
ಬೆಂಗಳೂರು, ಮೇ 01: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಮತ್ತೆ ಮಳೆರಾಯನ ಆರ್ಭಟ ಶುರುವಾಗಿದೆ. ಕಳೆದ ಎರಡು ದಿನಗಳಿಂದ ನಗರದಲ್ಲಿ ಮಳೆಯಾಗುತ್ತಿದೆ (Rain). ಭಾರಿ, ಗಾಳಿ ಮಳೆಗೆ ಆಟೋದ ಮೇಲೆ ಮರ ಬಿದ್ದು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕತ್ರಿಗುಪ್ಪೆಯ ಎಂ.ಎಂ.ಬಾರ್ ಬಳಿ ಘಟನೆ ನಡೆದಿದೆ. ವಿಚಾರ ತಿಳಿದು ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಇನ್ನು, ನಗರದ ರಿಚ್ಮಂಡ್ ಟೌನ್, ಶಾಂತಿನಗರ, ಕಾರ್ಪೊರೇಷನ್, ಮೆಜೆಸ್ಟಿಕ್, ಕೆ.ಆರ್.ಮಾರ್ಕೆಟ್, ರಾಜಾಜಿನಗರ, ಬಸವೇಶ್ವರ ನಗರ, ನಂದಿನಿ ಲೇಔಟ್ ಸೇರಿದಂತೆ ಹಲವೆಡೆ ಮಳೆಯಾಗುತ್ತಿದೆ.
ಏಕಾಏಕಿ ಮಳೆ ಬಂದಿದ್ದರಿಂದ ಬಸ್ ನಿಲ್ದಾಣಗಳಲ್ಲಿ ಜನ ಆಶ್ರಯ ಪಡೆಯುತ್ತಿದ್ದಾರೆ. ಬೈಕ್ ಸವಾರರು ಬಸ್ ನಿಲ್ದಾಣ, ಅಂಗಡಿ ಮುಂಗಟ್ಟುಗಳ ಬಳಿ ನಿಂತಿದ್ದಾರೆ. ಮಳೆಗೆ ಹಲವು ರಸ್ತೆಗಳಲ್ಲಿ ನೀರು ನಿಂತಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಟ್ರಾಫಿಕ್‌ಜಾಮ್ ಉಂಟಾಗಿದೆ.
ಬೆಂಗಳೂರಿನ ಮುಂದಿನ 3 ಗಂಟೆಗಳ ಕಾಲ ಆಲಿಕಲ್ಲು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗಾಳಿಯ ವೇಗ ಗಂಟೆಗೆ 40-60 ಕಿಮೀ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಗಾಳಿ, ಮಳೆಗೆ ಬೆಂಗಳೂರಿನ ಹಲವು ರಸ್ತೆಗಳಲ್ಲಿ ನೀರು ನಿಂತಿದೆ. ಇದರಿಂದ ಸಂಚಾರ ದಟ್ಟಣೆ ಉಂಟಾಗಿದೆ. ಹೀಗಾಗಿ ನಗರ ಹಲವು ರಸ್ತೆಗಳಲ್ಲಿ ನಿಧಾನಗತಿಯ ಸಂಚಾರವಿದೆ ಎಂದು ಬೆಂಗಳೂರು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ನಿಧಾನಗತಿ ಸಂಚಾರ
‘ಸಂಚಾರಸಲಹೆ ‘
ಈಕೆಳಕಂಡಸ್ಥಳಗಳಲ್ಲಿಮಳೆನೀರುನಿಂತಿರುವುದರಿಂದನಿಧಾನಗತಿಯಸಂಚಾರವಿರುತ್ತದೆ.
1.ಬಿಳೇಕಹಳ್ಳಿಯಿಂದ ಜೆ ಡಿ ಮರ ಕಡೆಗೆ
2.ವೀರಸಂದ್ರ ಎರಡೂ ಬದಿ ರಸ್ತೆ
3.ಹೊಸ ರಸ್ತೆಯಿಂದ ಬಸಾಪುರ ಜಂಕ್ಷನ್ ಕಡೆಗೆ
4.ಹೊರಮಾವು ಕೆಳಸೇತುವೆಯಿಂದ ಕೆ ಆರ್ ಪುರ ಕಡೆಗೆ— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) May 1, 2025
ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರಿ ಮಳೆ-ಗಾಳಿಗೆ ಮನೆ ಚಾವಣಿಯ ಶೀಟ್ ಹಾರಿ ಹೋಗಿದೆ. ಇದರಿಂದ ಮನೆಯಲ್ಲಿದ್ದ ಸಣ್ಣಪುಟ್ಟ ಮಕ್ಕಳಿಗೆ ಗಾಯವಾಗಿದೆ. ಇನ್ನು, ಮೂಡಿಗೆರೆ ತಾಲೂಕಿನ ತ್ರಿಪುರ ಗ್ರಾಮದಲ್ಲಿ ಗಾಳಿ ಮಳೆಗೆ ಪದ್ಮಾ ಪೂಜಾರಿ ಎಂಬುವರ ಮನೆಗೆ ಹಾನಿಯಾಗಿದೆ.
ಇದನ್ನೂ ಓದಿ: ಇಂದಿನಿಂದ ಒಂದು ವಾರ ಕರ್ನಾಟಕದಾದ್ಯಂತ ಸುರಿಯಲಿದೆ ಭಾರಿ ಮಳೆ
ಮೇ 02 ರಿಂದ ಮೇ 04, ರವರೆಗೆ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಉತ್ತರ ಒಳನಾಡು ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ 50-60 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Published On - 8:27 pm, Thu, 1 May 25