Ganesh Chaturthi: ಪಿಒಪಿ ಗಣೇಶ ತಯಾರಿ, ಮಾರಾಟ ಮಾಡಿದ್ರೆ ಕ್ರಿಮಿನಲ್ ಕೇಸ್; ಗಣೇಶ ಚತುರ್ಥಿಗೆ ಬಿಬಿಎಂಪಿ ಮಾರ್ಗಸೂಚಿ ಬಿಡುಗಡೆ

BBMP Ganesh Chaturthi guidelines; ಗಣೇಶ ಚತುರ್ಥಿ ಆಚರಣೆಗಾಗಿ ಬಿಬಿಎಂಪಿ ಪರಿಸರ ಸ್ನೇಹಿ ಮಾರ್ಗಸೂಚಿಗಳನ್ನು ಹೊರಡಿಸಿದೆ. ಪಿಒಪಿ ಮೂರ್ತಿಗಳ ನಿಷೇಧ, ಜೇಡಿಮಣ್ಣಿನ ಮೂರ್ತಿಗಳ ಉತ್ಪಾದನೆಗೆ ಒತ್ತು, ಸಾರ್ವಜನಿಕ ಗಣೇಶೋತ್ಸವಗಳಿಗೆ ಅನುಮತಿ ಪ್ರಕ್ರಿಯೆ ಮತ್ತು ಮೂರ್ತಿ ವಿಸರ್ಜನೆಗೆ ಸ್ಥಳಗಳನ್ನು ಗೊತ್ತುಪಡಿಸುವ ಬಗ್ಗೆ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ. ಮಾರ್ಗಸೂಚಿಯ ವಿವರಗಳು ಇಲ್ಲಿವೆ.

Ganesh Chaturthi: ಪಿಒಪಿ ಗಣೇಶ ತಯಾರಿ, ಮಾರಾಟ ಮಾಡಿದ್ರೆ ಕ್ರಿಮಿನಲ್ ಕೇಸ್; ಗಣೇಶ ಚತುರ್ಥಿಗೆ ಬಿಬಿಎಂಪಿ ಮಾರ್ಗಸೂಚಿ ಬಿಡುಗಡೆ
ಸಾಂದರ್ಭಿಕ ಚಿತ್ರ

Updated on: Aug 21, 2025 | 8:10 AM

ಬೆಂಗಳೂರು, ಆಗಸ್ಟ್ 21: ಗಣೇಶ ಚತುರ್ಥಿಗೆ (Ganesh Chaturthi 2025) ಇನ್ನೇನು ಕೆಲವೇ ದಿನಗಳಿದ್ದು, ಬೆಂಗಳೂರಿನಲ್ಲಿ ಹಬ್ಬದ ಆಚರಣೆ ಸಂಬಂಧ ಬಿಬಿಎಂಪಿ (BBMP) ಮಾರ್ಗಸೂಚಿ ಬಿಡುಗಡೆ ಮಾಡಿದೆ. ಪಿಒಪಿಯಂತಹ ನಿಷೇಧಿತ ವಸ್ತುಗಳಿಂದ ಗಣೇಶ ಮೂರ್ತಿಗಳನ್ನು ತಯಾರಿಸುವುದು ಹಾಗೂ ಮಾರಾಟ ಮಾಡುವುದು ಕಂಡುಬಂದರೆ ಅಂತಹ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸುವುದಾಗಿ ಬಿಬಿಎಂಪಿ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ. ಆಯಾ ಬಿಬಿಎಂಪಿ ಉಪವಿಭಾಗಗಳ ನೋಡಲ್ ಅಧಿಕಾರಿಗಳು, ಪೊಲೀಸ್, ಅಗ್ನಿಶಾಮಕ ಮತ್ತು ಬೆಸ್ಕಾಂ ಇಲಾಖೆಗಳ ಅಧಿಕಾರಿಗಳಿಗೆ ಗಣೇಶ ಮೂರ್ತಿಗಳ ತಯಾರಿಕೆ ಮತ್ತು ಮಾರಾಟ ಎರಡರ ಮೇಲೂ ನಿಗಾ ಇರಿಸುವಂತೆ ಸೂಚನೆ ನೀಡಲಾಗಿದೆ.

ಗಣೇಶ ಚತುರ್ಥಿಯ ಪರಿಸರ ಸ್ನೇಹಿ ಆಚರಣೆಯ ದೃಷ್ಟಿಯಿಂದ ಬಿಬಿಎಂಪಿ ಮಾರ್ಗಸೂಚಿ ಹೊರಡಿಸಲಾಗಿದೆ. ಗಣೇಶ ಮೂರ್ತಿ ತಯಾರಿಕೆಯಲ್ಲಿ ರಾಸಾಯನಿಕ ಬಣ್ಣಗಳು, ಥರ್ಮೋಕೋಲ್ ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಈ ವಸ್ತುಗಳನ್ನು ಬಳಸಿ ತಯಾರಿಸಿದ ವಿಗ್ರಹಗಳನ್ನು ವಶಪಡಿಸಿಕೊಳ್ಳಲಾಗುತ್ತದೆ ಮತ್ತು ನಿಯಮಗಳ ಪ್ರಕಾರ ವಿಲೇವಾರಿ ಮಾಡಲಾಗುತ್ತದೆ ಎಂದು ಬಿಬಿಎಂಪಿ ತಿಳಿಸಿದೆ.

ನೈಸರ್ಗಿಕವಾದ ಜೇಡಿಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾತ್ರ ತಯಾರಿಸಬೇಕೆಂದು ಬಿಬಿಎಂಪಿ ಸೂಚನೆ ನೀಡಿದೆ.

ಇದನ್ನೂ ಓದಿ
ಸಾಲು ಸಾಲು ಹಬ್ಬಗಳ ಹಿನ್ನಲೆ ಬೆಂಗಳೂರಿನಿಂದ ಈ ಸ್ಥಳಗಳಿಗೆ ವಿಶೇಷ ರೈಲು
‘ಈ ಸಲ ಕಪ್​​ ನಂದು’: ಆರ್​ಸಿಬಿ ಕಪ್​ ಹಿಡಿದು ಬಂದ ಗಣೇಶ, ಫೋಟೋಸ್​ ನೋಡಿ
ಗಣೇಶ ಚತುರ್ಥಿ ಯಾವಾಗ? ಪೂಜಾ ವಿಧಿ, ಶುಭ ಮುಹೂರ್ತ ಮತ್ತು ಶುಭ ಯೋಗಗಳ ಮಾಹಿತಿ
ಮುಂಬೈನ ಸುಪ್ರಸಿದ್ಧ ಲಾಲ್​ಬಾಗ್​ಚ ರಾಜ ಗಣಪನಿಗೆ ಸಖತ್ ಆದಾಯ

ಸಾರ್ವಜನಿಕ ಗಣೇಶೋತ್ಸವಗಳಿಗೆ ಅನುಮತಿ ಪ್ರಕ್ರಿಯೆ ಹೇಗೆ?

ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಅನುಮತಿಗಾಗಿ ಉಪವಿಭಾಗೀಯ ಮಟ್ಟದಲ್ಲಿ ನೋಡಲ್ ಅಧಿಕಾರಿಗಳಾಗಿ ನೇಮಕಗೊಂಡ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬೇಕು. ನೋಡಲ್ ಅಧಿಕಾರಿಗಳು ಅಗತ್ಯ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಏಕ-ಗವಾಕ್ಷಿ ವ್ಯವಸ್ಥೆಯ ಮೂಲಕ ತ್ವರಿತವಾಗಿ ಅನುಮೋದನೆಗಳನ್ನು ನೀಡುತ್ತಾರೆ ಎಂದು ಬಿಬಿಎಂಪಿ ತಿಳಿಸಿದೆ.

ಅನುಮತಿ ನೀಡುವ ಪ್ರಕ್ರಿಯೆಯನ್ನು ಸುಗಮಗೊಳಿಸಲು, ಬಿಬಿಎಂಪಿ ಮಿತಿಯೊಳಗಿನ ಉಪವಿಭಾಗೀಯ ಕಚೇರಿಗಳಲ್ಲಿ 75 ಏಕ-ಗವಾಕ್ಷಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಅನುಮೋದನೆಗಳನ್ನು ನೀಡಲು ಬಿಬಿಎಂಪಿ, ಪೊಲೀಸ್, ಬೆಸ್ಕಾಂ ಮತ್ತು ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಈ ಕೇಂದ್ರಗಳಲ್ಲಿ ಉಪಸ್ಥಿತರಿರುತ್ತಾರೆ ಎಂದು ಬಿಬಿಎಂಪಿ ಹೇಳಿದೆ.

ಗಣೇಶ ಮೂರ್ತಿಗಳ ವಿಸರ್ಜನೆ ಹೇಗೆ?

ಬಿಬಿಎಂಪಿ ಮಾರ್ಗಸೂಚಿ ಪ್ರಕಾರ, ನಾಗರಿಕರು ಸಣ್ಣ ಪರಿಸರ ಸ್ನೇಹಿ ವಿಗ್ರಹಗಳನ್ನು ಮನೆಯಲ್ಲಿಯೇ ಬಕೆಟ್​​ಗಳಲ್ಲಿ ಮುಳುಗಿಸಿ ನಂತರ ಜೇಡಿಮಣ್ಣನ್ನು ಗಾರ್ಡನಿಂಗ್​ಗಾಗಿ ಮರುಬಳಕೆ ಮಾಡಬಬೇಕು.

ಇದನ್ನೂ ಓದಿ: ‘ಈ ಸಲ ಕಪ್​​ ನಂದು’: ಆರ್​ಸಿಬಿ ಕಪ್​ ಹಿಡಿದು ಬಂದ ಗಣೇಶ, ಫೋಟೋಸ್​ ನೋಡಿ

ಸಾರ್ವಜನಿಕ ಗಣೇಶೋತ್ಸವಗಳ ಮೂರ್ತಿ ವಿಸರ್ಜನೆಗಾಗಿ ಬಿಬಿಎಂಪಿ ಪ್ರತಿ ವಾರ್ಡ್‌ನಲ್ಲಿ ಸ್ಥಳಗಳನ್ನು ಗೊತ್ತುಪಡಿಸುತ್ತದೆ. ವಾರ್ಡ್ ಮಿತಿಯಲ್ಲಿ ಸಂಚಾರಿ ವಿಸರ್ಜನಾ ಘಟಕಗಳನ್ನು ಸಹ ನಿಯೋಜಿಸಲಾಗುವುದು. ಈ ವ್ಯವಸ್ಥೆಗಳ ಕುರಿತು ಮಾಹಿತಿಯನ್ನು ಶೀಘ್ರದಲ್ಲೇ ಸಾರ್ವಜನಿಕರೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಬಿಬಿಎಂಪಿ ಮಾರ್ಗಸೂಚಿ ತಿಳಿಸಿದೆ. ಹಬ್ಬದ ಸಮಯದಲ್ಲಿ ಉತ್ಪತ್ತಿಯಾಗುವ ಯಾವುದೇ ಆರ್ದ್ರ ತ್ಯಾಜ್ಯವನ್ನು ಬಿಬಿಎಂಪಿಯ ತ್ಯಾಜ್ಯ ನಿರ್ವಹಣಾ ಘಟಕಗಳಲ್ಲಿ ಸಂಸ್ಕರಿಸಲಾಗುತ್ತದೆ ಎಂದು ಪಾಲಿಕೆ ತಿಳಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:08 am, Thu, 21 August 25