ಕರ್ನಾಟಕ ವಿಧಾನ ಸಭೆಯ ನೂತನ ಸ್ಪೀಕರ್​​, ಪರಿಷತ್​​ ಸಭಾಪತಿ ಹೆಸರನ್ನು ಪ್ರಕಟಿಸಿದ ಎಐಸಿಸಿ

ಕರ್ನಾಟಕ ರಾಜಕೀಯದಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫೈನಲ್​​ ಬೆನ್ನಲ್ಲೇ, ವಿಧಾನ ಸಭೆಯ ನೂತನ ಸ್ಪೀಕರ್ ಹಾಗೂ ವಿಧಾನ ಪರಿಷತ್‌ನ ನೂತನ ಸಭಾಪತಿಗಳ ಹೆಸರನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಅಧಿಕೃತವಾಗಿ ಪ್ರಕಟಿಸಿದೆ. ಆ ಕುರಿತ ಕಂಪ್ಲೀಟ್​​ ಡಿಟೇಲ್ಸ್​​ ಇಲ್ಲಿದೆ.

ಕರ್ನಾಟಕ ವಿಧಾನ ಸಭೆಯ ನೂತನ ಸ್ಪೀಕರ್​​, ಪರಿಷತ್​​ ಸಭಾಪತಿ ಹೆಸರನ್ನು ಪ್ರಕಟಿಸಿದ ಎಐಸಿಸಿ
ವಿಧಾನ ಸಭೆಯ ನೂತನ ಸ್ಪೀಕರ್​​, ಪರಿಷತ್​​ ಸಭಾಪತಿ ಹೆಸರು ಪ್ರಕಟ

Updated on: Aug 03, 2026 | 12:30 PM

ಬೆಂಗಳೂರು, ಆಗಸ್ಟ್​​ 03: ಬಹುನಿರೀಕ್ಷಿತ ಸಿಎಂ ಡಿಕೆ ಶಿವಕುಮಾರ್​​ ಅವರ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ಕೂಡಿಬಂದಿದ್ದು, ನೂತನ ಸಚಿವರು ಇಂದು (ಆಗಸ್ಟ್​​ 03) ಸಂಜೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇವರ ಜೊತೆಗೆ ವಿಧಾನ ಸಭೆಯ ನೂತನ ಸ್ಪೀಕರ್​​, ಡೆಪ್ಯೂಟಿ ಸ್ಪೀಕರ್​​ ಹಾಗೂ ವಿಧಾನ ಪರಿಷತ್​​ ಸಭಾಪತಿ ಮತ್ತು ಉಪ ಸಭಾಪತಿಗಳ ಹೆಸರನ್ನೂ ಎಐಸಿಸಿ ಅಂತಿಮಗೊಳಿಸಿದೆ. ವಿಧಾನಸಭೆ ಸ್ಪೀಕರ್​ ಆಗಿ ಗದಗ ಜಿಲ್ಲೆ ರೋಣ ಕ್ಷೇತ್ರದ ಶಾಸಕ ಜಿ.ಎಸ್.ಪಾಟೀಲ್​​ ನೇಮಕವಾಗಿದ್ದರೆ, ಡೆಪ್ಯೂಟಿ ಸ್ಪೀಕರ್​​ ಆಗಿ ಕೊಡಗು ಜಿಲ್ಲೆ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅಧಿಕಾರ ಸ್ವೀಕರಿಸಲಿದ್ದಾರೆ. ಉಳಿದಂತೆ ವಿಧಾನಪರಿಷತ್​ ಸಭಾಪತಿಯಾಗಿ ಸಲೀಂ ಅಹ್ಮದ್ ಮತ್ತು ಉಪ ಸಭಾಪತಿಯಾಗಿ ಉಮಾಶ್ರೀ ಅವರನ್ನು ನೇಮಿಸಲಾಗಿದೆ.

ಹಿಂದಿನ ಸ್ಪೀಕರ್​​, ಡೆಪ್ಯೂಟಿ ಸ್ಪೀಕರ್​​ ಇಬ್ಬರೂ ಈಗ ಸಚಿವರು!

ಹಿಂದಿನ ಸಿಎಂ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಸ್ಪೀಕರ್​​ ಆಗಿದ್ದ ಯು.ಟಿ. ಖಾದರ್​​ ಅದಾಗಲೇ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ ಅವರ ಸಚಿವ ಸಂಪುಟದಲ್ಲಿ ಆರೋಗ್ಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಡೆಪ್ಯೂಟಿ ಸ್ಪೀಕರ್​ ಆಗಿದ್ದ ರುದ್ರಪ್ಪ ಲಮಾಣಿ ಕೂಡ ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನೆಲೆ, ತಮ್ಮ ಹಾಲಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸೂಚಿಸಿರೋದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಸಚಿವ ಸಂಪುಟ ವಿಸ್ತರಣೆ: ಇಂದು ಸಂಜೆ 4 ಗಂಟೆಗೆ ನೂತನ ಸಚಿವರ ಪ್ರಮಾಣವಚನ

ಹಾಲಿ ಸಭಾಪತಿ ಬಸವರಾಜ ಹೊರಟ್ಟಿ ರಾಜೀನಾಮೆ?

ಇನ್ನು ಪರಿಷತ್​​ ಸಭಾಪತಿಯಾಗಿ ಹಾಲಿ ಬಸವರಾಜ ಹೊರಟ್ಟಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆಯಾದರೂ ಎಐಸಿಸಿಯ ಹೊಸ ನಿರ್ಧಾರದಿಂದಾಗಿ ಅವರು ಹುದ್ದೆಗೆ ರಾಜೀನಾಮೆ ನೀಡುವುದು ಬಹುತೇಕ ದಟ್ಟವಾಗಿದೆ. ಸ್ಥಾನ ತ್ಯಜಿಸುವಂತೆ ರಾಜ್ಯ ಸರ್ಕಾರ ಅವರ ಮೇಲೆ ಒತ್ತಡ ಹೇರಿರುವ ಬಗ್ಗೆ ಈ ಹಿಂದೆ ವದಂತಿಗಳು ಹರಿದಾಡಿದ್ದವಾದರೂ ಹೊರಟ್ಟಿ ಅದನ್ನು ನಿರಾಕರಿಸಿದ್ದರು. ಆದರೆ ಕಾಂಗ್ರೆಸ್​​ನ ಕೆಲ ನಾಯಕರು ಮಾತ್ರ ಬಿಜೆಪಿಯಿಂದ ಆಯ್ಕೆಯಾಗಿರುವ ಹೊರಟ್ಟಿಯವರು ಮೆಜಾರಿಟಿ ಇಲ್ಲದಿದ್ದಾಗ ರಾಜೀನಾಮೆ ಕೊಡುವುದು ಒಳ್ಳೆಯದು. ಬಿಜೆಪಿಯಿಂದ ಆಯ್ಕೆಯಾದವರನ್ನ ನಾವು ಒಪ್ಪಲು ಸಾಧ್ಯವಿಲ್ಲ ಎಂದಿದ್ದರು.

ಚುನಾವಣೆ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ಅವರ ಪರವಾಗಿ ತೀರ್ಪು ನೀಡಿದ ಹಿನ್ನೆಲೆಯಲ್ಲಿ, ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ತಮ್ಮ ಸ್ಥಾನಕ್ಕೆ ಮೊನ್ನೆಯಷ್ಟೇ ರಾಜೀನಾಮೆ ಘೋಷಿಸಿದ್ದ ಕಾರಣ, ಖಾಲಿ ಇರುವ ಆ ಸ್ಥಾನಕ್ಕೂ ಉಮಾಶ್ರೀ ಅವರನ್ನು ನೇಮಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:23 pm, Mon, 3 August 26

Loading...
Unable to load recommendations.
Follow Us