ಬೆಂಗಳೂರಿನ ಹಲವೆಡೆ ಅಬ್ಬರಿಸಿದ ವರುಣ: ಮುಂದಿನ 6 ದಿನಗಳ ಕಾಲ ರಾಜ್ಯದ ಹಲವೆಡೆ ಮಳೆ ಮುನ್ಸೂಚನೆ
Monsoon 2026: ಬೆಂಗಳೂರು, ದಾವಣಗೆರೆಯಲ್ಲಿ ಸಂಜೆ ಧಾರಾಕಾರ ಮಳೆಯಾಗಿದ್ದು, ಅನಿರೀಕ್ಷಿತ ಮಳೆಯ ಪರಿಣಾಮ ಜನ ಸಾಮಾನ್ಯರು ಪರದಾಟ ನಡೆಸಿದ್ದಾರೆ. ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಅಧಿಕ ಮಳೆಯಾಗಿದ್ದರೆ, ದಾವಣಗೆರೆಯಲ್ಲಿ ಗಾಳಿ ಸಹಿತ ವರುಣ ಅಬ್ಬರಿಸಿದ್ದಾನೆ. ಈ ನಡುವೆ ಮುಂದಿನ 6 ದಿನಗಳ ಕಾಲ ರಾಜ್ಯದ ವಿವಿಧೆಡೆ ಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಖ್ಯಾಂಶಗಳು
- ಬೆಂಗಳೂರು, ದಾವಣಗೆರೆಯಲ್ಲಿ ಅಬ್ಬರಿಸಿದ ವರುಣ
- ಏಕಾಏಕಿ ಸಂಜೆ ಸುರಿದ ಮಳೆಗೆ ಪರದಾಡಿದ ಜನರು
- ಮುಂದಿನ 6 ದಿನಗಳ ಕಾಲ ರಾಜ್ಯದ ಹಲವೆಡೆ ಮಳೆ
ಬೆಂಗಳೂರು, ಆಗಸ್ಟ್ 19: ರಾಜಧಾನಿ ಬೆಂಗಳೂರಿನ (Bengaluru) ಹಲವೆಡೆ ಸಂಜೆ ಧಾರಾಕಾರ ಮಳೆ(Rain)ಯಾಗಿದ್ದು, ನಗರದ ದಕ್ಷಿಣ ಭಾಗದಲ್ಲಿ ಭರ್ಜರಿ ವರ್ಷಧಾರೆಯಾಗಿದೆ. ಜಯನಗರ, ಪದ್ಮನಾಭನಗರ, ಜೆಪಿ ನಗರ, ಎಡೆಯೂರು, ಬಸವಗುಡಿ ಸೇರಿ ಹಲವೆಡೆ ವರುಣ ಅಬ್ಬರಿಸಿದ್ದು, ಕೆಲಸ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ಸಾರ್ವಜನಿಕರು ಪರದಾಟ ನಡೆಸಿದ್ದಾರೆ. ಸುಮಾರು 20 ನಿಮಿಷಕ್ಕೂ ಹೆಚ್ಚು ಸಮಯ ಮಳೆಯಾಗಿದ್ದು, ವಾಹನಗಳ ಸಂಚಾರಕ್ಕೂ ಅಡಚಣೆ ಉಂಟಾಗಿದೆ.
ದಾವಣಗೆರೆಯಲ್ಲೂ ಮಳೆ ಅಬ್ಬರ
ದಾವಣಗೆರೆಯಲ್ಲಿಯೂ ಸಂಜೆಯಾಗುತ್ತಿದ್ದಂತೆ ಭರ್ಜರಿಯಾಗಿ ಮಳೆ ಸುರಿದಿದೆ. ಅನಿರೀಕ್ಷಿತ ಮಳೆಗೆ ವಾಹನ ಸವಾರರು ಪರದಾಟ ನಡೆಸಿದ್ದು, ಒಂದೇ ಸಮನೆ ಅಬ್ಬರಿಸಿದ ಭರ್ಜರಿ ಗಾಳಿ ಮಳೆಯ ಪರಿಣಾಮ ಕೆಲ ಹೊತ್ತು ವಿದ್ಯುತ್ ಸಂಪರ್ಕವೂ ವ್ಯತ್ಯಯವಾಗಿದೆ.
ಇನ್ನೂ ಕೆಲ ದಿನಗಳು ಮಳೆ ಮನ್ಸೂಚನೆ
ಹವಾಮಾನ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಮುಂದಿನ 6 ದಿನಗಳ ಕಾಳ ಕರ್ನಾಟಕ ರಾಜ್ಯದಾದ್ಯಂತ ಅಲ್ಲಲ್ಲಿ ಜೋರಾದ ಗಾಳಿಯೊಂದಿಗೆ ಮಳೆ ಸಾಧ್ಯತೆ ಇದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರದಿಂದ ಸಾದಾರಣ ಮಳೆಯಾಗಲಿದ್ದು, ಒಳನಾಡು ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣ ಇರಲಿದೆಯಾದರೂ ಅಲ್ಲಲ್ಲಿ ಮೋಡದ ವಾತಾವರಣ ಅಥವಾ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಆಲಮಟ್ಟಿ ಭರ್ತಿ, ಕಾವೇರಿ ಕೊಳ್ಳದಲ್ಲಿ ಇಳಿಕೆ ಕಂಡ ಒಳಹರಿವು!
ಬ್ರಹ್ಮಾವರದಲ್ಲಿ ಅತ್ಯಧಿಕ ಮಳೆ
District-wise realized #Maximum #rainfall (mm) & rainfall #distribution details during the last 24 hrs ending at 8.30 am on 19th August 2026. #KSNDMC@KarnatakaVarthe pic.twitter.com/Kh7gkZtyiX
— Karnataka State Natural Disaster Monitoring Centre (@KarnatakaSNDMC) August 19, 2026
ಉಡುಪಿ ಜಿಲ್ಲೆಯ ಬ್ರಹ್ಮಾವರದ ಕುಂಜಾಲುವಿನಲ್ಲಿ ನಿನ್ನೆ (ಆಗಸ್ಟ್ 18) ರಾಜ್ಯದಲ್ಲಿಯೇ ಅತೀ ಹೆಚ್ಚು ಅಂದರೆ 107.5 ಮಿ.ಮೀ. ಮಳೆಯಾಗಿದೆ. ಪುತ್ತೂರು ತಾಲೂಕಿನ ಬೆಳಂದೂರಿನಲ್ಲಿ 89.5 ಮಿ.ಮೀ., ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಪಾರವಾಡದಲ್ಲಿ 63.5 ಮಿ.ಮೀ., ತೀರ್ಥಹಳ್ಳಿಯ ಆಗುಂಬೆಯಲ್ಲಿ 53 ಮಿ.ಮೀ., ಚಿಕ್ಕಮಗಳೂರಿನ ಮೂಡಿಗೆರೆಯ ನಿಡುವಾಲೆಯಲ್ಲಿ 43 ಮಿ.ಮೀ., ಮಡಿಕೇರಿಯ ಚೆಂಬುವಿನಲ್ಲಿ 39 ಮಿ.ಮೀ. ಮತ್ತು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ 37 ಮಿ.ಮೀ. ಮಳೆಯಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:53 pm, Wed, 19 August 26




