ದೆಹಲಿಗಿಂತ ಹೆಚ್ಚು ತೆರಿಗೆ ಪಾವತಿಸಿದರೂ ಬೆಂಗಳೂರು ನಿರ್ಲಕ್ಷ್ಯ: ಮೋಹನ್ ದಾಸ್ ಪೈ ವಿಷಾದ
ದೇಶದಲ್ಲಿ ಅತಿಹೆಚ್ಚು ತೆರಿಗೆ ಪಾವತಿಸುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು 2ನೇ ಸ್ಥಾನದಲ್ಲಿದೆ. ಆದರೂ ದೆಹಲಿಯು ಬೆಂಗಳೂರನ್ನು ನಿರ್ಲಕ್ಷಿಸುತ್ತಿದೆ ಎಂದು ಉದ್ಯಮಿ, ಐಟಿ ದಿಗ್ಗಜ ಟಿ.ವಿ.ಮೋಹನ್ದಾಸ್ ಪೈ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು: ದೇಶದಲ್ಲಿ ಅತಿಹೆಚ್ಚು ತೆರಿಗೆ ಪಾವತಿಸುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು 2ನೇ ಸ್ಥಾನದಲ್ಲಿದೆ. ಆದರೂ ದೆಹಲಿಯು ಬೆಂಗಳೂರನ್ನು ನಿರ್ಲಕ್ಷಿಸುತ್ತಿದೆ ಎಂದು ಉದ್ಯಮಿ, ಐಟಿ ದಿಗ್ಗಜ ಟಿ.ವಿ.ಮೋಹನ್ದಾಸ್ ಪೈ ಟ್ವೀಟ್ ಮಾಡಿದ್ದಾರೆ. 2021-22ರ ಆರ್ಥಿಕ ವರ್ಷದಲ್ಲಿ ಬೆಂಗಳೂರು ₹ 1.69 ಲಕ್ಷ ಕೋಟಿ ಆದಾಯ ತೆರಿಗೆ ಪಾವತಿಸಿದೆ. ದೆಹಲಿ ₹ 1.66 ಲಕ್ಷ ಕೋಟಿ ತೆರಿಗೆ ಪಾವತಿಸಿದೆ. ಹೆಚ್ಚು ತೆರಿಗೆ ಪಾವತಿಸಿದರೂ ದೆಹಲಿಯಿಂದ ಬೆಂಗಳೂರು ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಅವರು ವಿಷಾದಿಸಿದ್ದಾರೆ. ನಮ್ಮ ರಸ್ತೆಗಳು ಕೆಟ್ಟ ಸ್ಥಿತಿಯಲ್ಲಿವೆ. ಟ್ರಾಫಿಕ್ ಜಾಮ್ ಆಗುತ್ತಲೇ ಇರುತ್ತದೆ. ಜೀವನ ಗುಣಮಟ್ಟವು ಕುಸಿದಿದೆ. ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶ ಮಾಡಿ ಜನರಿಗೆ ಸಹಾಯ ಮಾಡಬೇಕಿದೆ ಎಂದು ಅವರು ಕೋರಿದ್ದಾರೆ. ಹಲವು ವಿಚಾರಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುತ್ತಿರುವ ಮೋಹನ್ ದಾಸ್ ಪೈ ಅವರು ಬೆಂಗಳೂರಿನ ಮೂಲಸೌಕರ್ಯ ವಿಚಾರದಲ್ಲಿ ಮಾತ್ರ ಬಿಜೆಪಿ ಸರ್ಕಾರದ ನಿಲುವನ್ನು ಖಂಡಿಸಿದ್ದಾರೆ.
ಯಾವ ನಗರಗಳಿಂದ ಎಷ್ಟು ತೆರಿಗೆ? ಭಾರತದ ಪ್ರಮುಖ ಮಹಾನಗರಗಳ ನಿವಾಸಿಗಳು ಪಾವತಿಸಿರುವ ಒಟ್ಟು ಆದಾಯ ತೆರಿಗೆ ವಿವರ ಇಂತಿದೆ…
ಮುಂಬೈ ₹ 4.48 ಲಕ್ಷಕೋಟಿ, ಬೆಂಗಳೂರು ₹ 1.69 ಲಕ್ಷ ಕೋಟಿ, ದೆಹಲಿ ₹ 1.66 ಲಕ್ಷ ಕೋಟಿ, ಚೆನ್ನೈ ₹ 0.9 ಲಕ್ಷ ಕೋಟಿ, ಪುಣೆ ₹ 0.86 ಲಕ್ಷ ಕೋಟಿ, ಹೈದರಾಬಾದ್ ₹ 0.83 ಲಕ್ಷ ಕೋಟಿ, ಅಹಮದಾಬಾದ್ ₹ 0.7 ಲಕ್ಷ ಕೋಟಿ, ಚಂಡಿಗಡ ₹ 0.6 ಲಕ್ಷ ಕೋಟಿ, ಕೊಲ್ಕತ್ತಾ ₹ 0.55 ಲಕ್ಷ ಕೋಟಿ, ಕಾನ್ಪುರ ₹ 0.31 ಲಕ್ಷ ಕೋಟಿ ಆದಾಯ ತೆರಿಗೆ ಪಾವತಿಸಿವೆ.
Bengaluru paid second highest IT at 1.69lcr in 21-22,but we are ignored by Delhi!Our roads are bad,traffic sucks,quality of life down @narendramodi Sir as our PM pl intervene andhelp @CMofKarnataka @BSBommai @nsitharaman @nitin_gadkari pic.twitter.com/ODzk4y10uY
— Mohandas Pai (@TVMohandasPai) April 7, 2022
ಬೆಂಗಳೂರು VS ಹೈದರಾಬಾದ್ ಭಾರತದ ಐಟಿ ರಾಜಧಾನಿ ಎನಿಸಿರುವ ಬೆಂಗಳೂರಿನ ಮೂಲಸೌಕರ್ಯ ಸಮಸ್ಯೆಗಳ ಕುರಿತು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಣಕಾಸು ನಿರ್ವಹಣೆಗೆ ಸಂಬಂಧಿಸಿದ ಹಲವು ಸೇವೆಗಳನ್ನು ಒದಗಿಸುವ ‘ಖಾತಾಬುಕ್’ ಕಂಪನಿಯ ಸ್ಥಾಪಕ ಮತ್ತು ಸಿಇಒ ರವೀಶ್ ನರೇಶ್ ಬೆಂಗಳೂರಿನ ರಸ್ತೆಗಳ ಬಗ್ಗೆ ಬೇಸರದಿಂದ ಟ್ವೀಟ್ ಮಾಡಿದ್ದರು. ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ಮತ್ತು ಕೋರಮಂಗಲ ಪ್ರದೇಶದಲ್ಲಿರುವ ಸಮಸ್ಯೆಗಳನ್ನು ಟ್ವಿಟರ್ನಲ್ಲಿ ಪ್ರಸ್ತಾಪಿಸಿದ್ದರು. ‘ಕೋಟ್ಯಂತರ ಡಾಲರ್ ಮೊತ್ತದ ತೆರಿಗೆ ಪಾವತಿಸಿದರೂ ಈ ಪ್ರದೇಶದಲ್ಲಿ ರಸ್ತೆಗಳು ಸರಿಯಿಲ್ಲ. ಪವರ್ ಕಟ್ ಪ್ರತಿದಿನ ಆಗುತ್ತಿದೆ. ನೀರು ಸರಿಯಾಗಿ ಬರುತ್ತಿಲ್ಲ, ಫುಟ್ಪಾತ್ ಇಲ್ಲ. ವಿಮಾನ ನಿಲ್ದಾಣಕ್ಕೆ ಹೋಗಬೇಕೆಂದರೆ ಮೂರು ಗಂಟೆ ಬೇಕಾಗುತ್ತದೆ. ಭಾರತದ ಸಿಲಿಕಾನ್ ವ್ಯಾಲಿಗಿಂತಲೂ ಗ್ರಾಮೀಣ ಪ್ರದೇಶದಲ್ಲಿಯೇ ಅತ್ಯುತ್ತಮ ಸೌಕರ್ಯಗಳಿವೆ ಎಂದು ಹೇಳಿದ್ದರು.
ಮತ್ತೋರ್ವ ಉದ್ಯಮಿ, ಸೇತು ಎಪಿಐನ ಸ್ಥಾಪಕ ನಿಖಿಲ್ ಕುಮಾರ್ ಸಹ ರವೀಶ್ ನರೇಶ್ ಅವರ ಟ್ವೀಟ್ ಅನ್ನು ರಿಟ್ವೀಟ್ ಮಾಡಿದ್ದರು. ‘ಬೆಂಗಳೂರು ಗೊಂದಲದ ಗೂಡಾಗಿದೆ. ದಯವಿಟ್ಟು ಗಮನಿಸಿ ಸರ್, ನೀವು ಈ ಕಡೆಗೆ ಗಮನ ಕೊಡದಿದ್ದರೆ ಸಾಮೂಹಿಕ ವಲಸೆ ಶುರುವಾಗುತ್ತದೆ’ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಟ್ಯಾಗ್ ಮಾಡಿದ್ದರು.
ಈ ಟ್ವೀಟ್ಗಳಿಗೆ ಪ್ರತಿಕ್ರಿಯಿಸಿದ ತೆಲಂಗಾಣದ ಕೈಗಾರಿಕೆ, ವಾಣಿಜ್ಯ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಕೆ.ಟಿ.ರಾಮಾರಾವ್, ‘ನಿಮ್ಮ ಬ್ಯಾಗ್ ಪ್ಯಾಕ್ ಮಾಡಿಕೊಂಡು ಹೈದರಾಬಾದ್ಗೆ ಬಂದುಬಿಡಿ. ನಮ್ಮಲ್ಲಿ ಉತ್ತಮ ಮೂಲಸೌಕರ್ಯಗಳಿವೆ. ನಮ್ಮ ವಿಮಾನ ನಿಲ್ದಾಣವು ಅತ್ಯುತ್ತಮವಾಗಿದೆ. ನಮ್ಮ ನಗರದ ಹೊರವಲಯದಲ್ಲಿ ತಣ್ಣನೆ ವಾತಾವರಣವಿದೆ. ನಮ್ಮ ಸರ್ಕಾರವು ಆವಿಷ್ಕಾರ, ಮೂಲಸೌಕರ್ಯ ಮತ್ತು ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಗೆ ಬದ್ಧವಾಗಿದೆ’ ಎಂದು ಭರವಸೆ ನೀಡಿದ್ದರು.
ನಂತರದ ದಿನಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ತೆಲಂಗಾಣ ಸಚಿವ ಹೇಳಿಕೆ ಖಂಡಿಸಿ, ‘ಬೆಂಗಳೂರನ್ನು ಹೈದರಾಬಾದ್ಗೆ ಹೋಲಿಸುವುದೇ ಹಾಸ್ಯಾಸ್ಪದ ಸಂಗತಿ. ಇಡೀ ಜಗತ್ತಿನ ಜನರು, ಉದ್ಯಮಿಗಳು ಬೆಂಗಳೂರಿಗೆ ಬರುತ್ತಿದ್ದಾರೆ. ಅತಿಹೆಚ್ಚು ಸ್ಟಾರ್ಟಪ್‌ಗಳು ಬೆಂಗಳೂರಿನಲ್ಲಿವೆ. ಕರ್ನಾಟಕದ ಆರ್ಥಿಕತೆಯು ಕಳೆದ ಮೂರು ತ್ರೈಮಾಸಿಕತೆಯಲ್ಲಿ ಉನ್ನತ ಸ್ತರದಲ್ಲಿದೆ. ಬೆಂಗಳೂರಿಗೆ ಭಾರತದ ಉದ್ಯಮಿಗಳು ಮಾತ್ರವಲ್ಲ, ವಿಶ್ವದೆಲ್ಲೆಡೆಯಿಂದ ಜನರು ಬರುತ್ತಿದ್ದಾರೆ. ಬೆಂಗಳೂರನ್ನು ಹೈದರಾಬಾದ್ಗೆ, ಕರ್ನಾಟಕವನ್ನು ತೆಲಂಗಾಣಕ್ಕೆ ಹೋಲಿಸುವುದು ಸರಿಯಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದರು.
ಇದನ್ನೂ ಓದಿ: IT ಉದ್ಯಮ ಬೆಳಗಲು ಏನೆಲ್ಲಾ ಆಗಬೇಕು; ಟಿವಿ9 ಸಂವಾದದಲ್ಲಿ ಮೋಹನ್ದಾಸ್ ಪೈ
ಇದನ್ನೂ ಓದಿ: ಹೊಸ ಪುಸ್ತಕ Middle Class, Media and Modi | ಮಧ್ಯಮ ವರ್ಗ, ಮಾಧ್ಯಮವನ್ನು ಮೋದಿ ಆವರಿಸಿಕೊಂಡ ಪರಿಯಿದು