ಬೆಂಕಿ ಆರಿಸಲು ಬಂತು ವಿಶಿಷ್ಟ ಡ್ರೋನ್‌; ಬೆಂಗಳೂರಿನ ಇಂಜಿನಿಯರಿಂಗ್‌ ವಿದ್ಯಾರ್ಥಿಗಳ ಹೊಸ ಆವಿಷ್ಕಾರ

|

Updated on: Jun 15, 2024 | 6:32 PM

ವಿಶ್ವದೆಲ್ಲೆಡೆ ಅಗ್ನಿ ಅವಘಡಗಳು ಘಟಿಸುತ್ತಲೇ ಇರುತ್ತವೆ. ಇಂತಹ ಸಂದರ್ಭಗಳಲ್ಲಿ ಬೆಂಕಿ ನಂದಿಸುವ ಸ್ಥಳಕ್ಕೆ ಅಗ್ನಿಶಾಮಕ ವಾಹನಗಳು ತಲುಪುವಷ್ಟರಲ್ಲೇ ಸಾವು ಕೂಡ ಸಂಭವಿಸಿದ ಉದಾಹರಣೆಗಳಿವೆ. ಹೀಗಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿಯೇ ಬೆಂಗಳೂರಿನ ಗೋಪಾಲನ್‌ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌‌ ಮತ್ತು ಮ್ಯಾನೇಜ್‌ ಮೆಂಟ್(Gopalan College of Engineering and Management) ವಿದ್ಯಾರ್ಥಿಗಳು ವಿಶಿಷ್ಟ ಡ್ರೋನ್‌ ಆವಿಷ್ಕರಿಸಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.

ಬೆಂಕಿ ಆರಿಸಲು ಬಂತು ವಿಶಿಷ್ಟ ಡ್ರೋನ್‌; ಬೆಂಗಳೂರಿನ ಇಂಜಿನಿಯರಿಂಗ್‌ ವಿದ್ಯಾರ್ಥಿಗಳ ಹೊಸ ಆವಿಷ್ಕಾರ
ಬೆಂಗಳೂರಿನ ಇಂಜಿನಿಯರಿಂಗ್‌ ವಿದ್ಯಾರ್ಥಿಗಳ ಹೊಸ ಆವಿಷ್ಕಾರ
Follow us on

ಬೆಂಗಳೂರು, ಜೂ.15: ವಿಶ್ವದೆಲ್ಲೆಡೆ ಅಗ್ನಿ ಅವಘಡಗಳು ಘಟಿಸುತ್ತಲೇ ಇರುತ್ತವೆ. ಇಂತಹ ಸಂದರ್ಭಗಳಲ್ಲಿ ಬೆಂಕಿ ನಂದಿಸುವ ಸ್ಥಳಕ್ಕೆ ಅಗ್ನಿಶಾಮಕ ವಾಹನಗಳು ತಲುಪುವಷ್ಟರಲ್ಲೇ ಸಾವು ಕೂಡ ಸಂಭವಿಸಿದ ಉದಾಹರಣೆಗಳಿವೆ. ಹಾಗೆಯೇ ಬಹುಮಹಡಿ ಕಟ್ಟಡಗಳಿಗೆ ಅಂಟಿಕೊಂಡ ಬೆಂಕಿಯನ್ನು ನಂದಿಸುವುದು ಸವಾಲಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿಯೇ ಬೆಂಗಳೂರಿನ ಗೋಪಾಲನ್‌ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌‌ ಮತ್ತು ಮ್ಯಾನೇಜ್‌ ಮೆಂಟ್(Gopalan College of Engineering and Management) ವಿದ್ಯಾರ್ಥಿಗಳು ವಿಶಿಷ್ಟ ಡ್ರೋನ್‌ ಆವಿಷ್ಕರಿಸಿದ್ದು, ಆ ಮೂಲಕ ಯಶಸ್ವಿಯಾಗಿ ಬೆಂಕಿ ನಂದಿಸಬಹುದಾಗಿದೆ.

ಡ್ರೋನ್‌ ಬಳಸಿ ಅದ್ಭುತ ಮಾದರಿ

ನಗರದಲ್ಲಿ ಗೋಪಾಲನ್ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ ಮೆಂಟ್ ಆಯೋಜಿಸಿದ್ದ ಎರಡು ದಿನಗಳ ಗ್ರೋಯಿಂಗ್ ಎಲೆಕ್ಟ್ರಾನಿಕ್ಸ್ ಟೆಕ್ನಾಲಜಿ ಓರಿಯೆಂಟೆಡ್ ಕಾಂಗ್ರೆಗೇಷನ್ ಸ್ಟೇಜ್ (GETOCS 4.0)ದಲ್ಲಿ ವಿದ್ಯಾರ್ಥಿಗಳು ಬೆಂಕಿ ನಂದಿಸುವ ಬಾಲ್‌ಗಳನ್ನು ಹೊಂದಿದ ಡ್ರೋನ್‌ಗಳನ್ನು ಬಳಸಿ ಅದ್ಭುತ ಮಾದರಿಯನ್ನು ಪ್ರದರ್ಶಿಸಿದರು. ಈ ವಿನೂತನ ಮಾದರಿಯಿಂದ ಬೆಂಕಿಯನ್ನು ತ್ವರಿತವಾಗಿ ನಂದಿಸಬಹುದಾಗಿದೆ. ಇದರಿಂದಾಗಿ ಜೀವಗಳನ್ನು ರಕ್ಷಿಸುವುದರ ಜೊತೆಗೆ ಕಟ್ಟಡಗಳಿಗೆ ಆಗುವ ಹಾನಿಯನ್ನು ಕೂಡ ತಡೆಯುತ್ತದೆ ಮತ್ತು ಪರಿಸರವನ್ನು ರಕ್ಷಿಸುತ್ತದೆ.

ಇದನ್ನೂ ಓದಿ:ಬಂಡೀಪುರ: ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಕ್ಯಾಮೆರಾ, ಡ್ರೋನ್​ ಚಿತ್ರೀಕರಣ ನಿಷೇಧ

ಈ ಡ್ರೋನ್‌ಗಳ ಕ್ಷಿಪ್ರ ನಿಯೋಜನೆಯಿಂದ ಹತ್ತಿರದ ಪ್ರದೇಶಗಳಿಗೆ ಬೆಂಕಿ ಹರಡುವುದನ್ನು ತಪ್ಪಿಸಬಹುದಾಗಿದೆ. ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾದ ಮಾದರಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಮಾದರಿಯನ್ನ ನೋಡಿದ ತಜ್ಞರು, ನಾವು ನೋಡಿದ ಅತ್ಯುತ್ತಮ ಪ್ರಾತ್ಯಕ್ಷಿಕೆ ಇದಾಗಿದೆ ಎಂದು ವಿದ್ಯಾರ್ಥಿಗಳ ಈ ಅನ್ವೇಷಣೆಯನ್ನು ಶ್ಲಾಘಿಸಿದರು. ಈ  ವೇಳೆ ಮಾತನಾಡಿದ ನಿವೃತ್ತ ಹೆಚ್ಚುವರಿ ನಿರ್ದೇಶಕ ಎಲ್‌ಆರ್‌ಡಿಇ, ಡಿಆರ್‌ಡಿಒ ಮತ್ತು ಬೆಂಗಳೂರು ಐಇಟಿಇ, ಮಾಜಿ ಅಧ್ಯಕ್ಷ ಪ್ರೊ. ಹರ್ಜಿಂದರ್ ಸಿಂಗ್ ಭಾಟಿಯಾ, ‘ಶೈಕ್ಷಣೀಕ ಅನ್ವೇಷಣೆಗಳ ಹೊರತಾಗಿ, ಎಲೆಕ್ಟ್ರಾನಿಕ್ಸ್ ಹಾರ್ಡ್‌ವೇರ್ ಯೋಜನೆಗಳು ಪ್ರಸ್ತುತ ಸಮಾಜದ ಅಗತ್ಯ ಮತ್ತು ಸವಾಲುಗಳನ್ನು ಪ್ರತಿನಿಧಿಸುವಂತಾಗಬೇಕು. ಇವುಗಳು ಕಡಿಮೆ-ವೆಚ್ಚದ ವೈದ್ಯಕೀಯ ಸಾಧನಗಳನ್ನು ಅಭಿವೃದ್ಧಿಪಡಿಸುವುದಾಗಲಿ, ಪರಿಸರ ಮೇಲ್ವಿಚಾರಣಾ ವ್ಯವಸ್ಥೆಗಳನ್ನು ಹೆಚ್ಚಿಸುವುದಾಗಲಿ ಅಥವಾ ಗ್ರಾಹಕ ಬಳಕೆಯ ವಿನೂತನ ಎಲೆಕ್ಟ್ರಾನಿಕ್ಸ್ ಉಪಕರಣ ಅನ್ವೇಷಿಸುವುದಾಗಿರಲಿ, ಈ ಯೋಜನೆಗಳು ನಮ್ಮ ಸುತ್ತಲಿನ ಜನರ ಜೀವನದ ಮೇಲೆ ಅರ್ಥಪೂರ್ಣ ಪರಿಣಾಮವನ್ನು ಬೀರುವ ಸಾಮರ್ಥ್ಯವನ್ನು ಹೊಂದಿರಬೇಕು ಎಂದರು.

ಮುಂಬರುವ ವರ್ಷಗಳಲ್ಲಿ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಅದ್ಭುತ ಭವಿಷ್ಯ

ಇದೇ ವೇಳೆ ನಾನು ವಿದ್ಯಾರ್ಥಿಗಳಿಗೆ ನೀಡುವ ಸಲಹೆಯೆಂದರೆ, ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಶನ್ ಇಂಜಿನಿಯರ್‌ ಸಂಸ್ಥೆಯಲ್ಲಿ(IETE) ಸದಸ್ಯತ್ವ ಪಡೆಯುವುದರಿಂದ, ISRO, DRDO, LRDE ಮತ್ತು ಇತರ ಸಂಸ್ಥೆಗಳ ವಿವಿಧ ಉಚಿತ ಕೋರ್ಸ್‌ಗಳ ಪ್ರಯೋಜನ ಪಡೆಯಬಹುದಾಗಿದೆ. ಮುಂಬರುವ ವರ್ಷಗಳಲ್ಲಿ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಅದ್ಭುತ ಭವಿಷ್ಯ ಅಡಗಿದೆ ಎಂಬುದನ್ನ ಒತ್ತಿ ಹೇಳುತ್ತೇನೆ ಎಂದರು.

ಇದನ್ನೂ ಓದಿ:ನಮ್ಮ ಮೆಟ್ರೋ ಹೊಸ ತಂತ್ರಜ್ಞಾನ ಬಳಕೆ; ಬಾಕ್ಸ್ ಆಕಾರದಲ್ಲಿ ಕಾಮಗಾರಿ

GETOCS 4.0, ಗೋಪಾಲನ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ (EC) ವಿಭಾಗವು ನಡೆಸಿದ ಕಾರ್ಯಕ್ರಮವಾಗಿದ್ದು, ಇಲ್ಲಿ ದಾಖಲಾತಿಗಳ ಪ್ರಸ್ತುತಿ, ರೊಬೊಟಿಕ್ ಸ್ಪರ್ಧೆಗಳು, ಸರ್ಕ್ಯೂಟ್ ಡೀಬಗ್ ಮಾಡುವುದು, ಪ್ರಾಜೆಕ್ಟ್ ಪ್ರದರ್ಶನಗಳು, ತಾಂತ್ರಿಕ ರಸಪ್ರಶ್ನೆ ಮತ್ತು ಚರ್ಚೆಗಳಂತಹ ವಿವಿಧ ಚಟುವಟಿಕೆಗಳ ಮೂಲಕ ಭಾಗವಹಿಸುವವರು ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಅವಕಾಶವನ್ನು ಒದಗಿಸಿತ್ತು. ಈ ಎಲ್ಲಾ ಸ್ಪರ್ಧೆಗಳಿಗೆ ತೀರ್ಪುಗಾರರಾಗಿ ಹೊರಗಿನಿಂದ ವ್ಯಕ್ತಿಗಳನ್ನು ಆಹ್ವಾನಿಸಲಾಗಿತ್ತು. ಗುರುವಾರ (ಜೂ.13)ದಂದು ಮುಕ್ತಾಯಗೊಂಡ ಈ ವಾರ್ಷಿಕ ಎರಡು ದಿನಗಳ ಕಾರ್ಯಕ್ರಮವು ಯಾವುದೇ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸಿ ಕೊಟ್ಟಿತ್ತು.

30 ಲಕ್ಷ ರೂ. ವೆಚ್ಚದಲ್ಲಿ ನೂತನ ಪ್ರಯೋಗಾಲಯ ಸ್ಥಾಪನೆ ಗುರಿ

GETOCS 4.0 ನ ಪ್ರಾಥಮಿಕ ಕಾರ್ಯಸೂಚಿಯು ವಿದ್ಯಾರ್ಥಿಗಳ ಬೆಳವಣಿಗೆ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜಿಸುವುದು, ಸಾಮಾಜಿಕ ಆರೋಗ್ಯವನ್ನು ಹೆಚ್ಚಿಸುವುದು ಮತ್ತು ಹೆಚ್ಚಿನ ಸಂಶೋಧನೆ-ಆಧಾರಿತ ಯೋಜನೆಗಳನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ. ಗೋಪಾಲನ್ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ.ಸಿ.ಪ್ರಭಾಕರ್ ಅವರು ಮಾತನಾಡಿ ‘ನಮ್ಮ ವಿದ್ಯಾರ್ಥಿಗಳು ಕೈಗಾರಿಕೆಗಳಿಗೆ ಪ್ರಯೋಜನಕಾರಿಯಾದ ನವೀನ ಯೋಜನೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. ನಾವು ಗುಣಮಟ್ಟದ ಯೋಜನೆಗಳತ್ತ ಗಮನಹರಿಸುತ್ತಿದ್ದೇವೆ ಮತ್ತು ರಾಷ್ಟ್ರಕ್ಕೆ ನೆರವಾಗುವಂತಹ ಯೋಜನೆಗಳಿಗೆ ಆರ್ಥಿಕ ಸಹಾಯ ಮಾಡುತ್ತಿದ್ದೇವೆ. ಹೆಚ್ಚುವರಿಯಾಗಿ, ನಾವು 30 ಲಕ್ಷ ರೂ. ದೊಂದಿಗೆ ಗೋಪಾಲನ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಇಂಟೆಲ್ ಪ್ರಯೋಗಾಲಯವನ್ನು ಸ್ಥಾಪಿಸುತ್ತಿದ್ದೇವೆ. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಾಧನೆಗಳ ಜೊತೆಗೆ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವುದು ಕೂಡ ನಿರ್ಣಾಯಕವಾಗಿದೆ, ”ಎಂದು ಹೇಳಿದರು.

ಗೋಪಾಲನ್ ಇನ್‌ಸ್ಟಿಟ್ಯೂಷನ್ಸ್ ಸಿಇಒ ಡಾ. ಭಾಸ್ಕರ್ ರೆಡ್ಡಿ ಸಿ.ಎಂ. ಮಾತನಾಡಿ, ” GETOCS.4.0 ಕಾರ್ಯಕ್ರಮವನ್ನು ಇಸಿಇ ವಿಭಾಗವು ಆಯೋಜಿಸಿದ್ದಕ್ಕಾಗಿ ನಾನು ಅಭಿನಂದಿಸುತ್ತೇನೆ. ಈ ರೀತಿಯ ಕಾರ್ಯಕ್ರಮವು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಜ್ಞಾನವನ್ನು ಒರೆಗೆ ಹಚ್ಚುತ್ತದೆ,” ಎಂದರು. ಬಳಿಕ ಗೋಪಾಲನ್ ಕಾಲೇಜ್ ಆಫ್ ಎಂಜಿನಿಯರಿಂಗ್‌‌ ಮತ್ತು ಮ್ಯಾನೇಜ್‌ ಮೆಂಟ್​ನ ಪ್ರಾಂಶುಪಾಲ ಡಾ. ಅರುಣ್ ವಿಕಾಸ್ ಸಿಂಗ್, ‘ಪ್ರತಿಷ್ಠಿತ ಕಂಪನಿಗಳಲ್ಲಿ ವಿದ್ಯಾರ್ಥಿಗಳ ಉದ್ಯೋಗಾವಕಾಶವನ್ನು ಹೆಚ್ಚಿಸಲು ನಿಯಮಿತ ಶೈಕ್ಷಣಿಕ ತರಗತಿಗಳ ಜೊತೆಗೆ ಹೆಚ್ಚುವರಿ ಕೌಶಲ್ಯಗಳನ್ನು ಪಡೆದುಕೊಳ್ಳುವ ಪ್ರಾಮುಖ್ಯತೆಯನ್ನು ಮನವರಿಕೆ ಮಾಡಿಕೊಟ್ಟರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ