ಕೆಂಪೇಗೌಡ ಏರ್ಪೋರ್ಟ್ನಲ್ಲಿ ಕೋಟ್ಯಾಂತರ ಮೌಲ್ಯದ ಕೊಕೇನ್ ಜಪ್ತಿ; ದೇಹದೊಳಗೆ ಮರೆಮಾಚಿ ಅಕ್ರಮ ಸಾಗಾಟ ಮಾಡ್ತಿದ್ದ ಆಸಾಮಿ
ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್ಪೋರ್ಟ್ನಲ್ಲಿ ಆಗಾಗ ಚಿನ್ನ, ಡ್ರಗ್ಸ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಅಕ್ರಮವಾಗಿ ಸಾಗಿಸುವ ಪ್ರಕರಣಗಳು ಬೆಳಕಿಗೆ ಬರುತ್ತಲೆ ಇರುತ್ತದೆ. ಇದೀಗ ವೆನೆಜುವೆಲಾದ ಪ್ರಯಾಣಿಕನೊಬ್ಬ ತನ್ನ ದೇಹದೊಳಗೆ ಅಕ್ರಮವಾಗಿ ಬರೊಬ್ಬರಿ 9.2 ಕೋಟಿ ಮೌಲ್ಯದ ಕೊಕೇನ್ (Cocaine)ನನ್ನು ಸಾಗಾಟ ಮಾಡುತ್ತಿದ್ದ. ಅನುಮಾನಗೊಂಡು ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಬೆಂಗಳೂರು, ಫೆ.16: ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್ಪೋರ್ಟ್ನಲ್ಲಿ (Kempegowda International Airport) ಕೋಟ್ಯಾಂತರ ಮೌಲ್ಯದ ಕೊಕೇನ್ (Cocaine)ಜಪ್ತಿ ಮಾಡಲಾಗಿದೆ. ದುಬೈನಿಂದ ಬೆಂಗಳೂರಿಗೆ ಬಂದಿದ್ದ ವೆನೆಜುವೆಲಾದ ಪ್ರಯಾಣಿಕ, ದೇಹದೊಳಗೆ ಕೊಕೇನ್ ಮರೆಮಾಚಿ ಅಕ್ರಮ ಸಾಗಾಟಕ್ಕೆ ಯತ್ನಿಸಿದ್ದ. ಅನುಮಾನಗೊಂಡ ಡಿಆರ್ಐ ಅಧಿಕಾರಿಗಳು, ಆರೋಪಿಯನ್ನು ಸ್ಕ್ಯಾನಿಂಗ್ ಮಾಡಿಸಿದ್ದರು. ಈ ವೇಳೆ ದೇಹದಲ್ಲಿ ಬರೊಬ್ಬರಿ 9.2 ಕೋಟಿ ಮೌಲ್ಯದ 920 ಗ್ರಾಂ ನಾರ್ಕೋಟಿಕ್ ಕ್ಯಾಪ್ಸುಲ್ ಪತ್ತೆಯಾಗಿದ್ದು, ಮರೆಮಾಚಿದ್ದ ಕ್ಯಾಪ್ಸುಲ್‌ಗಳನ್ನು ಅಧಿಕಾರಿಗಳು ಹೊರತೆಗೆಸಿದ್ದಾರೆ. ಈ ಕುರಿತು NDPS ಕಾಯ್ದೆ 1985ರ ಅಡಿಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಇನ್ನು ಜ.05 ರಂದು ಕೆಂಪೇಗೌಡ ಏರ್ಪೋರ್ಟ್ನಲ್ಲಿ ಬರೊಬ್ಬರಿ 1.29 ಕೋಟಿ ರೂ. ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆಯಲಾಗಿತ್ತು. ಜೊತೆಗೆ ವಿದೇಶದಿಂದ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ 12 ಜನ ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಇವರಿಂದ 2.86 ಕೆಜಿ ಚಿನ್ನವನ್ನು ಜಪ್ತಿ ಮಾಡಿದ್ದರು. ಮಸ್ಕಟ್ ಮತ್ತು ಮದೀನಾದಿಂದ ಕೆಐಎಬಿಗೆ ಬಂದಿದ್ದ ಪ್ರಯಾಣಿಕರು ಇವರಾಗಿದ್ದು, ಮೈಮೇಲೆ ಬಂಗಾರ ಧರಿಸಿದರೆ ಕೇಳಲ್ಲ ಎಂದುಕೊಂಡಿದ್ದರಂತೆ. ಚಿನ್ನಕ್ಕೆ ಸರಿಯಾದ ಬಿಲ್ ಟ್ಯಾಕ್ಸ್ ಇಲ್ಲದ ಹಿನ್ನೆಲೆ ವಶಕ್ಕೆ ಪಡೆಯಲಾಗಿತ್ತು.
ಇದನ್ನೂ ಓದಿ:ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್ನಲ್ಲಿ 20 ಕೋಟಿ ರೂ. ಮೌಲ್ಯದ ಕೊಕೇನ್ ಜಪ್ತಿ
ಹೆಬ್ಬಗೋಡಿಯಲ್ಲಿ ಮನೆಗೆ ಕನ್ನಹಾಕಿ ಚಿನ್ನ, ಬೈಕ್ ಕದ್ದವರ ಬಂಧನ
ಬೆಂಗಳೂರು: ಹೊರವಲಯದ ಆನೇಕಲ್ ಉಪವಿಭಾಗದ ಹೆಬ್ಬಗೋಡಿಯಲ್ಲಿ ಮನೆಯ ಬಾಗಿಲು ಮುರಿದು ಚಿನ್ನಾಭರಣ ಹಾಗೂ ಬೈಕ್ ಕದಿಯುತ್ತಿದ್ದ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್, ಎಬಿನೈಜರ್ ಬಿನ್ ಮಧನ್, ಅಜಿತ್ ಹಾಗೂ ನವೀನ್ ಬಂಧಿತ ಆರೋಪಿಗಳು. ಬಂಧಿತರಿಂದ 11 ಬೈಕ್, 138 ಗ್ರಾಂ ಚಿನ್ನ, 284 ಗ್ರಾಂ ಬೆಳ್ಳಿ ವಶಕ್ಕೆ ಪಡೆಯಲಾಗಿದೆ. ಹೆಬ್ಬಗೋಡಿ, ಅತ್ತಿಬೆಲೆ, ಸೂರ್ಯನಗರ, ಪರಪ್ಪನ ಅಗ್ರಹಾರ ಸೇರಿ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇವರು ಕಳ್ಳತನ ಮಾಡುತ್ತಿದ್ದರು. ಬೆಮ್ಮಸಂದ್ರಬಳಿ ಕಳ್ಳತಕ್ಕೆ ಯತ್ನಿಸುತ್ತಿದ್ದ ವೇಳೆ ಆರೋಪಿಗಳನ್ನು ಬಂಧಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ