ಸನ್ನಡತೆ ಆಧಾರದ ಮೇಲೆ ಪರಪ್ಪನ ಅಗ್ರಹಾರದಿಂದ 24 ಜೀವಾವಧಿ ಖೈದಿಗಳಿಗೆ ಅವಧಿ ಪೂರ್ವ ಬಿಡುಗಡೆ ಭಾಗ್ಯ

ರಾಜ್ಯಪಾಲರ ಆದೇಶದಂತೆ, ಸನ್ನಡತೆ ಮತ್ತು ಮನಪರಿವರ್ತನೆ ಆಧಾರದ ಮೇಲೆ ರಾಜ್ಯದ 24 ಜೀವಾವಧಿ ಖೈದಿಗಳನ್ನು ಅವಧಿ ಪೂರ್ವ ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಡುಗಡೆಯ ಆದೇಶ ಪತ್ರಗಳನ್ನು ವಿತರಿಸಿದರು. ಜೈಲಿನಿಂದ ಮುಕ್ತರಾದ ಖೈದಿಗಳು ಹೊಸ ಜೀವನ ಆರಂಭಿಸಲು ಸಿದ್ಧರಾಗಿದ್ದು, ಸಮಾಜಕ್ಕೆ ಮರಳುವ ಭರವಸೆ ಮೂಡಿದೆ.

ಸನ್ನಡತೆ ಆಧಾರದ ಮೇಲೆ ಪರಪ್ಪನ ಅಗ್ರಹಾರದಿಂದ 24 ಜೀವಾವಧಿ ಖೈದಿಗಳಿಗೆ ಅವಧಿ ಪೂರ್ವ ಬಿಡುಗಡೆ ಭಾಗ್ಯ
ಸನ್ನಡತೆ ಆಧಾರದ ಮೇಲೆ ಖೈದಿಗಳ ಬಿಡುಗಡೆ ಹಾಗೂ ಗೃಹಸಚಿವ
Edited By:

Updated on: Jul 04, 2026 | 4:15 PM

ಮುಖ್ಯಾಂಶಗಳು

  • ಸನ್ನಡತೆ ಆಧಾರದ ಮೇಲೆ ಅವರನ್ನು ಅವಧಿ ಪೂರ್ವವಾಗಿ ಬಿಡುಗಡೆಗೊಳಿಸಲು ರಾಜ್ಯಪಾಲರು ಆದೇಶ
  • ರಾಜ್ಯದ ವಿವಿಧ ಜೈಲುಗಳಲ್ಲಿದ್ದ ಒಟ್ಟು 24 ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಖೈದಿಗಳು
  • ಕಾರ್ಯಕ್ರಮದಲ್ಲಿ ರಾಜ್ಯದ ಗೃಹ ಸಚಿವರಾದ ಪ್ರಿಯಾಂಕ್ ಖರ್ಗೆ ಭಾಗಿ

ಬೆಂಗಳೂರು, ಜು.4: ತಿಳಿದೋ ತಿಳಿಯದೆಯೋ ತಪ್ಪು ಮಾಡಿ ಕಂಬಿ ಎಣಿಸುತ್ತಿದ್ದ ಖೈದಿಗಳ ಮನಪರಿವರ್ತನೆಯನ್ನು ಪರಿಗಣಿಸಿ, ಸನ್ನಡತೆ ಆಧಾರದ ಮೇಲೆ ಅವರನ್ನು ಅವಧಿ ಪೂರ್ವವಾಗಿ ಬಿಡುಗಡೆಗೊಳಿಸಲು ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದಂತೆ ರಾಜ್ಯದ ವಿವಿಧ ಜೈಲುಗಳಲ್ಲಿದ್ದ ಒಟ್ಟು 24 ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಖೈದಿಗಳು ಇಂದು ಜೈಲಿನಿಂದ ಮುಕ್ತರಾಗಿದ್ದಾರೆ.

ಜೈಲಿನ ಕತ್ತಲ ಕೋಣೆಯಿಂದ ಹೊರಬಂದು ಸ್ವತಂತ್ರ ಹಕ್ಕಿಗಳಾಗಿ ಹೊಸ ಜೀವನ ಆರಂಭಿಸಲು ಖೈದಿಗಳ ಅಧಿಕೃತ ಬಿಡುಗಡೆ ಕಾರ್ಯಕ್ರಮವು ಇಂದು ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಯಶಸ್ವಿಯಾಗಿ ನಡೆಯಿತು.

ಈ ವಿಶೇಷ ಬಿಡುಗಡೆ ಕಾರ್ಯಕ್ರಮದಲ್ಲಿ ರಾಜ್ಯದ ಗೃಹ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಖೈದಿಗಳಿಗೆ ಬಿಡುಗಡೆಯ ಆದೇಶ ಪತ್ರಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಕಾರಾಗೃಹ ಇಲಾಖೆಯ ಎಡಿಜಿಪಿ ಅಲೋಕ್ ಕುಮಾರ್, ಜೈಲು ಮುಖ್ಯ ಸೂಪರಿಂಟೆಂಡೆಂಟ್ ಅಂಶು ಕುಮಾರ್ ಸೇರಿದಂತೆ ಕಾರಾಗೃಹ ಇಲಾಖೆಯ ಉನ್ನತ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.

ಇದನ್ನೂ ಓದಿ: ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಹಾರಿದ ಯುವತಿ: ಭದ್ರತಾ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಬದುಕುಳಿದ ಜೀವ, 10 ನಿಮಿಷ ರೈಲು ಸಂಚಾರ ವಿಳಂಬ

ಒಮ್ಮೆ ಅಪರಾಧ ಕೃತ್ಯ ಎಸಗಿ ಜೈಲು ಸೇರಿದ್ದ ಈ ಖೈದಿಗಳು, ಶಿಕ್ಷೆಯ ಅವಧಿಯಲ್ಲಿ ಜೈಲಿನ ನಿಯಮಾವಳಿಗಳನ್ನು ಪಾಲಿಸಿ, ಉತ್ತಮ ನಡವಳಿಕೆಯನ್ನು ರೂಢಿಸಿಕೊಂಡಿದ್ದರು. ಇವರಲ್ಲಿ ಉಂಟಾದ ಸಕಾರಾತ್ಮಕ ಮನಪರಿವರ್ತನೆ ಮತ್ತು ಇವರು ಒಳ್ಳೆಯ ಮನುಷ್ಯರಾಗಿ ಬದಲಾದ ಹಿನ್ನೆಲೆಯನ್ನು ಕಾನೂನುಬದ್ಧವಾಗಿ ಪರಿಶೀಲಿಸಿ, ಇಲಾಖೆಯ ಶಿಫಾರಸಿನ ಮೇರೆಗೆ ರಾಜ್ಯಪಾಲರು ಇವರ ಅವಧಿ ಪೂರ್ವ ಬಿಡುಗಡೆಗೆ ಅನುಮೋದನೆ ನೀಡಿದ್ದಾರೆ. ಜೈಲಿನಿಂದ ಹೊರಬಂದ ಖೈದಿಗಳು ಹಾಗೂ ಅವರ ಕುಟುಂಬಸ್ಥರಲ್ಲಿ ಹೊಸ ಭರವಸೆಯ ಮೂಡಿದ್ದು, ಸಮಾಜದಲ್ಲಿ ಮುಖ್ಯವಾಹಿನಿಗೆ ಮರಳಲು ಸಂತಸ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us