ಭಾರಿ ಮಳೆ: ಬೆಂಗಳೂರಿಗೆ ಬರಬೇಕಿದ್ದ ವಿಮಾನಗಳು ಚನ್ನೈ ಕಡೆಗೆ ಡೈವರ್ಟ್
ಕಳೆದ 2-3 ದಿನಗಳಿಂದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಮಳೆಯಾಗುತ್ತಿದೆ. ಇದರಿಂದ ಬಿಸಿಲಿನ ಬೇಗೆಗೆ ಬೆಂದಿದ್ದ ಜನರು ತಂಪಾಗಿದ್ದಾರೆ. ಆದರೆ ಏಕಾಏಕಿ ಗಾಳಿ ಸಹಿತ ಮಳೆಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರಬೇಕಾಗಿದ್ದ ವಿಮಾನಗಳನ್ನು ಚೆನ್ನೈ ಕಡೆಗೆ ಡೈವರ್ಟ್ ಮಾಡಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು, ಮೇ 10: ವಿಮಾನ ನಿಲ್ದಾಣ ಪ್ರದೇಶದಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ (Rain)ಸುರಿದಿದೆ. ಹೀಗಾಗಿ 17ಕ್ಕೂ ಹೆಚ್ಚು ವಿಮಾನಗಳನ್ನು (Flight) ಬೇರೆಡೆಗೆ ಡೈವರ್ಟ್ ಮಾಡಲಾಗಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಗುರುವಾರ (ಮೇ 09)ರ ರಾತ್ರಿ 9:35 ರಿಂದ 10:29ರ ವರೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport) ಪ್ರದೇಶದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಯಿತು. ಈ ಸಮಯದಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರನ್ನು ಹೊತ್ತು ಬರುತ್ತಿದ್ದ 13 ದೇಶಿ, 3 ಅಂತರಾಷ್ಟ್ರೀಯ ವಿಮಾನಗಳು ಮತ್ತು ಒಂದು ಕಾರ್ಗೋ ವಿಮಾನವನ್ನು ಚೈನ್ನೈ ಕಡೆಗೆ ಡೈವರ್ಟ್ ಮಾಡಲಾಯಿತು ಎಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.
ದೇಶಿಯ ವಿಮಾನಗಳಾದ ನಾಲ್ಕು ಇಂಡಿಗೋ, ನಾಲ್ಕು ಏರ್ ಇಂಡಿಯಾ ಎಕ್ಸಪ್ರೆಸ್, ಒಂದು ವಿಸ್ತಾರಾ, ಒಂದು ಆಕಾಶ್ ಏರ್, ಒಂದು ಏರ್ ಇಂಡಿಯಾ ಮತ್ತು ಒಂದು ಸ್ಟಾರ್ ಏರ್ ವಿಮಾನವನ್ನು ಚೆನ್ನೈ ಕಡೆಗೆ ಡೈವರ್ಟ್ ಮಾಡಲಾಗಿದೆ. ಇನ್ನು ಹವಾಮಾನ ವೈಪರಿತ್ಯದಿಂದ ಮೂರು ಅಂತರಾಷ್ಟ್ರೀಯ ಮತ್ತು ಒಂದು ಕಾರ್ಗೊ ವಿಮಾನವನ್ನು ಚೆನ್ನೈ ಕಡೆಗೆ ಡೈವರ್ಟ್ ಮಾಡಲಾಗಿದೆ.
ಇದನ್ನೂ ಓದಿ: ದೇವನಹಳ್ಳಿ ಸುತ್ತಮುತ್ತ ಭಾರೀ ಮಳೆ, ಕೆಐಎ ಮೇಲ್ಛಾವಣಿ ಸೋರಿಕೆ, ಲಗೇಜ್ ಬೇಗೆ ನುಗ್ಗಿದ ನೀರು!
ಸಿಂಗಾಪುರದಿಂದ ಬರುತ್ತಿದ್ದ ಸಿಂಗಾಪುರ ಏರ್ಲೈನ್ಸ್, ಅಬುದುಬೈದಿಂದ ಬರುತ್ತಿದ್ದ ಇಹಾದ್ ವಿಮಾನ ಮತ್ತು ಆಮ್ಸ್ಟರ್ಡ್ಯಾಮ್ದಿಂದ ಬರುತ್ತಿದ್ದ ಕೆಎಲ್ಎಮ್ ವಿಮಾನವನ್ನು ಡೈವರ್ಟ್ ಮಾಡಲಾಗಿದೆ. ಮತ್ತು ಡಿಹೆಚ್ಎಲ್ ಏವಿಯೇಷನ್ ಕಾರ್ಗೋ ES 731 ವಿಮಾನವನ್ನೂ ಕೂಡ ಡೈವರ್ಟ್ ಮಾಡಲಾಗಿದೆ.
ಇನ್ನು ಮೇ 06 ರಂದು ಬೆಂಗಳೂರು ವಿಮಾನ ನಿಲ್ದಾಣ ಪ್ರದೇಶದಲ್ಲಿ ಭಾರಿ ಮಳೆಯಾಗಿದ್ದ ಪರಿಣಾಮ ಒಟ್ಟು 8 ವಿಮಾನಗಳನ್ನು ಡೈವರ್ಟ್ ಮಾಡಲಾಗಿತ್ತು. ಏಳು ವಿಮಾನಗಳನ್ನು ಚೆನ್ನೈ ಕಡೆಗೆ ಮತ್ತು ಒಂದು ವಿಮಾನವನ್ನು ಕೊಯಿಮುತ್ತೂರು ಕಡೆ ಡೈವರ್ಟ್ ಮಾಡಲಾಗಿತ್ತು.
ಭಾರತೀಯ ಹವಾಮಾನ ವರದಿ ಪ್ರಕಾರ ಗುರುವಾರ ಬೆಳಗ್ಗೆ 8:30 ರಿಂದ ಶುಕ್ರವಾರ ಬೆಳಗ್ಗೆ 8:30ರ ವರೆಗೆ ವಿಮಾನ ನಿಲ್ದಾಣದ ಪ್ರದೇಶದಲ್ಲಿ 72 ಮಿಮೀ ಮಳೆಯಾಗಿದೆ. ಬೆಂಗಳೂರು ನಗರದಲ್ಲಿ 14 ಮಿಮೀ ಮಳೆಯಾಗಿದೆ. ಮತ್ತು ಹೆಚ್ಎಎಲ್ ವಿಮಾನಿ ನಿಲ್ದಾಣದ ಬಳಿ 6.7 ಮಿಮೀ ಮಳೆಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:04 pm, Fri, 10 May 24