
ಬೆಂಗಳೂರು, ಜುಲೈ 14: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದು ತಿಂಗಳು ಕಳೆದರೂ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಇನ್ನೂ ಕೂಡಿಬಂದಿಲ್ಲ. ರಾಜ್ಯದಲ್ಲಿ ಉಳಿದಿರುವ 20 ಸಚಿವ ಸ್ಥಾನಗಳಿಗೆ 60ಕ್ಕೂ ಹೆಚ್ಚು ಶಾಸಕರು ತೀವ್ರವಾಗಿ ಲಾಬಿ ನಡೆಸುತ್ತಿದ್ದು, ಇದು ಹೈಕಮಾಂಡ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸಚಿವರ ಮೊದಲ ಪಟ್ಟಿ ರಿಲೀಸ್ ಆಗಿ ಅವರ ಪ್ರಮಾಣವಚನ ನಡೆದ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ಪೈಪೋಟಿ ಜೋರಾಗಿದ್ದು, ಎರಡನೇ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಹಿರಿಯ ಮತ್ತು ಕಿರಿಯ ಶಾಸಕರು ಸತತ ಪ್ರಯತ್ನ ಪಡುತ್ತಿದ್ದಾರೆ.
ಬೆಳಗಾವಿ ಭಾಗದಿಂದ ಆರು ಶಾಸಕರು ಸಚಿವ ಸ್ಥಾನಕ್ಕಾಗಿ ಟವೆಲ್ ಹಾಕಿದ್ದಾರೆ. ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕರಾದ ಲಕ್ಷ್ಮಣ್ ಸವದಿ, ಅಶೋಕ್ ಪಟ್ಟಣ್, ಆಸಿಫ್ ಸೇಠ್ ಸೇರಿದಂತೆ ಪ್ರಮುಖರು ನೇರವಾಗಿ ಮಂತ್ರಿಗಿರಿಗೆ ಬೇಡಿಕೆ ಇಟ್ಟಿದ್ದಾರೆ. ಶಾಸಕ ಆಸಿಫ್ ಸೇಠ್ ಅವರು ಟಿವಿ9 ಜೊತೆ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ತಾನೊಬ್ಬನೇ ಅಲ್ಪಸಂಖ್ಯಾತ ಶಾಸಕನಾಗಿದ್ದು, ತನಗೆ ಅವಕಾಶ ನೀಡಿದರೆ ಕೆಲಸ ಮಾಡುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯ ಕಾಂಗ್ರೆಸ್ನಲ್ಲಿ ಗರಿಗೆದರಿದ ಸಂಪುಟ ವಿಸ್ತರಣೆ ಚರ್ಚೆ; ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್?
ಡಿಕೆ ಸಂಪುಟ ಸೇರೋಕೆ ಹಲವರಿಂದ ಲಾಬಿ ಜೋರಾಗಿಯೇ ನಡೀತಿದೆ. ಯಾವ ಕ್ಷಣದಲ್ಲಿ ಬೇಕಾದರೂ ದೆಹಲಿಯಿಂದ ಕರೆ ಬರಬಹುದು ಎಂಬುದು ಹಲವರ ನಿರೀಕ್ಷೆ, ಅಪೇಕ್ಷೆ. ಆದ್ರೆ ಸಂಪುಟ ವಿಸ್ತರಣೆ ಯಾವಾಗ ಎಂಬುದಕ್ಕೆ ದೆಹಲಿಯಲ್ಲೂ ಉತ್ತರ ಸಿಕ್ತಿಲ್ಲ, ಬೆಂಗಳೂರಲ್ಲೂ ಆ ವಾತಾವರಣದ ಮುನ್ಸೂಚನೆ ಇಲ್ಲ. ನಿನ್ನೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೆಹಲಿಗೆ ವಾಪಸ್ಸಾಗಿದ್ದಾರೆ. ವಿದೇಶದಿಂದ ರಾಹುಲ್ ಗಾಂಧಿ ಕೂಡ ಬಂದಾಗಿದೆ. ಇವರಿಬ್ಬರೂ ಕೂತು ಚರ್ಚೆ ಮಾಡಿದರೆ ಕ್ಯಾಬಿನೆಟ್ ವಿಸ್ತರಣೆ ಫಿಕ್ಸ್. ಆದರೆ ಕ್ಯಾಬಿನೆಟ್ ವಿಸ್ತರಣೆಗೆ ಯಾವ ಶಕ್ತಿಗಳು ಅಡ್ಡಿಪಡಿಸುತ್ತಿವೆ? ಎಂಬುದೇ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ತಿಳಿಯುತ್ತಿಲ್ಲ. ನಾಯಕತ್ವ ಬದಲಾವಣೆಗೆ ಹೈಕಮಾಂಡ್ ತೋರಿಸಿದ ಆತುರವನ್ನು ಈಗ ಯಾಕೆ ತೋರಿಸುತ್ತಿಲ್ಲ ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.
ಮತ್ತೊಂದೆಡೆ ಸಚಿವರಿಲ್ಲದೆ ಆಗುತ್ತಿರುವ ತೊಂದರೆಗಳ ಬಗ್ಗೆ ವಿಪಕ್ಷ ಬಿಜೆಪಿ ರಾಜ್ಯ ಸರ್ಕಾರದ ಮೇಲೆ ಮುಗಿಬಿದ್ದಿದೆ. ಬರ ಇರೋದ್ರಿಂದ ಕನಿಷ್ಠ ಆದ್ರೂ ಕೃಷಿ ಸಚಿವರನ್ನ ನೇಮಕ ಮಾಡಿ ಅಂತಾ ಬಿಜೆಪಿ ಎಂಎಲ್ಸಿ ಸಿ.ಟಿ.ರವಿ ಒತ್ತಾಯ ಮಾಡಿದ್ದರೆ. ಮತ್ತೊಂದೆಡೆ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿರುವ ವಿಪಕ್ಷ ನಾಯಕ ಆರ್. ಅಶೋಕ್, ಸಚಿವ ಸ್ಥಾನಕ್ಕೆ 100ರಿಂದ 150 ಕೋಟಿ ರೂಪಾಯಿ ಇದ್ದು, ಇದು ಪೇಮೆಂಟ್ ಸಚಿವ ಸ್ಥಾನದ ಸರ್ಕಾರ ಎಂದು ಆರೋಪಿಸಿದ್ದಾರೆ. ರಾಜ್ಯದಲ್ಲಿ ಮೂರನೇ ಮುಖ್ಯಮಂತ್ರಿ ಬರುವ ಸಾಧ್ಯತೆ ಇದೆ ಎಂದು ಭವಿಷ್ಯವನ್ನೂ ನುಡಿದಿರುವ ಅವರು, ಸಚಿವರೇ ಇಲ್ಲದೆ ಸದನ ಕರೆಯಲು ಇವರು ಹೊರಟಿದ್ದಾರೆ ಎಂದು ಟೀಕಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:08 pm, Tue, 14 July 26