ಮುಂದಿನ ಮೂರು ದಿನ ಕರ್ನಾಟಕದ ಹಲವೆಡೆ ಭಾರಿ ಮಳೆ: ಕರಾವಳಿಯಲ್ಲಿ ವರುಣಾರ್ಭಟದ ಎಚ್ಚರಿಕೆ

ಕರ್ನಾಟಕ ಹವಾಮಾನ ಮುನ್ಸೂಚನೆ: ಕರ್ನಾಟಕದಲ್ಲಿ ಮುಂದಿನ ಮೂರು ದಿನ ಭಾರಿ ಮಳೆಯಾಗಲಿದ್ದು ಕರಾವಳಿಗೆ 'ರೆಡ್ ಅಲರ್ಟ್' ಹಾಗೂ ದಕ್ಷಿಣ ಒಳನಾಡಿಗೆ 'ಆರೆಂಜ್ ಅಲರ್ಟ್' ನೀಡಲಾಗಿದೆ. ಮತ್ತೊಂದೆಡೆ ರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ (KSNDMC) ಅಂಕಿಅಂಶಗಳ ಪ್ರಕಾರ ಹಿಂದಿನ ಮುಂಗಾರು ತಿಂಗಳ ಮಳೆ ಕೊರತೆಗೆ ಹೋಲಿಸಿದರೆ ಸೆಪ್ಟೆಂಬರ್‌ನಲ್ಲಿ ಮಳೆ ಕೊರತೆ ಅತ್ಯಧಿಕವಾಗಿದೆ ಎಂಬುದೂ ಬಹಿರಂಗಗೊಂಡಿದೆ.

ಮುಂದಿನ ಮೂರು ದಿನ ಕರ್ನಾಟಕದ ಹಲವೆಡೆ ಭಾರಿ ಮಳೆ: ಕರಾವಳಿಯಲ್ಲಿ ವರುಣಾರ್ಭಟದ ಎಚ್ಚರಿಕೆ
ಸಾಂದರ್ಭಿಕ ಚಿತ್ರ
Image Credit source: PTI

Updated on: Sep 22, 2026 | 5:41 PM

ಬೆಂಗಳೂರು, ಸೆಪ್ಟೆಂಬರ್​​ 22: ಮುಂದಿನ ಮೂರು ದಿನಗಳಲ್ಲಿ ಕರ್ನಾಟಕದ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ (IMD) ಬುಧವಾರ ಇಡೀ ರಾಜ್ಯಕ್ಕೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಗುರುವಾರ ಕರಾವಳಿ ಕರ್ನಾಟಕಕ್ಕೆ ರೆಡ್ ಅಲರ್ಟ್ ಹಾಗೂ ದಕ್ಷಿಣ ಒಳನಾಡು ಕರ್ನಾಟಕಕ್ಕೆ ಆರೆಂಜ್ ಅಲರ್ಟ್ ನೀಡಲಾಗಿದೆ. ಶುಕ್ರವಾರವೂ ದಕ್ಷಿಣ ಒಳನಾಡು ಮತ್ತು ಕರಾವಳಿ ಕರ್ನಾಟಕದಲ್ಲಿ ಮಳೆ ಮುಂದುವರಿಯಲಿದ್ದು, ಕೆಲವು ಪ್ರದೇಶಗಳಲ್ಲಿ ಅತಿ ತೀವ್ರ ಮಳೆಯಾಗುವ ಸಾಧ್ಯತೆ ಇದೆ.

ಸೆಪ್ಟೆಂಬರ್‌ನಲ್ಲಿ ಮಳೆ ಕೊರತೆ ಅತ್ಯಧಿಕ

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ (KSNDMC) ಅಂಕಿಅಂಶಗಳ ಪ್ರಕಾರ, ರಾಜ್ಯವು ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಕಳಪೆ ಮುಂಗಾರು ಋತುವನ್ನು ಎದುರಿಸುತ್ತಿದೆ. ಹಿಂದಿನ ಮುಂಗಾರು ತಿಂಗಳ ಮಳೆ ಕೊರತೆಗೆ ಹೋಲಿಸಿದರೆ ಸೆಪ್ಟೆಂಬರ್‌ನಲ್ಲಿ ಮಳೆ ಕೊರತೆ ಅತ್ಯಧಿಕವಾಗಿದ್ದು, ಆತಂಕ ಹೆಚ್ಚಿಸಿದೆ. ಪ್ರಸ್ತುತ ಸೆಪ್ಟೆಂಬರ್‌ನಲ್ಲಿ ಮಳೆ ಕೊರತೆ 67% ಇದೆ. ಸಾಮಾನ್ಯವಾಗಿ 107 ಮಿ.ಮೀ. ಮಳೆಯಾಗಬೇಕಿತ್ತಾದರೂ ಇದುವರೆಗೆ ರಾಜ್ಯದಲ್ಲಿ ಕೇವಲ 35 ಮಿ.ಮೀ. ಮಳೆಯಾಗಿದೆ. ಜೂನ್‌ನಲ್ಲಿ ಸಾಮಾನ್ಯ 199 ಮಿ.ಮೀ. ಬದಲಿಗೆ 116 ಮಿ.ಮೀ. ಅಂದರೆ 42% ಮಳೆ ಕೊರತೆ ದಾಖಲಾಗಿತ್ತು. ಜುಲೈನಲ್ಲಿ 29% ಕೊರತೆ ಇದ್ದು, ಸಾಮಾನ್ಯ 271 ಮಿ.ಮೀ. ಬದಲಿಗೆ 192 ಮಿ.ಮೀ. ಮಳೆಯಾಗಿತ್ತು. ಆಗಸ್ಟ್‌ನಲ್ಲಿ 23% ಕೊರತೆ ದಾಖಲಾಗಿದ್ದು, ಸಾಮಾನ್ಯ 220 ಮಿ.ಮೀ. ಬದಲಿಗೆ ಇದರ ಪ್ರಮಾಣ 169 ಮಿ.ಮೀ. ಆಗಿತ್ತು.

ಇದನ್ನೂ ಓದಿ: ಕರ್ನಾಟಕ ಹವಾಮಾನ: ರಾಜ್ಯದ ವಿವಿಧೆಡೆ ಮಳೆ ಮುನ್ಸೂಚನೆ, ಸೆ.23ರಂದು ಭಾರಿ ಮಳೆ ಸಾಧ್ಯತೆ

ಮುಂಗಾರು ಮಳೆಯ ಅಭಾವದಿಂದ ಜಲಾಶಯಗಳಲ್ಲಿನ ನೀರಿನ ಸಂಗ್ರಹವೂ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಗಣನೀಯವಾಗಿ ಕಡಿಮೆಯಾಗಿದೆ. ಸೆಪ್ಟೆಂಬರ್ 21ರಂದು ಕೆಆರ್‌ಎಸ್ ಜಲಾಶಯದಲ್ಲಿ 27.76 ಟಿಎಂಸಿ ನೀರಿನ ಸಂಗ್ರಹವಿತ್ತಾದರೆ, ಇದೇ ದಿನ ಕಳೆದ ವರ್ಷ ಜಲಾಶಯದಲ್ಲಿ 47.73 ಟಿಎಂಸಿ ನೀರಿತ್ತು. ಆದರೆ ಉತ್ತರ ಕರ್ನಾಟಕದ ಜಲಾಶಯಗಳ ಸ್ಥಿತಿ ದಕ್ಷಿಣ ಕರ್ನಾಟಕದ ಅಣೆಕಟ್ಟುಗಳಿಗೆ ಹೋಲಿಸಿದರೆ ಉತ್ತಮವಾಗಿದೆ. ಉತ್ತರ ಕರ್ನಾಟಕದ ಅತಿದೊಡ್ಡ ಅಣೆಕಟ್ಟಾದ ಆಲಮಟ್ಟಿ ಜಲಾಶಯದಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ 123 ಟಿಎಂಸಿ ನೀರು ಸಂಗ್ರಹವಾಗಿತ್ತು. ಆದರೆ ಅದರ ಪ್ರಮಾಣವೀಗ 115 ಟಿಎಂಸಿಯಷ್ಟಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 5:40 pm, Tue, 22 September 26

Loading...
Unable to load recommendations.
Follow Us