AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಚಿವ ರಾಮಲಿಂಗಾರೆಡ್ಡಿಗೆ ‘ಅರ್ಚಕರ ಕಣ್ಮಣಿ’ ಬಿರುದು ಸನ್ಮಾನ: ಮುಜರಾಯಿ ಖಾತೆ ನೀಡಲು ಸಿಎಂಗೆ ಅರ್ಚಕರ ಒಕ್ಕೂಟ ಮನವಿ

ಬೆಂಗಳೂರಿನಲ್ಲಿ ನಡೆದ ರಾಜ್ಯ ಮುಜರಾಯಿ ದೇಗುಲಗಳ ಅರ್ಚಕರ ಬೃಹತ್ ಸಮಾವೇಶದಲ್ಲಿ ಸಚಿವ ರಾಮಲಿಂಗಾರೆಡ್ಡಿಗೆ 'ಅರ್ಚಕರ ಕಣ್ಮಣಿ' ಬಿರುದು ನೀಡಿ ಸನ್ಮಾನಿಸಲಾಯಿತು. ಸಿಎಂ ಡಿ.ಕೆ. ಶಿವಕುಮಾರ್ ಭಾಗವಹಿಸಿದ್ದರು. ಮಳೆ-ಬೆಳೆಗಾಗಿ ರುದ್ರಜಪ, ಬಡ ಅರ್ಚಕರಿಗೆ ಮನೆಗಳು ಹಾಗೂ ರಾಮಲಿಂಗಾರೆಡ್ಡಿಗೆ ಮುಜರಾಯಿ ಖಾತೆ ಮರುಹಂಚಿಕೆ ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಯಿತು. ಅರ್ಚಕರು ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಸಚಿವ ರಾಮಲಿಂಗಾರೆಡ್ಡಿಗೆ 'ಅರ್ಚಕರ ಕಣ್ಮಣಿ' ಬಿರುದು ಸನ್ಮಾನ: ಮುಜರಾಯಿ ಖಾತೆ ನೀಡಲು ಸಿಎಂಗೆ ಅರ್ಚಕರ ಒಕ್ಕೂಟ ಮನವಿ
ರಾಮಲಿಂಗಾರೆಡ್ಡಿ ಸನ್ಮಾನ
Anil Kalkere
| Edited By: |

Updated on: Aug 05, 2026 | 3:02 PM

Share

ಬೆಂಗಳೂರು ಆ,5: ಕರ್ನಾಟಕ ರಾಜ್ಯ ಮುಜರಾಯಿ ದೇಗುಲಗಳ ಅರ್ಚಕರು, ಆಗಮಿಕರು ಹಾಗೂ ಮುಜರಾಯಿ ಇಲಾಖೆ ನೌಕರರ ಸಂಘದ ಆಶ್ರಯದಲ್ಲಿ ಬೆಂಗಳೂರಿನ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಇಂದು (ಆ.5) ನಡೆದ ‘ರಾಜ್ಯ ಮುಜರಾಯಿ ದೇಗುಲಗಳ ಅರ್ಚಕರ ಬೃಹತ್ ಸಮಾವೇಶ’ದಲ್ಲಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ‘ಅರ್ಚಕರ ಕಣ್ಮಣಿ’ ಬಿರುದು ನೀಡಿ ಭವ್ಯವಾಗಿ ಸನ್ಮಾನಿಸಲಾಯಿತು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಹಾಗೂ ಸಾವಿರಾರು ಅರ್ಚಕರು ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.

ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ರಾಜಗುರು ದ್ವಾರಕನಾಥ್, “ರಾಮಲಿಂಗಾರೆಡ್ಡಿ ಅವರು ಮುಜರಾಯಿ ಇಲಾಖೆಗೆ ಸಂಜೀವಿನಿಯಂತೆ ಕೆಲಸ ಮಾಡಿದ್ದಾರೆ. ಬಡ ಅರ್ಚಕರ ಸುದೀರ್ಘ ಸಮಸ್ಯೆಗೆ ಸ್ಪಂದಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಪ್ರಸ್ತುತ ಅವಧಿ ಸೇರಿದಂತೆ ಮುಂದಿನ 5 ವರ್ಷಗಳ ಕಾಲ ರಾಜ್ಯದ ಸಿಎಂ ಆಗಿ ಆಡಳಿತ ನಡೆಸಲಿ” ಎಂದು ಆಶೀರ್ವದಿಸಿದರು.

ರಾಜ್ಯದಲ್ಲಿ ಮಳೆ-ಬೆಳೆ ಚೆನ್ನಾಗಿ ಆಗಲು ಮೈಸೂರು ಮಹಾರಾಜರ ಕಾಲದ ಪದ್ಧತಿಯಂತೆ ರಾಜ್ಯದ 36,000 ಮುಜರಾಯಿ ದೇವಾಲಯಗಳಲ್ಲಿ ಅರ್ಚಕರಿಂದ ರುದ್ರಜಪ ಮಾಡಿಸಲು ಸರ್ಕಾರ ಸುತ್ತೋಲೆ ಹೊರಡಿಸಬೇಕು ಮತ್ತು ಉಸ್ತುವಾರಿಗೆ ಅಧಿಕಾರಿಗಳನ್ನು ನೇಮಿಸಬೇಕು ಎಂದು ರಾಜಗುರು ದ್ವಾರಕನಾಥ್ ಸರ್ಕಾರವನ್ನು ಒತ್ತಾಯಿಸಿದರು.

ಬಡ ಅರ್ಚಕರು ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಮನೆಗಳಿಲ್ಲದೆ ಕಷ್ಟಪಡುತ್ತಿರುವ ಜನರಿಗೆ ಸರ್ಕಾರ ಮನೆಗಳನ್ನು ಕಟ್ಟಿಸಿಕೊಡಬೇಕೆಂದು ವೇದಿಕೆಯಲ್ಲಿ ಮನವಿ ಮಾಡಲಾಯಿತು. ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮುಜರಾಯಿ ದೇವಾಲಯಗಳ ಅರ್ಚಕರ ಸಂಘದ ರಾಜ್ಯಾಧ್ಯಕ್ಷ ಶ್ರೀವತ್ಸ ಅವರು, ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮತ್ತೆ ಮುಜರಾಯಿ ಖಾತೆಯನ್ನು ವಹಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಹಿರಂಗವಾಗಿ ಮನವಿ ಸಲ್ಲಿಸಿದರು.

ಇದನ್ನೂ ಓದಿ: ‘ಕೈ’ ಮನೆಯಲ್ಲಿ ತಾರಕಕ್ಕೇರಿದ ಅಸಮಾಧಾನ: ವಿಪಕ್ಷದ ಸಾಲಿನಲ್ಲಿ ಆಸನ ಕೇಳಲು ಮುಂದಾದ ಜಯಚಂದ್ರ, ಹೆಚ್​ಡಿಕೆ ನಡೆ ಸ್ಮರಿಸಿದ ಎಸ್​ಆರ್ ಶ್ರೀನಿವಾಸ್​

ಸಾಲು ಸಾಲು ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದ ಅವರು, “ನಮ್ಮ ಅರ್ಚಕರ ಸಂಘದ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿದರೆ ಮುಂದಿನ 10 ವರ್ಷಗಳ ಕಾಲ ನೀವೇ ರಾಜ್ಯದ ಮುಖ್ಯಮಂತ್ರಿಯಾಗಿ ಇರುತ್ತೀರಿ” ಎಂದು ಸಿಎಂ ಅವರಿಗೆ ಶುಭ ಹಾರೈಸಿದರು. ಈ ವೇಳೆ ನೆರೆದಿದ್ದ ಅರ್ಚಕರು ರಾಮಲಿಂಗಾರೆಡ್ಡಿ ಅವರಿಗೆ ಮುಜರಾಯಿ ಖಾತೆ ನೀಡುವಂತೆ ಘೋಷಣೆಗಳನ್ನು ಕೂಗಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us