AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IRCTC Tour Package: ಹೊಸ ವರ್ಷಕ್ಕೆ ಐಆರ್​ಸಿಟಿಸಿ ಗಿಫ್ಟ್; ಬೆಂಗಳೂರಿನಿಂದ ಗಯಾ, ಕಾಶಿ, ಅಯೋಧ್ಯೆಗೆ ವಿಶೇಷ ಟೂರ್ ಪ್ಯಾಕೇಜ್

ಐಆರ್​ಸಿಟಿಸಿ ಟೂರ್ ಪ್ಯಾಕೇಜ್: ಬೆಂಗಳೂರಿನಿಂದ ಕಾಶಿ, ಗಯಾ, ಅಯೋಧ್ಯೆಯ ಪ್ರವಾಸಕ್ಕಾಗಿ IRCTC ಹೊಸ ವರ್ಷದ ವಿಶೇಷ ಪ್ರವಾಸ ಪ್ಯಾಕೇಜ್ ಘೋಷಿಸಿದೆ. ಡಿಸೆಂಬರ್ 30ರಿಂದ ಫೆಬ್ರವರಿ 9ರ ನಡುವಣ ಅವಧಿಯಲ್ಲಿ 5 ದಿನಗಳ ಈ ಪ್ಯಾಕೇಜ್​ನಲ್ಲಿ ವಿಮಾನ, AC ವಸತಿ, ಬೆಳಗಿನ ಉಪಾಹಾರ ಮತ್ತು ಭೋಜನ ವ್ಯವಸ್ಥೆಗಳಿವೆ. ಯಾತ್ರೆಗೆ ಟಿಕೆಟ್ ಕಾಯ್ದಿರಿಸಲು ಅವಕಾಶವಿದ್ದು, ಟೂರ್ ಪ್ಯಾಕೇಜ್​ನ ಎಲ್ಲಾ ವಿವರ ಇಲ್ಲಿದೆ.

IRCTC Tour Package: ಹೊಸ ವರ್ಷಕ್ಕೆ ಐಆರ್​ಸಿಟಿಸಿ ಗಿಫ್ಟ್; ಬೆಂಗಳೂರಿನಿಂದ ಗಯಾ, ಕಾಶಿ, ಅಯೋಧ್ಯೆಗೆ ವಿಶೇಷ ಟೂರ್ ಪ್ಯಾಕೇಜ್
ಹೊಸ ವರ್ಷಕ್ಕೆ ಪ್ರವಾಸಿಗರಿಗೆ ಐಆರ್ಸಿಟಿಸಿ ವಿಶೇಷ ಕೊಡುಗೆ; ಬೆಂಗಳೂರಿನಿಂದ ಗಯಾ, ಕಾಶಿ ಮತ್ತು ಪ್ರಯಾಗ್ರಾಜ್​ ಪ್ರವಾಸದ ವಿವರ ಇಲ್ಲಿದೆ.
ಭಾವನಾ ಹೆಗಡೆ
|

Updated on:Dec 13, 2025 | 12:35 PM

Share

ಬೆಂಗಳೂರು, ಡಿಸೆಂಬರ್ 13: ಹೊಸ ವರ್ಷಕ್ಕೆ (New Year 2026) ವಿಶೇಷ ಟೂರ್ ಪ್ಯಾಕೇಜ್ ನೀಡಿರುವ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ನಿಗಮ (IRCTC), ಡಿಸೆಂಬರ್30 ರಿಂದ ಫೆಬ್ರುವರಿ 9ರ ನಡುವಣ ಅವಧಿಯಲ್ಲಿ ಕಾಶಿ, ಗಯಾ , ಅಯೋಧ್ಯೆಯ ಪ್ರವಾಸವನ್ನು ಹಮ್ಮಿಕೊಂಡಿದೆ. ಈ ಟೂರ್ ಪ್ಯಾಕೇಜ್, ಬೆಳಗಿನ ಉಪಾಹಾರ ಮತ್ತು ಭೋಜನದ ವ್ಯವಸ್ಥೆಯ ಜೊತೆಗೆ AC ಕೊಠಡಿಗಳೊಂದಿಗೆ 04 ರಾತ್ರಿಗಳ ಹೋಟೆಲ್ ವಸತಿಯ ಸೌಲಭ್ಯವನ್ನೂ ಕಲ್ಪಿಸಲಿದೆ.

IRCTC ಟೂರ್ ಪ್ಯಾಕೇಜ್​ನ ವೇಳಾಪಟ್ಟಿಯ ವಿವರ ಇಲ್ಲಿದೆ

ಡಿಸೆಂಬರ್ 30ರಂದು ಮತ್ತು ಫೆಬ್ರುವರಿ 05ರಂದು 6E-463 ಸಂಖ್ಯೆಯ ವಿಮಾನ ಬೆಳಗ್ಗೆ 08.25ಕ್ಕೆ ಬೆಂಗಳೂರಿನಿಂದ ಹೊರಟು, 10.55ಕ್ಕೆ ಪಟ್ನಾ ತಲುಪಲಿದೆ. ಜನವರಿ 30ರಂದು ಮತ್ತು ಫೆಬ್ರುವರಿ 09ರಂದು 6E-926 ಸಂಖ್ಯೆಯ ವಿಮಾನವು ಮಧ್ಯಾಹ್ನ 2.30ಕ್ಕೆ ಅಯೋಧ್ಯೆಯಿಂದ ಹೊರಡಲಿದ್ದು, ಸಂಜೆ 5.05ಕ್ಕೆ ಬೆಂಗಳೂರು ತಲುಪಲಿದೆ. ವಿಮಾನಯಾನ ಸಂಸ್ಥೆಯ ಕಾರ್ಯಾಚರಣೆಯ ಕಾರ್ಯಸಾಧ್ಯತೆಗೆ ಅನುಗುಣವಾಗಿ ವಿಮಾನ ಸಮಯ ಅಥವಾ ವೇಳಾಪಟ್ಟಿ ಬದಲಾವಣೆಗೆ ಒಳಪಟ್ಟಿರುತ್ತದೆ.

ಪ್ರಯಾಣದ ವಿವರ

ಬೆಂಗಳೂರಿನಿಂದ ಆರಂಭವಾಗುವ ಪ್ರಯಾಣವು 4 ರಾತ್ರಿ ಮತ್ತು 5 ದಿನಗಳ ಕಾಲಾವಧಿಯನ್ನು ಹೊಂದಿದ್ದು, ಪಾಟ್ನಾ, ಗಯಾ, ವಾರಾಣಸಿ, ಪ್ರಯಾಗ್​ರಾಜ್, ಅಯೋಧ್ಯೆಯ ಪ್ರವಾಸವನ್ನು ಹೊಂದಿರುತ್ತದೆ. ಮೊದಲನೇ ದಿನವಾದ ಡಿಸೆಂಬರ್ 30ಕ್ಕೆ ವಿಮಾನವು ಬೆಳಗ್ಗೆ 8.25ಕ್ಕೆ ಹೊರಡಲಿದ್ದು, ನಿಗದಿತ ಸಮಯಕ್ಕೂ 2 ಗಂಟೆ ಮುಂಚಿತವಾಗಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇರಬೇಕು ಎಂದು ನಿಗಮ ಸೂಚಿಸಿದೆ. ಪಾಟ್ನಾಗೆ 10.55 ಗಂಟೆಗೆ ಪ್ರಯಾಣಿಕರು ತಲುಪಲಿದ್ದು, ಬೋಧ್ ಗಯಾದಲ್ಲಿನ ಮಹಾಬೋಧಿ ದೇವಸ್ಥಾನಕ್ಕೆ ಭೇಟಿ ನೀಡಲಾಗುತ್ತದೆ. ನಂತರ ಹೋಟೆಲ್ ತಲುಪಲಾಗುತ್ತದೆ. ಬೋಧ್ ಗಯಾದಲ್ಲಿ ಭೋಜನ ಮತ್ತು ರಾತ್ರಿ ವಾಸ್ತವ್ಯದ ವ್ಯವಸ್ಥೆ ಇರುತ್ತದೆ.

ಎರಡನೇ ದಿನ ಬೆಳಗ್ಗೆ, ಗಯಾದಲ್ಲಿರುವ ವಿಷ್ಣುಪಾದ ದೇವಸ್ಥಾನಕ್ಕೆ ಭೇಟಿ ನೀಡಿ, ಹೊಟೆಲ್​ನಲ್ಲಿ ಉಪಾಹಾರದ ನಂತರ ಹೋಟೆಲ್‌ನಿಂದ ಚೆಕ್ ಔಟ್ ಮಾಡಿ, ವಾರಾಣಸಿಗೆ ಪ್ರಯಾಣ ಮುಂದುವರಿಸಲಾಗುತ್ತದೆ. ವಾರಾಣಸಿಯಲ್ಲಿ ಹೋಟೆಲ್‌ಗೆ ಚೆಕ್ ಇನ್ ಮಾಡಿದ ನಂತರ ಭೋಜನ ಮತ್ತು ರಾತ್ರಿಯ ವಾಸ್ತವ್ಯದ ವ್ಯವಸ್ಥೆಯಿರುತ್ತದೆ.

ಮೂರನೆಯ ದಿನದಂದು ಬೆಳಗ್ಗೆ ಬೇಗನೆ ಕಾಶಿ ವಿಶ್ವನಾಥ ದೇವಸ್ಥಾನ, ವಿಶಾಲಾಕ್ಷಿ ಮತ್ತು ಅನ್ನಪೂರ್ಣ ದೇವಸ್ಥಾನಗಳಿಗೆ ಭೇಟಿ ನೀಡಿದ ನಂತರ ಸಂಜೆ ಗಂಗಾ ಆರತಿಗೆ ತೆರಳಿ, ನಂತರ ಭೋಜನ ಮತ್ತು ರಾತ್ರಿಯ ವಾಸ್ತವ್ಯಕ್ಕಾಗಿ ಹೋಟೆಲ್‌ಗೆ ಹಿಂತಿರುಗಲಾಗುತ್ತದೆ.

ನಾಲ್ಕನೇಯ ದಿನ ಬೆಳಗಿನ ಉಪಾಹಾರದ ನಂತರ, ಹೋಟೆಲ್‌ನಿಂದ ಚೆಕ್ ಔಟ್ ಮಾಡಿ ಪ್ರಯಾಗ್‌ರಾಜ್‌ಗೆ ಹೊರಡಲಾಗುತ್ತದೆ. ಅಲ್ಲಿ ತಲುಪಿದ ನಂತರ ತ್ರಿವೇಣಿ ಸಂಗಮ ಮತ್ತು ಪಾತಾಳಪುರಿ ದೇವಾಲಯಕ್ಕೆ ಭೇಟಿ ನೀಡಿ, ಅಯೋಧ್ಯೆಗೆ ತೆರಳಿ, ಅಯೋಧ್ಯೆಯ ಹೋಟೆಲ್​ನಲ್ಲಿ ಭೋಜನ ಮತ್ತು ರಾತ್ರಿ ವಾಸ್ತವ್ಯ ಹೂಡಲಾಗುತ್ತದೆ.

ಕೊನೆಯ ದಿನ ಬೆಳಗ್ಗೆ ರಾಮ್ ಲಲ್ಲಾ ದೇವಸ್ಥಾನ ಮತ್ತು ಹನುಮಾನ್ ಘಾಟಿಗೆ ಹೋಗಿ ಹೋಟೆಲ್‌ಗೆ ಹಿಂತಿರುಗಿದ ನಂತರ ಹೋಟೆಲ್‌ನಲ್ಲಿ ಉಪಾಹಾರ ಮಾಡಿ ಚೆಕ್ ಔಟ್ ಮಾಡಿದ ನಂತರ 12.00 ಗಂಟೆಗೆ ಅಯೋಧ್ಯಾ ವಿಮಾನ ನಿಲ್ದಾಣ ತಲುಪಲಾಗುತ್ತದೆ. ಮಧ್ಯಾಹ್ನ2.30 ಗಂಟೆಗೆ ವಿಮಾನ ಟೇಕ್ ಆಫ್ ಆಗಲಿದ್ದು, ಸಂಜೆ 5 ಗಂಟೆಗೆ ಬೆಂಗಳೂರು ತಲುಪಿಸಲಾಗುತ್ತದೆ.

IRCTC ಟೂರ್ ಪ್ಯಾಕೇಜ್ನಲ್ಲಿ ಏನಿದೆ?

  • ಎಕಾನಮಿ ಕ್ಲಾಸ್‌ನಲ್ಲಿ ವಿಮಾನ ಟಿಕೆಟ್‌ಗಳು
  • ಬೆಳಗಿನ ಉಪಾಹಾರ ಮತ್ತು ಭೋಜನ ,
  • AC ಕೊಠಡಿಗಳೊಂದಿಗೆ 04 ರಾತ್ರಿಗಳ ಹೋಟೆಲ್ ವಸತಿ

ಪ್ಯಾಕೇಜ್ನಲ್ಲಿ ಏನಿಲ್ಲ?

  • ಪ್ಯಾಕೇಜ್​ನಲ್ಲಿ ಎಲ್ಲಾ ಪ್ರವಾಸಿ ತಾಣಗಳ ಪ್ರವೇಶ ಶುಲ್ಕಗಳು/ಟಿಕೆಟ್‌ಗಳು, ಸ್ಟಿಲ್ / ವಿಡಿಯೋ ಕ್ಯಾಮೆರಾ ಶುಲ್ಕಗಳು, ದೋಣಿ ವಿಹಾರ ಶುಲ್ಕಗಳು ಇತ್ಯಾದಿ ಇರುವುದಿಲ್ಲ.
  • ವಿಮಾನ ಪ್ರಯಾಣ ದರದಲ್ಲಿ ಯಾವುದೇ ಹೆಚ್ಚಳವಾದರೆ, ವಿಮಾನ ನಿಲ್ದಾಣ ತೆರಿಗೆಗಳಲ್ಲಿ  ಬದಲಾವಣೆ ಆದರೆ ಸೇರಿದಂತೆ ಯಾವುದೇ  ವೈಯಕ್ತಿಕ ವೆಚ್ಚಗಳನ್ನು ನಿಗಮ ಭರಿಸುವುದಿಲ್ಲ.
  • ಭೂಕುಸಿತ, ಮುಷ್ಕರ, ಕರ್ಫ್ಯೂ, ಅಪಘಾತಗಳು ಮತ್ತು ಗಾಯಗಳು, ವಿಳಂಬವಾದ ಅಥವಾ ರದ್ದಾದ ವಿಮಾನಗಳು ಮುಂತಾದ ಯಾವುದೇ ರೀತಿಯ ತುರ್ತು ಪರಿಸ್ಥಿತಿಗಳಿಗೆ IRCTC ಜವಾಬ್ದಾರಿ ಹೊಂದಿರುವುದಿಲ್ಲ.

IRCTC ಟೂರ್ ಪ್ಯಾಕೇಜ್ನ ಟಿಕೆಟ್ ದರ

ಪ್ಯಾಕೇಜ್​ನಲ್ಲಿ ಹೇಳಿರುವಂತೆ ಒಬ್ಬ ಪ್ರಯಾಣಿಕನಿಗೆ 42,600 ರೂ., ಇಬ್ಬರಿಗೆ 33,950 ರೂ.  ಮೂವರಿಗೆ  31,900/ರೂ. 5-11 ವರ್ಷದ ಮಗುವಿಗೆ ಹಾಸಿಗೆ ಸಹಿತ 31,750 ರೂ. ಹಾಸಿಗೆ ರಹಿತ 29,600ರೂ. ಹಾಸಿಗೆ ರಹಿತ  2 ರಿಂದ 4 ವರ್ಷದ ಮಗುವಿಗೆ 18,450 ರೂ. ದರ ನಿಗದಿಪಡಿಸಲಾಗಿದೆ.

ಟಿಕೆಟ್ ರದ್ದತಿ ಹೇಗೆ? ಮರುಪಾವತಿಯಾಗಬಹುದೇ?

ನಿಮ್ಮ ಟಿಕೆಟ್ ರದ್ದುಗೊಳಿಸುವಿಕೆಯು www.irctctourism.com ವೆಬ್‌ಸೈಟ್‌ನಲ್ಲಿ ಮಾತ್ರ ಸಾಧ್ಯ. ನಿಮ್ಮ ಟಿಕೆಟ್ ರದ್ದುಗೊಳಿಸಲು ನಿಮ್ಮ ಖಾತೆಗೆ ಲಾಗಿನ್ ಆಗಿ, ನೀವು ರದ್ದುಗೊಳಿಸಲು ಬಯಸುವ ಟಿಕೆಟ್‌ನ ಪ್ರವಾಸ ದೃಢೀಕರಣ ಸಂಖ್ಯೆಯನ್ನು ಆಯ್ಕೆಮಾಡಬೇಕು. ಆನ್​ಲೈನ್​ನಲ್ಲಿ ಮಾತ್ರ ಟಿಕೆಟ್ ರದ್ದುಗೊಳಿಸಲು ಅವಕಾಶವಿದ್ದು,  IRCTC ನಿಗಮವನ್ನು ಸಂಪರ್ಕಿಸಿದಲ್ಲಿ ಟಿಕೆಟ್ ರದ್ದತಿಗೆ ಅವಕಾಶವಿರುವುದಿಲ್ಲ.  ನಿಮ್ಮ ಆನ್‌ಲೈನ್ ಬುಕಿಂಗ್ ಮಾಡಿದ ಇತಿಹಾಸದಿಂದ ರದ್ದುಗೊಳಿಸಬಹುದು. ಬಳಕೆದಾರರು ತಮ್ಮ ಟಿಕೆಟ್ ರದ್ದುಗೊಳಿಸಲು ಬಯಸಿದರೆ, ರದ್ದತಿ ನಿಯಮಗಳು ಕೆಳಕಂಡಂತಿವೆ:

ಪ್ರಯಾಣ ಆರಂಭಕ್ಕೆ ಮುಂಚಿನ (ನಿರ್ಗಮನ ದಿನಾಂಕವನ್ನು ಹೊರತುಪಡಿಸಿ) 21 ದಿನಗಳಿಗಿಂತ ಮೊದಲು ಟಿಕೆಟ್ ರದ್ದು ಮಾಡಿದರೆ ಪ್ಯಾಕೇಜ್ ವೆಚ್ಚದ 30 ಪ್ರತಿಶತ ಕಡಿತಗೊಳ್ಳಲಿದೆ. ಅಂತೆಯೇ 21 ರಿಂದ 15 ದಿನಗಳ ಮೊದಲು ರದ್ದು ಮಾಡಿದರೆ 55 ಪ್ರತಿಶತ ಕಡಿತ, 14 ರಿಂದ 08 ದಿನಗಳೊಳಗೆ 80 ಪ್ರತಿಶತ ಮತ್ತು ಪ್ರವಾಸದ 8 ದಿನಗಳ ಮುಂಚಿತವಾಗಿ ಟಿಕೆಟ್ ರದ್ದು ಮಾಡಿದರೆ ಯಾವುದೇ ಮರುಪಾವತಿ ಇರುವುದಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:26 pm, Sat, 13 December 25