ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ಅರ್ಜಿ ಸಲ್ಲಿಕೆ ಹೇಗೆ? ಏನೇನು ದಾಖಲೆಗಳು ಬೇಕು? ಇಲ್ಲಿದೆ ವಿವರ

Student Free Bus Pass Rules: ನೂತನ ಸಿಎಂ ಡಿಕೆ ಶಿವಕುಮಾರ್ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಘೋಷಿಸಿದ್ದು, ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸುವ ನಿಯಮಗಳು ಮೊದಲಿನಂತೆಯೇ ಇರಲಿವೆ. ಅರ್ಜಿ ಸಲ್ಲಿಸುವುದು ಹೇಗೆ? ಏನೇನು ದಾಖಲೆಗಳು ಬೇಕು ಎಂಬ ಮಾಹಿತಿ ಇಲ್ಲಿದೆ.

ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ಅರ್ಜಿ ಸಲ್ಲಿಕೆ ಹೇಗೆ? ಏನೇನು ದಾಖಲೆಗಳು ಬೇಕು? ಇಲ್ಲಿದೆ ವಿವರ
ಬಿಎಂಟಿಸಿ ಬಸ್ (ಸಾಂದರ್ಭಿಕ ಚಿತ್ರ)
Image Credit source: tv9
Edited By:

Updated on: Jun 04, 2026 | 11:11 AM

ಬೆಂಗಳೂರು, ಜೂನ್ 4: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಡಿಕೆ ಶಿವಕುಮಾರ್ (DK Shivakumar) ವಿದ್ಯಾರ್ಥಿ ಸಮೂಹಕ್ಕೆ ಭರ್ಜರಿ ಕೊಡುಗೆ ನೀಡಿದ್ದಾರೆ. ರಾಜ್ಯದ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ‘ಉಚಿತ ಬಸ್ ಪಾಸ್’ ನೀಡುವುದಾಗಿ ಮುಖ್ಯಮಂತ್ರಿಗಳು ಮಹತ್ತರ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ವ್ಯಾಪ್ತಿಯಲ್ಲಿ ಸದ್ಯ ಪಾಸ್ ಪಡೆಯಲು ಇರುವ ನಿಯಮಗಳು, ಪ್ರಸ್ತುತ ಇರುವ ದರ ಪಟ್ಟಿ ಹಾಗೂ ಇನ್ನು ಮುಂದೆ ಉಚಿತ ಪಾಸ್ ಪ್ರಕ್ರಿಯೆ ಹೇಗೆ ನಡೆಯಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿದ್ಯಾರ್ಥಿಗಳು ಬಸ್ ಪಾಸ್ ಪಡೆಯುವ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈಗಿರುವ ನಿಯಮಗಳ ಪ್ರಕಾರವೇ ಅರ್ಜಿ ಸಲ್ಲಿಸಬೇಕು. ಆದರೆ, ಮುಖ್ಯ ಬದಲಾವಣೆ ಎಂದರೆ ವಿದ್ಯಾರ್ಥಿಗಳು ಇನ್ನು ಮುಂದೆ ಪಾಸ್‌ಗಾಗಿ ಯಾವುದೇ ಹಣವನ್ನು ಪಾವತಿ ಮಾಡಬೇಕಿರುವುದಿಲ್ಲ.

ವಿದ್ಯಾರ್ಥಿಗಳ ಉಚಿತ ಬಸ್ ಪಾಸ್​ಗೆ ಅರ್ಜಿ ಸಲ್ಲಿಕೆ ಹೇಗೆ?

ವಿದ್ಯಾರ್ಥಿಗಳು ಯಾವುದೇ ಸೈಬರ್ ಸೆಂಟರ್, ಬೆಂಗಳೂರು ಒನ್ ಕೇಂದ್ರಗಳು ಅಥವಾ ತಮ್ಮ ಮೊಬೈಲ್ ಮೂಲಕ ‘ಸೇವಾಸಿಂಧು’ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಸೈಬರ್ ಸೆಂಟರ್‌ಗಳಲ್ಲಿ ಅರ್ಜಿ ಸಲ್ಲಿಸಲು ಫಾರ್ಮ್‌ಗೆ 10 ರೂ. ಹಾಗೂ ಆನ್‌ಲೈನ್ ಸಲ್ಲಿಕೆಗಾಗಿ 100 ರೂ. ಸೇವಾ ಶುಲ್ಕ ಇರಲಿದೆ.

ಉಚಿತ ಬಸ್ ಪಾಸ್​ಗೆ ಅಗತ್ಯ ದಾಖಲೆಗಳು

ವಿದ್ಯಾರ್ಥಿಯ ಆಧಾರ್ ಕಾರ್ಡ್, ಪ್ರಸ್ತುತ ಸಾಲಿನ ಕಾಲೇಜು ಪ್ರವೇಶಾತಿ ರಶೀದಿ (Admission Receipt) ಹಾಗೂ ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು ಇರಬೇಕು.

ಸಹ-ಸೀಲು ಕಡ್ಡಾಯ

ಆನ್‌ಲೈನ್ ಅಪ್ಲಿಕೇಶನ್ ಹಾಕಿದ ನಂತರ, ವಿದ್ಯಾರ್ಥಿಯು ತಾನು ಓದುತ್ತಿರುವ ವಿದ್ಯಾಸಂಸ್ಥೆಯ ಮುಖ್ಯಸ್ಥರಿಂದ (ಪ್ರಾಂಶುಪಾಲರು/ಮುಖ್ಯೋಪಾಧ್ಯಾಯರು) ಸಹಿ ಮತ್ತು ಸೀಲು ಹಾಕಿಸಿಕೊಳ್ಳಬೇಕು.

ಅಪ್ರೂವಲ್ ಮತ್ತು ಮೆಸೇಜ್

ಈ ಅರ್ಜಿಯನ್ನು ಬಿಎಂಟಿಸಿ ಪಾಸ್ ವಿಭಾಗದವರು ಪರಿಶೀಲಿಸಿ ಅನುಮೋದನೆ ನೀಡುತ್ತಾರೆ. ಅಪ್ರೂವಲ್ ಆದ ತಕ್ಷಣ ವಿದ್ಯಾರ್ಥಿಯ ಮೊಬೈಲ್‌ಗೆ ಸಂದೇಶ (SMS) ಬರುತ್ತದೆ.

ಉಚಿತ ಬಸ್ ಪಾಸ್ ಎಲ್ಲಿ ಸಿಗುತ್ತೆ?

ಮೊಬೈಲ್‌ಗೆ ಮೆಸೇಜ್ ಬಂದ ನಂತರ ಮೆಜೆಸ್ಟಿಕ್, ಕೆಂಗೇರಿ, ಶಾಂತಿನಗರ, ಎಲೆಕ್ಟ್ರಾನಿಕ್ ಸಿಟಿ, ಹೊಸಕೋಟೆ ಹಾಗೂ ಆನೇಕಲ್ ಬಸ್ ನಿಲ್ದಾಣಗಳಲ್ಲಿ (TTMC) ಪಾಸ್ ಪಡೆದುಕೊಳ್ಳಬಹುದು. ಆದರೆ, ಇಲ್ಲಿ ಈ ಹಿಂದೆ ನಿಗದಿಪಡಿಸಿದ್ದ ಪಾಸಿನ ಮೊತ್ತವನ್ನು ಪಾವತಿಸುವ ಅಗತ್ಯವಿರುವುದಿಲ್ಲ, ಉಚಿತವಾಗಿ ಪಾಸ್ ನೀಡಲಾಗುತ್ತದೆ.

ಹೆಣ್ಣುಮಕ್ಕಳಿಗೆ ಮೊದಲೇ ಉಚಿತ!

ಶಕ್ತಿ ಯೋಜನೆ ಅಡಿಯಲ್ಲಿ ಈಗಾಗಲೇ ರಾಜ್ಯದ ಎಲ್ಲಾ ಮಹಿಳಾ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಇರುವುದರಿಂದ ಅವರು ಪ್ರತ್ಯೇಕವಾಗಿ ಪಾಸ್ ಪಡೆಯುವ ಅಗತ್ಯವಿಲ್ಲ. ಕೇವಲ ವಿದ್ಯಾರ್ಥಿಗಳು (ಗಂಡು ಮಕ್ಕಳು) ಮಾತ್ರ ಮುಖ್ಯಮಂತ್ರಿಗಳು ಘೋಷಿಸಿರುವ ಈ ಉಚಿತ ಬಸ್ ಪಾಸಿಗೆ ಅರ್ಜಿ ಸಲ್ಲಿಸಬೇಕಾಗಿದೆ.

ಪ್ರಸ್ತುತ ಜಾರಿಯಲ್ಲಿರುವ ಬಸ್ ಪಾಸ್ ದರ ವಿವರ

ಮುಖ್ಯಮಂತ್ರಿಗಳ ಉಚಿತ ಪಾಸ್ ಆದೇಶ ಸಂಪೂರ್ಣ ಜಾರಿಗೆ ಬರುವ ಮುನ್ನ ಬಿಎಂಟಿಸಿಯಲ್ಲಿ ಚಾಲ್ತಿಯಲ್ಲಿದ್ದ ದರ ಪಟ್ಟಿ ಹೀಗಿದೆ (ಇನ್ನು ಮುಂದೆ ಈ ಪಾಸಿನ ದರಗಳು ವಿದ್ಯಾರ್ಥಿಗಳಿಗೆ ಸಂಪೂರ್ಣ ಮನ್ನಾ ಆಗಲಿವೆ):

ತರಗತಿ / ಕೋರ್ಸ್ ವಿವರ – ಹಳೆಯ ಪಾಸಿನ ದರ – ಸೇವಾ ಶುಲ್ಕ – ಒಟ್ಟು ಮೊತ್ತ (ಈಗ ಮನ್ನಾ)

  • 1 ರಿಂದ 7ನೇ ತರಗತಿ – ಉಚಿತ – ₹150 – ₹150
  • 8 ರಿಂದ 10ನೇ ತರಗತಿ (ಬಾಲಕರಿಗೆ) – ₹600 – ₹150 – ₹750
  • 11 ಮತ್ತು 12ನೇ ತರಗತಿ (ಪಿಯುಸಿ) – ₹900 – ₹150 – ₹1,050
  • ಪದವಿ ಮತ್ತು ಸ್ನಾತಕೋತ್ತರ – ₹1,150 – ₹150 – ₹1,300
  • ತಾಂತ್ರಿಕ ಮತ್ತು ವೈದ್ಯಕೀಯ – ₹1,680 – ₹150 ₹1,830

ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ವಿದ್ಯಾರ್ಥಿಗಳಿಗೆ ಈ ಹಿಂದೆಯೂ ಸಹ ಪಾಸಿನ ದರ ಉಚಿತವಾಗಿದ್ದು, ಕೇವಲ 150 ರೂ. ಸೇವಾ ಶುಲ್ಕ ಮಾತ್ರ ಇತ್ತು.

ಇದನ್ನೂ ಓದಿ: ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: ಸಿಎಂ ಘೋಷಿಸಿದ 6 ಕೊಡುಗೆಗಳಾವುವು?

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಈ ಐತಿಹಾಸಿಕ ‘ಉಚಿತ ಬಸ್ ಪಾಸ್‘ ಘೋಷಣೆಯಿಂದಾಗಿ ಇನ್ನು ಮುಂದೆ ವಿದ್ಯಾರ್ಥಿಗಳು ಮೇಲ್ಕಂಡ ಯಾವುದೇ ಶುಲ್ಕವನ್ನು ಭರಿಸಬೇಕಾಗಿಲ್ಲ. ಕೇವಲ ಆನ್‌ಲೈನ್‌ನಲ್ಲಿ ನಿಯಮಾನುಸಾರ ಅರ್ಜಿ ಸಲ್ಲಿಸಿ ಉಚಿತವಾಗಿ ಪಾಸ್ ಪಡೆದು ಪ್ರಯಾಣಿಸಬಹುದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Loading...
Unable to load recommendations.
Follow Us