
ಆನೇಕಲ್, ಸೆಪ್ಟೆಂಬರ್ 04: ಕೊಲೆ ಕೇಸ್ ಆರೋಪಿಗಳು ಜೈಲಿನ ವಾರ್ಡರ್ ಮೇಲೆಯೇ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದಿದೆ. ಮಂಗಳೂರಿನ ಭಜರಂಗದಳ ಕಾರ್ಯಕರ್ತನಾಗಿದ್ದ ಸುಹಾಸ್ ಶೆಟ್ಟಿ ಕೊಲೆ ಕೇಸ್ನ ಆರೋಪಿಗಳು ವಾರ್ಡರ್ ಮಂಜುನಾಥ್ ಮೇಲೆ ಹಲ್ಲೆ ನಡೆಸಿ ಕೊಲೆ ಯತ್ನ ನಡೆಸಿದ್ದು, ಪರಪ್ಪನ ಅಗ್ರಹಾರ ಜೈಲಿನ ಶಿಕ್ಷಾ ಬಂಧಿ ವಿಭಾಗದಲ್ಲಿ ಸೆ.2ರಂದು ಬೆಳಗ್ಗೆ 11.30ಕ್ಕೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆ ಮೂಲಕ ಪರಪ್ಪನ ಅಗ್ರಹಾರ ಜೈಲು ಮತ್ತೆ ಸುದ್ದಿಯಾಗಿದೆ.
ಅವಧಿಪೂರ್ವ ಬಿಡುಗಡೆಗೆ ಸಂಬಂಧಿಸಿದಂತೆ ವಿಷಯ ನಿರ್ವಾಹಕರಾಗಿ ಸೇವೆ ಸಂಬಂಧ ವೀಕ್ಷಕ ಮಂಜುನಾಥ್ ಶಿಕ್ಷಾ ಬಂಧಿ ವಿಭಾಗಕ್ಕೆ ತೆರಳಿದ್ದರು. ಈ ವೇಳೆ ಸುಹಾಸ್ ಕೊಲೆ ಆರೋಪಿಗಳಾದ ಮೊಹಮ್ಮದ್ ಮುಜಾಮಿಲ್, ಅಬ್ದುಲ್ ಶಫ್ಘಾನ್, ಮೊಹಮ್ಮದ್ ರಿಜ್ವಾನ್, ನಯಾಜ್ ಮತ್ತು ಕಲಂದರ್ ಶಫಿ ವಾರ್ಡರ್ರನ್ನು ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಾರೆ. ಜೊತೆಗೆ ಏಕಾಏಕಿ ಮಂಜುನಾಥ್ ಅವರನ್ನು ಬ್ಯಾರಕ್ನ ಕೊಠಡಿ ಸಂಖ್ಯೆ 4ಕ್ಕೆ ಎಳೆದೊಯ್ದು ಆರೋಪಿಗಳು ಮನಸೋ ಇಚ್ಛೆ ಹಲ್ಲೆ ನಡೆಸಿದ್ದು, ಕುತ್ತಿಗೆಯನ್ನು ಬಲವಾಗಿ ಹಿಸುಕಿ ಉಸಿರುಗಟ್ಟಿಸಿ ಕೊಲೆ ಯತ್ನ ನಡೆಸಿದ್ದಾರೆ. ಕೂಡಲೇ ಅಲರ್ಟ್ ಆದ ಕರ್ತವ್ಯನಿರತ ಇನ್ನುಳಿದ ಅಧಿಕಾರಿ, ಸಿಬ್ಬಂದಿ ಮಂಜುನಾಥ್ ಅವರ ರಕ್ಷಣೆ ಧಾವಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಲಾಲ್‌ಬಾಗ್ ಶಿಲಾ ರಚನೆ ಕುರಿತ ವರದಿ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ: ಹೆಬ್ಬಾಳ ಕೆರೆಗೂ ಟನಲ್ ರೋಡ್ ಟೆನ್ಷನ್
ತಿಂಗಳ ಹಿಂದೆ ಭದ್ರತಾ ವಿಭಾಗದಿಂದ ಅನೆಕ್ಸ್-1 ಕಾರಾಗೃಹಕ್ಕೆ ಕೆಲ ಜೈಲು ಬಂಧಿಗಳ ಶಿಫ್ಟ್ ಮಾಡಲಾಗಿತ್ತು. ಈ ವೇಳೆ ಮಂಜುನಾಥ್ ಬಂಧಿಗಳ ವಸ್ತುಗಳನ್ನು ತಪಾಸಣೆ ಮಾಡಿದ್ದರು. ಅಲ್ಲದೆ, ಹೆಚ್ಚುವರಿ ವಸ್ತು ತೆಗೆದುಕೊಂಡು ಹೋಗಲು ಅವಕಾಶ ನೀಡಿರಲಿಲ್ಲ. ಇದೇ ವಿಚಾರವಾಗಿ ಜೈಲಿನಲ್ಲಿ ಆರೋಪಿಗಳ ನಡುವೆ ವಾಗ್ವಾದ ಆಗಿತ್ತು. ಅಕ್ರಮ ಚಟುವಟಿಕೆಗಳ ಬಗ್ಗೆ ಅಧಿಕಾರಿಗಳಿಗೆ ವಾರ್ಡರ್ ತಿಳಿಸುತ್ತಿದ್ದ ಎಂಬ ಕಾರಣಕ್ಕೆ ಆರೋಪಿಗಳು ಹಲ್ಲೆ ನಡೆಸಿದ್ದು, ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:04 pm, Fri, 4 September 26