ಬೆಂಗಳೂರಿನಲ್ಲಿ ಹಿಟ್ ಅಂಡ್ ರನ್ ಪ್ರಕರಣ;ಅಪಘಾತ ಮಾಡಿ ಎಸ್ಕೇಪ್ ಆಗಿದ್ದ ಆರೋಪಿ ಬಂಧನ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಪಘಾತ ಸಂಖ್ಯೆಗಳು ಹೆಚ್ಚುತ್ತಲೇ ಇದೆ. ಈ ಕುರಿತು ಸಂಚಾರ ಪೊಲೀಸರು ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರು ಕೂಡ ಇದಕ್ಕೆ ಬ್ರೇಕ್ ಹಾಕಲಾಗುತ್ತಿಲ್ಲ. ಅದರಂತೆ ಇತ್ತೀಚೆಗೆಷ್ಟೆ ಬೈಕ್ನಲ್ಲಿ ಬಂದ ಯುವಕರು ಆಟೋಗೆ ಡಿಕ್ಕಿ ಹೊಡೆದಿದ್ದರು. ಇದರಿಂದ ಆಟೋ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದ. ಆದರೆ, ಡಿಕ್ಕಿ ಹೊಡೆದ ಯುವಕರು ಸ್ಥಳದಿಂದ ಪರಾರಿಯಾಗಿದ್ದರು. ಇದೀಗ ಬಸವನಗುಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬೆಂಗಳೂರು, ಫೆ.16: ನಗರದಲ್ಲಿ ಹಿಟ್ ಅಂಡ್ ರನ್(Hit and run) ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಸವನಗುಡಿ ಸಂಚಾರ ಪೊಲೀಸರು ಪತ್ತೆ ಹಚ್ಚಿದ್ದಾರೆ. ವೇಣು ಬಂಧಿತ ಆರೋಪಿ. ಫೆ.12ನೇ ತಾರೀಖು ಬಸವನಗುಡಿ ಠಾಣಾ ವ್ಯಾಪ್ತಿಯ ಗವಿಪುರ ಎಕ್ಸ್ ಟೆನ್ಸನ್ನ ರಸ್ತೆಯಲ್ಲಿ ಬೈಕ್ನಿಂದ ಆಟೋಗೆ ಡಿಕ್ಕಿ ಹೊಡೆದು ಎಸ್ಕೇಪ್ ಆಗಿದ್ದ. ಅಪಘಾತದಲ್ಲಿ ಆಟೋ ಚಾಲಕ ರಮೇಶ್ (48) ಎಂಬಾತ ಮೃತಪಟ್ಟಿದ್ದ.ಘಟನೆಗೆ ದ್ವಿಚಕ್ರ ವಾಹನ ಸವಾರನ ಅತಿವೇಗ ಹಾಗೂ ಅಜಾಗರೂಕತೆಯೇ ಕಾರಣವೆಂದು ತಿಳಿದಿತ್ತು. ಆದ್ರೆ, ಆರೋಪಿ ವೇಣು ಅಪಘಾತದ ನಂತರ ಎಸ್ಕೇಪ್ ಆಗಿದ್ದ.
ಸಿಸಿಟಿವಿ ಪರಿಶೀಲನೆ ಮಾಡಿ ಆರೋಪಿ ಬಂಧನ
ಇನ್ನು ಈ ಪ್ರಕರಣ ದಾಖಲಿಸಿಕೊಂಡಿದ್ದ ಬಸವನಗುಡಿ ಪೊಲೀಸರು ತನಿಖೆ ಕೈಗೊಂಡಿದ್ದರು. ಆದ್ರೆ, ಪೊಲೀಸರಿಗೆ ಆರೋಪಿಯ ಸಣ್ಣ ಸುಳಿವುಸಿಕ್ಕಿರಲಿಲ್ಲ. ಸಿಸಿಟಿವಿಯೊಂದರಲ್ಲಿ ಹಳದಿ ಬಣ್ಣದ ಟಿಶರ್ಟ್ ಧರಿಸಿದ್ದದ್ದು ಮಾತ್ರ ಗೊತ್ತಾಗಿತ್ತು. ಆರೋಪಿ ಬೈಕ್ಗೆ ನಂಬರ್ ಪ್ಲೇಟ್ ಸಹ ಇರಲಿಲ್ಲ. ಸುಮಾರು ಎರೆಡು ದಿನಗಳ ಕಾಲ ಸಿಸಿಟಿವಿ ಪರಿಶೀಲನೆ ಮಾಡಿ, ಸುಮಾರು 70 ಕ್ಕೂ ಅಧಿಕ ಸಿಸಿಟಿವಿ ಪರಿಶೀಲಿಸಿ ಆರೋಪಿಯನ್ನು ಬಂಧಿಸಲಾಗಿದೆ. ಈ ಕುರಿತು ಬಸವನಗುಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಲಾಲ್‌ಬಾಗ್ ವೆಸ್ಟ್ ಗೇಟ್ ಬಳಿ ತಡರಾತ್ರಿ ಹಿಟ್ ಅಂಡ್ ರನ್‌ಗೆ ಯುವ ಬೈಕ್ ಸವಾರ ಬಲಿ
ಕಬ್ಬಿಣ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ಕಾರ್ಮಿಕರ ಸಾವು
ರಾಮನಗರ: ಜಿಲ್ಲೆಯ ಕನಕಪುರ ತಾಲೂಕಿನ ಜಕ್ಕೇಗೌಡನದೊಡ್ಡಿ ಗ್ರಾಮದಲ್ಲಿ ಕಬ್ಬಿಣ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಕೋಲ್ಕತ್ತಾ ಮೂಲದ ಇಬ್ಬರು ಕಾರ್ಮಿಕರ ಸಾವನ್ನಪ್ಪಿದ್ದು, ಚಾಲಕನಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ. BWSSB ಕುಡಿವ ನೀರಿನ ಪೈಪ್ಲೈನ್ ಕಾಮಗಾರಿಗೆ ಬಂದಿದ್ದರು. ನಂತರ ಕನಕಪುರದಿಂದ ಜಕ್ಕೇಗೌಡನದೊಡ್ಡಿ ಕಡೆ ತೆರಳುತ್ತಿದ್ದಾಗ ದುರ್ಘಟನೆ ನಡೆದಿದೆ. ಈ ಕುರಿತು ಸಾತನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ