ಬಿನ್ನಿಮಿಲ್ ಬಳಿ ವಾಲಿದ ಪೊಲೀಸ್ ವಸತಿಗೃಹ: ಎಂಜಿನಿಯರ್, ಗುತ್ತಿಗೆದಾರನ ವಿರುದ್ಧ ಕ್ರಮಕ್ಕೆ ಗೃಹ ಸಚಿವರ ಸೂಚನೆ
ಇದು ಸುಮಾರು 63 ವರ್ಷಗಳ ಹಿಂದೆ ಕಟ್ಟಿರುವ ಕಟ್ಟಡ. ಸಾಕಷ್ಟು ಶಿಥಿಲಾವಸ್ಥೆ ತಲುಪಿದ್ದು ಮಳೆ ನೀರು ಮನೆಯೊಳಗೆ ಸೋರುವ ಸ್ಥಿತಿ ಇದೆ ಎಂದು ನಿವಾಸಿಗಳು ಅಲವತ್ತುಕೊಂಡರು.
ಬೆಂಗಳೂರು: ಸರ್ಕಾರದ ಹಣ ವ್ಯರ್ಥ ಆಗುವುದಕ್ಕೆ ಬಿಡುವುದಿಲ್ಲ. ಎಂಜಿನಿಯರ್, ಗುತ್ತಿಗೆದಾರನ ವಿರುದ್ಧ ಕ್ರಮಕ್ಕೆ ಸೂಚನೆ ನೀಡಲಾಗುವುದು. ಮುಂದಿನ ದಿನಗಳಲ್ಲಿ ಕಟ್ಟಡದ ಗುಣಮಟ್ಟದ ಬಗ್ಗೆ ನಿಗಾ ವಹಿಸುವಂತೆ ಹೇಳಿದ್ದೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದರು. ಬಿನ್ನಿಮಿಲ್ ಬಳಿ ಪೊಲೀಸ್ ವಸತಿಗೃಹ ವಾಲಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಮುಂದಿನ ದಿನಗಳಲ್ಲಿ ನಿರ್ಮಾಣವಾಗುವ ಪೊಲೀಸ್ ಕಟ್ಟಡಗಳು ಉತ್ತಮ ಗುಣಮಟ್ಟದಿಂದ ಕೂಡಿರಬೇಕು. ಈ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುವುದು ಎಂದರು.
ಇದು ಸುಮಾರು 63 ವರ್ಷಗಳ ಹಿಂದೆ ಕಟ್ಟಿರುವ ಕಟ್ಟಡ. ಸಾಕಷ್ಟು ಶಿಥಿಲಾವಸ್ಥೆ ತಲುಪಿದ್ದು ಮಳೆ ನೀರು ಮನೆಯೊಳಗೆ ಸೋರುವ ಸ್ಥಿತಿ ಇದೆ. ಹಲವು ನಿವಾಸಿಗಳು ಮನೆಗಳನ್ನು ಖಾಲಿ ಮಾಡಿದ್ದಾರೆ. ಪೊಲೀಸ್ ಸಮುಚ್ಚಯಕ್ಕೆ ಸೇರಿದ ಜಾಗ ಇರುವುದರಿಂದ ಹೊಸದಾಗಿ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸುತ್ತೇವೆ. ಪೊಲೀಸ್ ಠಾಣೆಗಳಿಗೂ ಸುಸಜ್ಜಿತ ಕಟ್ಟಡಗಳನ್ನು ವ್ಯವಸ್ಥೆ ಮಾಡಿಕೊಡುತ್ತೇವೆ. ಬಾಡಿಗೆ ಕಟ್ಟಡ, ಶೀಟ್ ಕಟ್ಟಡದಲ್ಲಿದ್ದ ಠಾಣೆಗಳಿಗೂ ಹಂತಹಂತವಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಿದ್ದೇವೆ. ಬೆಂಗಳೂರಿನ ಹಲಸೂರು ರಾಮಕೃಷ್ಣ ಮಠ ರಸ್ತೆಯಲ್ಲಿರುವ ಪೊಲೀಸ್ ಕ್ವಾರ್ಟರ್ಸ್ ವೀಕ್ಷಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪೊಲೀಸ್ ಇಲಾಖೆಗಾಗಿ ಹೆಚ್ಚಿನ ಹಣ ವ್ಯಯಿಸಲು ಗೃಹ ಇಲಾಖೆ ಬದ್ಧವಾಗಿದೆ. ಇವು ತೀರಾ ಹಳೆಯ ಮನೆಗಳು. ರಿಪೇರಿ ಮಾಡುವಂಥದ್ದಲ್ಲ, ರಿಪೇರಿ ಮಾಡುವಂಥ ಮನೆಗಳಾಗಿದ್ದರೆ ನಾಳೆಯೇ ಕೆಲಸ ಶುರು ಮಾಡಬಹುದಿತ್ತು. ಈ ಕಟ್ಟಡಗಳನ್ನು ಹೊಸದಾಗಿ ನಿರ್ಮಿಸಬೇಕಿದೆ ಎಂದರು.
ಕ್ವಾರ್ಟ್ರಸ್ ನಿವಾಸಿಗಳ ಸಮಸ್ಯೆ ಆಲಿಸಿದರು. ಮಳೆಯಿಂದ ಹಾನಿಗೊಳಗಾದ ಕಟ್ಟಡಗಳನ್ನೂ ವೀಕ್ಷಿಸಿದರು. ಈ ವೇಳೆ ಗೃಹ ಸಚಿವರೊಂದಿಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್.ಮುರುಗನ್ ಉಪಸ್ಥಿತರಿದ್ದರು. ಎಸಿಬಿ ದಾಳಿ ಒಂದು ಮಾಮೂಲಿ ಪ್ರಕ್ರಿಯೆ. ಭ್ರಷ್ಟರು ಯಾರೇ ಇರಲಿ, ಕಠಿಣ ಕ್ರಮ ನಿಶ್ಚಿತ. ತನಿಖಾ ಹಂತದಲ್ಲಿ ಅನಾವಶ್ಯಕವಾಗಿ ಮಾತನಾಡುವುದಿಲ್ಲ ಎಂದು ಹೇಳಿದರು. ನಗರದಲ್ಲಿರುವ ಅಕ್ರಮ ವಲಸಿಗರನ್ನು ಪತ್ತೆ ಮಾಡಲು ಸಿಸಿಬಿ ಮುಂದಾಗಿದೆ. ಐವರು ಬಾಂಗ್ಲಾ ವಲಸಿಗರನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದ್ದು, ಅಕ್ರಮ ವಲಸಿಗರ ಬಗ್ಗೆ ವಿಶೇಷ ಕ್ರಮ ವಹಿಸಲಾಗಿದೆ. ಎಲ್ಲ ಠಾಣೆಗಳಿಗೂ ಅಕ್ರಮ ವಲಸಿಗರ ಪತ್ತೆಗೆ ಸೂಚನೆ ನೀಡಲಾಗಿದೆ. ಈ ಕುರಿತು ವಿಶೇಷವಾದ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಆರಗ ಜ್ಞಾನೇಂದ್ರ ವಿರುದ್ಧವೇ ಕೇಸುಗಳಿವೆ, ಈಗ ಅವರೇ ಗೃಹ ಮಂತ್ರಿ! ಹೀಗಾದರೆ ನ್ಯಾಯ ಸಿಗುತ್ತಾ? -ಕಿಮ್ಮನೆ ರತ್ನಾಕರ್ ವ್ಯಂಗ್ಯ ಇದನ್ನೂ ಓದಿ: ಅಧಿಕಾರಿಗಳ ಜತೆ ‘100’ ಸಿನಿಮಾ ನೋಡಿದ ಗೃಹ ಸಚಿವ ಆರಗ ಜ್ಞಾನೇಂದ್ರ; ಈ ಚಿತ್ರದಲ್ಲಿ ಏನಿದೆ ವಿಶೇಷ?