ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ (Traffic) ಹಿನ್ನೆಲೆ ಪರಿಹಾರ ಕಂಡುಕೊಳ್ಳಲು ಟ್ರಾಫಿಕ್ ಜಂಕ್ಷನ್‌ಗಳಿಗೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ಪೊಲೀಸ್ ನಗರ ಆಯುಕ್ತ ಪ್ರತಾಪ್ ರೆಡ್ಡಿ, ಬೆಸ್ಕಾ ಎಂಡಿ ರಾಜೇಂದ್ರ ಚೋಳನ್, ಬಿಡಿಎ ಆಯುಕ್ತ ರಾಜೇಶ್ ಗೌಡ ಸಿಟಿ ರೌಂಡ್ಸ್ ಹಾಕಲಿದ್ದಾರೆ. 10 ಗಂಟೆಗೆ ಬಿಬಿಎಂಪಿಯಿಂದ ರೌಂಡ್ಸ್ ಹೊರಡಲಿದ್ದು, ಸಾರಕ್ಕಿ ಜಂಕ್ಷನ್, ಸಿಲ್ಕ್ ಬೋರ್ಡ್ ಜಂಕ್ಷನ್, ಕಾಡುಬಿಸನಹಳ್ಳಿ ಜಂಕ್ಷನ್‌ನಲ್ಲಿ ರೌಂಡ್ಸ್ ಹಾಕಲಿದ್ದಾರೆ. ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಈ ಕುರಿತು ಹೇಳಿಕೆ ನೀಡಿದ್ದು, ಭಾರತ ಸರ್ಕಾರದ ಅಡಿಯಲ್ಲಿ 25 ಜಂಕ್ಷನ್ ಅಭಿವೃದ್ಧಿ ಮಾಡಲಾಗುತ್ತಿದೆ. ಇದಕ್ಕೆ ಸಾರಕ್ಕಿ ಜಂಕ್ಷನ್ ಸೇರಿದೆ. ಒಂದು ಡಿಸೈನ್‌ನನ್ನು ನೀಡಲಾಗುತ್ತದೆ. 15 ದಿನದಲ್ಲಿ ಈಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಹಿನ್ನೆಲೆ ಕೆಲಸ ಮುಗಿಯುತ್ತದೆ. ಮುಂದಿನ ವಾರದಲ್ಲಿ ಎಲ್ಲಾ ಸೇರಿ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲು ಮಾತುಕತೆ ನಡೆಸಲಾಗುವುದು. ಪಾರ್ಕಿಂಗ್ ಸಮಸ್ಯೆಗೆ 3 ತಿಂಗಳಲ್ಲಿ ಪರಿಹಾರ ಸಿಗಲಿದೆ ಎಂದು ಹೇಳಿದರು.
ಇದನ್ನೂ ಓದಿ; Ranveer Singh Birthday: ರಣವೀರ್ ಸಿಂಗ್-ದೀಪಿಕಾ ಪಡುಕೋಣೆ ಮಧ್ಯೆ ಇರುವ ವಯಸ್ಸಿನ ಅಂತರವೆಷ್ಟು?
ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿದ್ದು, ನಾವು 10 ಮೇಜರ್ ಜಂಕ್ಷನ್ ಆಯ್ಕೆ ಮಾಡಿದ್ದೇವೆ. ಟ್ರಾಫಿಕ್ ಪೊಲೀಸರಿಂದ ಪಟ್ಟಿ ಕೊಟ್ಟಿದ್ದರು. ಅಲ್ಲೆಲ್ಲಾ ಹೋಗಿ ಪರಿಶೀಲನೆ ಮಾಡಿ ಪರಿಹಾರ ಕಂಡುಕೊಳ್ಳುತ್ತಿದ್ದೇವೆ. ಈ ಹಿಂದೆ ಹೆಬ್ಬಾಳ ಜಂಕ್ಷನ್‌ಗೆ ಹೋಗಿದ್ದೇವು. ಅಲ್ಲಿನ ಸಮಸ್ಯೆ ಬಗೆಹರಿಸುತ್ತಿದ್ದೇವೆ. ಅಲ್ಪಾವಧಿಯ ಕಾರ್ಯಾಚರಣೆ ಮಾಡುತ್ತಿದ್ದೇವೆ. ಕೆ.ಆರ್.ಪುರ ಸೇರಿ ಎಲ್ಲೆಡೆ ಕೆಲಸ ನಡೆಯುತ್ತಿದೆ. ಜಂಕ್ಷನ್ ಅಭಿವೃದ್ಧಿಯ ಪ್ಲಾನ್ ನಮಗೆ ಬರುತ್ತೆ. ಬೆಸ್ಕಾಂರವರಿಗೆ ಒಂದು ಪೋಷನ್ ಬರುತ್ತೆ ಎಂದು ಹೇಳಿದ್ದಾರೆ. ಗೊರಗುಂಟೆಪಾಳ್ಯದ ರಸ್ತೆ ಕೆಟ್ಟಿತ್ತು ಅದನ್ನು ಮಾಡುತ್ತಿದ್ದೇವೆ. ಸ್ಕೈವಾಕ್ ಮಾಡಬೇಕಾಗಿದೆ ಅದನ್ನು ಮಾಡುತ್ತಿದ್ದೇವೆ. ಸಾರಕ್ಕಿ ಜಂಕ್ಷನ್‌ನಲ್ಲಿ ಕೆಲ ಮಾರ್ಪಾಡು ಮಾಡಬೇಕು. ನಾವು ಟ್ರಾಫಿಕ್ ಕಡಿಮೆಗೆ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಸಾರಕ್ಕಿ ಜಂಕ್ಷನ್ ಪರಿಶೀಲನೆ:
ಸಿಂಧೂರ ರಸ್ತೆ ಕಡೆಯಿಂದ ಸಾರಕ್ಕಿ ಜಂಕ್ಷನ್ ಕಡೆಯ ರಸ್ತೆಯಲ್ಲಿ ಪಾಲಿಕೆ ವತಿಯಿಂದ ಅಳವಡಿಸಿರುವ ರಸ್ತೆಯ ನಾಮಫಲಕ, ಬೆಸ್ಕಾಂನವರು ಅಳವಡಿಸಿರುವ ಕಾಂಕ್ರೀಟ್ ಹಾಗೂ ಝೀರೋ ಟಾಲರೆನ್ಸ್ ಬೋರ್ಡ್‌ನ್ನು ಸ್ಥಳಾಂತರಿಸಿ ಪಾದಚಾರಿ ಮಾರ್ಗವನ್ನು ಸರಿಪಡಿಸಿ ಎಡಭಾಗಕ್ಕೆ ಹೋಗುವ ವಾಹನಗಳಿಗೆ ಸುಗಮವಾಗಿ ಚಲಿಸಲು ಅವಕಾಶ ಕಲ್ಪಿಸಬೇಕಾಗಿರುತ್ತದೆ. ಬಿ.ಎಂ.ಆರ್.ಸಿ.ಎಲ್ ಫಿಲ್ಲರ್‌ಗೆ ಅಳವಡಿಸಿರುವ ಸಿಗ್ನಲ್ ಲೈಟ್ ಎತ್ತರವನ್ನು ಇನ್ನೂ ಮೂರು ಅಡಿ ಎತ್ತರಕ್ಕೆ ಎತ್ತರಿಸಬೇಕಿದೆ.
ಸಾರಕ್ಕಿ ಜಂಕ್ಷನ್ ಕಡೆಯಿಂದ ಸಿಂಧೂರ ಜಂಕ್ಷನ್ ಕಡೆಗೆ ಚಲಿಸುವ ಕನಕಪುರ ರಸ್ತೆಯಲ್ಲಿ ಸಾರಕ್ಕಿ ಸಿಗ್ನಲ್‌ಗೆ ಹೊಂದಿಕೊಂಡಂತಿರುವ ಜೆ.ಪಿ.ನಗರ ಮೆಟ್ರೋ ನಿಲ್ದಾಣದ 14ನೇ ಇ ರಸ್ತೆಯಿಂದ ವಾಹನಗಳು ಪಾದಚಾರಿ ಮಾರ್ಗ ಮುಖೇನ ಕನಕಪುರ ರಸ್ತೆಗೆ ವೇಗವಾಗಿ ಬರುವುದರಿಂದ ಅಪಘಾತಗಳು ಉಂಟಾಗುತ್ತಿವೆ.
ಈ ಪೈಕಿ 14ನೇ ಇ ಅಡ್ಡರಸ್ತೆ ಹಾಗೂ ಕನಕಪುರ ಮುಖ್ಯ ರಸ್ತೆಯ ಮಧ್ಯದಲ್ಲಿ ಪಾದಚಾರಿ ಮಾರ್ಗಕ್ಕೆ ಗ್ರೀಲ್ ಹಾಗೂ ಪಾದಚಾರಿ ಕಂಬಗಳನ್ನು ಅಳವಡಿಸಿ ಸುಗಮ ಸಂಚಾರಕ್ಕೆ ಹಾಗೂ ಪಾದಚಾರಿಗಳ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕಾಗಿರುತ್ತದೆ. ಸಾರಕ್ಕಿ ಸಿಗ್ನಲ್ನಿಂದ ಕನಕಪುರ ಮುಖ್ಯ ರಸ್ತೆಯಲ್ಲಿ ಜರಗನಹಳ್ಳಿ ಕಡೆಗೆ ಸಾಗುವಾಗ ರಸ್ತೆಯ ಎಡಭಾಗದಲ್ಲಿರುವ ಪಾದಚಾರಿ ಮಾರ್ಗವು ಸಂಪೂರ್ಣವಾಗಿ ಹಾಳಾಗಿದ್ದು, ಪಾದಚಾರಿ ಮಾರ್ಗವನ್ನು ಸರಿಪಡಿಸಿ ಗ್ರೀಲ್‌ಗಳನ್ನು ಸರಿಯಾಗಿ ಅಳವಡಿಸಿ ಪಾದಚಾರಿಗಳು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲಮಾಡಿಕೊಡಬೇಕಾಗಿರುತ್ತದೆ.
ಕೋಣನಕುಂಟೆ ಕಡೆಯಿಂದ ಬಂದ ವಾಹನಗಳಿಗೆ ಸಾರಕ್ಕಿ ಜಂಕ್ಷನ್ ಬಳಿ ರಿಂಗ್ ರಸ್ತೆ ಕಡೆಗೆ ಸಿಗ್ನಲ್ ಮುಕ್ತ ಎಡ ತಿರುವು ಕಲ್ಪಿಸುವ ಸಲುವಾಗಿ ರಸ್ತೆಗೆ ಅಡ್ಡಲಾಗಿರುವ ಮರಗಳ ಕೊಂಬೆಗಳನ್ನು ಕತ್ತರಿಸಬೇಕು ಹಾಗೂ ಬೆಸ್ಕಾಂ ಅಳವಡಿಸಿರುವ ಸೀಮೆಂಟ್ ಕಂಬವನ್ನು ಪಾದಚಾರಿ ಮಾರ್ಗಕ್ಕೆ ಹೊಂದಿಕೊಂಡಂತೆ ಸ್ಥಳಾಂತರಿಸಬೇಕು. ಜೊತೆಗೆ ಸರ್ವೀಸ್ ರಸ್ತೆಯನ್ನು ರಿಂಗ್ ರಸ್ತೆ ಮಟ್ಟಕ್ಕೆ ಎತ್ತರಿಸಿ ಡಾಂಬರೀಕರಣ ಮಾಡಬೇಕಾಗಿರುತ್ತದೆ. ಇಲಿಯಾಜ್ ನಗರ ಕಡೆಯಿಂದ ಬಂದಂತಹ ವಾಹನಗಳು ಸಾರಕ್ಕಿ ಜಂಕ್ಷನ್ ಬಳಿ ಬನಶಂಕರಿ ಕಡೆಗೆ ಚಲಿಸಲು ಫ್ರೀ ಲೆಪ್ಟ್ ಟರ್ನ್‌ಗೆ ಅವಕಾಶ ಕಲ್ಪಿಸಬೇಕಾಗಿರುತ್ತದೆ.
ಈ ಸಂಬಂಧ ಮೇಲಿನ ಎಲ್ಲಾ ಕೆಲಸಗಳಿಗೆ ಸಂಬಂಧಿಸಿದಂತೆ ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಮುಖ್ಯ ಇಂಜಿನಿಯರ್ ಜಂಕ್ಷನ್ ಅಭಿವೃದ್ಧಿಗೊಳಿಸುವ ಸಂಬಂಧ ವಿನ್ಯಾಸ ಸಿದ್ದಪಡಿಸಿಕೊಂಡು, ಇರುವ ಸಮಸ್ಯೆಗಳನ್ನು ಬಗೆಹರಿಸಿ ಸಂಚಾರ ದಟ್ಟಣೆ ಕಡಿಮೆ ಮಾಡಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲು ಮಾನ್ಯ ಆಡಳಿತಗಾರರು ಸೂಚನೆ ನೀಡಿದರು. ಈ ವೇಳೆ ಬಿ.ಎಂ.ಆರ್.ಸಿ.ಎಲ್ ವ್ಯವಸ್ಥಾಪಕ ನಿರ್ದೇಶಕರು ಅಂಜುಂ ಫರ್ವೇಜ್, ಬಿಡಿಎ ಆಯುಕ್ತ ರಾಜೇಶ್ ಗೌಡ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ, ಸಂಚಾರಿ ಪೋಲಿಸ್ ಜಂಟಿ ಆಯುಕ್ತ ರವಿಕಾಂತೆ ಗೌಡ, ಸ್ಮಾರ್ಟ್ ಸಿಟಿ ಹಾಗೂ ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರು ರಾಜೇಂದ್ರ ಚೋಳನ್, ಪಾಲಿಕೆಯ ವಲಯ/ವಿಶೇಷ ಆಯುಕ್ತರುಗಳು, ಬಿ.ಎಂ.ಆರ್.ಸಿ.ಎಲ್ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.