ಕೆಂಪೇಗೌಡರಂತೆ ಮೋದಿ ಸಹ ವಿಕಾಸ ಪುರುಷ: ಸಿಎಂ ಬಸವರಾಜ ಬೊಮ್ಮಾಯಿ
ವಿಶ್ವದಲ್ಲಿ ಆರ್ಥಿಕ ಹಿಂಜರಿತದಿಂದ ಹಲವು ಸಮಸ್ಯೆಗಳಾಗಿವೆ. ಆದರೆ ಭಾರತದಲ್ಲಿ ಮೋದಿ ಅವರ ಯೋಗ್ಯ ನಾಯಕತ್ವದಿಂದ ಆರ್ಥಿಕತೆ ಸದೃಢವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವಿಶ್ವದಲ್ಲಿ ಆರ್ಥಿಕ ಹಿಂಜರಿತದಿಂದ ಹಲವು ಸಮಸ್ಯೆಗಳಾಗಿವೆ. ಆದರೆ ಭಾರತದಲ್ಲಿ ಮೋದಿ ಅವರ ಯೋಗ್ಯ ನಾಯಕತ್ವದಿಂದ ಆರ್ಥಿಕತೆ ಸದೃಢವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕೆಂಪೇಗೌಡರ ಪ್ರಗತಿ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಬ್ಬ ವಿಕಾಸ ಪುರುಷನ ಪ್ರತಿಮೆಯನ್ನು ಮತ್ತೊಬ್ಬ ವಿಕಾಸ ಪುರುಷನ ಪ್ರತಿಮೆ ಅನಾವರಣಗೊಳಿಸಿದ್ದು ದೈವೇಚ್ಛೆ. ಮೋದಿ ಅವರು ಕರ್ನಾಟಕಕ್ಕೆ ಸಬ್ಅರ್ಬನ್ ಟ್ರೇನ್ ಸೇರಿದಂತೆ ಹಲವು ಕೊಡುಗೆ ಕೊಟ್ಟಿದ್ದಾರೆ. ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ.
ಮೋದಿ ಅವರು ಬೆಂಗಳೂರಿನಲ್ಲಿ ಹತ್ತಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ನಾಡಿನ ಶ್ರೇಷ್ಠ ಸಂತರಾದ ಕನಕದಾಸರ ಜನ್ಮದಿನೋತ್ಸವ, ವಾಲ್ಮೀಕಿ ಪ್ರತಿಮೆಗೆ ಗೌರವ ಸಲ್ಲಿಸಿದರು. ಇದು ನಾಡಿಗೆ ಸಲ್ಲಿಸಿರುವ ಗೌರವದ ಪ್ರತೀಕ ಎಂದು ಸಿಎಂ ಬೊಮ್ಮಾಯಿ ಹೇಳಿದರು. ಬೆಂಗಳೂರು ವಿಮಾನ ನಿಲ್ದಾಣದಲ್ಲಿ 2ನೇ ಟರ್ಮಿನಲ್ ಆರಂಭದ ನಂತರ ಇದು ಭಾರತದ ಅತಿದೊಡ್ಡ ವಿಮಾನ ನಿಲ್ದಾಣವಾಗಿದೆ. ವಂದೇ ಭಾರತ್ ರೈಲಿನ ಮೂಲಕ ಕರ್ನಾಟಕಕ್ಕೆ ಹಲವು ಅನುಕೂಲವಿದೆ.
ವಿಜಯನಗರ ಕಾಲದ ಸುವರ್ಣ ಯುಗದ ದರ್ಶನವನ್ನು ಬೆಂಗಳೂರು ಸುತ್ತಮುತ್ತಲ ಗ್ರಾಮಗಳಿಗೆ ನಾಡಪ್ರಭು ಕೆಂಪೇಗೌಡರ ಮಾಡಿಸಿದರು. ಅವರು ಯೋಜನಾಬದ್ಧ ನಗರ ನಿರ್ಮಿಸಿ, ಪೇಟೆಗಳನ್ನು ಕಟ್ಟಿದರಿಂದ ಜನರಿಗೆ ಸುಖ-ನೆಮ್ಮದಿ ಕಲ್ಪಿಸಿಕೊಟ್ಟರು.
ಕೆಂಪೇಗೌಡರಿಗೆ ಗೌರವ ಸಲ್ಲಿಸುವ ಮೂಲಕ ನಾಡಿನ ಪರಂಪರೆ, ಪ್ರಗತಿಪರ ಚಿಂತನೆಗೆ ಗೌರವ ಕೊಟ್ಟಂತೆ ಆಗಿದೆ. ನಾವೂ ಸಹ ಇಂದು ಸಂಕಲ್ಪ ಮಾಡುತ್ತೇವೆ. ಕೆಂಪೇಗೌಡರ ಚಿಂತನೆ, ವಿಚಾರಧಾರೆಯಂತೆ ನಾಡು ಕಟ್ಟಲು ನಮ್ಮ ಸರ್ಕಾರ ಸಂಕಲ್ಪ ಮಾಡುತ್ತದೆ.
ಕೆಂಪೇಗೌಡರು ವಿಕಾಸ ಪುರುಷ. ಹೀಗಾಗಿಯೇ ಕೆಂಪೇಗೌಡರ ಪ್ರಗತಿಗೆ ‘ಸಮೃದ್ಧಿಯ ಪ್ರತಿಮೆ’ ಎಂದು ಕರೆದಿದ್ದೇವೆ. ಪ್ರಧಾನಿ ಇಂದು ದೇಶದ ಹತ್ತಾರು ಮೂಲಭೂತ ಸಮಸ್ಯೆಗಳನ್ನು ಪರಿಹರಿಸಿ, ಆತ್ಮನಿರ್ಭರ ಭಾರತ ರೂಪಿಸಲು ಯತ್ನಿಸುತ್ತಿದ್ದಾರೆ. ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಎತ್ತರಕ್ಕೆ ಕೊಂಡೊಯ್ದಿದ್ದಾರೆ.