
ಬೆಂಗಳೂರು, ಅಕ್ಟೋಬರ್ 14: ಬೆಂಗಳೂರು ಮಹಾನಗರದಲ್ಲಿ ಇತ್ತೀಚೆಗೆ ಜಾರಿಗೆ ತರಲಾದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ‘ಇ-ಆಸ್ತಿ 2.0’ ಹೊಸ ಸಾಫ್ಟ್ವೇರ್ ತಾಂತ್ರಿಕ ತೊಂದರೆಗಳಿಂದ ಸಂಪೂರ್ಣವಾಗಿ ವಿಫಲವಾಗಿದ್ದು, ಸಾರ್ವಜನಿಕರಿಗೆ ಭಾರೀ ತಲೆನೋವಾಗಿ ಪರಿಣಮಿಸಿದೆ. ಬಿ-ಖಾತೆಯಿಂದ ಎ-ಖಾತೆಗೆ ಬದಲಾಯಿಸಿಕೊಂಡವರು ಸೇರಿದಂತೆ ಸಾವಿರಾರು ಆಸ್ತಿ ಮಾಲೀಕರು ಕಳೆದ 18 ದಿನಗಳಿಂದ ಕೆಲಸ ಕಾರ್ಯಗಳಿಗಾಗಿ ಪಾಲಿಕೆ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೊಸ ಸಾಫ್ಟ್ವೇರ್ ಅಳವಡಿಕೆ ನಂತರ ದಾಖಲೆಗಳ ಪರಿಶೀಲನೆ ಅತ್ಯಂತ ಕಠಿಣವಾಗಿದೆ. ಆಸ್ತಿ ಮಾಲೀಕರ ಹೆಸರು, ವಿಳಾಸ ಅಥವಾ ರಸ್ತೆಯ ಹೆಸರಿನಲ್ಲಿ ಒಂದೇ ಒಂದು ಅಕ್ಷರ ವ್ಯತ್ಯಾಸವಿದ್ದರೂ ಅಥವಾ ಹಳೆಯ ದಾಖಲೆಗಳಿಗೂ ಹೊಸ ದಾಖಲೆಗಳಿಗೂ ಸಣ್ಣ ವ್ಯತ್ಯಾಸ ಕಂಡುಬಂದರೂ ಸಿಸ್ಟಂ ನೋಂದಣಿಯನ್ನು ತಕ್ಷಣವೇ ರಿಜೆಕ್ಟ್ ಮಾಡುತ್ತಿದೆ. ಇದರಿಂದಾಗಿ ಸಾವಿರಾರು ತಿದ್ದುಪಡಿ ಫೈಲ್ಗಳು ಪೆಂಡಿಂಗ್ ಬಿದ್ದಿದ್ದು, ನಗರದಲ್ಲಿ ಆಸ್ತಿ ಖರೀದಿ, ಮಾರಾಟ ಪ್ರಕ್ರಿಯೆ ಹಾಗೂ ಬ್ಯಾಂಕ್ ಲೋನ್ ವಿತರಣೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ಆಸ್ತಿ ದಾಖಲೆಗಳು ಸರಿಯಿಲ್ಲವೆಂದು ಬ್ಯಾಂಕ್ಗಳು ಸಾಲದ ಅರ್ಜಿಗಳನ್ನು ತಿರಸ್ಕರಿಸುತ್ತಿರುವುದರಿಂದ ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಈಡಾಗಿದ್ದು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಸಚಿವ ಕೃಷ್ಣ ಬೈರೇಗೌಡ ಅವರು ಇ-ಆಸ್ತಿ 2.0 ಮೂಲಕ ಎಲ್ಲಾ ಸೇವೆಗಳು ಒಂದೇ ಸೂರಿನಡಿ ಲಭ್ಯವಾಗಿ ವ್ಯವಸ್ಥೆ ಸುಲಭವಾಗಲಿದೆ ಎಂದು ಭರವಸೆ ನೀಡಿದ್ದರು. ಆದರೆ ಪ್ರಸ್ತುತ ವ್ಯವಸ್ಥೆಯಲ್ಲಿ ಗೊಂದಲ ಮೂಡಿರುವುದರಿಂದ ಜನರು ಪರದಾಡುವಂತಾಗಿದೆ.
ಈ ತಾಂತ್ರಿಕ ಸಮಸ್ಯೆಯ ಬಗ್ಗೆ ಪ್ರತಿಕ್ರಿಯಿಸಿರುವ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, “ಸರ್ವರ್ನಲ್ಲಿ ಹೊಸ ಸಾಫ್ಟ್ವೇರ್ ಹಾಗೂ ಹಳೆಯ ಡೇಟಾಗಳನ್ನು ಹೊಸ ಸಿಸ್ಟಂಗೆ ಅಪ್ಲೋಡ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಹೀಗಾಗಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದೆ. ಇನ್ನೊಂದು ವಾರದೊಳಗೆ 2.0 ಸಾಫ್ಟ್ವೇರ್ ತೊಂದರೆ ಬಗೆಹರಿದು ಎಲ್ಲಾ ಕಾರ್ಯಗಳು ಸುಗಮವಾಗಲಿವೆ” ಎಂದು ಭರವಸೆ ನೀಡಿದ್ದಾರೆ. ಆದರೆ ಅಧಿಕಾರಿಗಳ ಈ ಭರವಸೆ ಶೀಘ್ರದಲ್ಲೇ ಈಡೇರುತ್ತದೆಯೇ ಅಥವಾ ನಾಗರಿಕರ ಪರದಾಟ ಮುಂದುವರಿಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ