ಜಿಬಿಎ ಘನ ತ್ಯಾಜ್ಯ ಟೆಂಡರ್: IAS ಅಧಿಕಾರಿಗಳ ವಿರುದ್ಧ ಲಂಚ ಆರೋಪ, ಹೈಕೋರ್ಟ್ ಮೊರೆಹೋದ ಗುತ್ತಿಗೆದಾರ

ಜಿಬಿಎ ಘನ ತ್ಯಾಜ್ಯ ಟೆಂಡರ್‌ನಲ್ಲಿ ಐಎಎಸ್ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪ ಕೇಳಿಬಂದಿದೆ. ಈ ಕುರಿತಾಗಿ ಗುತ್ತಿಗೆದಾರ ಎಸ್.ಎನ್. ಬಾಲಸುಬ್ರಮಣಿಯನ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ಮಾಡಿದ ಹೈಕೋರ್ಟ್‌ ಏಕಸದಸ್ಯ ಪೀಠ ವಾದ ಪ್ರತಿವಾದವನ್ನು ಆಲಿಸಿ ವಿಚಾರಣೆಯನ್ನು ನಾಳೆಗೆ ಅಂದರೆ ಏಪ್ರಿಲ್​​ 24ಕ್ಕೆ ಮುಂದೂಡಿದೆ.

ಜಿಬಿಎ ಘನ ತ್ಯಾಜ್ಯ ಟೆಂಡರ್: IAS ಅಧಿಕಾರಿಗಳ ವಿರುದ್ಧ ಲಂಚ ಆರೋಪ, ಹೈಕೋರ್ಟ್ ಮೊರೆಹೋದ ಗುತ್ತಿಗೆದಾರ
ಹೈಕೋರ್ಟ್ (ಸಂಗ್ರಹ ಚಿತ್ರ)
Image Credit source: google
Edited By:

Updated on: Apr 23, 2026 | 3:31 PM

ಬೆಂಗಳೂರು, ಏಪ್ರಿಲ್​​ 23: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಘನತ್ಯಾಜ್ಯ ನಿರ್ವಹಣೆ ಟೆಂಡರ್ ಪ್ರಕ್ರಿಯೆಯಲ್ಲಿ ಹಿರಿಯ ಐಎಎಸ್ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಇದೀಗ ಪ್ರಕರಣ ಹೈಕೋರ್ಟ್ (High Court) ಮೆಟ್ಟಿಲೇರಿದೆ. ಐಎಎಸ್ ಅಧಿಕಾರಿಗಳಾದ ತುಷಾರ್ ಗಿರಿನಾಥ್ ಮತ್ತು ಕರಿಗೌಡ ವಿರುದ್ಧ ಲಂಚದ ಆರೋಪ ಮಾಡಿರುವ ಗುತ್ತಿಗೆದಾರ ಎಸ್.ಎನ್.ಬಾಲಸುಬ್ರಮಣಿಯನ್ ಸಲ್ಲಿಸಿದ್ದ ರಿಟ್ ಅರ್ಜಿ ಹೈಕೋರ್ಟ್​ ವಿಚಾರಣೆ ಕೈಗೆತ್ತಿಕೊಂಡಿದ್ದು, ಈ ವೇಳೆ ಸರ್ಕಾರದ ಪರವಾಗಿ ಎಜಿ ಶಶಿಕಿರಣ್ ಶೆಟ್ಟಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ವಾದ ಪ್ರತಿವಾದ ಆಲಿಸಿದ ಕೋರ್ಟ್, ವಿಚಾರಣೆಯನ್ನು ನಾಳೆಗೆ (ಏಪ್ರಿಲ್ 24) ಮುಂದೂಡಿದೆ.

ಶೇ. 15ರಷ್ಟು ಲಂಚ ನೀಡುವಂತೆ ಒತ್ತಡ

ಗುತ್ತಿಗೆದಾರ ಎಸ್.ಎನ್. ಬಾಲಸುಬ್ರಮಣಿಯನ್, ಸಿ.ವಿ. ರಾಮನ್ ನಗರ ಪ್ಯಾಕೇಜ್-1ರ ಟೆಂಡರ್‌ನಲ್ಲಿ ಎಲ್1 ಬಿಡ್‌ದಾರರಾಗಿದ್ದರು. ಆದರೆ, ಜಿಬಿಎ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮತ್ತು ಅಧಿಕಾರಿ ಕರಿಗೌಡ ಸರ್ಕಾರದ ಪರವಾಗಿ ಒಟ್ಟು ಗುತ್ತಿಗೆ ಮೊತ್ತದ ಶೇ. 15ರಷ್ಟು ಲಂಚ ನೀಡುವಂತೆ ಒತ್ತಡ ಹೇರಿದ್ದಾರೆ ಮತ್ತು ಹಣ ನೀಡದಿದ್ದರೆ ಟೆಂಡರ್ ರದ್ದುಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಅರ್ಜಿದಾರರ ಪರ ವಕೀಲ ಪಿ. ಪ್ರಸನ್ನ ಕುಮಾರ್ ವಾದ ಮಂಡಿಸಿದರು. ಲಂಚಕ್ಕೆ ಒಪ್ಪದ ಕಾರಣ ಮಾರ್ಚ್ 26ರಂದು ಟೆಂಡರ್ ರದ್ದುಪಡಿಸಲಾಗಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ವಾಹನ ತಪಾಸಣೆ ನಡೆಸಿ ಬಿಡಲು ಲಂಚಕ್ಕೆ ಬೇಡಿಕೆ: ಲೋಕಾಯುಕ್ತ ಬಲೆಗೆ ಬಿದ್ದ ಆರ್​​ಟಿಒ ಅಧಿಕಾರಿಗಳು

ಇನ್ನು ಸರ್ಕಾರದ ಪರವಾಗಿ ವಾದ ಮಾಡಿದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಗುತ್ತಿಗೆದಾರರ ಪರ ವಕೀಲರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಾರ್ಚ್ 10ರಂದು ಅಧಿಕಾರಿಗಳು ಲಂಚ ಕೇಳಿದ್ದಾರೆ ಎಂದು ಅರ್ಜಿದಾರರು ಹೇಳುತ್ತಿದ್ದಾರೆ, ಆದರೆ ಅಂದು ಅವರು ಬೆಂಗಳೂರಿನಲ್ಲಿ ಇರಲಿಲ್ಲ, ದೆಹಲಿಯಲ್ಲಿದ್ದರು. ಅದಕ್ಕೆ ಪೂರಕವಾಗಿ ವಿಮಾನ ಪ್ರಯಾಣದ ಬೋರ್ಡಿಂಗ್ ಪಾಸ್ ಇದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಹಿರಿಯ ಅಧಿಕಾರಿಗಳ ಮೇಲೆ ಸುಳ್ಳು ಆರೋಪ ಮಾಡಿರುವುದಕ್ಕೆ ಅರ್ಜಿಯನ್ನು ವಜಾಗೊಳಿಸುವಂತೆ ಮನವಿ ಮಾಡಿದರು.

ಇದನ್ನೂ ಓದಿ: ಇನ್ಸ್‌ಪೆಕ್ಟರ್​​​ನಿಂದಲೇ ಲಂಚ ಸ್ವೀಕರಿಸುತ್ತಿದ್ದ ಎಸ್‌ಡಿಎ ಲೋಕಾಯುಕ್ತ ಬಲೆಗೆ!

ಎಲ್ಲ ರೀತಿಯ ತನಿಖೆಗೂ ಸಿದ್ಧವಿರುವುದಾಗಿ ಅರ್ಜಿದಾರರ ವಕೀಲರು ತಿಳಿಸಿದ್ದು, ಲಂಚದ ಬೇಡಿಕೆ ಬಗ್ಗೆ ಪ್ರಮಾಣಪತ್ರ ಸಲ್ಲಿಸುವುದಾಗಿ ಹೇಳಿದ್ದಾರೆ. ವಾದ ಪ್ರತಿವಾದದ ಬಳಿಕ ಹೈಕೋರ್ಟ್‌ನ ಏಕಸದಸ್ಯ ಪೀಠವು ವಿಚಾರಣೆಯನ್ನು ನಾಳೆಗೆ ಅಂದರೆ ಏಪ್ರಿಲ್​ 23ಕ್ಕೆ ಮುಂದೂಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ರಮೇಶ್​ ಎಮ್​.

ರಮೇಶ್​ ಎಂ ವಿಶೇಷ ವರದಿಗಾರರಾಗಿದ್ದಾರೆ, ಮೂಲತಃ ಕಾನೂನು ಪದವೀಧರನಾಗಿದ್ದು ಕಳೆದ 18 ವರ್ಷಗಳಿಂದ ಟಿವಿ9 ಸುದ್ದಿ ವಾಹಿನಿಯಲ್ಲಿ ಕಾನೂನು ಸಂಬಂಧಿತ ವರದಿ ನೀಡುತ್ತಿದ್ದಾರೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಹಾಗೂ ವಿಚಾರಣಾ ನ್ಯಾಯಾಲಯಗಳ ಪ್ರಮುಖ ಪ್ರಕರಣಗಳ ವರದಿಗಾರಿಕೆ ಮಾಡುತ್ತಿದ್ದು, ಬೆಂಗಳೂರಿನ ನಿವಾಸಿಯಾಗಿದ್ದಾರೆ.

Read More
Loading...
Unable to load recommendations.
Follow Us