AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್ಟೀಮ್ ಮಾಲ್–ಪಶುವೈದ್ಯಕೀಯ ಕಾಲೇಜು ಸುರಂಗ ಯೋಜನೆಯಿಂದ 893 ಮರಗಳಿಗೆ ಕುತ್ತು? ಪರಿಸರವಾದಿಗಳ ಆತಂಕ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಎಸ್ಟೀಮ್ ಮಾಲ್‌ನಿಂದ ಪಶುವೈದ್ಯಕೀಯ ಕಾಲೇಜುವರೆಗಿನ 2.2 ಕಿ.ಮೀ. ಉದ್ದದ ಸುರಂಗ ಮಾರ್ಗಯೋಜನೆಗೆ ಉತ್ತರ ಬೆಂಗಳೂರಿನ ಸುಮಾರು 893 ಮರಗಳು ಬಲಿಯಾಗುವ ಭೀತಿ ಎದುರಾಗಿದೆ. ನಗರದ ಪ್ರಮುಖ ಹಸಿರು ವಲಯಕ್ಕೆ ಉಂಟಾಗಲಿರುವ ಹಾನಿಯ ಕುರಿತು ಪರಿಸರವಾದಿಗಳು ಹಾಗೂ ವಿಜ್ಞಾನಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಎಸ್ಟೀಮ್ ಮಾಲ್–ಪಶುವೈದ್ಯಕೀಯ ಕಾಲೇಜು ಸುರಂಗ ಯೋಜನೆಯಿಂದ 893 ಮರಗಳಿಗೆ ಕುತ್ತು? ಪರಿಸರವಾದಿಗಳ ಆತಂಕ
ಸುರಂಗ ಯೋಜನೆಯಿಂದ 893 ಮರಗಳಿಗೆ ಕುತ್ತು?
ಪ್ರಸನ್ನ ಹೆಗಡೆ
|

Updated on: Aug 05, 2026 | 3:29 PM

Share

ಬೆಂಗಳೂರು, ಆಗಸ್ಟ್​​ 05: ಎಸ್ಟೀಮ್ ಮಾಲ್‌ನಿಂದ ಪಶುವೈದ್ಯಕೀಯ ಕಾಲೇಜುವರೆಗೆ ನಿರ್ಮಾಣವಾಗಲಿರುವ 2.2 ಕಿ.ಮೀ. ಉದ್ದದ ಸುರಂಗ ಮಾರ್ಗ (ಟನಲ್) ಯೋಜನೆಯಿಂದ 893 ಮರಗಳಿಗೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ತಿಳಿಸಿದೆ. ಇದರಿಂದ ಉತ್ತರ ಬೆಂಗಳೂರಿನ ಪ್ರಮುಖ ಹಸಿರು ವಲಯಕ್ಕೆ ಧಕ್ಕೆ ಉಂಟಾಗಲಿದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಬಿಡಿಎ ಅಧಿಕಾರಿಗಳ ಪ್ರಕಾರ, ಯೋಜನೆಯಿಂದ ಪರಿಣಾಮ ಬೀರುವ 893 ಮರಗಳಲ್ಲಿ ಸುಮಾರು ಶೇ. 85ರಷ್ಟು ಮರಗಳನ್ನು ಸ್ಥಳಾಂತರ (Transplantation) ಮಾಡಲು ಉದ್ದೇಶಿಸಲಾಗಿದೆ. ಈ ಮರಗಳನ್ನು ವಿಶ್ವವಿದ್ಯಾಲಯದ ಆವರಣ ಹಾಗೂ ಬಿಡಿಎಗೆ ಸೇರಿದ ಜಾಗಗಳಿಗೆ ಸ್ಥಳಾಂತರಿಸುವ ಯೋಜನೆ ಇದೆ. ಆದರೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ಸುದರ್ಶನ್ ಅವರು, ಈ ಕುರಿತು ಬಿಡಿಎ ಇನ್ನೂ ಫಾರ್ಮ್–1 ಅಡಿಯಲ್ಲಿ ಸಂಪೂರ್ಣ ಅರ್ಜಿ ಸಲ್ಲಿಸಿಲ್ಲ ಎಂದು ತಿಳಿಸಿದ್ದಾರೆ. ಅರ್ಜಿ ಸಲ್ಲಿಸಿದ ಬಳಿಕ ಅರಣ್ಯ ಇಲಾಖೆ ಪರಿಶೀಲನೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ.

ಇದನ್ನೂ ಓದಿ: ಹೆಬ್ಬಾಳ ಜಂಕ್ಷನ್​​ನಲ್ಲಿ ಟ್ರಾಫಿಕ್​​ ಸಮಸ್ಯೆಗೆ ಮುಕ್ತಿ ನೀಡಲು ಮುಂದಾದ ಬಿಡಿಎ: ಟ್ವಿನ್ ಟನಲ್ ಯೋಜನೆಗೆ ಚಾಲನೆ

ಹಸಿರು ವಲಯಕ್ಕೆ ಧಕ್ಕೆ

ಈ ಸುರಂಗ ಮಾರ್ಗದ ಸಂರೇಖೆ (Alignment) ಪಶುವೈದ್ಯಕೀಯ ಕಾಲೇಜು ಆವರಣ, ಹೆಬ್ಬಾಳ ಮರಗಳ ಉದ್ಯಾನ (Tree Park), ಹೆಬ್ಬಾಳ ಕೆರೆಯ ಬಫರ್ ವಲಯ ಹಾಗೂ ಸುತ್ತಮುತ್ತಲಿನ ಶಿಕ್ಷಣ ಸಂಸ್ಥೆಗಳ ಆವರಣಗಳ ಮೂಲಕ ಹಾದು ಹೋಗುತ್ತದೆ. ಈ ಪ್ರದೇಶಗಳು ನಗರದಲ್ಲಿನ ಜೀವ ವೈವಿಧ್ಯ ಸಂರಕ್ಷಣೆಗೆ ಪ್ರಮುಖ ಆಶ್ರಯ ತಾಣಗಳಾಗಿವೆ. ಸ್ವತಂತ್ರ ಸಂಶೋಧಕ ಹಾಗೂ ಪರಿಸರ ಶಿಕ್ಷಣ ತಜ್ಞ ಹರೀಶ ಎ.ಎಸ್. ಅವರ ಪ್ರಕಾರ, ಈ ಹಸಿರು ಪ್ರದೇಶಗಳು ಪಕ್ಷಿಗಳು, ಚಿಟ್ಟೆಗಳು ಹಾಗೂ ಇತರ ವನ್ಯಜೀವಿಗಳಿಗೆ ಸುಮಾರು 10 ಕಿ.ಮೀ. ಉದ್ದದ ಹಸಿರು ಸಂಪರ್ಕ ಮಾರ್ಗವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದ್ದವು. ಆದರೆ, ಮೂಲಸೌಕರ್ಯ ಯೋಜನೆಗಳಿಂದ ಈ ನೈಸರ್ಗಿಕ ಸಂಪರ್ಕ ಈಗಾಗಲೇ ದುರ್ಬಲಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಮರ ಸ್ಥಳಾಂತರ ಯಶಸ್ವಿಯಾಗುವುದು ಅನುಮಾನ

ಪರಿಸರ ಮತ್ತು ಪರಿಸರಶಾಸ್ತ್ರ ಸಂಶೋಧನಾ ಸಂಸ್ಥೆ ATREEಗೆ ಸಂಬಂಧಿಸಿದ ವಿಜ್ಞಾನಿ ಹಾಗೂ ಸಸ್ಯಶಾಸ್ತ್ರಜ್ಞ ಗಣೇಶನ್ ಅವರು, ದೊಡ್ಡ ಮರಗಳ ಸ್ಥಳಾಂತರ ವೈಜ್ಞಾನಿಕ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಮಾತ್ರ ಯಶಸ್ವಿಯಾಗುತ್ತದೆ ಎಂದು ಹೇಳಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ ಮರಗಳ ಸ್ಥಳಾಂತರ ಕೇವಲ ಹೆಸರಿಗಷ್ಟೇ ನಡೆಯುತ್ತದೆ. ಇವು ಬಹುತೇಕ ಪ್ರೌಢ (ಮೆಚ್ಯೂರ್) ಮರಗಳಾಗಿದ್ದು, ಸ್ಥಳಾಂತರಕ್ಕೆ ಸೂಕ್ತವಾಗಿರುವುದಿಲ್ಲ. ಜಾತಿ ಆಧಾರಿತ ಮೌಲ್ಯಮಾಪನ, ಬೇರುಗಳ ಪೂರ್ವಸಿದ್ಧತೆ ಹಾಗೂ ಹಲವು ತಿಂಗಳ ನಿರ್ವಹಣೆ ಅಗತ್ಯವಿರುತ್ತದೆ. ಆದರೆ ಇಂತಹ ಕ್ರಮಗಳನ್ನು ಸಾಮಾನ್ಯವಾಗಿ ಅನುಸರಿಸುವುದಿಲ್ಲ,” ಎಂದು ಅವರು ತಿಳಿಸಿದ್ದಾರೆ. ಭಾರೀ ಯಂತ್ರಗಳ ಮೂಲಕ ಮರಗಳನ್ನು ಕಿತ್ತು ಸ್ಥಳಾಂತರಿಸುವಾಗ ಬೇರುಗಳು ಹಾಗೂ ಕೊಂಬೆಗಳು ಹಾನಿಗೊಳಗಾಗುವುದರಿಂದ ಅವು ಬದುಕುಳಿಯುವ ಸಾಧ್ಯತೆ ಬಹಳ ಕಡಿಮೆ ಎಂದು ಅವರು ಎಚ್ಚರಿಸಿರೋದಾಗಿ ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us