ಕೆಲಸದ ಅವಧಿ ವಿಸ್ತರಣೆಗೆ ವಿರೋಧ: ಬೆಂಗಳೂರಿನಲ್ಲಿ ಶನಿವಾರ ಐಟಿಬಿಟಿ ನೌಕರರಿಂದ ಬೃಹತ್ ಪ್ರತಿಭಟನೆ
ರಾಜ್ಯದಲ್ಲಿ ಐಟಿ-ಬಿಟಿ ನೌಕರರಿಗೆ ಒಂಬತ್ತು ಗಂಟೆಗಳ ಡ್ಯೂಟಿ ಮಾಡಬೇಕು ಎಂಬ ನಿಯಮ ಇದೆ. ಆದರೆ ಕಂಪನಿಗಳು ಮಾತ್ರ 14 ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ಸರ್ಕಾರದ ಕದ ತಟ್ಟಿವೆ. ಇದನ್ನು ವಿರೋಧಿಸಿ ಈಗಾಗಲೇ ಟೆಕ್ಕಿಗಳು ಸೋಶಿಯಲ್ ಮೀಡಿಯಾ ಮೂಲಕ ಹೋರಾಟ ಮಾಡಿದ್ದರು. ಶನಿವಾರ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ.
ಬೆಂಗಳೂರು, ಜುಲೈ 30: ರಾಜ್ಯದ ಐಟಿ ಬಿಟಿ ನೌಕರರಿಗೆ ಸದ್ಯ ಬಹುತೇಕ ಕಂಪನಿಗಳಲ್ಲಿ ಪ್ರತಿದಿನ 9 ಗಂಟೆಗಳ ಕಾಲ ಕೆಲಸ ಮಾಡಬೇಕೆಂಬ ನಿಯಮ ಇದೆ. ಆದರೆ ಆ ಒಂಬತ್ತು ಗಂಟೆ ಸಮಯವನ್ನು 14 ಗಂಟೆಗೆ ವಿಸ್ತರಣೆ ಮಾಡುವಂತೆ ಐಟಿಬಿಟಿ ಕಂಪನಿಗಳು ಕಾರ್ಮಿಕ ಇಲಾಖೆಗೆ ಮನವಿ ಮಾಡಿವೆ. ಆ ಹಿನ್ನೆಲೆಯಲ್ಲಿ ಕಾರ್ಮಿಕರು, ಸಚಿವರು ಈಗಾಗಲೇ ಸಭೆ ಮಾಡಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಈಗಾಗಲೇ ಐಟಿಬಿಟಿ ನೌಕರರು ಸಿಎಂ ಸಿದ್ದರಾಮಯ್ಯ ಮತ್ತು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಸಾಮೂಹಿಕವಾಗಿ ಮೇಲ್ ಮಾಡಿ ಎಕ್ಸ್ ಮತ್ತು ಫೇಸ್ ಬುಕ್ ನಲ್ಲಿ ‘I oppose the Increase in Working Hours’ ಅಂತ ಪೋಸ್ಟ್ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಮುಂದುವರಿದ ಭಾಗವಾಗಿ ಈ ಶನಿವಾರ ಮಧ್ಯಾಹ್ನ ಮೂರು ಗಂಟೆಗೆ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆಗೆ ಸಜ್ಜಾಗಿದ್ದಾರೆ.
ಶನಿವಾರ ಪ್ರತಿಭಟನೆ ಮಾಡುವ ವಿಚಾರವಾಗಿ ಕರ್ನಾಟಕ ಐಟಿ ಅಂಡ್ ಐಟಿಎಸ್ ಯೂನಿಯನ್ ಜನರಲ್ ಸೆಕ್ರೆಟರಿ ಸುಹಾಸ್ ಅಡಿಗ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಐಟಿಬಿಟಿ ಕಂಪನಿಗಳ ನೌಕರರನ್ನು ಸಂಪರ್ಕ ಮಾಡಿ ಶನಿವಾರದ ಪ್ರತಿಭಟನೆಗೆ ಸಾಥ್ ನೀಡಬೇಕು ಮತ್ತು ಪ್ರತಿಯೊಬ್ಬರೂ ಪ್ರತಿಭಟನೆಯಲ್ಲಿ ಭಾಗಿಯಾಗಬೇಕೆಂದು ಮನವಿ ಮಾಡಲಾಗುತ್ತಿದೆ. ಈ ಬಗ್ಗೆ ಬಿತ್ತಿಪತ್ರಗಳನ್ನು ನೀಡುವ ಮೂಲಕ ದೊಡ್ಡ ಮಟ್ಟದಲ್ಲಿ ಅಭಿಯಾನ ಆರಂಭಿಸಲಾಗಿದೆ. ಈ ಬಗ್ಗೆ ಮಾತಾನಾಡಿದ ಐಟಿ ಉದ್ಯೋಗಿ ಐಶ್ವರ್ಯ, 14 ಗಂಟೆ ಕೆಲದ ಪ್ರಸ್ತಾವವನ್ನು ನಾವು ಒಪ್ಪುವುದಿಲ್ಲ. ಇದರಿಂದ ತುಂಬಾ ಸಮಸ್ಯೆ ಆಗುತ್ತದೆ ಎಂದು ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು.
ಇದನ್ನೂ ಓದಿ: 14 ಗಂಟೆಗಳ ಕೆಲಸದ ಅವಧಿ ವಿಸ್ತರಣೆ ಪ್ರಸ್ತಾಪ: ಸರ್ಕಾರದ ವಿರುದ್ಧ ಐಟಿ ವೃತ್ತಿಪರರ ಮೇಲ್ ಸಮರ
ಒಟ್ಟಿನಲ್ಲಿ ಐಟಿಬಿಟಿ ನೌಕರರ ಕೆಲಸದ ಅವಧಿಯನ್ನು 9 ರಿಂದ 14 ಗಂಟೆಗಳಿಗೆ ವಿಸ್ತರಣೆ ಮಾಡುವುದನ್ನು ವಿರೋಧಿಸಿ ಟೆಕ್ಕಿಗಳು ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ದೊಡ್ಡಮಟ್ಟದಲ್ಲಿ ಪ್ರತಿಭಟನೆ ಮಾಡುವ ಮೂಲಕ ತಮ್ಮ ವಿರೋಧವನ್ನು ವ್ಯಕ್ತಪಡಿಸಲಿದ್ದಾರೆ. ಆದರೆ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ