ಗ್ರಾಮೀಣ ಸಾರಿಗೆ ಉತ್ತಮಪಡಿಸುವ ಸರ್ಕಾರದ ಮಾತುಗಳು ಕೇವಲ ಹೇಳಿಕೆಗೆ ಸೀಮಿತ: ಹೆಚ್ಡಿ ಕುಮಾರಸ್ವಾಮಿ ಆರೋಪ
ದುರಂತದಲ್ಲಿ ಜೀವ ಕಳೆದುಕೊಂಡ ಎಲ್ಲ ಅಮೂಲ್ಯ ಜೀವಗಳಿಗೆ ನನ್ನ ಶ್ರದ್ಧಾಂಜಲಿ ಹಾಗೂ ಎಲ್ಲ ಗಾಯಾಳುಗಳು ಆದಷ್ಟು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದು ಕುಮಾರಸ್ವಾಮಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಬೆಂಗಳೂರು: ತುಮಕೂರು ಜಿಲ್ಲೆಯ ಪಳವಳ್ಳಿ ಕಟ್ಟೆ ಬಳಿ ಖಾಸಗಿ ಬಸ್ ಅಪಘಾತಕ್ಕೀಡಾಗಿ ಎಂಟು ಪ್ರಯಾಣಿಕರು ಸಾವನ್ನಪ್ಪಿರುವುದು ನನಗೆ ತೀವ್ರ ಆಘಾತ ಉಂಟು ಮಾಡಿದೆ. ಸಾರಿಗೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕಾರ್ಯ ಕೈಗೊಳ್ಳಬೇಕು. ದುರಂತದಲ್ಲಿ ಸಾವನ್ನಪ್ಪಿದವರಿಗೆ ದೊಡ್ಡ ಪ್ರಮಾಣದ ಪರಿಹಾರ ನೀಡಬೇಕು. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಿ ಅವರಿಗೂ ಪರಿಹಾರ ಕೊಡಬೇಕು. ಖಾಸಗಿ ಬಸ್ ಗಳ ಗುಣಮಟ್ಟ, ಪರವಾನಗಿ, ತಾಂತ್ರಿಕ ಕ್ಷಮತೆ, ವೇಗದ ಚಾಲನೆ ಇತ್ಯಾದಿಗಳ ಬಗ್ಗೆ ನಿರಂತರವಾಗಿ ದೂರು ಬರುತ್ತಲೇ ಇದ್ದರೂ ಸರಕಾರವು ನಿರ್ಲಕ್ಷ್ಯ ಧೋರಣೆಯಲ್ಲೇ ಇದೆ. ಗ್ರಾಮೀಣ ಸಾರಿಗೆಯನ್ನು ಉತ್ತಮಪಡಿಸುವ ಸರಕಾರದ ಮಾತುಗಳು ಕೇವಲ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರದ ನಡೆಯ ಕುರಿತು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅತಿವೇಗ ಹಾಗೂ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎಂಬ ಮಾಹಿತಿ ಸಿಕ್ಕಿದ್ದು, ಬಸ್ಸಿನ ಟಾಪ್ ಮೇಲೆಯೇ 40ಕ್ಕೂ ಹೆಚ್ಚು ಪ್ರಯಾಣಿಕರು ಕೂತಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಇದು ಸಾರಿಗೆ ಇಲಾಖೆ ನಿರ್ಲಕ್ಷ್ಯದ ಪರಮಾವಧಿ. ಈ ಬಗ್ಗೆ ಸರಕಾರ ಕಠಿಣ ಕ್ರಮ ವಹಿಸಬೇಕು. ಕರ್ತವ್ಯ ಲೋಪ ಎಸಗಿರುವ ಸಾರಿಗೆ ಇಲಾಖೆ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ದುರಂತದಲ್ಲಿ ಜೀವ ಕಳೆದುಕೊಂಡ ಎಲ್ಲ ಅಮೂಲ್ಯ ಜೀವಗಳಿಗೆ ನನ್ನ ಶ್ರದ್ಧಾಂಜಲಿ ಹಾಗೂ ಎಲ್ಲ ಗಾಯಾಳುಗಳು ಆದಷ್ಟು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದು ಕುಮಾರಸ್ವಾಮಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಖಾಸಗಿ ಬಸ್ ಪಲ್ಟಿಯಾಗಿ 8 ಜನರು ದುರ್ಮರಣ ಪ್ರಕರಣಕ್ಕೆ ಸಂಬಂಧಿಸಿ ಸಾರಿಗೆ ಇಲಾಖೆಯಲ್ಲಿನ ಲೋಪದೋಷಗಳನ್ನ ಸರಿಪಡಿಸಬೇಕು. ಖಾಸಗಿ ವ್ಯವಸ್ಥೆಗೆ ಹೋಗುವ ಪರಿಸ್ಥಿತಿಯಲ್ಲಿ ಜನತೆ ಇದ್ದಾರೆ. ಸರ್ಕಾರಿ ಬಸ್‌ಗಳ ಅನಾನುಕೂಲದಿಂದ ಪರಿಸ್ಥಿತಿ ಉದ್ಭವಿಸಿದೆ. KSRTCಗೆ ಆರ್ಥಿಕ ಶಕ್ತಿ ತುಂಬುವ ಕೆಲಸ ಸರ್ಕಾರ ಮಾಡಲಿ ಎಂದು ಇದಕ್ಕೂ ಮೊದಲು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕದರಮಂಗಲದಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಖಾಸಗಿ ಬಸ್ ಗಳ ಗುಣಮಟ್ಟ, ಪರವಾನಗಿ, ತಾಂತ್ರಿಕ ಕ್ಷಮತೆ, ವೇಗದ ಚಾಲನೆ ಇತ್ಯಾದಿಗಳ ಬಗ್ಗೆ ನಿರಂತರವಾಗಿ ದೂರು ಬರುತ್ತಲೇ ಇದ್ದರೂ ಸರಕಾರವು ನಿರ್ಲಕ್ಷ್ಯ ಧೋರಣೆಯಲ್ಲೇ ಇದೆ. ಗ್ರಾಮೀಣ ಸಾರಿಗೆಯನ್ನು ಉತ್ತಮಪಡಿಸುವ ಸರಕಾರದ ಮಾತುಗಳು ಕೇವಲ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿದೆ. 3/5
— H D Kumaraswamy (@hd_kumaraswamy) March 19, 2022
ಉಡುಪಿ, ಬಳ್ಳಾರಿಯಲ್ಲಿ ಆಕ್ಸಿಜನ್ ಘಟಕದಲ್ಲಿ ಸ್ಫೋಟಗೊಂಡ ಬಗ್ಗೆ ಮಾಹಿತಿ ಗಮನಿಸಿದೆ. ಈ ಹಿಂದೆ ಮಂಡ್ಯದಲ್ಲೂ ಬಸ್ ಅವಘಡ ಸಂಭವಿಸಿತ್ತು. ಕಾಲುವೆಗಳ ಬಳಿ ತಡೆಗೋಡೆಗಳನ್ನ ನಿರ್ಮಾಣ ಮಾಡಲಾಗಿದೆ. ಸರ್ಕಾರ ಇಂತಹ ಘಟನೆಗಳ ಬಗ್ಗೆ ಗಮನಹರಿಸಬೇಕಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಇಂದಿನ ಬಸ್ ಅಪಘಾತದಲ್ಲಿ ಮೃತಪಟ್ಟವರಿಗೆ ಪರಿಹಾರ ನೀಡಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.
ಇದೇ ವೇಳೆ, ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ ಬಗ್ಗೆ ಹೆಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ದೇಶದಲ್ಲಿ ಹಲವಾರು ಸಮಸ್ಯೆ ಎದುರಿಸುತ್ತಿದ್ದೇವೆ. ಸರ್ಕಾರದ ಮುಂದೆ ಟನ್ ಗಟ್ಟಲೇ ಸಮಸ್ಯೆ ಇದೆ. ಅದನ್ನ ಸರಿಪಡಿಸದೇ ಭಗವದ್ಗೀತೆ ಪಾಠ ಮಾಡುತ್ತೇವೆ ಎಂದರೆ ಇದರಿಂದ ಹೊಟ್ಟೆ ತುಂಬುತ್ತದೆಯಾ. ನಾವು ಯಾರು ಎಂದು ಪ್ರಶ್ನೆ ಹಾಕಿಕೊಂಡರೇ ಉತ್ತರವಿಲ್ಲ. ಯಾರಿಗೂ ಯಾವುದು ಶಾಶ್ವತವಿಲ್ಲ. ಬಿಜೆಪಿ ಜನರ ಸಮಸ್ಯೆಗಳನ್ನು ಬಗೆಹರಿಸುವುದನ್ನು ಕಾಣುತ್ತಿಲ್ಲ. ಭಾವನಾತ್ಮಕ ವಿಚಾರವನ್ನು ಮುಂದೆ ಇಟ್ಟುಕೊಂಡು ದೇಶವನ್ನು ಮುಂದೆ ನಡೆಸುತ್ತಿದ್ದಾರೆ. ಜನ ಸತ್ತರೆ ಏನು, ಹಸಿವಿನಿಂದ ಇದ್ದರೆ ಏನು. ಅವರಿಗೆ ಬೇಕಾಗಿರುವುದು ಅಧಿಕಾರ. ಜನರನ್ನು ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಇದಕ್ಕೂ ಅಂತಿಮ ಇರುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಇದನ್ನೂ ಓದಿ: Bus Accident: ಪಾವಗಡದಲ್ಲಿ ಖಾಸಗಿ ಬಸ್‌ಗಳ ಪರವಾನಗಿ ರದ್ದು, ಸಾರಿಗೆ ಬಸ್ ಓಡಿಸಲು ಕ್ರಮ- ಬಿ ಶ್ರೀರಾಮುಲು
ಇದನ್ನೂ ಓದಿ: ಭೀಕರ ಅಪಘಾತ: ತುಮಕೂರಿನ ಪಳವಳ್ಳಿ ಕಟ್ಟೆಯ ಬಳಿ ಖಾಸಗಿ ಬಸ್ ಪಲ್ಟಿ; 4 ಮಂದಿ ಸ್ಥಳದಲ್ಲೇ ಸಾವು
Published On - 2:34 pm, Sat, 19 March 22