ದುಬೈಯಿಂದ 3.44 ಕೋಟಿ ರೂ. ಮೌಲ್ಯದ ಚಿನ್ನ ಕಳ್ಳಸಾಗಣೆ: ರನ್ಯಾ ಬಂಧನದ ಮರುದಿನವೇ ಅಂಧ ವ್ಯಕ್ತಿ ಅರೆಸ್ಟ್
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಬಂಧನವಾದ ಮರುದಿನವೇ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಂಧ ವ್ಯಕ್ತಿಯೊಬ್ಬನ್ನು ಗೋಲ್ಡ್ ಸ್ಮಗ್ಲಿಂಗ್ ಮಾಡುತ್ತಿದ್ದಾಗ ಬಂಧಿಸಲಾಗಿದೆ. ಈತ ಕೂಡ ದುವೈಯಿಂದಲೇ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ. ದೃಷ್ಟಿಹೀನ ವ್ಯಕ್ತಿಯಿಂದ ಸುಮಾರು 3.44 ಕೋಟಿ ರೂ. ಮೌಲ್ಯದ ಚಿನ್ನ ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರು, ಮಾರ್ಚ್ 8: ದುಬೈನಿಂದ 3.44 ಕೋಟಿ ರೂ. ಮೌಲ್ಯದ ಚಿನ್ನ ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಅಂಧ ವ್ಯಕ್ತಿಯೊಬ್ಬರನ್ನು ಬೆಂಗಳೂರು ಏರ್ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಶಂಕಿತನ ಗುರುತನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಗುಪ್ತಚರ ಇಲಾಖೆಯಿಂದ ದೊರೆತ ಖಚಿತ ಮಾಹಿತಿ ಮೇರೆಗೆ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಮಾರ್ಚ್ 4 ರಂದು ಸ್ಮಗ್ಲಿಂಗ್ ಪ್ರಕರಣ ಬಯಲಿಗೆಳೆದಿದ್ದಾರೆ.
ದುಬೈನಿಂದ ಆಗಮಿಸಿದ ಅಂಧ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ತಡೆದಿದ್ದಾರೆ. ಶೋಧದ ಸಮಯದಲ್ಲಿ ಅಧಿಕಾರಿಗಳಿಗೆ, ಅಂಧ ವ್ಯಕ್ತಿಯ ಶರ್ಟ್ ಒಳಗೆ ಅಡಗಿಸಿಟ್ಟಿದ್ದ 3.995 ಕೆಜಿ ಚಿನ್ನ ಪತ್ತೆಯಾಗಿದೆ.
3,44,38,796 ರೂ. ಮೌಲ್ಯದ ಚಿನ್ನವನ್ನು ಶಂಕಿತನ ಅಂಗಿಯ ಒಳಗಡೆ ಮರೆಮಾಡಲಾಗಿತ್ತು ಎಂದು ಕಸ್ಟಮ್ಸ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಚಿನ್ನ ಕಳ್ಳಸಾಗಣೆ ಸಂಬಂಧಿತ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅಂಧ ವ್ಯಕ್ತಿಯು ಒಬ್ಬನೇ ಈ ಕೃತ್ಯ ಎಸಗಿದ್ದಾನೆಯೇ ಅಥವಾ ಆತನ ಹಿಂದೆ ಬೇರೆಯವರ ಕೈವಾಡ ಇದೆಯೇ ಎಂಬುದನ್ನು ಪತ್ತೆಹಚ್ಚಲು ತನಿಖೆ ನಡೆಸಲಾಗುತ್ತಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಕನ್ನಡ ನಟಿ ರನ್ಯಾ ರಾವ್ ಅವರನ್ನು ಕೆಐಎಯಲ್ಲಿ ಬಂಧಿಸಿದ ಒಂದು ದಿನದ ನಂತರ ಅಂಧ ವ್ಯಕ್ತಿಯ ಬಂಧನವಾಗಿರುವುದು ಗಮನಾರ್ಹ. ನಟಿ 12.56 ಕೋಟಿ ರೂ. ಮೌಲ್ಯದ 14.2 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿರುವುದು ಬಯಲಾಗಿತ್ತು.
ಇದನ್ನೂ ಓದಿ: ಹೇಗಿದ್ದ ರನ್ಯಾ ರಾವ್ ಹೇಗಾದ್ರು ನೋಡಿ: ಜೈಲು ಸೇರಿದ ಎರಡೇ ದಿನಕ್ಕೆ ಮಂಕಾದ ನಟಿ
ಸದ್ಯ, ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿ ಇದ್ದ ನಟಿ ರನ್ಯಾ ರಾವ್ ಅನ್ನು ಡಿಆರ್‌ಐ ಕಸ್ಟಡಿಗೆ ಒಪ್ಪಿಸಿ ಆರ್ಥಿಕ ಅಪರಾಧಗಳ ನ್ಯಾಯಾಲಯ ಈ ಶುಕ್ರವಾರ ಆದೇಶ ನೀಡಿತ್ತು. ಮೂರು ದಿನಗಳ ಕಾಲ ಅವರನ್ನು ಡಿಆರ್‌ಐ ಕಸ್ಟಡಿಗೆ ನೀಡಲಾಗಿದ್ದು, ತನಿಖೆ ತೀವ್ರಗೊಳ್ಳಲಿದೆ. ನಟಿ ರನ್ಯಾ ಹೈ ಪ್ರೊಫೈಲ್ ಕುಟುಂಬದವರಾದ್ದರಿಂದ ಅವರಿಗೆ ಹಲವು ಪ್ರಭಾವಿ ವ್ಯಕ್ತಿಗಳ ಜೊತೆ ಸಂಪರ್ಕ ಇರುವ ಸಾಧ್ಯತೆ ಇದೆ. ಅವರ ಮಲತಂದೆ ಡಿಜಿಪಿ ಕೆ. ರಾಮಚಂದ್ರ ರಾವ್. ಹಾಗಾಗಿಯೇ ಅವರು ಚಿನ್ನ ಕಳ್ಳ ಸಾಗಾಣೆ ವೇಳೆ ಹಲವು ಬಾರಿ ಭದ್ರತಾ ತಪಾಸಣೆಯಿಂದ ತಪ್ಪಿಸಿಕೊಂಡಿರುವ ಸಾಧ್ಯತೆ ಇದೆ. ಹೀಗಾಗಿ ಪ್ರಕರಣದ ತನಿಖೆಯನ್ನು ವಿವಿಧ ಆಯಾಮಗಳಲ್ಲಿ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಯಾರೆಲ್ಲ ಶಾಮೀಲಾಗಿದ್ದಾರೆ ಎಂಬುದನ್ನು ತಿಳಿಯಲು ಡಿಆರ್‌ಐ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ.