
ಬೆಂಗಳೂರು, ಸೆಪ್ಟೆಂಬರ್ 24: ವಿಮಾನದಲ್ಲಿ ಬಂದು ಕಳ್ಳತನ ಮಾಡುತ್ತಿದ್ದ ಬಿ.ಟೆಕ್ ಪದವೀಧರನಾಗಿರುವ ಹೈಟೆಕ್ ಕಳ್ಳನೋರ್ವನನ್ನು ಬೆಂಗಳೂರಿನ ವಿಲ್ಸನ್ ಗಾರ್ಡನ್ ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದಾರೆ. ವಿನೋದ್ ಕುಮಾರ್ ಎಂಬಾತ ಬಂಧಿತ ವ್ಯಕ್ತಿಯಾಗಿದ್ದು, ಈತ ಅಂತರಾಜ್ಯ ಕಳ್ಳ ಎಂಬುದೂ ಬಯಲಾಗಿದೆ. ಮಧ್ಯಪ್ರದೇಶ, ಆಂಧ್ರಪ್ರದೇಶ, ಕರ್ನಾಟಕ ರಾಜ್ಯಗಳು ಸೇರಿದಂತೆ ಒಟ್ಟು 30ಕ್ಕೂ ಅಧಿಕ ಮನೆಗಳಲ್ಲಿ ಈತ ಕಳ್ಳತನ ನಡೆಸಿದ್ದ. ಈ ಹಣದಲ್ಲಿ ಶೋಕಿ ಜೀವನ ಮಾಡುತ್ತಿದ್ದ ಎನ್ನಲಾಗಿದೆ.
ಇನ್ನು ಆರೋಪಿಯ ವಿಚಾರಣೆ ವೇಳೆ ಹಲವು ರೋಚಕ ವಿಚಾರಗಳು ಬಯಲಾಗಿವೆ. ವಿನೋದ್ ಕುಮಾರ್ ಮೂಲತಃ ಆಂಧ್ರಪ್ರದೇಶದ ಹೈದರಾಬಾದ್ನವನು. ಬಿ. ಟೆಕ್ ಓದುವಾಗಲೇ ಕಳ್ಳತನ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಈತ, ಒಂದು ವರ್ಷ ಜೈಲಲ್ಲೂ ಇದ್ದ. ಜೈಲಿನಿಂದ ಬಿಡುಗಡೆಯಾಗಿ ಸಲೂನ್ ಒಂದರಲ್ಲಿ ಕೆಲಸಕ್ಕೆ ಸೇರಿದ್ದ ಆರೋಪಿ, ಆ ವೇಳೆ ಅಲ್ಲೇ ಕೆಲಸ ಮಾಡುತ್ತಿದ್ದ ಬಾಂಗ್ಲಾ ದೇಶದ ಯುವತಿಯನ್ನು ಪ್ರೀತಿ ಮಾಡಿ ಮದುವೆಯಾಗಿದ್ದ. ಬಳಿಕ ಆಕೆಯ ಜೊತೆಗೆ ಬಾಂಗ್ಲಾಕ್ಕೆ ತೆರಳಿದ್ದ. ಸುಮಾರು 9 ವರ್ಷಗಳ ಕಾಲ ಬಾಂಗ್ಲಾ ದೇಶದಲ್ಲಿ ವಾಸವಾಗಿ ಅಲ್ಲಿನ ಪೌರತ್ವ ಪಡೆದಿದ್ದ ಈತ, ನಂತರ ನಕಲಿ ಪಾಸ್ಪೋರ್ಟ್ ಪಡೆದು ಇಟಲಿ ಹಾಗೂ ಜರ್ಮನಿಗೂ ತೆರಳಿದ್ದ. ಅಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದನಾದರೂ ಆತನಿಗೆ ಅದು ಸಮಾಧಾನ ತಂದಿರಲ್ಲಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: ಲೋನ್ ಕಟ್ಟದ ಕಾರುಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡ್ತಿದ್ದ ಗ್ಯಾಂಗ್ ಅರೆಸ್ಟ್
ಈ ನಡುವೆ ಕಳೆದ ವರ್ಷ ನೇಪಾಳದ ಮೂಲಕ ಕಳ್ಳ ಮಾರ್ಗದಲ್ಲಿ ಭಾರತಕ್ಕೆ ವಾಪಸ್ ಬಂದಿದ್ದ ವಿನೋದ್, ತನ್ನ ಕಳ್ಳತನದ ವೃತ್ತಿಯನ್ನು ಪುನರಾರಂಬಿಸಿದ್ದ. ಇದಕ್ಕಾಗಿ ವಿಮಾನದಲ್ಲಿ ಬಂದು ವಿಮಾನದಲ್ಲೇ ಹೋಗುತ್ತಿದ್ದ ಆರೋಪಿ ಬೆಂಗಳೂರಿನಲ್ಲಿ ಕೈಚಳಕ ತೋರಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಬೆಂಗಳೂರಿನಲ್ಲಿ ಕಳ್ಳತನ ಮಾಡಿ ದೆಹಲಿಯಲ್ಲಿದ್ದ ಹೆಂಡತಿಗೆ ಹಣ ಕೊಟ್ಟು ಬರುತ್ತಿದ್ದ ವೇಳೆ ವಿನೋದ್ನ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.