸ್ಪತ್ರೆ ಹಾಗೂ ಜಯನಗರದ ಸಾರ್ವಜನಿಕ ಆಸ್ಪತ್ರೆಗೆ ನಿತ್ಯವು ಸಾವಿರಾರು ಸಂಖ್ಯೆಯಲ್ಲಿ ಹೊರ ರೋಗಿಗಳು ಬರುತ್ತಾರೆ. ಜೊತೆಗೆ ಒಳರೋಗಿಗಳ ಸಂಖ್ಯೆಯೂ ಹೆಚ್ಚಿದೆ. ಈ ಸಂರ್ಭದಲ್ಲಿ ಆಸ್ಪತ್ರೆಯ ವಿದ್ಯುತ್ ಕಡಿತ ಮಾಡುವುದು ತೀವ್ರವಾದ ಚರ್ಚೆಗೆ ಗ್ರಾಸವಾಗಿದೆ.
ಲಕ್ಷಗಟ್ಟಲೆ ವಿದ್ಯುತ್ ಬಿಲ್ ಬಾಕಿ
ಕೆ.ಸಿ ಜನರಲ್ ಆಸ್ಪತ್ರೆಯೂ ಮಾಸಿಕ ಆಧಾರದ ಮೇಲೆ ಆಸ್ಪತ್ರೆ ಬಿಲ್‌ಗಳನ್ನು ತೆರವುಗೊಳಿಸಿಲ್ಲ. ಲಕ್ಷಗಟ್ಟಲೆ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ. ಹೀಗಾಗಿ, ನೋಟಿಸ್ ಜಾರಿ ಮಾಡಿದ್ದೇವೆ. ಎರಡು ತಿಂಗಳ ಹಿಂದೆಯೇ ಆಸ್ಪತ್ರೆಗೆ ಮೊದಲ ನೋಟಿಸ್ ನೀಡಲಾಗಿತ್ತು. ಜ.17ರಂದು ಮತ್ತೊಮ್ಮೆ ನೋಟಿಸ್ ನೀಡಲಾಗಿದೆ. ಜ.30ರಂದು ಬೆಸ್ಕಾಂ ಸಿಬ್ಬಂದಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ಬೆಸ್ಕಾಂನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.