
ಬೆಂಗಳೂರು, ಸೆಪ್ಟೆಂಬರ್ 26: ಇಂದು ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗಾಳಿಯ ಗುಣಮಟ್ಟ ಅತ್ಯುತ್ತಮ ಮಟ್ಟದಲ್ಲಿದೆ. ಇತ್ತೀಚೆಗೆ ಸುರಿದ ಸಾಧಾರಣ ಮಳೆ ಹಾಗೂ ಹವಾಮಾನ ವೈಪರೀತ್ಯಗಳ ಕಾರಣದಿಂದ ವಾಯು ಮಾಲಿನ್ಯದ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದ್ದು, ಸಾರ್ವಜನಿಕರು ನಿರಾಳವಾಗಿ ಉಸಿರಾಡುವ ವಾತಾವರಣ ನಿರ್ಮಾಣವಾಗಿದೆ.
ಸಾಮಾನ್ಯವಾಗಿ ಅತಿಯಾದ ವಾಹನ ಸಂಚಾರ ಹಾಗೂ ಧೂಳಿನಿಂದ ಕೂಡಿರುವ ಬೆಂಗಳೂರಿನ ಗಾಳಿ ಇಂದು ‘ಉತ್ತಮ’ ವಿಭಾಗಕ್ಕೆ ಸೇರಿದೆ. ಇಂದು ನಗರದ ಸರಾಸರಿ ಎಕ್ಯೂಐ ಪ್ರಮಾಣ 38 ರಿಂದ 49ರಷ್ಟಿದ್ದು, ಇದು ಅತ್ಯಂತ ಸುರಕ್ಷಿತ ಮಟ್ಟವಾಗಿದೆ.
ಗಾಳಿಯಲ್ಲಿನ ಪ್ರಮುಖ ಮಾಲಿನ್ಯಕಾರಕ ಅಂಶಗಳಾದ PM 2.5 ಮತ್ತು PM 10 ಮಟ್ಟಗಳು ನಿಯಂತ್ರಣದಲ್ಲಿದ್ದು, ನಗರವಾಸಿಗಳು ಹಾಗೂ ಶ್ವಾಸಕೋಶ ಸಮಸ್ಯೆ ಇರುವವರ ಆರೋಗ್ಯದ ಮೇಲಿನ ಅಪಾಯ ಕಡಿಮೆಯಾಗಿದೆ. ಪೀಣ್ಯ, ಹೆಬ್ಬಾಳ ಮತ್ತು ಸಿಲ್ಕ್ ಬೋರ್ಡ್ ಪ್ರದೇಶಗಳಲ್ಲೂ ಮಾಲಿನ್ಯದ ಮಟ್ಟ ಗಣನೀಯವಾಗಿ ತಗ್ಗಿದೆ.
ಬೆಂಗಳೂರು ಮಾತ್ರವಲ್ಲದೆ ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳ ನಗರಗಳಲ್ಲೂ ಗಾಳಿಯ ಗುಣಮಟ್ಟ ಶುದ್ಧವಾಗಿದೆ. ಮಂಗಳೂರು, ಉಡುಪಿ ಹಾಗೂ ಕಾರವಾರದಲ್ಲಿ ಎಕ್ಯೂಐ ಪ್ರಮಾಣ 25 ರಿಂದ 35ರ ಆಜುಬಾಜಿನಲ್ಲಿದ್ದು, ಅತ್ಯುತ್ತಮ ವಾತಾವರಣವಿದೆ. ಇನ್ನು ಉತ್ತರ ಒಳನಾಡಿನ ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಹಾಗೂ ಮೈಸೂರಿನಲ್ಲೂ ಎಕ್ಯೂಐ ‘ಉತ್ತಮ’ ಹಾಗೂ ‘ಸಾಧಾರಣ’ ವಿಭಾಗಗಳಲ್ಲಿ ದಾಖಲಾಗಿದೆ.
ಹವಾಮಾನ ಇಲಾಖೆಯ ಪ್ರಕಾರ, ರಾಜ್ಯದಾದ್ಯಂತ ಮೋಡಕವಿದ ವಾತಾವರಣ ಹಾಗೂ ಅಲ್ಲಲ್ಲಿ ಬೀಳುತ್ತಿರುವ ಸಾಧಾರಣ ಮಳೆಯಿಂದಾಗಿ ವಾತಾವರಣದಲ್ಲಿನ ಧೂಳಿನ ಕಣಗಳು ಇಳಿಮುಖವಾಗಿವೆ. ಸಾರ್ವಜನಿಕರು ಹೊರಾಂಗಣ ಚಟುವಟಿಕೆಗಳಲ್ಲಿ ಮುಕ್ತವಾಗಿ ತೊಡಗಿಸಿಕೊಳ್ಳಬಹುದು ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ