
ಬೆಂಗಳೂರು, ಸೆಪ್ಟೆಂಬರ್ 29: ನೈಸ್ ಯೋಜನೆಯಲ್ಲಿ 3 ಲಕ್ಷ ಕೋಟಿಗಿಂತ ಹೆಚ್ಚು ಅವ್ಯವಹಾರ ನಡೆದಿದೆ. ಇಷ್ಟೆಲ್ಲಾ ಅವ್ಯವಹಾರ ಮಾಡಿದ ಖೇಣಿಯನ್ನು ಒದ್ದು ಒಳಗೆ ಹಾಕಬೇಕು. ಯಾರು ಕೂಡ ನೈಸ್ ಟೋಲ್ ಕಟ್ಟಬೇಡಿ, ಸರ್ಕಾರ ಇದನ್ನ ಮೊದಲು ನಿಲ್ಲಿಸಲಿ. ನೈಸ್ ಯೋಜನೆಗೆ 1 ಲಕ್ಷ 25 ಸಾವಿರ ಕೆರೆಯನ್ನು 2004ರಲ್ಲೇ ಡಿನೋಟಿಫೈ ಮಾಡಿಟ್ಟಿದ್ದು, ಅದನ್ನೆಲ್ಲಾ ಹೊಡೆಯಲು ಪ್ಲ್ಯಾನ್ ಆಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು ಕೊಟ್ಟು ರಾಜ್ಯ ಸರ್ಕಾರದ ಬಳಿ ದುಡ್ಡಿಲ್ಲ. ನನಗೆ 2 ಲಕ್ಷ ಕೋಟಿ ಕೊಡಬೇಕಾಗುತ್ತೆ ಅದನ್ನ ಎಲ್ಲಿಂದ ತರ್ತಾರೆ? ವಿಧಾನಸೌಧ, ವಿಕಾಸಸೌಧ ಬರೆದುಕೊಡಬೇಕಾಗುತ್ತೆ ಎಂದು ಖೇಣಿ ಹೇಳ್ತಾರೆ. ರಸ್ತೆ ಕೆಲಸ ಮಾಡೋಕೆ ಬಂದವನು ಹೀಗೆ ಮಾತಾಡ್ತಾನೆ ಅಂದ್ರೆ ಆತನ ಹಿಂದೆ ಯಾರಿದ್ದಾರೆ? ಎಂದು ಅವರು ಪ್ರಶ್ನಿಸಿದ್ದಾರೆ.
ಕರ್ನಾಟಕದಲ್ಲಿ ಜೆಡಿಎಸ್ಗೆ 134 ಸೀಟು ಬಂದಿದ್ದರೆ ನೈಸ್ ಯೋಜನೆ ರದ್ದು ಮಾಡ್ತಿದ್ದೆ. ಚಿಟಿಕೆ ಹೊಡೆಯೊದರಲ್ಲಿ ಯೋಜನೆ ರದ್ದು ಮಾಡಿ ಒಳಗೆ ಹಾಕಿಸುತ್ತಿದ್ದೆ. ನಾನು ಸಿಎಂ ಆಗಿದ್ದಾಗ ಈ ಯೋಜನೆ ಸ್ಕ್ರಾಪ್ ಮಾಡಲು ಹೊರಟೆ. ಆಗ ನನಗೆ ಬಿಜೆಪಿ ಸೇರಿದಂತೆ ಯಾರ ಸಹಕಾರವೂ ಸಿಗಲಿಲ್ಲ. ಭೂಮಿ ಕಳೆದುಕೊಂಡ ರೈತರು ಹೋರಾಟಕ್ಕೆ ನಮ್ಮ ನೆರವು ಕೇಳಿದ್ದಾರೆ. ಕೋರ್ಟ್ ತೀರ್ಪು ನೀಡಿದ ಹಿನ್ನೆಲೆ ಕಾನೂನು ಹೋರಾಟ ಮಾಡ್ತೀವಿ. ಸರ್ಕಾರಕ್ಕೆ ತೀರ್ಮಾನ ಮಾಡಿ ಎಂದು ಕೋರ್ಟ್ ಸೂಚನೆ ಕೊಟ್ಟಿದೆ. ಕೋರ್ಟ್ ಆದೇಶವನ್ನು ಸರ್ಕಾರ ಎಷ್ಟು ಪಾಲನೆ ಮಾಡುತ್ತೆ ನೋಡೋಣ. ನೈಸ್ ಸಂಸ್ಥೆಯ ಅಕ್ರಮ ಪ್ರಕರಣವನ್ನು ಸುಮ್ಮನೆ ಬಿಡುವುದಿಲ್ಲ. ಆಗ ರೈತರು ರಸ್ತೆ ಆಗಲಿ ಎಂದು ಸಂತೋಷದಿಂದ ಭೂಮಿ ನೀಡಿದ್ರು. ಆದರೆ ರೈತರು ನೀಡಿದ್ದ ಭೂಮಿಯನ್ನು ನೈಸ್ ಸಂಸ್ಥೆ ದುರ್ಬಳಕೆ ಮಾಡಿಕೊಂಡಿದೆ ಎಂದವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಸಿಎಂ ಡಿಕೆ ಶಿವಕುಮಾರ್ ಕುಟುಂಬದ ವಿರುದ್ಧವೇ ಭೂಕಬಳಿಕೆ ಆರೋಪ ಮಾಡಿದ ಕುಮಾರಸ್ವಾಮಿ: ಹಲವು ದಾಖಲೆಗಳೂ ರಿಲೀಸ್
ಅಲ್ಲೋಲ ಕಲ್ಲೋಲ ಆಗುವಂತಹ ದಾಖಲೆ ಇದೇನಾ ಎಂಬ ಬಗ್ಗೆ ಮಾಧ್ಯಮದವರ ಪ್ರಶ್ನೆಗೂ ಇದೇ ವೇಳೆ ಉತ್ತರಿಸಿದ ಕೇಂದ್ರ ಸಚಿವರು, ಇದು ಒಂದು ಸಣ್ಣ ವಿಚಾರ. ಇನ್ನೂ ಪಾರ್ಟ್ 2 ಇದೆ, ಪಾರ್ಟ್ 3 ಕೂಡ ಬರಬಹುದು ಎಂದಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:28 pm, Tue, 29 September 26