‘ಗಾಂಧಿ ಹತ್ಯೆಯ ಸತ್ಯ’ ನಾಟಕ ವಿವಾದ: ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿ ಎದುರು ‘ಕೈ’ ಕಾರ್ಯಕರ್ತರಿಂದ ಹೈಡ್ರಾಮಾ

‘ಗಾಂಧಿ ಹತ್ಯೆಯ ಸತ್ಯ’ ನಾಟಕ ವಿವಾದಕ್ಕೆ ಸಂಬಂಧಿಸಿದಂತೆ ಅಡ್ಡಂಡ ಕಾರ್ಯಪ್ಪ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಭಾರಿ ಹೈಡ್ರಾಮಾವೇ ನಡೆದಿದೆ. ಅಕ್ಟೋಬರ್​​ 31ರಂದು ನಡೆದಿದ್ದ ಗಲಾಟೆ ಸಂಬಂಧ ಬನಶಂಕರಿ ಠಾಣೆಯಲ್ಲಿ ಎರಡು ಎಫ್‌ಐಆರ್ ದಾಖಲಾಗಿದ್ದು, ಸುಚಿತ್ರಾ ಅಕಾಡೆಮಿ ಬಳಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಮುಂಜಾಗ್ರತಾ ಕ್ರಮವಾಗಿ 2 ಕೆಎಸ್ಆರ್​ಪಿ ತುಕಡಿ ಜೊತೆಗೆ ಸ್ಥಳೀಯ ಪೊಲೀಸರನ್ನೂ ನೇಮಿಸಲಾಗಿದೆ.

‘ಗಾಂಧಿ ಹತ್ಯೆಯ ಸತ್ಯ’ ನಾಟಕ ವಿವಾದ: ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿ ಎದುರು ಕೈ ಕಾರ್ಯಕರ್ತರಿಂದ ಹೈಡ್ರಾಮಾ
ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿ ಎದುರು 'ಕೈ' ಕಾರ್ಯಕರ್ತರಿಂದ ಹೈಡ್ರಾಮಾ
Edited By:

Updated on: Nov 02, 2026 | 5:44 PM

ಬೆಂಗಳೂರು, ನವೆಂಬರ್​​ 02: ಬನಶಂಕರಿಯ ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ನಡೆದಿದ್ದ ‘ಗಾಂಧಿ ಹತ್ಯೆಯ ಸತ್ಯ’ ನಾಟಕ ಪ್ರದರ್ಶನ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ಮುಂದಿನ ಆದೇಶದವರೆಗೂ ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ಯಾವುದೇ ನಾಟಕ ಪ್ರದರ್ಶನ ಮಾಡದಂತೆ ಪೊಲೀಸರ ಆದೇಶದ ನಡುವೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ನೇತೃತ್ವದಲ್ಲಿ ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿ ಎದುರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಭಾರಿ ಹೈಡ್ರಾಮಾವೇ ನಡೆದಿದೆ.

ಅಡ್ಡಂಡ ಕಾರ್ಯಪ್ಪ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಕ್ರಮಕೈಗೊಂಡಿಲ್ಲ. ರಾಷ್ಟ್ರಪಿತ ಗಾಂಧೀಜಿ ಬಗ್ಗೆ ನಾಟಕದಲ್ಲಿ ಕೆಟ್ಟದಾಗಿ ಬಿಂಬಿಸಲಾಗಿದೆ. ಹೀಗಾಗಿ ದೂರು ನೀಡಿದರೂ ಉಮ್ಮನಿರುವ ಪೊಲೀಸರ ವಿರುದ್ಧವೇ ಕ್ರಮ ಆಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಅಡ್ಡಂಡ ಕಾರ್ಯಪ್ಪ ನೀಡಿದ್ದ ದೂರಿನ ಸಂಬಂಧ ನಮಗೆ ನೋಟಿಸ್ ನೀಡಿದ್ದಾರೆ ಎಂದು ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ. ಈ ವೇಳೆ ಅಡ್ಡಂಡ ಕಾರ್ಯಪ್ಪ ಬಂಧನಕ್ಕೆ ಆಗ್ರಹಿಸಿ ಪೋಸ್ಟ್ ಪ್ರದರ್ಶಿಸಲಾಗಿದ್ದು, ಗಾಂಧಿ ವಿರೋಧಿಗಳಿಗೆ ಧಿಕ್ಕಾರ ಎಂದು ‘ಕೈ’ ಕಾರ್ಯಕರ್ತರಿಂದ ಘೋಷಣೆ ಮೊಳಗಿದೆ. ಕಾಂಗ್ರೆಸ್ ಕಾರ್ಯಕರ್ತರನ್ನು ಕಮಿಷನರ್ ಕಚೇರಿ ಗೇಟ್ ಬಳಿಯೇ ತಡೆದ ಪೊಲೀಸರು, ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪ್ರಸಂಗವೂ ನಡೆದಿದೆ.

ಇದನ್ನೂ ಓದಿ: ʻಗಾಂಧಿ ಹತ್ಯೆಯ ಸತ್ಯʼ ನಾಟಕ: ಸುಚಿತ್ರ ಅಕಾಡೆಮಿಯಲ್ಲಿ ನಾಟಕಗಳ ಪ್ರದರ್ಶನಕ್ಕೆ ತಾತ್ಕಾಲಿಕ ತಡೆ; ವಿವಾದಕ್ಕೆ ಕಾರಣವಾದ ಪೊಲೀಸರ ಆದೇಶ

ಬನಶಂಕರಿ ಠಾಣೆಯಲ್ಲಿ 2 ಎಫ್ಐಆರ್ ದಾಖಲು

ಇನ್ನು ಗಾಂಧಿ ಹತ್ಯೆ ಸತ್ಯ ನಾಟಕದ ವೇಳೆ ಗಲಾಟೆ ವಿಚಾರ ಸಂಬಂಧ ಬೆಂಗಳೂರಿನ ಬನಶಂಕರಿ ಠಾಣೆಯಲ್ಲಿ 2 ಎಫ್ಐಆರ್ ದಾಖಲಾಗಿದೆ. ಮಸಿ ಬಳಿದಿದ್ದು, ಹಲ್ಲೆ, ಬೆದರಿಕೆ ಆರೋಪದಡಿ ಅಡ್ಡಂಡ ಕಾರ್ಯಪ್ಪ ದೂರಿನ ಮೇರೆಗೆ 12ರಿಂದ 15 ಜನ ಅಪರಿಚಿತರ ವಿರುದ್ಧ ಕೇಸ್​​ ಆಗಿದ್ದರೆ, ಮಹಾತ್ಮ ಗಾಂಧಿ ಬಗ್ಗೆ ಅವಹೇಳನ, ಸುಳ್ಳು ಪ್ರಚಾರ ಹಾಗೂ ಕಾಂಗ್ರೆಸ್ ಬಗ್ಗೆ ಅಪಪ್ರಚಾರದ ನಾಟಕ ಪ್ರದರ್ಶನ ಮಾಡಲಾಗಿದೆ. ಪ್ರಶ್ನೆ ಮಾಡಿದ್ದಕ್ಕೆ ಅವಾಚ್ಯವಾಗಿ ನಿಂದನೆ ಎಂದು ಪ್ರತಿದೂರು ದಾಖಲಾಗಿದೆ. ಪ್ರಕರಣ ಸಂಬಂಧ ಸದ್ಯ 2 ಕಡೆಯವರಿಗೂ ನೋಟಿಸ್ ನೀಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸುಚಿತ್ರಾ ಅಕಾಡೆಮಿ ಬಳಿ ಪೊಲೀಸ್ ಬಂದೋಬಸ್ತ್

ಅಡ್ಡಂಡ ಕಾರ್ಯಪ್ಪ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಹಿನ್ನೆಲೆ ಸುಚಿತ್ರಾ ಅಕಾಡೆಮಿ ಬಳಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಮುಂಜಾಗ್ರತಾ ಕ್ರಮವಾಗಿ 2 ಕೆಎಸ್ಆರ್​ಪಿ ತುಕಡಿ ಜೊತೆಗೆ ಸ್ಥಳೀಯ ಪೊಲೀಸರನ್ನೂ ನೇಮಿಸಲಾಗಿದೆ. ತನಿಖೆ ನಡೆಯುತ್ತಿರುವ ಹಿನ್ನೆಲೆ ಇಂದು ಯಾವುದೇ ಕಾರ್ಯಕ್ರಮವಿಲ್ಲವೆಂದು ನೋಟಿಸ್ ಪ್ರದರ್ಶನ ಮಾಡಿರುವುದು ಕೂಡ ಕಂಡುಬಂದಿದೆ.

‘ನಾಟಕ ಮಾಡಬಾರದು ಎಂದು ಧಮ್ಕಿ ಹಾಕಿದ್ದಾರೆ’

ಇನ್ನು ನಾಟಕ ಪ್ರದರ್ಶನದ ವೇಳೆ ಗಲಾಟೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಮೈಸೂರು ರಂಗಾಯಣದ ಮಾಜಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ನಾಟಕದ ಬಗ್ಗೆ ಈಗಾಗಲೇ ಪುಸ್ತಕ ಪ್ರಕಟಿಸಿದ್ದಾರೆ. ಮೊನ್ನೆ ಸುಚಿತ್ರಾ ಅಕಾಡೆಮಿಯಲ್ಲಿ ಪ್ರದರ್ಶ‌ನದ ವೇಳೆ 12-13 ಜನ ಗೂಂಡಾಗಳು ಬಂದು ಹಲ್ಲೆ ಮಾಡಿದ್ದಾರೆ. ಮಹಿಳೆಯರ ಮೇಲೂ ಇಂಕ್ ಎರಚಿದ್ದಾರೆ. ಪುನಃ ನಾಟಕ ಮಾಡಬಾರದು ಎಂದು ಧಮ್ಕಿಯನ್ನೂ ಹಾಕಿದ್ದಾರೆ. ಬಂದಿದ್ದವರ ಉದ್ದೇಶ ನಾಟಕ ನಿಲ್ಲಿಸೋದಾಗಿತ್ತು. ಅವರಿಗೆ ಕಾಂಗ್ರೆಸ್ ಎಂಬ ಪದ ಬರಬಾರದು. ಚರಿತ್ರೆಯಲ್ಲಿ ಉಲ್ಲೇಖವಾದ ಅಂಶ ಅವರನ್ನ ಕೆರಳಿಸಿದೆ. ಗೂಂಡಾಗಿರಿ ಮಾಡುವ ಬದಲು ಕಾನೂನು ಹೋರಾಟ ಮಾಡಲಿ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 5:42 pm, Mon, 2 November 26

ಪ್ರಸನ್ನ ಗಾಂವ್ಕರ್​

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
Loading...
Unable to load recommendations.
Follow Us