ಮಾಜಿ ಎಂಎಲ್ಸಿಯನ್ನೇ ಅಪಹರಿಸಿ 2 ಕೋಟಿ ಹಣಕ್ಕೆ ಡಿಮ್ಯಾಂಡ್: ದುಷ್ಟರಿಂದ ದಯಾನಂದರೆಡ್ಡಿ ಬಚಾವ್ ಆಗಿದ್ದೇ ರೋಚಕ!
ಬೆಂಗಳೂರಿನ ಆನೇಕಲ್ ಬಳಿ ಮಾಜಿ ಎಂಎಲ್‌ಸಿ ದಯಾನಂದರೆಡ್ಡಿ ಅವರನ್ನು ಗನ್ ತೋರಿಸಿ ಕಿಡ್ನ್ಯಾಪ್ ಮಾಡಿದ್ದ ದುಷ್ಕರ್ಮಿಗಳು, 2 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿರುವ ಸಂಬಂಧ ಅತ್ತಿಬೆಲೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪೊಲೀಸರು ಕಿಡ್ನ್ಯಾಪರ್ಸ್ ಹಿಂದೆ ಬಿಂದ್ದಿದ್ದು, ತಡರಾತ್ರಿ 12.15ರ ಸುಮಾರಿಗೆ ನಡೆದಿರುವ ಈ ಘಟನೆ ಭಾರಿ ಆತಂಕಕ್ಕೆ ಕಾರಣವಾಗಿದೆ.

ಆನೇಕಲ್, ಜೂನ್ 02: ವಿಧಾನ ಪರಿಷತ್ ಮಾಜಿ ಸದಸ್ಯನನ್ನೇ ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಆಘಾತಕಾರಿ ಘಟನೆ ಬೆಂಗಳೂರು (Bengaluru) ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹುಸ್ಕೂರು ಬಳಿ ನಡೆದಿದೆ. ನಿನ್ನೆ ಮಧ್ಯರಾತ್ರಿ 12.15ರ ಸುಮಾರಿಗೆ ಘಟನೆ ನಡೆದಿದ್ದು, ಮಾಜಿ MLC ದಯಾನಂದರೆಡ್ಡಿಯನ್ನು ದುಷ್ಕರ್ಮಿಗಳು ಅಪಹರಿಸಿದ್ದರು ಎನ್ನಲಾಗಿದೆ. ಈ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಮುಖ್ಯಾಂಶಗಳು
- ಹಣಕ್ಕಾಗಿ ಮಾಜಿ ಎಂಎಲ್ಸಿಯ ಅಪಹರಿಸಿದ ದುಷ್ಕರ್ಮಿಗಳು
- ಆನೇಕಲ್ ತಾಲೂಕಿನ ಹುಸ್ಕೂರು ಬಳಿ ನಡೆದಿರುವ ಘಟನೆ
- 2 ಕೋಟಿ ಹಣ ನೀಡುವಂತೆ ಆರೋಪಿಗಳಿಂದ ಡಿಮ್ಯಾಂಡ್
ಘಟನೆ ಏನು?
ತಡರಾತ್ರಿ ಗೋಲ್ಡ್ ಕಾಯಿನ್ ಕ್ಲಬ್ನಿಂದ ದಯಾನಂದರೆಡ್ಡಿ ಹೊರಟಿದ್ದರು. ಈ ವೇಳೆ ಬೈಕ್ನಲ್ಲಿ ಬಂದು ದಯಾನಂದರೆಡ್ಡಿ ಕಾರು ಅಡ್ಡಗಟ್ಟಿದ್ದ ದುಷ್ಕರ್ಮಿಗಳು ನಿಮಗೆ ಗಿಫ್ಟ್ ಬಂದಿದೆ ಎಂದು ಕಾಟನ್ ಬಾಕ್ಸ್ ತೋರಿಸಿದ್ದರು. ಡೋರ್ ಲಾಕ್ ಓಪನ್ ಮಾಡುತ್ತಿದ್ದಂತೆ ಕಾರಿಗೆ ನುಗ್ಗಿರುವ ಓರ್ವ ಗನ್ ತೋರಿಸಿ ತಾನು ಹೇಳಿದ ಕಡೆ ಕಾರು ಚಲಾಯಿಸಲು ಸೂಚನೆ ನೀಡಿದ್ದಾನೆ. ಬಳಿಕ ಕೆಂಪು ಬಣ್ಣದ ಕಾರಿನಲ್ಲಿ ಮತ್ತಿಬ್ಬರು ಇವರನ್ನು ಹಿಂಬಾಲಿಸಿದ್ದಾರೆ. ಅತ್ತಿಬೆಲೆ ಕೆಹೆಚ್ಬಿ ಬಡಾವಣೆ ಬಳಿ ಕರೆದೊಯ್ದು ಕೊಲೆ ಬೆದರಿಕೆ ಹಾಕಲಾಗಿದ್ದು, ನಿನ್ನ ಹತ್ಯೆಗೆ 10 ಕೋಟಿ ಸುಪಾರಿ ಕೊಟ್ಟಿದ್ದಾರೆ ಎಂದು ಮಾಜಿ ಎಂಎಲ್‌ಸಿ ದಯಾನಂದರೆಡ್ಡಿ ಕುತ್ತಿಗೆಗೆ ಗನ್ ಇಟ್ಟು ದುಷ್ಕರ್ಮಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಹಾಡಹಗಲೇ ಸಿನಿಮೀಯ ಮಾದರಿ ದರೋಡೆ; ಬಂಗಾರದ ಅಂಗಡಿಗೆ ನುಗ್ಗಿ ಆಭರಣ ದೋಚಿ ಎಸ್ಕೇಪ್ ಆದ ಮೂವರು
ಇನ್ನು ಈ ವೇಳೆ ಆ ಹಣವನ್ನು ತಾನೇ ಕೊಡ್ತೇನೆ, ಕೊಲ್ಲಬೇಡಿ ಎಂದು ದಯಾನಂದರೆಡ್ಡಿ ಮನವಿ ಮಾಡಿದ್ದಾರೆ. ಮೊದಲು 3 ಕೋಟಿ ಹಣ ಬೇಡಿಕೆಯಿಟ್ಟಿದ್ದ ಅಪಹರಣಕಾರರ ಗ್ಯಾಂಗ್, ಅಂತಿಮವಾಗಿ 2 ಕೋಟಿಗೆ ಒಪ್ಪಿಕೊಂಡಿದ್ದಾರೆ. ಈಗ ಹಣ ಇಲ್ಲ, ಬೆಳಗ್ಗೆ ಬ್ಯಾಂಕ್ ಓಪನ್ ಟೈಮ್ಗೆ ನೀಡೋದಾಗಿ ದಯಾನಂದರೆಡ್ಡಿ ಕೇಳಿಕೊಂಡಿದ್ದು, ಹಣ ಡ್ರಾ ಮಾಡಿದ ಬಳಿಕ ಕರೆ ಮಾಡುವಂತೆ ತಿಳಿಸಿ ಅಪಹರಣಕಾರರು ದಯಾನಂದರೆಡ್ಡಿ ಅವರನ್ನು ಬಿಟ್ಟುಕಳುಹಿಸಿದ್ದಾರೆ. ಆ ಬೆನ್ನಲ್ಲೇ ಪೊಲೀಸ್ ಠಾಣೆಗೆ ತೆರಳಿ ಘಟನೆ ಸಂಬಂಧ ಮಾಜಿ ಎಂಎಲ್‌ಸಿ ದೂರು ದಾಖಲಿಸಿದ್ದಾರೆ. ಅಪಹರಣ ಗ್ಯಾಂಗ್ಗಾಗಿ ಪೊಲೀಸರಿಂದ ಹುಡುಕಾಟ ಮುಂದುವರಿದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:34 pm, Tue, 2 June 26




