ಬೆಂಗಳೂರು: ಈ ವರ್ಷ 1.75 ಲಕ್ಷಕ್ಕೂ ಹೆಚ್ಚು ಗಣೇಶ ಮೂರ್ತಿಗಳ ವಿಸರ್ಜನೆ ನಿರೀಕ್ಷೆ
ಬೆಂಗಳೂರಿನಲ್ಲಿ ವಿನಾಯಕ ಚೌತಿ ಹಬ್ಬದ ಆಚರಣೆ ಜೋರಾಗಿಯೇ ನಡೆಯುತ್ತಿದೆ. ಮನೆ ಮನೆಗಳಲ್ಲೂ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಈ ವರ್ಷ ಯಡಿಯೂರು ಸೇರಿ ಬೆಂಗಳೂರಿನ ಕೆರೆಗಳಲ್ಲಿ 1.75 ಲಕ್ಷಕ್ಕೂ ಹೆಚ್ಚು ಗಣೇಶ ಮೂರ್ತಿಗಳ ವಿಸರ್ಜನೆ ನಿರೀಕ್ಷೆ ಇದ್ದು, ಬಿಬಿಎಂಪಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ.
ಬೆಂಗಳೂರು, ಸೆಪ್ಟೆಂಬರ್ 7: ಕಳೆದ ವರ್ಷ ಗಣೇಶೋತ್ಸವ ಸಂದರ್ಭ ಬೆಂಗಳೂರಿನ ಯಡಿಯೂರು ಕೆರೆಯಲ್ಲಿ 1.75 ಲಕ್ಷಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿತ್ತು. ಈ ವರ್ಷವೂ ಅದೇ ಪ್ರಮಾಣದಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಯಾಗುವ ನಿರೀಕ್ಷೆ ಇದೆ. ನಗರದ ಅನೇಕ ಮನೆಗಳಲ್ಲಿ ಹಬ್ಬದ ಆಚರಣೆ ಭರ್ಜರಿಯಾಗಿಯೇ ನಡೆಯುತ್ತಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಸಹ ಕೊಳಗಳನ್ನು ಸ್ವಚ್ಛಗೊಳಿಸಿ ಮರುಪೂರಣ ಮಾಡಿದ್ದಾರೆ.
ಆದಾಗ್ಯೂ, ಈ ವರ್ಷ ನಿರ್ವಹಣಾ ಕಾರ್ಯಗಳ ಕಾರಣ ಯಡಿಯೂರು ಕೆರೆಯ (ಕಲ್ಯಾಣಿ) ಭಾಗವನ್ನು ಸೆಪ್ಟೆಂಬರ್ 10 ರಂದು ಮುಚ್ಚಲಾಗುತ್ತದೆ. ಸೆಪ್ಟೆಂಬರ್ 11 ರಂದು ತೆರೆಯಲಾಗುತ್ತಿದ್ದು, ವಿಸರ್ಜನಾ ಚಟುವಟಿಕೆಗಳು ಪುನರಾರಂಭಗೊಳ್ಳಲಿವೆ.
ಕಲ್ಯಾಣಿಯಲ್ಲಿ ವಿಗ್ರಹಗಳ ನಿಮಜ್ಜನಕ್ಕೆ ಸೆಪ್ಟೆಂಬರ್ 7 ರಿಂದ 17 ರವರೆಗೆ 11 ದಿನಗಳ ಕಾಲ ಮಾತ್ರ ಅನುಮತಿ ನೀಡಲಾಗುವುದು. ನಿರ್ವಹಣಾ ಕಾಮಗಾರಿಗಳು, ಸಂಚಾರ ದಟ್ಟಣೆ ಮತ್ತು ಇತರ ಕಾರಣಗಳಿಗಾಗಿ ಅವಧಿಯನ್ನು ಮಿತಿಗೊಳಿಸಲಾಗಿದೆ. ಸೆಪ್ಟೆಂಬರ್ 18 ರಿಂದ ಈ ಕೆರೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ನಿಷೇಧಿಸಲಾಗುವುದು ಮತ್ತು ಪಿಒಪಿ ಗಣೇಶ ಮೂರ್ತಿಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಪದ್ಮನಾಭನಗರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.
ಇದನ್ನೂ ಓದಿ: ಈ ದೇವಾಲಯದಲ್ಲಿದೆ ತಲೆಯಿಲ್ಲದ ಗಣೇಶನ ವಿಗ್ರಹ, ಇದರ ಹಿಂದಿದೆ ಈ ಕಾರಣ
ಇದಲ್ಲದೆ, ಮೂರ್ತಿ ವಿಸರ್ಜನೆಗಾಗಿ ಗುರುತಿಸಲಾದ 40ಕ್ಕೂ ಹೆಚ್ಚಿನ ಕೆರೆಗಳಲ್ಲಿ ಬಿಬಿಎಂಪಿ ಸಾಕಷ್ಟು ಸಿದ್ಧತೆಗಳನ್ನು ಮಾಡಿದೆ. ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಕೊಳಗಳಲ್ಲಿ ಜನಸಂದಣಿಯನ್ನು ತಪ್ಪಿಸಲು, ಬೆಂಗಳೂರಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ 400 ಕ್ಕೂ ಹೆಚ್ಚು ಮೊಬೈಲ್ ಇಮ್ಮರ್ಶನ್ ಟ್ಯಾಂಕ್‌ಗಳನ್ನು ನಿಯೋಜಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ