ಮತ್ತೆ ಮುನ್ನೆಲೆಗೆ ಬಂದ ಅಹಿಂದ ರಾಜಕೀಯ: ಕೀಲು ಕಳಚಿದ ಅಹಿಂದ ರಥ ನಡೆಸುವ ಸಾರಥಿಯ ತಲಾಶ್ನಲ್ಲಿ ಸಿದ್ಧರಾಮಯ್ಯ
ಹಿಂದೆ ಅಹಿಂದ ರಥಕ್ಕೆ ಕುದುರೆ ಕಟ್ಟಿದವರು ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆಗಿಲ್ಲ. ಚುಕ್ಕಾಣಿ ಹಿಡಿದಿದ್ದ ಕೈಗಳು ಸಂಪೂರ್ಣ ಬದಲಾಗಿವೆ. ಹಿಂದೆ ಹಿಂಬಾಲಕರಾಗಿದ್ದವರು, ಈಗ ನೇತಾರರಾಗಿದ್ದಾರೆ. ಹೀಗಿದ್ದಾಗ ಸಿದ್ದರಾಮಯ್ಯರ ರಾಜಕೀಯ ಪದೋನ್ನತಿ ಮತ್ತೆ ಸಾಧ್ಯವೇ? ಈ ಕುರಿತು ಪೊಲಿಟಿಕಲ್ ಬ್ಯೂರೋ ಮುಖ್ಯಸ್ಥ ಪ್ರಮೋದ್ ಶಾಸ್ತ್ರಿ ಬೆಳಕು ಚೆಲ್ಲಿದ್ದಾರೆ.

ಕರ್ನಾಟಕದ ರಾಜಕಾರಣ ಇಂದು ಸ್ಥಿತ್ಯಂತರದ ಹಾದಿಯಲ್ಲಿದೆ. ಹೊಸ ತಲೆಮಾರಿನ ನೇತೃತ್ವ ಟಿಸಿಲೊಡೆಯುವ ಸಮಯದಲ್ಲಿ, ಅಹಿಂದ ಎಂಬ ಹಳೆಯ ರಾಜಕೀಯ ಪ್ರಣಾಳ ಶಿಶುವಿಗೆ ಹೊಸ ಜಾತಕ ಬರೆಯುವ ಪ್ರಯತ್ನ ಶುರವಾಗಿದೆ. ದೇವರಾಜ ಅರಸು ನಂತರದ ರಾಜಕಾರಣದಲ್ಲಿ ಹಿಂದುಳಿದ ವರ್ಗಗಳ ರಾಜಕಾರಣಕ್ಕೆ ಅಧಿಕಾರದ ಚಾಮರಛತ್ರ ನೀಡಿದ್ದು “ಅಹಿಂದ” ಎಂಬುದು ಎಷ್ಟು ಸತ್ಯವೋ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅದರ ಪೂರ್ಣ ರಾಜಕೀಯ ಫಲಾನುಭವಿ ಎಂಬುದು ಅಷ್ಟೇ ಸತ್ಯ. ಈಗ ಮತ್ತದೇ ಸಿದ್ದರಾಮಯ್ಯ “ಅಹಿಂದ” ರಥವೇರಿ ತಮ್ಮ ಹಿಂದುಳಿದ ನೇತೃತ್ವಕ್ಕೆ ಅಮರತ್ವ ನೀಡಲು ಮುಂದಾಗುತ್ತಿದ್ದಾರೆ. ಆದ್ರೆ ಈ ಹಿಂದೆ ಅಹಿಂದ ರಥಕ್ಕೆ ಕುದುರೆ ಕಟ್ಟಿದವರು ಇಂದು ಸಿದ್ದರಾಮಯ್ಯ ಜೊತೆಗಿಲ್ಲ. ಚುಕ್ಕಾಣಿ ಹಿಡಿದಿದ್ದ ಕೈಗಳು ಸಂಪೂರ್ಣ ಬದಲಾಗಿವೆ. ಹಿಂದೆ ಹಿಂಬಾಲಕರಾಗಿದ್ದವರು, ಈಗ ನೇತಾರರಾಗಿದ್ದಾರೆ.
ಕಾಂಗ್ರೆಸ್ ಪರಮೋಚ್ಚ ನಾಯಕ ರಾಹುಲ್ ಗಾಂಧಿ ತನ್ನನ್ನ ಮುಖ್ಯಮಂತ್ರಿ ಸ್ಥಾನದಿಂದ ಕೆಳೆಗಿಳಿಸುತ್ತಾರೆ ಎಂದು ಕನಸಿನಲ್ಲೂ ಊಹಿಸದಿದ್ದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸಿಎಂ ಗಾದಿಗೆ ಏರಿರುವುದನ್ನು ಮನ:ಪೂರ್ವಕವಾಗಿ ಒಪ್ಪಿಕೊಂಡಂತಿಲ್ಲ. ಮೇಲ್ನೋಟಕ್ಕೆ, ರಾಜಕೀಯ ಮುತ್ಸದ್ದಿತನ ತೋರುತ್ತಿರುವ ಸಿದ್ಧರಾಮಯ್ಯ, ‘ನಾನು ಪಕ್ಷದ ಜೊತೆಗೆ ಮತ್ತು ಮುಖ್ಯಮಂತ್ರಿ ಶಿವಕುಮಾರ್ವರ ಜೊತೆಗಿದ್ದೇನೆ,’ ಎಂಬ ಸಂದೇಶ ರವಾನಿಸುತ್ತಿದ್ದಾರಷ್ಟೇ. ರಾಜಕಾರಣದಲ್ಲಿ ಅಧಿಕಾರದ ರುಚಿ ಕಂಡ ಕೈಗಳು ಮತ್ತೆ ಪಕ್ಷವೆಂಬ ಮೂರ್ತಿ ಕೆತ್ತಲು ಕೂಡ್ರುವ ಸಾಧ್ಯತೆ ಕಡಿಮೆ. ಅಂತಹ ರಾಜಕೀಯ ಆತ್ಮಹತ್ಯೆಯನ್ನ ಸಿದ್ದರಾಮಯ್ಯರಂತಹ ಮೇಧಾವಿಯಿಂದ ಎಂದೂ ನಿರೀಕ್ಷೆ ಮಾಡಲೂ ಸಾಧ್ಯವಿಲ್ಲ. ಮುಖ್ಯಮಂತ್ರಿಯಾಗಿ ವಿಧಾನ ಸಭೆಯ ಮೊದಲ ಸೀಟಿನಲ್ಲಿ ಕುಳಿತಿದ್ದ ಸಿದ್ದರಾಮಯ್ಯರಿಗಿಂತಲೂ ಕೊನೆಯ ಸೀಟಿನಲ್ಲಿ ಕೂರುವ ಸಿದ್ದರಾಮಯ್ಯ ಅತ್ಯಂತ ಅಪಾಯಕಾರಿ ಎಂಬುದಕ್ಕೆ ಕರ್ನಾಟಕ ರಾಜಕಾರಣದ ಇತಿಹಾಸವೇ ಸಾಕ್ಷಿ. ಈಗ ಮತ್ತೆ ಸಿದ್ದರಾಮಯ್ಯರನ್ನ ವಿಧಾನಸಭೆಯ ಕೊನೆಯ ಸೀಟಿಗೆ ತಳ್ಳಲಾಗಿದೆ. ಹಾಗಿದ್ರೆ, ಖಾಲಿ ಕೂರದ ಸಿದ್ದರಾಮಯ್ಯ ಮುಂದೇನು ಮಾಡ್ತಾರೆ ಎಂಬುದಕ್ಕೆ ಉತ್ತರವೇ, “ಅಹಿಂದ” ಚಳವಳಿಗೆ ರಾಜಕೀಯ ಮರುಜೀವ ನೀಡುವ ಪ್ರಯತ್ನ.
ಇದನ್ನೂ ಓದಿ: ‘ಈಗಲೂ ನಮಗೆ ಸಿದ್ದರಾಮಯ್ಯನವರೇ ಆರ್ಮಿ ಕ್ಯಾಪ್ಟನ್’: ಮಾಜಿ ಸಿಎಂ ಜೊತೆಗಿನ ವೈಮನಸ್ಸೆಂಬ ವದಂತಿಗೆ ಸತೀಶ್ ಜಾರಕಿಹೊಳಿ ತೆರೆ
ಇತ್ತಿಚೆಗಷ್ಟೇ ಮುಂದೇನು ಎಂಬ ಪ್ರಶ್ನೆ ಮುಂದಿಟ್ಟಾಗ, ಸಂಘಟನೆಯೇ ಶಕ್ತಿ ಎಂಬ ಮಾತನ್ನ ಸಿದ್ದರಾಮಯ್ಯ ತಮ್ಮ ಅತ್ಯಾಪ್ತರ ಬಳಿ ಹೇಳಿಕೊಂಡಿದ್ದಾರೆ. ಮೂರು ತಿಂಗಳ ವಿಶ್ರಾಂತ ಜೀವನದ ಬಳಿಕ ಮತ್ತೆ ಅಹಿಂದ ಸಂಘಟಿಸುವ ಮಾತನಾಡಿದ್ದಾರೆ. ಆದ್ರೆ ರಾಜಕೀಯದ ಗುರಿಯಲ್ಲದೇ ನಡೆಸುವ ಚಳುವಳಿ, ಕೇವಲ ಹೋರಾಟಗಾರರನ್ನ ರೂಪಿಸಬಹುದೇ ಹೊರತು ಮುಖ್ಯಮಂತ್ರಿಯನ್ನಲ್ಲ ಎಂಬ ಎಚ್ಚರಿಕೆಯನ್ನು ಅವರ ಅಪ್ತರು ನೀಡಿದ್ದಾರೆ. ಆಪ್ತರು ನೀಡಿದ ಸಲಹೆ ಕಿವಿಮಾತುಗಳನ್ನು ಅಳೆದು ತೂಗಿದ ಬಳಿಕ, ಅಹಿಂದ ವೇದಿಕೆಯನ್ನೇರಲು ಸಿದ್ದರಾಮಯ್ಯ ಕೊನೆಗೂ ಸಿದ್ಧರಾಗಿದ್ದಾರೆ.
ಶೋಷಿತ ಸಮುದಾಯಗಳ ಒಕ್ಕೂಟ ಎಂಬ ಸಿದ್ದರಾಮಯ್ಯರ ಕೃಪಾಪೋಷಿತ ಸಂಘವೇ, ಅಹಿಂದ ಸಂಘಟನೆಯ 25 ವರ್ಷಗಳ ಸಂಭ್ರಮಾಚರಣೆಯ ಜೊತೆಗೆ ಸಿದ್ದರಾಮಯ್ಯರ ಅಭಿನಂದನಾ ಕಾರ್ಯಕ್ರಮವನ್ನ ಕೂಡ ಹಮ್ಮಿಕೊಂಡಿತ್ತು. ‘ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ,’ ಎಂಬ ಘೋಷಣೆಯೊಂದಿಗೆ ವೇದಿಕೆಗೆ ಸ್ವಾಗತ ಮಾಡಿದ ತನ್ನ ಫ್ಯಾನ್ಸ್ಗಳಿಗೆ ನಿರಾಸೆ ಮಾಡದ ಸಿದ್ಧರಾಮಯ್ಯ, ‘ರಾಜಕೀಯ ಸನ್ಯಾಸದ ಮಾತೇ ಇಲ್ಲ,’ ಎಂಬ ಸಂದೇಶದೊಂದಿಗೆ ಮಾತು ಮುಗಿಸಿದ್ದರು.
ತಮ್ಮ ಬೆಂಬಲಿಗರಿಗೆ ಬಿಚ್ಚು ಶಬ್ದಗಳಿಂದಲೇ ಸಂದೇಶ ರವಾನಿಸಿದ್ದರೂ, ಈ ಅಹಿಂದ ರಚನೆಗೆ ಸಂಬಂಧ ಪಟ್ಟ ಎಲ್ಲಾ ನಾಯಕರು ಅಲ್ಲಿ ಇರಲಿಲ್ಲ ಎಂಬುದು ಉಲ್ಲೇಖನೀಯ. ಅಹಿಂದ ಜ್ಯೋತಿಯ ನೇತೃತ್ವವನ್ನ ಹಿಡಿಯುವ ಮುಂದಿನ ಕೈ ಎಂದು ಯತೀಂದ್ರ ಸಿದ್ದರಾಮಯ್ಯರಿಂದಲೇ ಹೇಳಲ್ಪಟ್ಟ, ಸತೀಶ್ ಜಾರಕಿಹೊಳಿ, ಸಿದ್ದರಾಮಯ್ಯರಿಂದ ಅಂತರ ಕಾಪಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಸ್ಥಾನದಿಂದ ಇಳಿಯಲ್ಪಟ್ಟ ದಿನದಿಂದಲೂ ಸಿದ್ದರಾಮಯ್ಯ ಹಾಗೂ ಸತೀಶ್ ನಡುವಿನ ಸಂಬಂಧ ದಿನೇ ದಿನೇ ಹಳಸುತ್ತಲೇ ಇದೆ. ಸತೀಶ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪ್ರಯತ್ನಿಸಿದ್ದರೂ, ಸಿದ್ದರಾಮಯ್ಯ ಮಾತ್ರ ಮನಬಿಚ್ಚಿ ಬೆಂಬಲಿಸಿರಲಿಲ್ಲ. ಹಿಂದುಳಿದ ವರ್ಗದ ಇತರ ನಾಯಕರು ಸತೀಶ್ ಪರವಾಗಿ ಬ್ಯಾಟ್ ಬೀಸಿದಾಗಲೂ, ನೀವೇಕೆ ಆತನ ಪರ ನನ್ನ ಬಳಿ ಮಾತನಾಡ್ತೀರಿ ಎಂದು ಸಿದ್ದರಾಮಯ್ಯ ನೇರವಾಗಿಯೇ ಹೇಳಿದ್ದಾರೆ. ಜೊತೆಗೆ ಈ ಹಿಂದೆ ಸಿಎಂ ಆಗಿದ್ದಾಗ, ಬೆಳಗಾವಿಗೆ ತೆರಳಿದಾಗ ಶಿಷ್ಟಾಚಾರಕ್ಕೂ ಕೆಲವು ಬಾರಿ ಸ್ವಾಗತಕ್ಕೆ ಬರಲಿಲ್ಲವೇಕೆ ಎಂದು ಮರುಪ್ರಶ್ನೆ ಎಸೆದಿದ್ದಾರೆ. ವಾಸ್ತವದಲ್ಲಿ ಡಿ.ಕೆ. ಶಿವಕುಮಾರ್ ಜೊತೆ ಜಾರಕಿಹೊಳಿ ಹೆಣೆದುಕೊಂಡಿರುವ ಹೊಸ ಸಂಬಂಧ ಸಿದ್ದರಾಮಯ್ಯಗೆ ಬಿಲ್ ಕುಲ್ ಇಷ್ಟವಿಲ್ಲ. ಹೀಗಾಗಿ ಯತೀಂದ್ರ, ಜಾರಕಿಹೊಳಿ ಪರವಾಗಿ ನೀಡಿರುವ ಅಹಿಂದ ನಾಯಕತ್ವದ ಹೇಳಿಕೆ ಸಿದ್ದರಾಮಯ್ಯ ಸೊಪ್ಪೇ ಹಾಕಿಲ್ಲ.
ಇನ್ನು, ಹೆಚ್.ಸಿ.ಮಹಾದೇವಪ್ಪ ಮತ್ತು ಸಿದ್ದರಾಮಯ್ಯ ಇತ್ತೀಚಿನ ದಿನಗಳಲ್ಲಿ ಜಾತ್ರೆ ಪೇಟೆಯಲ್ಲಿ ಎದುರು ಬದುರಾಗುವ ಅನಾಮಿಕರಂತಾಗಿದ್ದಾರೆ. ಎದುರು ಸಿಕ್ಕರೂ ಇಬ್ಬರೂ ಮಾತನಾಡುತ್ತಿಲ್ಲ. ಕಳೆದ ವಿಧಾನ ಮಂಡಲ ಅಧಿವೇಶದ ವೇಳೆ ಆಡಳಿತ ಪಕ್ಷದ ಮೊಗಸಾಲೆಯಲ್ಲಿ ಸಿದ್ದರಾಮಯ್ಯ ಕೂತಿದ್ದರೂ, ಮಹದೇವಪ್ಪ ಮತ್ತು ಜಾರಕಿಹೊಳಿ ಮಾಜಿ ಸಿಎಂ ಮುಖವನ್ನು ನೋಡದೇ ಪರಸ್ಪರ ಮಾತನಾಡುತ್ತಾ ದೂರ ನಡೆದಿದ್ದು ಎಲ್ಲರೂ ನೋಡಿದ್ದಾರೆ. ಸಿದ್ದರಾಮಯ್ಯ ಚುನಾವಣಾ ವ್ಯವಸ್ಥೆ ಭ್ರಷ್ಟವಾಗಿದೆ ಅಂತಾ ಹೇಳಿದಾಗ, ಈ ಮೊದಲು ಗೊತ್ತಿರಲಿಲ್ಲವೇ ಎಂದು ಮಹದೇವಪ್ಪ ಹೇಳಿಕೆ ನೀಡಿರುವುದು ಅಚ್ಚರಿಯ ವಿಷಯ.
ಅತ್ತ ಜಮೀರ್ ಅಹಮದ್ ಖಾನ್ ಕಥೆ ಕೂಡ ಇದೆಲ್ಲದಕ್ಕಿಂತ ಭಿನ್ನವಾಗಿಲ್ಲ. ದಾವಣಗೆರೆ ಉಪ ಚುನಾವಣೆ ನೆಪವನ್ನೇ ಆಧಾರವಾಗಿಟ್ಟುಕೊಂಡು ಸಿದ್ದರಾಮಯ್ಯ, ಜಮೀರ್ ವಿರುದ್ದ ಕೆಂಡಕಾರಲು ಆರಂಭಿಸಿದ್ದಾರೆ. ಮನೆಗೆ ಬಂದ ಕನ್ನಡ ಕಾರ್ಯಕರ್ತರ ಮುಂದೆಯೇ ಆಪ್ತನಾದ್ರೆ ಕ್ಷಮಿಸಿ ಬಿಡಬೇಕಾ ಎಂದಿರುವುದು ಇದಕ್ಕೆ ತಾಜಾ ಉದಾಹರಣೆ. ಡಿ.ಕೆ.ಮಂತ್ರಿ ಮಂಡಲಕ್ಕೆ ಯಾವುದೇ ಕಾರಣಕ್ಕೂ ಜಮೀರ್ ಸೇರಕೂಡದು ಎಂದು ಕಟ್ಟಾಜ್ಞೆ ಹೊರಡಿಸಿದ್ದರೂ, ಜಮೀರ್ ಕ್ಯಾಬಿನೆಟ್ ಎಂಟ್ರಿ ಕೊಟ್ಟಿರುವುದು, ಸಿದ್ದರಾಮಯ್ಯವರ ಸಿಟ್ಟು ತಾರಕಕ್ಕೇರಲು ಮತ್ತೊಂದು ಕಾರಣವಾಗಿದೆ. ಇನ್ನೂ ಎಲ್ಲವನ್ನ ಸರಿಪಡಿಸುವ ಪ್ರಯತ್ನಕ್ಕೆ ಮುಂದಾಗಿ, ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಜೊತೆ ಜಮೀರ್ ಒನ್ ಟು ಒನ್ ಮೀಟಿಂಗ್ ನಡೆಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಹಿಂದೆ ಸಿದ್ದರಾಮಯ್ಯ ಜೊತೆಗಿದ್ದ ಅಹಿಂದ ಘಟಾನುಘಟಿಗಳೆಲ್ಲರೂ ಈಗ ದೂರವಾಗಿದ್ದಾರೆ. ಹೀಗಾಗಿ ಈಗ ಅಹಿಂದ ಕುದುರೆಗಳಲ್ಲಾ ದಿಕ್ಕಾಪಾಲಾಗಿವೆ.
ಎಲ್ಲಾ ಕುದುರೆಗಳ ಚುಕ್ಕಾಣಿ ಹಿಡಿದು ಅಹಿಂದ ರಥವನ್ನ ಸರಿದಾರಿಗೆ ತರಲು ಹಿರಿಯ ನಾಯಕನೊಬ್ಬನ ತಲಾಶ್ನಲ್ಲಿದ್ದಾರೆ, ಸಿದ್ಧರಾಮಯ್ಯ. ಈಗ ಕೆ.ಎನ್. ರಾಜಣ್ಣ ನಾನಿದ್ದೇನೆ ಎನ್ನುತ್ತಾ, ತಮ್ಮ ಹಿರಿತನವನ್ನೇ ಆಧಾರವಾಗಿಟ್ಟುಕೊಂಡು ಚದುರಿದ ಮಹಾರಥಿಗಳೆಲ್ಲರನ್ನ ರಣರಂಗಕ್ಕೆ ವಾಪಸ್ ಕರೆತರುವ ಕೆಲಸ ಕೈ ಹಾಕಿದ್ದಾರೆ. ಕಳೆದ ವಾರ ಸಿದ್ದರಾಮಯ್ಯ ಜೊತೆ ಅನೌಪಚಾರಿಕವಾಗಿ ಮಾತುಕತೆ ನಡೆಸಿದ ರಾಜಣ್ಣ, ಬಳಿಕ ಸತೀಶ್ ಜಾರಕಿಹೊಳಿ ಜೊತೆ ಪ್ರತ್ಯೇಕ ಸಭೆ ನಡೆಸಿದ್ದಾರೆ. ಮಹದೇವಪ್ಪ ಜೊತೆಯೂ ನಿರಂತರ ಸಂಪರ್ಕದಲ್ಲಿದ್ದಾರೆ. ಡಿಸಿಎಂ ಪರಮೇಶ್ವರ್ ಅವರನ್ನ ಜೊತೆಗಿಟ್ಟುಕೊಂಡಿದ್ದಾರೆ. ಮೇಲಾಗಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನವನ್ನೂ ತಪ್ಪಿಸಿರುವ ಸಿಟ್ಟು ರಾಜಣ್ಣಗಿದ್ದು, ಕಾಂಗ್ರೆಸ್ ಮನೆಯೊಳಗೇ ಅಹಿಂದ ಎಂಬ ಪರ್ಯಾಯ ಶಕ್ತಿ ಕೇಂದ್ರವನ್ನ ಗಟ್ಟಿಗೊಳಿಸಲು ಅಣಿಯಾಗುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸಹ ಈ ರಾಜಕೀಯ ಸೂತ್ರವನ್ನ ಬಿಗಿಯಲು ಸಹಾಯ ಮಾಡುವ ನಿರೀಕ್ಷೆ ಇದೆ.
ಆದರೆ ಇಲ್ಲೊಂದು ಸಮಸ್ಯೆ ಇದೆ. ಸಿದ್ದರಾಮಯ್ಯ ಅಹಿಂದದ ಪ್ರಶ್ನಾತೀತ ನಾಯಕನಾಗಿದ್ದರೂ, ಮುಂದಿನ ಚುನಾವಣೆಗೆ ನಿಲ್ಲೋದಿಲ್ಲ ಎಂದು ಹೇಳಿದ್ದಾರೆ. 80ರ ಹರೆಯದ ಸಿದ್ದರಾಮಯ್ಯ ಮತ್ತೆ ರಾಜಕೀಯ ಯೌವನಕ್ಕೆ ಮರಳುವ ಮಾತೇ ಇಲ್ಲ. ಇಷ್ಟು ದಿನ ಹಿಂದೆ ನಿಂತು ಜೈ ಜೈ ಎಂದ ಬೆಂಬಲಿಗರು ಸಹ ತಮ್ಮ ಭವಿಷ್ಯದ ದಾರಿ ಹುಡುಕಲು ಆರಂಭಿಸಿದ್ದಾರೆ. ಹೀಗಾಗಿ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಟ್ರಂಪ್ ಕಾರ್ಡ್ ವರ್ಕ್ ಔಟ್ ಆಗುತ್ತಾ ಎಂಬುದು ಅನುಮಾನ. ಆಗ ಮುಂದಿನ ನಾಯಕನಾರು ಎಂದಾಗ ಎಲ್ಲರೂ ಒಂದೇ ಹೆಸರು ಹೇಳುತ್ತಾರಾ ಎಂಬುದು ಪ್ರಶ್ನೆಯೇ? ಈಗಾಗಲೇ ಒಡೆದ ಮನಸ್ಸುಗಳು ಚುನಾವಣೆ ಬಳಿಕ ಅಥವಾ ಅಧಿಕಾರ ಸಿಕ್ಕ ಬಳಿಕ ಮತ್ತೆ ಒಮ್ಮತದಿಂದ ಹೋಗುತ್ತಾರೆ ಎಂಬುದಕ್ಕೆ ಯಾವ ಸಾಕ್ಷ್ಯಾಧಾರಗಳಿಲ್ಲ. ಚುನಾವಣೆಗಿಂತ ಮೊದಲು ವಿಶ್ವಾಸದ ರಾಜಕಾರಣ; ಬಾಯ್ಮಾತಿನ ಲೆಕ್ಕಾಚಾರ. ಚುನಾವಣಾ ನಂತರ ಏನು ಬೇಕಾದರೂ ಆಗಬಹುದು. ಅಧಿಕಾರವೆಂಬ ಸಿಂಹಾಸನ ದೂರವಾಗಿದ್ದರೂ, ತಮ್ಮ ಜೀವನದ ಕಟ್ಟ ಕಡೆಯವರೆಗೂ ಸಿದ್ದರಾಮಯ್ಯ ತಮಗೆ ಸಿಕ್ಕಿರುವ ಅಹಿಂದ ನಾಯಕತ್ವವನ್ನ ತಮ್ಮಿಂದಾಗಲಿ ತಮ್ಮ ಕುಟುಂಬದಿಂದಾಗಲಿ ಬಿಟ್ಟುಕೊಡುವಷ್ಟು ಮೂರ್ಖರಂತೂ ಅಲ್ಲವೇ ಅಲ್ಲ.
ಸಿಂಹಾಸನ ಮಣ್ಣಿನದ್ದಾದರೂ ಸ್ವಂತದ್ದೇ ಆಗಿರಬೇಕು ಸಾಮೂಹಿಕದ್ದಲ್ಲ ಎಂಬ ರಾಜಕೀಯ ಜಾಣ್ಮೆ ಸಿದ್ದರಾಮಯ್ಯರಿಗೆ ಇದೆ. ಆದರೆ ಸಿದ್ದರಾಮಯ್ಯ ಮತ್ತೆ ಅಧಿಕಾರದ ಪೀಠ ಏರಲು ಅಹಿಂದ ರಥದ ಎಲ್ಲಾ ಗಾಲಿಗಳು ಒಂದಾಗಿಲ್ಲ ಎಂಬುದು ಕಾಲದ ಕಟು ಸತ್ಯ. ಮುರಿದ ಗಾಲಿಗಳನ್ನ ಒಂದಾಗಿ ಸೇರಿಸಿದರೂ ಅದೆಷ್ಟು ದೂರ ಓಡಬಲ್ಲವು ಎಂಬುದನ್ನು ಸಿದ್ಧರಾಮಯ್ಯನವರೇ ಹೇಳಬೇಕು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:46 pm, Fri, 25 September 26




