ಗಣೇಶ ಚತುರ್ಥಿ: ಮೆಜೆಸ್ಟಿಕ್ KSRTC ಬಸ್ ನಿಲ್ದಾಣದಲ್ಲಿ ಜನದಟ್ಟಣೆ, ಮೇಲ್ವಿಚಾರಣೆಗೆ ಹೆಚ್ಚುವರಿ ಸಿಬ್ಬಂದಿ ನಿಯೋಜನೆ
ಮೆಜೆಸ್ಟಿಕ್ನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಮೇಲ್ವಿಚಾರಣೆಗೆ ಕೆಎಸ್ಆರ್ಟಿಸಿಯು 50 ಹಿರಿಯ ಅಧಿಕಾರಿಗಳನ್ನು ನೇಮಿಸಿದೆ. ಈ ಅಧಿಕಾರಿಗಳು ಸೆ.18ರ ನಸುಕಿನ ಜಾವ 3 ಗಂಟೆಯವರೆಗೂ ಕಾರ್ಯನಿರ್ವಹಿಸುತ್ತಾರೆ.
ಬೆಂಗಳೂರು ಸೆ.17: ಗೌರಿ-ಗಣೇಶ ಹಬ್ಬದ (Ganesh Chaturthi) ಹಿನ್ನೆಲೆಯಲ್ಲಿ ಜನರು ತಮ್ಮ ತಮ್ಮ ಊರುಗಳಿಗೆ ತೆರಳಲು ಮೆಜೆಸ್ಟಿಕ್ನ (Majestic) ಕೆಎಸ್ಆರ್ಟಿಸಿ (KSRTC) ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ. ಹಬ್ಬದ ಹಿನ್ನೆಲೆ ಕೆಲಸ ಮುಗಿಸಿ ಊರುಗಳತ್ತ ಜನರು ಹೊರಟಿದ್ದಾರೆ. ವೀಕೆಂಡ್,ಹಬ್ಬದ ಹಿನ್ನೆಲೆ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದ್ದು, ಇದರಿಂದ ಜನದಟ್ಟಣೆ ಉಂಟಾಗಿದ್ದು, ನಿಯಂತ್ರಣಕ್ಕೆ ಕೆಎಸ್ಆರ್ಟಿಸಿಯ ಹಿರಿಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಗಲಾಟೆ, ನೂಕು ನುಗ್ಗಲು ನಡೆಯದಂತೆ ಹಿರಿಯ ಅಧಿಕಾರಿಗಳು ಮುಂಜಾಗೃತೆ ವಹಿಸಿದ್ದಾರೆ. ಹಬ್ಬದ ಹಿನ್ನಲೆ, ಒಂದು ಲಕ್ಷ ಪ್ರಯಾಣಿಕರು ಸಂಚಾರ ಮಾಡಲಿದ್ದಾರೆ ಎಂಬ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಬೇರೆ ಬೇರೆ ಜಿಲ್ಲೆಗಳಿಗೆ ಹೆಚ್ಚುವರಿ ಬಸ್ ಬಿಟ್ಟಿದೆ. ಹಬ್ಬಕ್ಕೆ 1200 ಹೆಚ್ಚುವರಿ ಬಸ್ ಗಳನ್ನು ಕೆಎಸ್ಆರ್ಟಿಸಿ ಬಿಟ್ಟಿದ್ದು, ಆದ್ರೂ ಬಹುತೇಕ ಬಸ್ ಗಳು ಹೌಸ್ ಫುಲ್ ಆಗಿವೆ. ಶಕ್ತಿಯೋಜನೆ ಎಫೆಕ್ಟ್ ನಿಂದ ಮಹಿಳೆಯರ ಸಂಖ್ಯೆ ಕೂಡ ಹೆಚ್ಚಳವಾಗಿದೆ.
ಇದನ್ನೂ ಓದಿ: ಗೌರಿ ಗಣೇಶ ಹಬ್ಬದ ಪ್ರಯುಕ್ತ ಕೆಎಸ್ಆರ್ಟಿಸಿಯಿಂದ 1200 ಹೆಚ್ಚುವರಿ ಬಸ್; ಇಲ್ಲಿದೆ ವಿವರ
ಬಿಎಂಟಿಸಿಯ 150 ಬಸ್, ಎನ್ಡಬ್ಲೂಕೆಆರ್ಟಿಸಿ 100, ಕೆಕೆಆರ್ಟಿಸಿ 100, ಕೆಎಸ್ಆರ್ಟಿಸಿ 850 ಹೆಚ್ಚುವರಿ ಬಸ್ಗಳನ್ನು ಕಾರ್ಯಾಚರಣೆಗೆ ಇಳಿಸಿದೆ. ಮೇಲ್ವಿಚಾರಣೆಗೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕೆಎಸ್ಆರ್ಟಿಸಿಯ 50 ಹಿರಿಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಈ ಅಧಿಕಾರಿಗಳು ಸೆ.18ರ ನಸುಕಿನ ಜಾವ 3 ಗಂಟೆಯವರೆಗೂ ಕಾರ್ಯನಿರ್ವಹಿಸುತ್ತಾರೆ. ಸಂಚಾರದಲ್ಲಿ ವ್ಯತ್ಯಯ ಆಗಬಾರದು ಎಂದು ಸಾರಿಗೆ ಇಲಾಖೆ ಈ ಪ್ಲಾನ್ ಮಾಡಿದೆ.
ಇನ್ನು ಶನಿವಾರ ಸಾಯಂಕಾಲದಿಂದ ಜನರು ತಮ್ಮ ಊರುಗಳಿಗೆ ತೆರಳುತ್ತಿದ್ದು, ಮೆಜೆಸ್ಟಿಕ್ ಸುತ್ತ-ಮುತ್ತ ಟ್ರಾಫಿಕ್ ಜಾಮ್ ಆಗಿತ್ತು. ಇದರಿಂದ ವಾಹನ ಸವಾರರು ಪರದಾಡುವಂತಾಯಿತು. ಗಂಟೆಗಟ್ಟಲ್ಲೇ ಜಾಮ್ನಲ್ಲಿ ನಿಂತು ಸವಾರರು ಸುಸ್ತಾಗಿ ಹೋದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:57 am, Sun, 17 September 23