
ಬೆಂಗಳೂರು, ನ. 24: ರಾಜ್ಯ ರಾಜಕಾರಣ ಹಾಗೂ ಆಡಳಿತ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಹಾಸನ ಜಿಲ್ಲಾಧಿಕಾರಿ ಕಚೇರಿಯ ‘ಲಂಚದ ವಾಟ್ಸ್‌ಆ್ಯಪ್ ಚಾಟ್’ ಪ್ರಕರಣ ಬಗ್ಗೆ ಹೊಸ ತಿರುವು ಸಿಕ್ಕಿದೆ. ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರ ಆಪ್ತ ಸಹಾಯಕ ಶಶಿಕಿರಣ್ ನೀಡಿದ್ದ ದೂರಿನ ಆಧಾರದ ಮೇಲೆ, ಸೈಬರ್ ಕಮಾಂಡ್ ಸೆಂಟರ್ ಪೊಲೀಸರು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.
ಕಳೆದ ನವೆಂಬರ್ 8ರಂದು ಹಾಸನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, ಹಾಸನ ಜಿಲ್ಲಾಡಳಿತದಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರಿಂದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು 75 ಲಕ್ಷ ರೂ. ಲಂಚ ಪಡೆದಿದ್ದಾರೆ ಎಂದು ಆರೋಪಿಸಿದ್ದ ಹೆಚ್ಡಿಕೆ, ಡಿಸಿ ಆಪ್ತ ಸಹಾಯಕ ಶಶಿಕಿರಣ್ ಹಾಗೂ ಮಧ್ಯವರ್ತಿಯೊಬ್ಬರ ನಡುವೆ ನಡೆದಿದೆ ಎನ್ನಲಾದ ವಾಟ್ಸ್‌ಆ್ಯಪ್ ಚಾಟ್ ಸ್ಕ್ರೀನ್‌ಶಾಟ್‌ಗಳನ್ನು ಮಾಧ್ಯಮಗಳ ಮುಂದೆ ಓದಿ ಬಹಿರಂಗಪಡಿಸಿದ್ದರು. ತಮಗೆ ಬಂದಿರುವ ಈ ಚಾಟ್ ಬಗ್ಗೆ ಸರ್ಕಾರ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿ ಎಂದು ಅವರು ಆಗ್ರಹಿಸಿದ್ದರು.
ಈ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದ ಹಾಸನ ಡಿಸಿ ಪಿಎ ಶಶಿಕಿರಣ್, ತಮ್ಮ ಹೆಸರು ಮತ್ತು ಫೋನ್ ನಂಬರ್ ಬಳಸಿ ಎಐ ತಂತ್ರಜ್ಞಾನದ ಮೂಲಕ ನಕಲಿ ವಾಟ್ಸ್‌ಆ್ಯಪ್ ಚಾಟ್ ಸೃಷ್ಟಿಸಿ ವೈರಲ್ ಮಾಡಲಾಗಿದೆ ಎಂದು ಆರೋಪಿಸಿ ಹಾಸನ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನನ್ವಯ ಭಾರತೀಯ ನ್ಯಾಯ ಸಂಹಿತೆ ಕಲಂ 335 ಮತ್ತು 336(4) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು, ತನಿಖೆಯ ಭಾಗವಾಗಿ ನಕಲಿ ಚಾಟ್ ಮೂಲದ ಕುರಿತು ಮಾಹಿತಿ ಪಡೆಯಲು ಇದೀಗ ಸೈಬರ್ ಕಮಾಂಡ್ ಸೆಂಟರ್ ಮೂಲಕ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ನೋಟಿಸ್ ನೀಡಿದ್ದಾರೆ.
ಇದನ್ನೂ ಓದಿ: ಮಂಡ್ಯ – ರಾಮನಗರ ಕೆಡಿಪಿ ಸಭೆ: “ಅದೇನು ಲವ್ ಲೆಟರಾ 7 ನೋಟೀಸ್ ಕೊಟ್ಟಿದ್ದೀರಾ?”; ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಸಚಿವ
ಹೆಚ್.ಡಿ. ಕುಮಾರಸ್ವಾಮಿ ಅವರ ಭ್ರಷ್ಟಾಚಾರ ಆರೋಪದ ಬೆನ್ನಲ್ಲೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ಎಲ್ಲಾ ಆರೋಪಗಳನ್ನು ನಿರಾಕರಿಸಿ ತಿರುಗೇಟು ನೀಡಿದ್ದರು. “ನಾನು ಹಾಸನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನದಿಂದಲೂ ನನ್ನನ್ನು ಗುರಿಯಾಗಿಸಲಾಗುತ್ತಿದೆ. ಇಂತಹ ಸುಳ್ಳು ಆರೋಪಗಳು ಅಥವಾ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ. ನನ್ನ ವಿರುದ್ಧ ಮಾಡಲಾಗಿರುವ ಆರೋಪಗಳು ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ. ಮಹಿಳಾ ಅಧಿಕಾರಿಯ ವರ್ಚಸ್ಸಿಗೆ ಕಳಂಕ ತರುವ ವ್ಯವಸ್ಥಿತ ಪ್ರಯತ್ನ ಇದಾಗಿದೆ. ನಾನು ಯಾವುದೇ ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ, ಮುಂದೆಯೂ ಭಾಗಿಯಾಗುವುದಿಲ್ಲ. ನಿಷ್ಪಕ್ಷಪಾತ ತನಿಖೆಯ ಮೂಲಕ ಸತ್ಯಾಂಶ ಹೊರಬಂದು, ನಕಲಿ ಮಾಹಿತಿ ಹರಡಿದ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮವಾಗಬೇಕು” ಎಂದು ಲತಾಕುಮಾರಿ ಅವರು ಸ್ಪಷ್ಟಪಡಿಸಿದ್ದರು. ಇತ್ತ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಕೂಡ ಎಐ ಮೂಲಕ ನಕಲಿ ಚಾಟ್ ಸೃಷ್ಟಿಸಿ ತೇಜೋವಧೆ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದರು. ಇದೀಗ ಸೈಬರ್ ಕಮಾಂಡ್ ಸೆಂಟರ್ ಎಚ್‌ಡಿಕೆಗೆ ನೋಟಿಸ್ ನೀಡಿರುವುದು ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಕುತೂಹಲ ಕೆರಳಿಸಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:44 pm, Tue, 24 November 26